More

    ಬ್ಯಾಡಗಿಯಲ್ಲಿ ಮನೆಗಳಿಗೆ ನುಗ್ಗುತ್ತಿದೆ ಚರಂಡಿ ನೀರು

    ಬ್ಯಾಡಗಿ: ತಾಲೂಕಿನ ಮೋಟೆಬೆನ್ನೂರು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆಯ ಅವೈಜ್ಞಾನಿಕ ಕಾಮಗಾರಿಯಿಂದ ಚರಂಡಿ ನೀರು ಸ್ಥಳೀಯ ನಿವಾಸಿಗಳ ಮನೆಗಳಿಗೆ ನುಗ್ಗುತ್ತಿದೆ. ಇದರಿಂದ ಸ್ಥಳೀಯರು ಬೇಸತ್ತು ಹೋಗಿದ್ದಾರೆ.
    ಗ್ರಾಮದ ಇಳಿಜಾರಿನಿಂದ ಹರಿದು ಬರುವ ಚರಂಡಿ ನೀರು ಹೆದ್ದಾರಿ ದಾಟಲು ವ್ಯವಸ್ಥೆ ಮಾಡಿಲ್ಲ. ಮೂರು ಭಾಗದಿಂದ ಚರಂಡಿ ನೀರು ಹರಿದು ಬಂದು ಒಂದೆಡೆ ಸೇರಿ, ಪುನಃ ಮನೆಗಳತ್ತ ವಾಪಸ್ ಹರಿಯುತ್ತಿದೆ. ಮಳೆಯಾದಾಗ ಕೊಳಚೆ ನೀರು ಮನೆಗಳಿಗೆ ನುಗ್ಗುತ್ತಿದೆ. ಇದರಿಂದ ಕೊಳಚೆ ನೀರು ಮನೆಗಳ ಮುಂಭಾಗದಲ್ಲಿ ಸಂಗ್ರಹಗೊಂಡು ಕಲುಷಿತ ವಾತಾವರಣ ನಿರ್ಮಾಣವಾಗಿದೆ. ಅಲ್ಲದೆ, ಸೊಳ್ಳೆಗಳ ಕಾಟಕ್ಕೆ ಇಲ್ಲಿನ ನಿವಾಸಿಗಳು ಬೇಸತ್ತು ಹೋಗಿದ್ದಾರೆ. ಇಲ್ಲಿನ ದುರ್ನಾತಕ್ಕೆ ಮೂಗು ಮುಚ್ಚಿಕೊಂಡು ಜೀವನ ನಡೆಸಬೇಕಿದೆ.
    ಗ್ರಾಪಂ ಕಾರ್ಮಿಕರು ಚರಂಡಿ ಮಾತ್ರ ಸ್ವಚ್ಛ ಮಾಡುತ್ತಿದ್ದು, ಕೊಳಚೆ ನಿಂತಿರುವುದಕ್ಕೆ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಮೂಲಕ ಚರಂಡಿ ನೀರು, ಮಳೆ ನೀರು ಹೋಗಲು ಒಳಚರಂಡಿ ವ್ಯವಸ್ಥೆ ಕಲ್ಪಿಸಬೇಕಿದೆ.
    ಎರಡು ವರ್ಷವಾದರೂ ದೂರು ಕೇಳುತ್ತಿಲ್ಲ: ನಾಲ್ಕೈದು ವರ್ಷದಿಂದ ಮೋಟೆಬೆನ್ನೂರು ಗ್ರಾಮಕ್ಕೆ ಹೊಂದಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ ಸಮಸ್ಯೆ ತೀವ್ರಗೊಂಡಿದೆ. ಆರು ತಿಂಗಳ ಹಿಂದೆ ಇಲ್ಲಿನ ಸರ್ವಿಸ್ ರಸ್ತೆಯಲ್ಲಿ ದೊಡ್ಡ ದೊಡ್ಡ ಕಂದಗಳು ಬಿದ್ದಿದ್ದವು. ಬೃಹತ್ ವಾಹನ ಸೇರಿ ಸಣ್ಣಪುಟ್ಟ ವಾಹನಗಳ ಓಡಾಟಕ್ಕೂ ತೀವ್ರ ಸಮಸ್ಯೆ ಉಂಟಾಗಿದ್ದಲ್ಲದೆ, ಸಾವು ನೋವುಗಳು ಸಂಭವಿಸಿದವು. ಇದನ್ನು ಖಂಡಿಸಿ ಗ್ರಾಮಸ್ಥರು ಹೋರಾಟದ ಹಾದಿ ಹಿಡಿದ ಬಳಿಕ ಅಧಿಕಾರಿಗಳು ಎಚ್ಚೆತ್ತುಕೊಂಡು ರಸ್ತೆ ದುರಸ್ತಿಗೆ ಮುಂದಾದರು.
    ಮೇಲ್ಸೇತುವೆ ಅಪೂರ್ಣ: ಕಳೆದ ಹತ್ತಾರು ವರ್ಷಗಳಿಂದ ಇಲ್ಲಿನ ಹೆದ್ದಾರಿ ಕಾಮಗಾರಿ ನಡೆದಿದ್ದು, ಇಂಜಿನಿಯರ್‌ಗಳು ರೂಪಿಸಿದ ಅವೈಜ್ಞಾನಿಕ ಯೋಜನೆಯಿಂದ ಸರ್ವೀಸ್ ರಸ್ತೆಯ ಮೂಲಕ ಹೋಗಿ ಬರಲು ಸಮರ್ಪಕ ಮಾರ್ಗ ಇಲ್ಲದಂತಾಗಿತ್ತು. ಹೆದ್ದಾರಿ ಬಂದ್ ನಡೆಸಿದ ಬಳಿಕ ಮೇಲ್ಸೆತುವೆ ನಿರ್ಮಿಸಲಾಗಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷೃದಿಂದ ಪೂರ್ಣಗೊಂಡಿಲ್ಲ. ಹೀಗಾಗಿ ಬೃಹತ್ ಲಾರಿಯಿಂದ ಹಿಡಿದು ಹೆದ್ದಾರಿಯ ಎಲ್ಲ ವಾಹನಗಳು ಸರ್ವಿಸ್ ರಸ್ತೆಯಲ್ಲಿ ಓಡಾಡುತ್ತಿವೆ. ರೈತರ ಎತ್ತು, ಚಕ್ಕಡಿ, ಜಾನುವಾರುಗಳು, ಟ್ರಾೃಕ್ಟರ್ ಹಾಗೂ ಕೂಲಿಕಾರರು, ಪಾದಚಾರಿಗಳು ಭಯದಲ್ಲಿ ಸಂಚರಿಸಬೇಕಿದೆ. ಇನ್ನಾದರೂ ಹೆದ್ದಾರಿ ಪ್ರಾಧಿಕಾರ ಸರ್ವಿಸ್ ರಸ್ತೆಯ ಮೂಲಕ ಚಲಿಸುವ ವಾಹನಗಳನ್ನು ಸ್ಥಗಿತಗೊಳಿಸಿ, ಹೆದ್ದಾರಿಯಲ್ಲಿ ಓಡಾಡಲು ಅನುಕೂಲ ಕಲ್ಪಿಸಬೇಕಿದೆ.

    ಎರಡು ವರ್ಷಗಳ ಹಿಂದೆ ಅವೈಜ್ಞಾನಿಕ ಸರ್ವಿಸ್ ರಸ್ತೆ ದುರಸ್ತಿ, ಹೊಸ ಚರಂಡಿ ನಿರ್ಮಾಣ, ಮೇಲ್ಸೇತುವೆ ಆರಂಭಿಸುವಂತೆ ಒತ್ತಾಯಿಸಿ ಹೆದ್ದಾರಿ ತಡೆಯ ಪ್ರತಿಭಟನೆ ನಡೆಸಲಾಗಿತ್ತು. ಇಂಜಿನಿಯರ್ ನಿರ್ಲಕ್ಷ್ಯದಿಂದ ಸಮಸ್ಯೆ ಜೀವಂತವಾಗಿ ಉಳಿದಿವೆ. ಸ್ಥಳೀಯ ತಹಸೀಲ್ದಾರ್ ಸೇರಿ ಸಂಬಂಧಿಸಿದ ಎಲ್ಲ ಅಧಿಕಾರಿಗಳಿಗೂ ಮನವಿ ನೀಡಿದ್ದರೂ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಶೀಘ್ರದಲ್ಲೇ ಹೆದ್ದಾರಿ ತಡೆ ಹೋರಾಟ ನಡೆಸಲಾಗುವುದು.
    I ಮಲ್ಲಿಕಾರ್ಜುನ ಬಳ್ಳಾರಿ
    ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts