More

    ಶರಣರ ತತ್ವಾದರ್ಶ ಪಾಲಿಸಿ

    ಬಳ್ಳಾರಿ : ಆಧುನಿಕ ನಾಗರಿಕ ಜಗತ್ತಿನ ಸಂವಿಧಾನಗಳಿಗೆ ಸರಿ ಸಮಾನವಾಗುವ ಮತ್ತು ಜಗತ್ತಿಗೆ ಒಂದು ವೈಜ್ಞಾನಿಕ ಧರ್ಮವನ್ನು ನಿರೂಪಿಸುವ ಸಾಮರ್ಥ್ಯ ಶರಣ ಸಾಹಿತ್ಯಕ್ಕಿದೆ. ರಷ್ಯಾ, ಫ್ರಾನ್ಸ್ ಮತ್ತು ಇತರ ದೇಶಗಳ ಕ್ರಾಂತಿಗಳ ಬಗ್ಗೆ ಮಾತನಾಡುವ ನಮ್ಮವರು, ಶರಣ ಕ್ರಾಂತಿಯ ನಿಜವಾದ ಶಕ್ತಿ, ಸಾಮರ್ಥ್ಯದ ಬಗ್ಗೆ ಮಾತನಾಡುವುದಿಲ್ಲ ಎಂದು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಾ. ಯು. ಶ್ರೀನಿವಾಸ ಮೂರ್ತಿ ಅಭಿಪ್ರಾಯಪಟ್ಟರು.

    ನಗರದ ಸರಳಾದೇವಿ ಸತೀಶ್ಚಂದ್ರ ಅಗರ್ವಾಲ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಸಹಯೋಗದೊಂದಿಗೆ ಗುರುವಾರ ಏರ್ಪಡಿಸಿದ್ದ 288ನೇ ಮಹಾಮನೆ ಲಿಂ.ಐ.ಬಸವರಾಜ ಲಲಿತಮ್ಮ ದತ್ತಿ ಕಾರ್ಯಕ್ರಮದಲ್ಲಿ ‘ಶರಣ ಸಾಹಿತ್ಯ-ಸಹಬಾಳ್ವೆಯ ನೆಲೆಗಳು’ ಎಂಬ ವಿಷಯದ ಬಗ್ಗೆ ಮಾತನಾಡಿದ ಅವರು, ಬದುಕಿನ ಬುನಾದಿ ಸಹಕಾರ, ಸಹಬಾಳ್ವೆಯಾಗಿದೆ. ಸಹಾಯ ಮತ್ತು ಸಹಕಾರವನ್ನು ಪಡೆದುಕೊಂಡು ಆ ಜನಗಳನ್ನೇ ದೂರವಿಟ್ಟಿದ್ದ ಸಮಾಜದಲ್ಲಿ ಶರಣರು, ಮನೆಯ ಮಗನಂತೆ ಕಾಣುವ ಮೂಲಕ ಕಾಯಕ ಜೀವಿಗಳ, ಶೋಷಣೆ ರಹಿತ ಸುಂದರ ಸಮಾಜವನ್ನು ನಿರ್ಮಿಸಿದ್ದರು ಎಂದರು.

    ವಿಮ್ಸ್‌ನ ಚರ್ಮರೋಗ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಸುಮಾ ಡಿ.ಗುಡಿ ಮಾತನಾಡಿ, ಉನ್ನತ ಆದರ್ಶದ ಸರಳ ಜೀವನ ಶರಣರ ಆದರ್ಶವಾಗಿದ್ದು ಅವರ ಆರೋಗ್ಯಪೂರ್ಣ ಬದುಕಿಗೆ ಸಾಧನ ಆಗಬೇಕು ಎಂದು ತಿಳಿಸಿದರು.

    ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಕೆ.ಮಂಜುನಾಥರೆಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಹಕಾರ, ಸಹಬಾಳ್ವೆ ಇಲ್ಲದೆ ಯಾವೊಂದು ಸಂಸ್ಥೆಯೂ ಶ್ರೇಯಸ್ಸನ್ನು ಪಡೆಯಲಾರದು ಎಂದರು.

    ಕನ್ನಡ ವಿಭಾಗದ ಮುಖ್ಯಸ್ಥ ಡಾ.ದಸ್ತಗೀರಸಾಬ್ ದಿನ್ನಿ, ದತ್ತಿ ದಾಸೋಹಿ ಐ.ಉದಯಶಂಕರ, ಸವಿತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಾಹಿತಿ ಎನ್.ಡಿ.ವೆಂಕಮ್ಮ, ನಿವೃತ್ತ ಉಪನ್ಯಾಸಕಿ ಸುಶೀಲಾ ಶಿರೂರ್, ಕನ್ನಡ ಉಪನ್ಯಾಸಕ ಪ್ರವೀಣ್‌ಕುಮಾರ್, ಉಪನ್ಯಾಸಕ ವರ್ಗ, ಪದವಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts