More

    ಶಾನಾಡಿಯಲ್ಲಿ ಬೆಲ್ಲದ ಘಮ

    ಶಾನಾಡಿ: ಹಿರಿಯ ಕೃಷಿಕರಿಬ್ಬರು ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನರಾರಂಭಿಸುವಂತೆ ಒತ್ತಾಯಿಸಲು ಕಬ್ಬು ಬೆಳೆಯುವ ಮೂಲಕ ಸರ್ಕಾರದ ಗಮನ ಸೆಳೆದಿದ್ದಾರೆ.

    ಕುಂದಾಪುರ ತಾಲೂಕು ಕೆದೂರು ಗ್ರಾಮದ ಶಾನಾಡಿಯ ಹಿರಿಯ ಕೃಷಿಕರಾದ ಉಮಾನಾಥ ಶೆಟ್ಟಿ ಹಾಗೂ ರಾಮಚಂದ್ರ ಭಟ್ ವಿನೂತನ ಪ್ರತಿಭಟನೆಗೆ ಮುಂದಾಗಿದ್ದು, ಕಬ್ಬಿನ ತೋಟದ ಬಳಿಯೇ ಆಲೆಮನೆ ಮಾಡಿ, ಗಂಟೆಗೆ ಒಂದು ಟನ್ ಕಬ್ಬರೆದು, ಬೆಲ್ಲ ಮಾಡಿ ಶುದ್ಧ ಬೆಲ್ಲ ನೀಡುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ.

    ಕಬ್ಬು ಬೆಳೆದರೆ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಆರಂಭಿಸುವ ಬಗ್ಗೆ ಎಚ್.ಡಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಭರವಸೆ ನೀಡಿದ್ದು ಇದನ್ನು ನಂಬಿ ಕಬ್ಬು ಬೆಳೆದಿದ್ದಾರೆ. ಒಂದು ಕಡೆ ಕಬ್ಬು ಬೆಳೆಯುವ ಮೂಲಕ ಸಕ್ಕರೆ ಕಾರ್ಖಾನೆ ಆರಂಭಿಸುವಂತೆ ಸರ್ಕಾರದ ಮೇಲೆ ಒತ್ತಡ, ಮತ್ತೊಂದು ಕಡೆ ವಾರಾಹಿ ನೀರಿನ ಸದ್ಬಳಕೆ ಇವೆರಡೂ ಈ ಕೃಷಿಯ ಮೂಲ ಉದ್ದೇಶ.
    2018ರಲ್ಲಿ ಶಾನಾಡಿ ಬಯಲಲ್ಲಿ 8 ಎಕರೆ ಜಾಗದಲ್ಲಿ ಕಬ್ಬು ಬೆಳೆದಿದ್ದು 2019ರಲ್ಲಿ 16 ಎಕರೆಯಲ್ಲಿ ಬೆಳೆಯಲಾಗಿದೆ. ಕಬ್ಬು ಬೆಳೆದರೂ ಸಕ್ಕರೆ ಕಾರ್ಖಾನೆ ಆರಂಭವಾಗದ ಕಾರಣ ಬ್ರಹ್ಮಾವರದ ಶೀನ ಪೂಜಾರಿ ಶ್ರವಣಬೆಳಗೊಳದಿಂದ ಗಾಣ ತಂದು ಹಾಕಿದ್ದ್ದರಿಂದ ಆಲೆಮನೆ ತೆಲೆಯೆತ್ತಿದೆ. ಕಾರ್ಖಾನೆ ಆರಂಭವಾಗದೆ ಗದ್ದೆಯಲ್ಲಿ ಕಬ್ಬು ಹಾಳಾಗಿ ಹೋಗುವುದನ್ನು ತಪ್ಪಿಸಲು ಆಲೆಮನೆಯಲ್ಲಿ ಕಬ್ಬರೆದು ಬೆಲ್ಲ ಮಾಡಿ ಗ್ರಾಹಕರಿಗೆ ನೀಡುತ್ತಿದ್ದಾರೆ. ವಾರಾಹಿ ನೀರು ಬಳಸಿ ಕಬ್ಬು ಬೆಳೆದ ಪಟ್ಟಿಯಲ್ಲಿ ಈ ಹಿರಿಯ ಕೃಷಿಕರಿದ್ದಾರೆ. ಇವರ ಆಲೆಮನೆ ಜನಾಕರ್ಷಣೆ ಕೇಂದ್ರವಾಗಿದ್ದು ಪ್ರತಿದಿನ ನೂರಾರು ಜನ ಬರುತ್ತಿದ್ದಾರೆ.

    ಕಬ್ಬು ಬೆಳೆದು ವಿನೂತನ ಪ್ರತಿಭಟನೆ
    ಹಿಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉಡುಪಿ ಜಿಲ್ಲಾ ಪಂಚಾಯಿತಿಯಲ್ಲಿ ಸಭೆ ನಡೆಸಿದ್ದಾಗ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನರಾರಂಭಿಸುವಂತೆ ಒತ್ತಾಯಿಸಿದ್ದರು. ರೈತರು ಮೊದಲು ಕಬ್ಬು ಬೆಳೆದು ತೋರಿಸಲಿ, ಆಮೇಲೆ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಆರಂಭಿಸಲಾಗುತ್ತದೆ ಎಂದು ಕುಮಾರಸ್ವಾಮಿ ಹೇಳಿದ್ದರಿಂದ ಶಾನಾಡಿಯಲ್ಲಿ ಕಬ್ಬು ಕೃಷಿ ಮಾಡಲಾಗಿದೆ. ನಾವು ಕಬ್ಬು ಬೆಳೆದು ತೋರಿಸಿದ್ದೇವೆ. ನೂರಾರು ಹೆಕ್ಟೇರ್ ಜಾಗದಲ್ಲಿ ಕಬ್ಬು ಬೆಳೆಯಲು ಸಿದ್ದತೆ ಕೂಡ ನಡೆದಿದೆ. ಸರ್ಕಾರ ಎಚ್ಚೆತ್ತು ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಆರಂಭಿಸಬೇಕು ಎಂಬ ನಿಟ್ಟಿನಲ್ಲಿ ವಿನೂತನ ಪ್ರತಿಭಟನೆಗೆ ರೈತರು ಮುಂದಾಗಿದ್ದು ಈ ಬಗ್ಗೆ ಸರ್ಕಾರ ಗಮನ ಹರಿಸಬೇಕೆಂಬ ಒತ್ತಾಯ ಕೇಳಿಬಂದಿದೆ.

    ಕಬ್ಬು ಕೃಷಿ ಅಭಿವೃದ್ಧಿ, ವಾರಾಹಿ ನೀರು ಸದ್ವಿನಿಯೋಗ, ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನರಾರಂಭ ಕಬ್ಬು ಕೃಷಿಗೆ ಪ್ರೇರಣೆ. ಶಾನಾಡಿ ಬಯಲಲ್ಲಿ 16 ಎಕರೆ ಕಬ್ಬು ಬೆಳೆಯಿದೆ. ಸಕ್ಕರೆ ಕಾರ್ಖಾನೆ ಆಗದ್ದಕ್ಕೆ ಆಲೆಮನೆ ಆರಂಭಿಸಿದ್ದು, ರಾಸಾಯನಿಕ ಮುಕ್ತ ಶುದ್ಧ ಬೆಲ್ಲ ನೀಡುತ್ತಿದ್ದೇವೆ. ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಆರಂಭವಾಗಲೇಬೇಕು. ಅದರ 350 ಕೋಟಿ ರೂ. ಆಸ್ತಿ ರೈತರದ್ದು. ಕಬ್ಬು ಬೆಳೆದು ಎಥೆನಾಲ್ ಉತ್ಪಾದಿಸುವ ಮೂಲಕ ರೈತರು ಪ್ರಯೋಜನ ಪಡೆಯುವ ಜತೆಗೆ ದೇಶಕ್ಕೆ ಕೊಡುಗೆ ನೀಡಿದ ತೃಪ್ತಿಯೂ ನಮಗೆ ಸಿಗಲಿದೆ.
    ಉಮಾನಾಥ ಶೆಟ್ಟಿ
    ಕಬ್ಬು ಕೃಷಿಕ ಶಾನಾಡಿ, ಕೆದೂರು.


    ವಾರಾಹಿ ಯೋಜನೆ ನೀರು ಸುಮ್ಮನೆ ಹರಿದು ವ್ಯರ್ಥವಾಗಬಾರದು. ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಆರಂಭಿಸಲು ಕಬ್ಬು ಬೆಳೆದು, ಆಲೆಮನೆ ಮಾಡಿ, ನಾವೇ ನೇರವಾಗಿ ಗ್ರಾಹಕರಿಗೆ ಶುದ್ಧ ಬೆಲ್ಲ ಕೊಡುವ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಪ್ರತಿದಿನ ಆಲೆಮನೆಗೆ ನೂರಾರು ಜನ ಭೇಟಿ ಕೊಡುತ್ತಿದ್ದು, ಕಬ್ಬಿನ ಬೆಳೆ ಮಾಹಿತಿ ಹಾಗೂ ಕಬ್ಬಿನ ಬೀಜ ಕೇಳಿದ್ದಾರೆ. ಕೃಷಿ ಸಂಕೃತಿ, ಕೃಷಿ ಉಳಿಯುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಇದು.
    ರಾಮಚಂದ್ರ ಭಟ್
    ಕಬ್ಬು, ಸಾವಯವ ಕೃಷಿಕ ಶಾನಾಡಿ


    ನಾವೂ ಹಿಂದೆ ಕಬ್ಬು ಕೃಷಿ ಮಾಡುತ್ತಿದ್ದು, ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಬಂದ್ ಆದ ನಂತರ ನಿಲ್ಲಿಸಿದ್ದೆವು. ಶಾನಾಡಿ ಕಬ್ಬಿನ ತೋಟ, ಅಲೆಮನೆ ನೋಡಿದ ನಂತರ ನಮಗೂ ಮತ್ತೆ ಕಬ್ಬು ಕೃಷಿ ಆರಂಭಿಸುವ ಉಮೇದು ಬಂದಿದೆ. ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನರಾರಂಭವಾದರೆ, ಮತ್ತಷ್ಟು ಕೃಷಿಕರು ಕಬ್ಬು ಬೆಳೆದಾರು. ಕೃಷಿಗಾಗಿ ಕೋಟಿ ಕೋಟಿ ಲಕ್ಕದಲ್ಲಿ ವಾರಾಹಿ ನೀರಾವರಿಗೆ ವೆಚ್ಚ ಮಾಡಿದ್ದು, ಅದರ ಸದ್ವಿನಿಯೋಗ ಆಗಬೇಕು.
    ಶುಭಾ, ಕೃಷಿಕ ಮಹಿಳೆ, ಕೋಟ.

    ಶ್ರೀಪತಿ ಹೆಗಡೆ ಹಕ್ಲಾಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts