More

    ಶರಾವತಿ ಸಂತ್ರಸ್ತರ ಸಮಸ್ಯೆ ಪರಿಹರಿಸಲೇಬೇಕು, ಬಿಟ್ರೆ ಬೇರೆ ದಾರಿ ಇಲ್ಲ

    ಶಿವಮೊಗ್ಗ: ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯ ಸರ್ಕಾರ ಅರಣ್ಯ ಭೂಮಿಯನ್ನು ಡಿನೋಟಿಫಿಕೇಷನ್ ಮಾಡಲೇಬೇಕು. ಅದನ್ನು ಬಿಟ್ಟು ಅವರಿಗೆ ಬೇರೆ ದಾರಿಯೇ ಇಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
    ಶಿವಮೊಗ್ಗದಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರಿಗೆ ನ್ಯಾಯ ಕೊಡಿಸುವ ಸಲುವಾಗಿ ಜಿಲ್ಲಾ ಕಾಂಗ್ರೆಸ್ ಮತ್ತು ಶರಾವತಿ ಮುಳುಗಡೆ ಸಂತ್ರಸ್ತರ ಜಾಗೃತ ವೇದಿಕೆಯಿಂದ ಸೋಮವಾರ ಹಮ್ಮಿಕೊಂಡಿದ್ದ ಮಲೆನಾಡ ಜನಾಕ್ರೋಶ ಸಮಾವೇಶಕ್ಕೆ ಪಾಲ್ಗೊಳ್ಳುವ ಮುನ್ನ ಪ್ರವಾಸಿ ಮಂದಿರದ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
    ಶರಾವತಿ ಜಲಾಶಯ ನಿರ್ಮಾಣಕ್ಕಾಗಿ 160ಕ್ಕೂ ಅಧಿಕ ಹಳ್ಳಿಗಳ ಸಾವಿರಾರು ಜನರು 15,500 ಎಕರೆ ಜಮೀನು ಕಳೆದುಕೊಂಡಿದ್ದಾರೆ. ಅವರಿಗೆ ಪುನರ್ವಸತಿ ಕಲ್ಪಿಸಬೇಕಿತ್ತು. ಆದರೆ ಇಲ್ಲಿವರೆಗೂ ರಾಜ್ಯ ಸರ್ಕಾರ ಡಿನೋಟಿಫಿಕೇಷನ್ ಮಾಡಿಲ್ಲ. ನಾಡಿಗೆ ಬೆಳಕು ನೀಡಲು ಭೂಮಿ ಬಿಟ್ಟುಕೊಟ್ಟವರಿಗೆ ಶೀಘ್ರವೇ ಅರಣ್ಯ ಪ್ರದೇಶದಿಂದ ಬಿಡುಗಡೆ ಮಾಡಲು ಹಕ್ಕುಪತ್ರ ನೀಡಬೇಕಿದೆ ಎಂದರು.
    ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಜಮೀನಿನ ಹಕ್ಕುಪತ್ರ ಕೊಡುವ ಪ್ರಯತ್ನ ಮಾಡಿದ್ದೇವು. ಆದರೆ ಒಬ್ಬರು ಕೋರ್ಟ್‌ಗೆ ಹೋದ ಪರಿಣಾಮ ಎರಡು ಹಳ್ಳಿಗಳ ಡಿನೋಟಿಫಿಕೇಷನ್‌ನ್ನು ಹೈಕೋರ್ಟ್ ರದ್ದು ಮಾಡಿತ್ತು. ತದನಂತರ ಬಂದ ಬಿಜೆಪಿ ಸರ್ಕಾರ ಮತ್ತೆ ಅದನ್ನು ಸರಿಪಡಿಸುವ ಕೆಲಸ ಮಾಡಲೇ ಇಲ್ಲ. ಮೂರುವರೆ ವರ್ಷದಿಂದ ಅಧಿಕಾರದಲ್ಲಿದ್ದರೂ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಕಲ್ಪಿಸಲು ಆಗಿಲ್ಲ ಎಂದು ದೂರಿದರು.
    ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳೇ ಇವೆ. ಇವರದ್ದು ಹೆಸರಿಗಷ್ಟೇ ಡಬಲ್ ಇಂಜಿನ್ ಸರ್ಕಾರ. ನಿಜವಾಗಿಯೂ ಅವರದ್ದು ಡಬಲ್ ಇಂಜಿನ್ ಸರ್ಕಾರವೇ ಆಗಿದ್ದರೆ ಸಮಸ್ಯೆ ಪರಿಹರಿಸಬೇಕಿತ್ತಲ್ಲ. ಅದನ್ನು ಬಿಟ್ಟು ಸಂತ್ರಸ್ತರು, ರೈತರನ್ನು ಅತಂತ್ರ ಸ್ಥಿತಿಗೆ ತಳ್ಳಿದ್ದಾರೆ ಎಂದು ಕಿಡಿಕಾರಿದರು.
    ಅರಣ್ಯ ಹಕ್ಕು ಕಾಯ್ದೆಯಲ್ಲಿ ಅವಕಾಶವಿದೆ. ಆದರೆ ಇದೀಗ ರೈತರ ಬಗ್ಗೆ ಮೊಳಸೆ ಕಣ್ಣೀರು ಸುರಿಸುತ್ತಿದ್ದಾರೆ. ಮೂರುವರೆ ವರ್ಷ ನೀವೇನು(ಬಿಜೆಪಿ) ಮಾಡಿದ್ದೀರಿ ಎಂಬುದನ್ನು ಹೇಳಿ. ಆನಂತರ ಕಾಂಗ್ರೆಸ್ ಬಗ್ಗೆ ಮಾತನಾಡಿ ಎಂದು ತಿರುಗೇಟು ನೀಡಿದರು. ಅಲ್ಲದೆ, 1980ರ ನಂತರ ಅರಣ್ಯ ಹಕ್ಕು ಕಾಯ್ದೆ ಜಾರಿಗೆ ಬಂದಿದೆ. ಅದಕ್ಕೂ ಪೂರ್ವದಲ್ಲಿ ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿತ್ತು ಎಂದ ಸಿದ್ದರಾಮಯ್ಯ, ಕಾನೂನು ಸಲಹೆ ಮೇರೆಗೆ ನಮ್ಮ ಸರ್ಕಾರ ಡಿನೋಟಿಫಿಕೇಷನ್ ಮಾಡಲು ಮುಂದಾಗಿತ್ತು ಎಂದು ಸ್ಪಷ್ಟಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts