More

    ಚೀನಾ ಗಡಿಗೆ ರಹಸ್ಯ ಪಡೆ ಕಳುಹಿಸಿದೆ ಭಾರತ: ಇದು ಕುತಂತ್ರಿ ಚೀನಾಗೆ ಮಿಲಿಟರಿ ಸವಾಲಿಗಿಂತಲೂ ದೊಡ್ಡದು!

    | ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

    ಚೀನಾ ಗಡಿಗೆ ರಹಸ್ಯ ಪಡೆ ಕಳುಹಿಸಿದೆ ಭಾರತ: ಇದು ಕುತಂತ್ರಿ ಚೀನಾಗೆ ಮಿಲಿಟರಿ ಸವಾಲಿಗಿಂತಲೂ ದೊಡ್ಡದು!ಆಗಸ್ಟ್ 2020ರ ಕೊನೆಯ ವೇಳೆಗೆ, ಭಾರತ ಮತ್ತು ಚೀನಾದ ಸೇನಾಪಡೆಗಳು ಹಿಮಾಲಯದ ಶಿಖರದ ವಿವಾದಿತ ಗಡಿಯಲ್ಲಿ ಮತ್ತೆ ಸೆಣಸಾಟ ನಡೆಸಿದವು. ಆ ಬೇಸಿಗೆಯಲ್ಲಿ ಸಾಕಷ್ಟು ಸಮಸ್ಯೆಗಳನ್ನು ಕಂಡ ಭಾರತ-ಚೀನಾ ಗಡಿಯಲ್ಲಿ ಇದು ಇನ್ನೊಂದು ಹೊಸ ಸೇರ್ಪಡೆಯಾಯಿತು. ಈ ಕಾದಾಟದಲ್ಲಿ ಭಾರತದ ಸ್ಪೆಷಲ್ ಫ್ರಾಂಟಿಯರ್ ಫೋರ್ಸ್ (ಎಸ್ಎಫ್ಎಫ್) ಪಡೆಗೆ ಸೇರಿದ ಓರ್ವ ಯೋಧ ಮೃತಪಟ್ಟು, ಇನ್ನೋರ್ವ ಯೋಧ ಗಾಯಗೊಂಡಿದ್ದ. ಈ ರಹಸ್ಯ ಪಡೆಯಲ್ಲಿ ಹೆಚ್ಚಾಗಿ ಟಿಬೆಟಿಯನ್ ಯೋಧರಿದ್ದು, ಅವರು ತಮ್ಮ ಮಾತೃಭೂಮಿಯ ಮೇಲಿನ ಚೀನಾದ ಅತಿಕ್ರಮಣವನ್ನು ವಿರೋಧಿಸುತ್ತಾರೆ.

    ಲಡಾಖಿನ ಪಾಂಗೊಂಗ್ ತ್ಸೊ ಸರೋವರದ ಸುತ್ತ, ವಿವಾದಿತ ಚೀನಾ – ಭಾರತದ ಗಡಿಯಾದ ಲೈನ್ ಆಫ್ ಆ್ಯಕ್ಚುವಲ್ ಕಂಟ್ರೋಲ್ (ಎಲ್ಎಸಿ) ಆದ್ಯಂತ ನಡೆದ ಈ ಕಾದಾಟದಲ್ಲಿ ಐನೂರಕ್ಕೂ ಹೆಚ್ಚು ಸೈನಿಕರು ಭಾಗಿಯಾಗಿದ್ದು, ಇದು ಬಹುತೇಕ ಮೂರು ಗಂಟೆಗಳ ಕಾಲ ನಡೆಯಿತು. ಈ ಘಟನೆ ನಡೆದ ಕೆಲವು ದಿನಗಳ ಬಳಿಕ ಪ್ರತಿಕ್ರಿಯೆ ನೀಡಿದ ಭಾರತ, ಈ ಕಾರ್ಯಾಚರಣೆಯನ್ನು ಭಾರತದ ವಿಶೇಷ ಕಾರ್ಯಾಚರಣಾ ಬೆಟಾಲಿಯನ್ ಚೀನಾದ ಅತಿಕ್ರಮಣದ ವಿರುದ್ಧ ನಡೆಸಿದ್ದು, ಸ್ಟೆಲ್ತ್ ಕಾರ್ಯಾಚರಣೆಯ ಮೂಲಕ ಚೀನಾದ ಶಿಬಿರವನ್ನು ವಶಪಡಿಸಿಕೊಂಡಿರುವುದಾಗಿ ತಿಳಿಸಿತು.

    ಈ ಘಟನೆ ನಡೆಯುವ ಎರಡು ತಿಂಗಳಿಗೂ ಮೊದಲು ಇದೇ ಪ್ರದೇಶದಲ್ಲಿ ಇಂತಹದ್ದೇ ಒಂದು ಕದನ ನಡೆದಿತ್ತು. ಅದರಲ್ಲಿ 20 ಭಾರತೀಯ ಯೋಧರು ಸಾವನ್ನಪ್ಪಿದ್ದರು. ಆದರೆ ಚೀನೀ ಪಡೆಯ ಸಾವು ನೋವುಗಳ ನಿಖರ ಲೆಕ್ಕ ಲಭ್ಯವಾಗಿರಲಿಲ್ಲ. ಆಗಸ್ಟ್ ತಿಂಗಳ ಕದನದ ಸಾವು ನೋವಿನ ನಿಖರ ಮಾಹಿತಿ ಪ್ರಕಟವಾಗದಿದ್ದರೂ, ಮೈನ್ ಫೀಲ್ಡ್ ಒಳಗೆ ತೆರಳಿದಾಗ ಓರ್ವ ಭಾರತೀಯ ಕಮಾಂಡೋ ಮೃತಪಟ್ಟು, ಓರ್ವ ಕಮಾಂಡೋ ಗಾಯಗೊಂಡಿದ್ದರು. ಈ ಯೋಧರು ಸ್ಪೆಷಲ್ ಫ್ರಾಂಟಿಯರ್ ಫೋರ್ಸ್ (ಎಸ್ಎಫ್ಎಫ್) ಭಾಗವಾಗಿದ್ದರು. ಈ ವಿಶೇಷ ಪಡೆಯಲ್ಲಿ ಬಹುತೇಕ ಎಲ್ಲ ಯೋಧರೂ ಟಿಬೆಟಿಯನ್ನರಾಗಿದ್ದಾರೆ.

    ಈ ಘಟನೆಯ ಪರಿಣಾಮವಾಗಿ ರಹಸ್ಯ ಎಸ್ಎಫ್ಎಫ್ ಪಡೆ ಹೆಚ್ಚು ಬೆಳಕಿಗೆ ಬಂದಿತು. ಈ ವಿಶೇಷ ಪಡೆಯ ಸ್ಥಾಪನೆಯಾದ ಆರು ದಶಕಗಳ ಬಳಿಕ, ಈಗ ಎಸ್ಎಫ್ಎಫ್ ಪಡೆಯ ಯೋಧರು ಮತ್ತು ಭಾರತದಲ್ಲಿರುವ ಸಾಕಷ್ಟು ಟಿಬೆಟಿಯನ್ನರು ತಮ್ಮ ಪ್ರಮುಖ ಉದ್ದೇಶವನ್ನು ಈ ಪಡೆ ಈಡೇರಿಸುತ್ತಿದೆ ಎಂದು ಭಾವಿಸುತ್ತಿದ್ದಾರೆ. ಅದೆಂದರೆ, ಚೀನಾಗೆ ಸವಾಲೊಡ್ಡುವುದು.

    ಈ ಎಸ್ಎಫ್ಎಫ್ ಪಡೆ ಭಾರತೀಯ ಸೇನೆಯಲ್ಲಿ ವಿಕಾಸ್ ಬಟಾಲಿಯನ್ ಎಂದು ಹೆಸರಾಗಿದೆ. ಈ ಪಡೆಯನ್ನು 1962ರ ಚೀನಾ – ಭಾರತ ಯುದ್ಧದ ಸಂದರ್ಭದಲ್ಲಿ ಸ್ಥಾಪಿಸಲಾಯಿತು. ಆ ಯುದ್ಧದಲ್ಲಿ ಸೋಲು ಅನುಭವಿಸಿದ ಬಳಿಕ ಭಾರತಕ್ಕೆ ಅತ್ಯಂತ ಎತ್ತರದ ಪ್ರದೇಶದಲ್ಲೂ ಕಾರ್ಯಾಚರಣೆ ನಡೆಸಬಲ್ಲ, ವಿಚಕ್ಷಣೆ ಮತ್ತು ಯುದ್ಧ ಸಾಮರ್ಥ್ಯ ಹೊಂದಿರುವ ವಿಶೇಷ ಪರ್ವತ ಪಡೆಗಳ ಅಗತ್ಯವಿದೆ ಎಂದು ಅರಿವಾಯಿತು.

    ಇದಕ್ಕಾಗಿ ಅತ್ಯುತ್ತಮ ಅಭ್ಯರ್ಥಿಗಳು ಭಾರತದಲ್ಲಿ ಆಶ್ರಯ ಪಡೆದಿದ್ದ ಟಿಬೆಟಿಯನ್ ಸಮುದಾಯದಿಂದ ಬಂದಿದ್ದರು. ಅವರಲ್ಲಿ ಬಹುತೇಕರು 1959ರ ಕ್ರಾಂತಿಯ ವೈಫಲ್ಯದ ಬಳಿಕ ಅವರ ನಾಯಕರಾದ ದಲೈ ಲಾಮಾ ಅವರೊಡನೆ ಟಿಬೆಟ್‌ನಿಂದ ಪಲಾಯನ ಮಾಡಿ, ಭಾರತಕ್ಕೆ ಬಂದಿದ್ದರು.

    ಈ ನಿರಾಶ್ರಿತರಿಗೆ ಅತ್ಯಂತ ಎತ್ತರದ ಪರ್ವತ ಪ್ರದೇಶಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯವಿತ್ತು. ಅವರಿಗೆ ಚೀನಾದ ಕಮ್ಯುನಿಸ್ಟ್ ಪಡೆಗಳ ವಿರುದ್ಧ ಹೋರಾಡುವ ಛಲವೂ ಇತ್ತು. ಅವರಲ್ಲಿ ಕ್ರಾಂತಿಯ ಸಂದರ್ಭದಲ್ಲಿ ಹೋರಾಡಿದವರೂ, ಸಿಐಎಯಿಂದ ಗೆರಿಲ್ಲಾ ಯುದ್ಧದಲ್ಲಿ ತರಬೇತಿ ಪಡೆದವರೂ ಸೇರಿದ್ದರು. ಈ ಪಡೆಯನ್ನು ಭಾರತದ ಆಂತರಿಕ ಗುಪ್ತಚರ ಸಂಸ್ಥೆಯಾದ ಇಂಟಲಿಜೆನ್ಸ್ ಬ್ಯೂರೋ ಸ್ಥಾಪಿಸಿತ್ತು. ಆ ಬಳಿಕ ಇದನ್ನು ಭಾರತದ ವಿದೇಶೀ ಗುಪ್ತಚರ ಸಂಸ್ಥೆಯಾದ ರಿಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್ (ರಾ) ತನ್ನ ಸುಪರ್ದಿಗೆ ತೆಗೆದುಕೊಂಡಿತು.

    ಚೀನಾ ಗಡಿಗೆ ರಹಸ್ಯ ಪಡೆ ಕಳುಹಿಸಿದೆ ಭಾರತ: ಇದು ಕುತಂತ್ರಿ ಚೀನಾಗೆ ಮಿಲಿಟರಿ ಸವಾಲಿಗಿಂತಲೂ ದೊಡ್ಡದು!

    ಈ ಪಡೆಯನ್ನು ಮೊದಲಿಗೆ “ಎಸ್ಟಾಬ್ಲಿಷ್ಮೆಂಟ್ 22” ಎಂದು ಕರೆಯಲಾಗಿತ್ತು. ಬಳಿಕ ಇದಕ್ಕೆ 1967ರಲ್ಲಿ ಎಸ್ಎಫ್ಎಫ್ ಎಂದು ಮರುನಾಮಕರಣ ಮಾಡಲಾಯಿತು. ಈ ಪಡೆಯ ತರಬೇತಿ ಮತ್ತು ಆಯುಧಗಳ ವಿಚಾರದಲ್ಲಿ ಸಿಐಎ 1970ರ ದಶಕದ ಆರಂಭದ ತನಕವೂ ಸಹಾಯ ಮಾಡಿತು.

    ಈ ಪಡೆಯ ಯೋಧರು ವಿಶೇಷವಾಗಿ ಪರ್ವತ ಪಡೆಗಳಾಗಿದ್ದು, ಹಿಮಾಲಯ ಪರ್ವತಗಳ ಅತ್ಯಂತ ಕಠಿಣವಾದ ಹವಾಮಾನ ಪರಿಸ್ಥಿತಿಯಲ್ಲೂ ಗಸ್ತು ತಿರುಗುವ ಹಾಗೂ ಹೋರಾಡುವುದರಲ್ಲಿ ನಿಷ್ಣಾತರಾಗಿದ್ದಾರೆ.

    ಸಮರ್ಪಣೆ ಮತ್ತು ಸೇವೆಯ ಇತಿಹಾಸ
    ಎಸ್ಎಫ್ಎಫ್ ಪಡೆಯನ್ನು 1962ರಲ್ಲಿ ಚೀನಾ ವಿರುದ್ಧದ ಯುದ್ಧದಲ್ಲಿ ಹೋರಾಡುವ ಸಮಯಕ್ಕೆ ಸ್ಥಾಪಿಸಲಾಗಿರಲಿಲ್ಲ. ಈ ಪಡೆಯನ್ನು ಪ್ರಮುಖವಾಗಿ ಚೀನಾವನ್ನು ಎದುರಿಸಲೆಂದೇ ಸ್ಥಾಪಿಸಲಾಗಿದ್ದರೂ, ಆ ರೀತಿಯಲ್ಲಿ ಇದು ಹೆಚ್ಚು ಬಳಕೆಗೆ ಬಂದಿರಲಿಲ್ಲ. ಬಹುಶಃ ಚೀನಾವನ್ನು ಎದುರಿಸಲು ಸನ್ನದ್ಧರಾಗಿರುವ ತನ್ನ ಯೋಧರಿಂದ ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ತೆರಳಬಹುದು ಎಂಬ ಭಾವನೆ ಭಾರತದ್ದಾಗಿರಲೂ ಬಹುದು.

    ಆದರೆ ಎಸ್ಎಫ್ಎಫ್ ಹಲವು ಸಂದರ್ಭಗಳಲ್ಲಿ ಯುದ್ಧಗಳಲ್ಲಿ ಪಾಲ್ಗೊಂಡಿದೆ. 1971ರ ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ 3,000 ಎಸ್ಎಫ್ಎಫ್ ಕಮಾಂಡೋಗಳು ಬಾಂಗ್ಲಾದೇಶದ ಒಳಗೆ, ಪಾಕಿಸ್ತಾನದ ಗಡಿಯಾಚೆಗೆ ಇಳಿದಿದ್ದರು. ಅವರು ಪ್ರಮುಖ ಪ್ರದೇಶಗಳನ್ನು ತಮ್ಮ ಕೈವಶ ಮಾಡಿಕೊಂಡು, ಪಾಕಿಸ್ತಾನಿ ಪಡೆಗಳು ಬರ್ಮಾದೊಳಗೆ ಹೋಗದಂತೆ ತಡೆದಿದ್ದರು. ಈ ಕಾರ್ಯಾಚರಣೆಯಲ್ಲಿ 50 ಎಸ್ಎಫ್ಎಫ್ ಕಮಾಂಡೋಗಳು ಮೃತಪಟ್ಟು, 190 ಜನ ಗಾಯಗೊಂಡಿದ್ದರು.

    ಅವರು ಆಪರೇಶನ್ ಬ್ಲೂ ಸ್ಟಾರ್ ಕಾರ್ಯಾಚರಣೆಯಲ್ಲಿ ಸಿಖ್ ಆತಂಕವಾದಿಗಳ ವಿರುದ್ಧ ಸೆಣಸಿದ್ದರು. ಬಳಿಕ 1984ರಲ್ಲಿ ಇದೇ ಪಡೆ ಸಿಯಾಚಿನ್ ನೀರ್ಗಲ್ಲು ಪ್ರದೇಶದಲ್ಲಿ ಭಾರತದ ಹತೋಟಿ ಸಾಧಿಸಲು ನೆರವಾಗಿದ್ದರು. ನಂತರ 1999ರ ಕಾರ್ಗಿಲ್ ಯುದ್ಧದಲ್ಲೂ ಎಸ್ಎಫ್ಎಫ್ ಭಾಗವಹಿಸಿತ್ತು.

    ಎಸ್ಎಫ್ಎಫ್ ಕಮಾಂಡೋಗಳು ಚೀನಾದ ಪರಮಾಣು ಶಸ್ತ್ರಾಸ್ತ್ರ ಕಾರ್ಯಕ್ರಮವನ್ನು ಪತ್ತೆಹಚ್ಚಲು ಸಿಐಗೆ ರಹಸ್ಯವಾಗಿ ಸಹಾಯ ಮಾಡಿದ್ದರು. ಅವರು ಚೀನಾ – ಭಾರತದ ಗಡಿಯಾದ್ಯಂತ ಆಧುನಿಕ ಪತ್ತೆ ಉಪಕರಣಗಳನ್ನು ಸ್ಥಾಪಿಸಿ, ಅವುಗಳನ್ನು ನಿಯಂತ್ರಿಸಿದ್ದರು.

    ಎಸ್ಎಫ್ಎಫ್ ಪಡೆಯ ಪ್ರಥಮ ಕಮಾಂಡರ್ ಅವರ ಮಗ, ಮತ್ತು ಸ್ವತಃ ಭಾರತೀಯ ಸೇನೆಯ ಯೋಧರಾಗಿ, ಎಸ್ಎಫ್ಎಫ್ ಪಡೆಗಳ ಜೊತೆಗೆ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ್ದ ಗುರುದೀಪ್ ಸಿಂಗ್ ಉಬಾನ್ ಅವರು ಎಸ್ಎಫ್ಎಫ್ ಪಡೆಯನ್ನು ಭಯರಹಿತ ಮತ್ತು ಯಾವುದೇ ಹಿಂಜರಿಕೆಯೂ ಇಲ್ಲದ ಪಡೆ ಎಂದು ಬಣ್ಣಿಸುತ್ತಾರೆ.

    ಚೀನಾಗಿದೆ ಒಂದು ಸಂದೇಶ
    ಎಸ್ಎಫ್ಎಫ್ ನೇರವಾಗಿ ಭಾರತದ ಕ್ಯಾಬಿನೆಟ್ ಸೆಕ್ರೆಟರಿ ಕಚೇರಿಗೆ ವರದಿ ಮಾಡುತ್ತದೆ. ಇದು ಭಾರತೀಯ ಸೇನೆಯ ಭಾಗವಲ್ಲ. ಒಂದು ಅಂದಾಜಿನ ಪ್ರಕಾರ, ಎಸ್ಎಫ್ಎಫ್ ನಲ್ಲಿ 3,000 – 5,000 ಕಮಾಂಡೋಗಳು ಇರಬಹುದು ಎನ್ನಲಾಗಿದೆ. ಗೂರ್ಖಾ ಎಂದು ಗುರುತಿಸಲಾಗುವ ಭಾರತ ಮತ್ತು ನೇಪಾಳದ ಯೋಧರೂ ಎಸ್ಎಫ್ಎಫ್ ಭಾಗವಾಗಿದ್ದಾರೆ. ಆದರೆ ಇದರಲ್ಲಿ ಹೆಚ್ಚಿನವರು ಟಿಬೆಟಿಯನ್ನರೇ ಆಗಿದ್ದಾರೆ. ಈ ಕಾರಣದಿಂದಲೇ ಎಸ್ಎಫ್ಎಫ್ ಪಡೆಯ ಚಿಹ್ನೆಯೂ ಟಿಬೆಟಿಯನ್ ಹಿಮ ಸಿಂಹವಾಗಿದೆ. ಇಂತಹದ್ದೇ ಸಿಂಹವನ್ನು ಟಿಬೆಟಿಯನ್ ಧ್ವಜದಲ್ಲೂ ಕಾಣಬಹುದು.

    ಈ ಪಡೆಯ ಸ್ಥಾಪನೆ ಮತ್ತು ಉದ್ದೇಶದ ಕಾರಣದಿಂದ ಇದನ್ನು ಬಹುತೇಕ ರಹಸ್ಯ ಪಡೆಯಾಗಿ ಇಡಲಾಗಿತ್ತು. ಅದೇ ಕಾರಣದಿಂದ 2020 ಆಗಸ್ಟ್‌ನಲ್ಲಿ ನಡೆದ ಚಕಮಕಿಯಲ್ಲಿ ಮಡಿದ ಯೋಧ ತೆನ್ಜಿ಼ನ್ ನ್ಯಿಮಾ ಅವರ ಕುಟುಂಬಸ್ತರಿಗೆ ಅವರ ಸೇವೆಯ ಕುರಿತು ಹೊರಗೆಲ್ಲೂ ಮಾತನಾಡದಂತೆ ಭಾರತೀಯ ಅಧಿಕಾರಿಗಳು ಸೂಚಿಸಿದ್ದರು.

    ಆದರೆ ಇತ್ತೀಚಿನ ಘಟನೆಗಳು ಈ ಪಡೆಯ ಕುರಿತು ಹೊಸದಾದ ಆಸಕ್ತಿಯನ್ನು ಒದಗಿಸಿವೆ. 2020ರ ಗಲಭೆಯ ವೀಡಿಯೋ ತುಣುಕುಗಳು ಹರಿದಾಡಿದ್ದು, ಅದರಲ್ಲಿ ಎಸ್ಎಫ್ಎಫ್ ಪಡೆಯ ಟಿಬೆಟಿಯನ್ ಯೋಧರು ಚೀನಾದ ಸೈನಿಕರನ್ನು ಭಾರತ ಚೀನಾ ಯೋಧರ ಚಕಮಕಿಯ ಬಳಿಕ ಮರಳಿ ಓಡಿಸುವುದು ಕಂಡುಬಂದಿತ್ತು.

    ಇಂತಹ ಘಟನೆಗಳು ಎಸ್ಎಫ್ಎಫ್ ಹಾಗೂ ಭಾರತದಲ್ಲಿರುವ ಟಿಬೆಟಿಯನ್ ಸಮುದಾಯಗಳಿಗೆ ಅವರ ಸೇವೆಗೆ ಯೋಗ್ಯವಾದ ಗುರುತು ಮತ್ತು ಗೌರವ ಸಿಗಬಹುದು ಎಂಬ ಭರವಸೆಯನ್ನು ಮೂಡಿಸಿವೆ. ಟಿಬೆಟಿಯನ್ ಯೋಧರು ಚೀನಾವನ್ನು ಎದುರಿಸಿದ್ದು ಭಾರತದಲ್ಲಿ ನೆಲೆಸಿರುವ ಟಿಬೆಟಿಯನ್ನರಿಗೂ ತಮ್ಮ ಶತ್ರುವನ್ನು ನಮ್ಮ ಯೋಧರು ಬೆದರಿಸಿದ್ದಾರೆ ಎಂದು ಭಾವನಾತ್ಮಕವಾಗುವಂತೆ ಮಾಡಿದೆ.

    “ಹೆಚ್ಚಿನ ಟಿಬೆಟಿಯನ್ನರು ಭಾರತೀಯ ಸೇನೆಗೆ ಯಾಕೆ ದಾಖಲಾಗುತ್ತೇವೆಂದರೆ ಆ ಮೂಲಕ ನಮಗೆ ಚೀನಾದ ವಿರುದ್ಧ ಹೋರಾಡುವ ಅವಕಾಶ ಸಿಗುತ್ತದೆ ಎಂಬ ಕಾರಣಕ್ಕಾಗಿ” ಎಂದು ಓರ್ವ ನಿವೃತ್ತ ಎಸ್ಎಫ್ಎಫ್ ಯೋಧ ಸೌತ್ ಚೈನಾ ಮಾರ್ನಿಂಗ್ ಪೋಸ್ಟ್‌ಗೆ ಹೇಳಿಕೆ ನೀಡಿದ್ದರು.

    ಈ ಎಲ್ಲ ಅಂಶಗಳು ಎಸ್ಎಫ್ಎಫ್ ಪಡೆಗಳಿಗೆ ಮಿಲಿಟರಿ ಮಹತ್ವಕ್ಕಿಂತಲೂ ಹೆಚ್ಚಿನ ಮಹತ್ವ ನೀಡುತ್ತವೆ. ಇದು ದಶಕಗಳ ಕಾಲ ಚೀನಾದ ಕಮ್ಯೂನಿಸ್ಟ್‌ ಪಕ್ಷ ಟಿಬೆಟ್‌ನಲ್ಲಿ ದಮನಿಸಿರುವ ಪ್ರಾದೇಶಿಕ ವಿವಾದ ಹಾಗೂ ಅತ್ಯಂತ ಆಳವಾದ ಜನಾಂಗೀಯ ಮತ್ತು ರಾಜಕೀಯ ಹೋರಾಟಗಳಿಗೂ ಸಂವಾದಿಯಾಗಿದೆ.

    “ಚೀನಾದ ಸ್ಥಾನ ಅತ್ಯಂತ ಸ್ಪಷ್ಟವಾಗಿದೆ. ಟಿಬೆಟಿನ ಸ್ವಾತಂತ್ರ್ಯ ಹೋರಾಟದ ಪಡೆಗಳಿಗೆ ಯಾವ ದೇಶವಾದರೂ, ಯಾವುದೇ ರೀತಿಯಲ್ಲಾದರೂ ಸಹಕಾರ ನೀಡುವುದನ್ನು ನಾವು ವಿರೋಧಿಸುತ್ತೇವೆ” ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರೆಯೊಬ್ಬರು ಇತ್ತೀಚೆಗೆ ಹೇಳಿಕೆ ನೀಡಿದ್ದರು.

    ಸಿಬಿಐನಿಂದ ವಿಡಿಯೋಕಾನ್ ಮುಖ್ಯಸ್ಥ ವೇಣುಗೋಪಾಲ್ ಧೂತ್ ಬಂಧನ

    ದೆಹಲಿಗೆ ತೆರಳಿದ ಸಿಎಂ: ಎಲೆಕ್ಷನ್​ ತಯಾರಿ, ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ

    ಹೊಸ ವರ್ಷಕ್ಕೆ ಹೊಸ ರೆಸಲ್ಯೂಷನ್​; ಇದನ್ನು ಪಾಲಿಸಿದ್ರೆ ಯಶಸ್ಸು ಖಚಿತ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts