More

    ಶಾಂತವೇರಿ ವ್ಯಕ್ತಿತ್ವಗಳ ಪರಿಚಯ ಅಗತ್ಯ: ದೇವೇಂದ್ರ ಬೆಳೆಯೂರು

    ಸಾಗರ: ಗೋಪಾಲ ಗೌಡರನ್ನು ಭೂ ಸುಧಾರಣಾ ಕಾಯ್ದೆಗೆ ಮಾತ್ರ ಸೀಮಿತಗೊಳಿಸದೆ ಅವರ ಬದುಕಿನ ಬೇರೆ ಮಜಲುಗಳನ್ನು ಪರಿಚಯಿಸಬೇಕು ಎಂದು ಚಿಂತಕ ದೇವೇಂದ್ರ ಬೆಳೆಯೂರು ಹೇಳಿದರು.
    ಬುಧವಾರ ಪಟ್ಟಣದ ಸಾಹಿತ್ಯ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್, ಕರ್ನಾಟಕ ಜಾನಪದ ಪರಿಷತ್ ಮತ್ತು ಸಾಹಿತ್ಯ ಸಾಂಸ್ಕೃತಿಕ ವೇದಿಕೆಯಿಂದ ಶಾಂತಾವೇರಿ ಗೋಪಾಲ ಗೌಡರ ಜನ್ಮ ಶತಮಾನೋತ್ಸವ ಸಮಾರೋಪ ಕಾರ್ಯಕ್ರಮದಲ್ಲಿ ಗೋಪಾಲ ಗೌಡರ ಹೆಜ್ಜೆ ಗುರುತು ಮಾತುಮಂಥನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
    ಗೋಪಾಲಗೌಡರು ಸಮಾಜವಾದಿ ಹೋರಾಟದ ಹಿನ್ನೆಲೆಯಿಂದ ಬಂದಿದ್ದು ಅವರು ಯಾವತ್ತೂ ಸಮಾಜವಾದಿಯಾಗಿ ಉಳಿದರೇ ವಿನಃ ಸಾಹೇಬರು ಎಂದು ಕರೆಸಿಕೊಳ್ಳುವತ್ತ ಆಸಕ್ತಿ ತೋರಿಸಿರಿಲ್ಲ. ಅವರ ಪ್ರಭಾವಕ್ಕೆ ಒಳಗಾದವರೆಲ್ಲ ಅತ್ಯಂತ ಸರಳವಾಗಿಯೇ ಬದುಕು ಕಟ್ಟಿಕೊಂಡವರು. ಕಾಗೋಡು ಚಳವಳಿ ತಾರ್ಕಿಕ ಅಂತ್ಯ ಕಾಣಲು ಸಮಾಜವಾದಿ ಪ್ರವೇಶವೂ ಪ್ರಮುಖ ಕಾರಣ. ಆರ್ಥಿಕವಾಗಿ ಕೆಳಗಿರುವ ರೈತ ಏನೆಲ್ಲ ಸಾಧನೆ ಮಾಡಬಹುದು ಎನ್ನುವುದನ್ನು ಗೋಪಾಲ ಗೌಡರ ಬದುಕಿನಲ್ಲಿ ಕಾಣಬಹುದು ಎಂದು ತಿಳಿಸಿದರು.
    ಗೋಪಾಲ ಗೌಡರು ಕನ್ನಡ ಭಾಷೆ ಮತ್ತು ಸಾಹಿತ್ಯದ ಬಗ್ಗೆ ವಿಶೇಷ ಒಲವು ಹೊಂದಿದ್ದರು. ಕವಿ ರನ್ನನ ಬಗ್ಗೆ ಹೆಚ್ಚು ಆಸಕ್ತಿ ಬೆಳೆಸಿಕೊಂಡಿದ್ದರು. ದ.ರಾ.ಬೇಂದ್ರೆ, ಕುವೆಂಪು, ಕಾರಂತ ಸೇರಿ ಅನೇಕ ಸಾಹಿತಿಗಳು ಗೋಪಾಲ ಗೌಡರ ಪ್ರಭಾವಕ್ಕೆ ಒಳಗಾಗಿದ್ದರು. ಹಳ್ಳಿಯ ಜನರಿಗೆ ಪ್ರಜಾಪ್ರಭುತ್ವ, ಸಮಾನತೆ, ಹೋರಾಟ, ರೈತ ವರ್ಗದ ಹಕ್ಕಿನ ಬಗ್ಗೆ ಗೋಪಾಲ ಗೌಡರು ಅವಿರತವಾಗಿ ಅರಿವು ಮೂಡಿಸುತ್ತ ಬಂದಿದ್ದರು. ತಮ್ಮ ಹೋರಾಟ, ಸರಳ ಬದುಕು ಇನ್ನಿತರೆಗಳಿಂದ ನಮ್ಮೊಳಗೆ ಒಂದೊಂದು ನೆನಪಿನಲ್ಲಿ ಉಳಿಯುವ ಹೆಜ್ಜೆ ಇರಿಸಿದ್ದಾರೆ ಎಂದರು.
    ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಮಾತನಾಡಿ, ಶಾಂತವೇರಿ ಗೋಪಾಲ ಗೌಡರು ಸಮಾಜವಾದಿ ಹಿನ್ನೆಲೆಯಲ್ಲಿ ಬಡವರ, ದೀನದಲಿತರ ಧ್ವನಿಯಾಗಿ ಮಾಡಿದ ಕೆಲಸ ಗಮನಾರ್ಹ. ಅವರು ಒಳ್ಳೆಯ ಭಾಷಣಕಾರರು, ಗಾಯಕರು, ಓದುಗರಾಗಿದ್ದರು. ಎಂತಹ ಸಂದರ್ಭದಲ್ಲೂ ಅದನ್ನೆದುರಿಸಿ ನಿಲ್ಲುವ ಸಾಮರ್ಥ್ಯ ಗೋಪಾಲ ಗೌಡರಿಗೆ ಇತ್ತು. ಇದೇ ಅವರಲ್ಲಿ ಸಮರ್ಥ ನಾಯಕತ್ವ ಬೆಳೆಸಿಕೊಳ್ಳಲು ಅನುಕೂಲವಾಯಿತು ಎಂದು ಹೇಳಿದರು. ವಿನಾಯಕ ಮಹಿಳಾ ಮಂಡಳಿ, ವೀತರಾಗ ಮಹಿಳಾ ಮಂಡಳಿ, ಕಲಾಸಿಂಚನ ಶಿಕ್ಷಕರ ಸಾಂಸ್ಕೃತಿಕ ವೇದಿಕೆ, ಕರ್ನಾಟಕ ಜಾನಪದ ಕಲಾ ಪರಿಷತ್ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಸಾಪ ತಾಲೂಕು ಅಧ್ಯಕ್ಷ ವಿ.ಟಿ.ಸ್ವಾಮಿ, ಬಿ.ಡಿ.ರವಿಕುಮಾರ್, ಸತ್ಯನಾರಾಯಣ ಖಂಡಿಕಾ, ಕಸ್ತೂರಿ ಸಾಗರ್, ಲೋಕೇಶಕುಮಾರ್, ಡಾ. ಟಿ.ಪ್ರಸನ್ನ ಇತರರಿದ್ದರು.

    ಈಡೇರದ ಭವನ ನಿರ್ಮಾಣ ಬೇಡಿಕೆ

    ಗೋಪಾಲ ಗೌಡರ ಕುರಿತು 18 ಕೃತಿಗಳು ಬಂದಿವೆ. ಜೇಬಿನಲ್ಲಿ ಹಣ ಇಲ್ಲದಿದ್ದರೂ ರಾಜ್ಯ ಸುತ್ತುವ, ಹಳ್ಳಿಹಳ್ಳಿಗಳಲ್ಲಿ ಜನಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದರು. ಶಾಂತವೇರಿ ಗೋಪಾಲ ಗೌಡ ಹೆಸರಿನಲ್ಲಿ ಭವನ ನಿರ್ಮಾಣ ಆಗಬೇಕು ಎನ್ನುವ ಹಲವರ ಕನಸು ಈತನಕ ನನಸಾಗಿಲ್ಲ. ಗೋಪಾಲ ಗೌಡರ ಭವನ ನಿರ್ಮಾಣಕ್ಕೆ ಮಂಜೂರಾದ 5 ಲಕ್ಷ ರೂ. ಹಣ ಸುಲಭ್ ಶೌಚಗೃಹಕ್ಕೆ ಬಳಸಿಕೊಳ್ಳಲಾಗಿದೆ. ಗೋಪಾಲ ಗೌಡರ ಹೋರಾಟದ ಹಾದಿ ನೆನಪಿಸಿಕೊಳ್ಳುವ ಪ್ರಯತ್ನ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಬೇಸರ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts