More

    ವಿಜಯಪುರ: ಏಳನೇ ವೇತನ ಆಯೋಗ ಶೀಘ್ರ ಜಾರಿಗೆ ಒತ್ತಾಯ

    ವಿಜಯಪುರ : ಏಳನೇ ವೇತನ ಆಯೋಗವನ್ನು ಕೂಡಲೇ ಜಾರಿಗೊಳಿಸಿ, ಮಧ್ಯಂತರ ಪರಿಹಾರ ಘೋಷಿಸಬೇಕೆಂದು ಒತ್ತಾಯಿಸಿ ಸರ್ಕಾರಿ ನೌಕರರ ಸಂಘದಿಂದ ಶುಕ್ರವಾರ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

    ಈ ವೇಳೆ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ ಲೆಂಡಿ ಮಾತನಾಡಿ, ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಶಿಕ್ಷಣ, ಆರೋಗ್ಯ, ವಸತಿ, ಸಾರಿಗೆ ಇತ್ಯಾದಿ ಸೌಲಭ್ಯಗಳ ವೆಚ್ಚ ದಿನೇ ದಿನೇ ಗಗನಕ್ಕೇರುತ್ತಿದ್ದು ಜನಸಾಮಾನ್ಯರಂತೆಯೇ ಸರ್ಕಾರಿ ನೌಕರರು ಬೆಲೆಯೇರಿಕೆಯ ಪ್ರಹಾರಕ್ಕೆ ಸಿಲುಕಿದ್ದಾರೆ. ನಮ್ಮ ರಾಜ್ಯವೂ ಸೇರಿದಂತೆ ದಕ್ಷಿಣದ ಇತರ ರಾಜ್ಯಗಳಲ್ಲಿ 5 ವರ್ಷಗಳಿಗೊಮ್ಮೆ ನಿಯಮಿತವಾಗಿ ವೇತನ ಪರಿಷ್ಕರಣೆ ಮಾಡಲಾಗುತ್ತಿದ್ದು, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಇತ್ಯಾದಿ ರಾಜ್ಯಗಳಲ್ಲಿ ವೇತನ ಸೌಲಭ್ಯಗಳು ಕೇಂದ್ರ ಸರ್ಕಾರಿ ನೌಕರರಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿವೆ ಎಂದರು.

    ನಮ್ಮ ರಾಜ್ಯದಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆಗಳು ನಿಯಮಿತವಾಗಿ ಆಗದೆ ಇರುವ ಕಾರಣ ಈಗಾಗಲೇ ರಾಜ್ಯ ಸರ್ಕಾರಿ ನೌಕರರು ಎರಡು ವೇತನ ಪರಿಷ್ಕರಣೆಗಳನ್ನು ಕಳೆದುಕೊಂಡಿದ್ದಾರೆ. ರಾಜ್ಯದ ಒಟ್ಟು ಮಂಜೂರಾದ 7.70 ಲಕ್ಷ ಹುದ್ದೆಗಳಲ್ಲಿ ಸುಮಾರು 3.0 ಲಕ್ಷ ಹುದ್ದೆಗಳು ಖಾಲಿ ಬಿದ್ದಿವೆ. ರಾಜ್ಯ ಸರ್ಕಾರವು 6ನೇ ವೇತನ ಆಯೋಗದ ಸಂದರ್ಭದಲ್ಲಿ 2016-17ರಲ್ಲಿ ವೇತನಕ್ಕಾಗಿ ಒಟ್ಟು ಆಯವ್ಯಯದಲ್ಲಿ ಶೇ. 18.18ರಷ್ಟು ವ್ಯಯಿಸಿದ್ದು, 2022-23ನೇ ಸಾಲಿನಲ್ಲಿ ವೆಚ್ಚ ಶೇ. 15.05 ರಷ್ಟಿದ್ದು ವೇತನ ವೆಚ್ಚ ಇಳಿಮುಖವಾಗಿದೆ ಎಂದು ತಿಳಿಸಿದರು.

    ಕೋವಿಡ್ ಬಿಕ್ಕಟ್ಟಿನ ನೆಪದಲ್ಲಿ 18 ತಿಂಗಳ ತುಟ್ಟಿ ಭತ್ಯೆಯನ್ನು ತಡೆಹಿಡಿಯಲಾಗಿದ್ದು ಇದರಿಂದಾಗಿ ರಾಜ್ಯ ನೌಕರರಿಗೆ ಸುಮಾರು 4000 ಕೋಟಿ ರೂ. ನಷ್ಟವಾಗಿದೆ. ಅದಲ್ಲದೇ, 7ನೇ ವೇತನ ಆಯೋಗ ರಚಿಸಿ ವೇತನ ಪರಿಷ್ಕರಣೆ ಮಾಡದೆ ಇರುವುದರಿಂದ ವಾರ್ಷಿಕವಾಗಿ ನೌಕರರಿಗೆ 15000 ಕೋಟಿ ರೂ. ನಷ್ಟವಾಗುತ್ತ್ತಿದೆ. ಇವೆಲ್ಲ ವೇತನ ಸೌಲಭ್ಯಗಳ ನಷ್ಟ ಮತ್ತು ಖಾಲಿ ಹುದ್ದೆಗಳ ಹೊರೆ ನೌಕರರ ಮೇಲೆ ಬಿದ್ದಿದೆ. 2021-22 ನೇ ಆಯವ್ಯಯದಲ್ಲಿ ಸರ್ಕಾರಿ ನೌಕರರಿಗೆ ನಗದು ರಹಿತ ಆರೋಗ್ಯ ವಿಮೆ ನೀಡುವುದಾಗಿ ಘೋಷಿಸಿರುವುದು ಕೇವಲ ಘೋಷಣೆಯಾಗಿಯೇ ಉಳಿದಿದೆ. ತಕ್ಷಣ ಕಾರ್ಯರೂಪಕ್ಕೆ ತರಬೇಕೆಂದು ಒತ್ತಾಯಿಸಿದರು.
    ಸಂಘದ ರಾಜ್ಯ ಉಪಾಧ್ಯಕ್ಷ ಸುರೇಶ ಜೆ.ಬಿ. ಮಾತನಾಡಿ, ಹೊಸ ಪಿಂಚಣಿ ಪದ್ಧ್ದತಿಯನ್ನು ರದ್ದುಪಡಿಸಿ, ನಿಶ್ಚ್ಚಿತ ಪಿಂಚಣಿ ಮರುಸ್ಥಾಪಿಸಲು ರಾಜಸ್ತಾನ, ಜಾರ್ಖಂಡ್ ಇತ್ಯಾದಿ ರಾಜ್ಯ ಸರ್ಕಾರಗಳು ಆದೇಶ ಹೊರಡಿಸಿವೆ. ಅದರಂತೆ ನಮ್ಮ ರಾಜ್ಯದಲ್ಲಿಯೂ ಜಾರಿಯಾಗಬೇಕು ಎಂದರು.

    ಮಾಜಿ ಎಂಎಲ್‌ಸಿ ಅರುಣ ಶಹಾಪುರ, ಆರ್.ಎಸ್.ಮೆಣಸಗಿ, ಡಾ. ಕವಿತಾ ದೊಡಮನಿ, ಉದಯ ಕುಲಕರ್ಣಿ, ಡಾ.ಪರಶುರಾಮ ಹಿಟ್ನಳ್ಳಿ, ಡಾ.ಸಂತೋಷ ಶೆಟ್ಟಿ , ಡಾ. ಚಂದ್ರಶೇಖರ, ಸಂತೋಷ ಬಿರಾದಾರ, ಸುರೇಖಾ ಹೋಬಳಿಕರ, ಚನ್ನಾರೆಡ್ಡಿ, ಎನ್.ಎಂ.ಗೋರನಾಳ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts