More

    ಏಳು ಕಚೇರಿಗಳಿಗೆ ಸಾಡೇಸಾತ್!

    | ಇಮಾಮಹುಸೇನ್ ಗೂಡುನವರ ಬೆಳಗಾವಿ

    ಆರು ತಿಂಗಳ ಹಿಂದೆಯೇ ಬೆಂಗಳೂರಿನಿಂದ ಬೆಳಗಾವಿಗೆ ಸ್ಥಳಾಂತರಗೊಂಡ ಕರ್ನಾಟಕ ರಾಜ್ಯ ಜವಳಿ ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (ಕೆಎಸ್‌ಟಿಐಡಿಸಿಎಲ್) ಮುಖ್ಯ ಕಚೇರಿ ಇನ್ನೂ ಕ್ರಿಯಾಶೀಲವಾಗಿಲ್ಲ. ಸರ್ಕಾರವೇ ಆದೇಶ ಹೊರಡಿಸಿ ವರ್ಷ ಕಳೆದರೂ, ಪ್ರಮುಖ ಏಳು ಕಚೇರಿಗಳು ದಕ್ಷಿಣ ಕರ್ನಾಟಕದಿಂದ ಉತ್ತರ ದತ್ತ ಮುಖಮಾಡಿಲ್ಲ!

    ಬೆಳಗಾವಿಯ ಆಟೋ ನಗರದ ವಸ್ತು ಪ್ರದರ್ಶನ ಕೇಂದ್ರದ ಮೊದಲ ಮಹಡಿಯಲ್ಲಿ 2018ರ ಜುಲೈ ತಿಂಗಳಲ್ಲೇ ಕೆಎಸ್‌ಟಿಐಡಿಸಿಎಲ್ ಕಚೇರಿ ಕಾರ್ಯಾರಂಭ ಮಾಡಿದೆ. ವ್ಯವಸ್ಥಾಪಕ ನಿರ್ದೇಶಕ, ಪ್ರಧಾನ ವ್ಯವಸ್ಥಾಪಕ, ಉಪನಿರ್ದೇಶಕ, ಸಹಾಯಕ ನಿರ್ದೇಶಕ ಸೇರಿ 14 ಹುದ್ದೆಗಳು ಮಂಜೂರಾಗಿವೆ. ಆದರೆ, ಬಹುತೇಕರು ಇನ್ನು ಬೆಂಗಳೂರಿನ ಕಚೇರಿಯಲ್ಲೇ ಉಳಿದಿದ್ದಾರೆ. ಮೂರ‌್ನಾಲ್ಕು ಹಿರಿಯ ಅಧಿಕಾರಿಗಳು ಆಗೊಮ್ಮೆ, ಈಗೊಮ್ಮೆ ಬಂದು ಹೋಗುತ್ತಿದ್ದಾರೆ. ಹಾಗಾಗಿ, ಇದು ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎನ್ನುವ ಸ್ಥಿತಿಯಲ್ಲಿದೆ. ವಿದ್ಯುತ್ ಮಗ್ಗ ನೇಕಾರರು ನೀಡಿದ ಮಾಹಿತಿ ಆಧರಿಸಿ ‘ವಿಜಯವಾಣಿ’ ಪ್ರತಿನಿಧಿ ಬುಧವಾರ ಕೆಎಸ್‌ಟಿಐಡಿಸಿಎಲ್ ಕಚೇರಿಗೆ ಹೋಗಿ ರಿಯಾಲಿಟಿ ಚೆಕ್ ನಡೆಸಿದಾಗ, ಒಬ್ಬ ಅಧಿಕಾರಿ, ಸಿಬ್ಬಂದಿಯೂ ಅಲ್ಲಿರಲಿಲ್ಲ. ಒಬ್ಬ ಹೊರಗುತ್ತಿಗೆ ಸಿಬ್ಬಂದಿ ಮಾತ್ರ ಕರ್ತವ್ಯದಲ್ಲಿದ್ದರು. ‘ಉತ್ತರ ಕರ್ನಾಟಕಕ್ಕೆ ಸೂಚಿತ ಕಚೇರಿಗಳು ಶೀಘ್ರದಲ್ಲೇ ಬರಬೇಕು. ಅಲ್ಲದೆ, ಬೆಳಗಾವಿಗೆ ಸ್ಥಳಾಂತರವಾದ ಕೆಎಸ್‌ಟಿಐಡಿಸಿಎಲ್ ಕಚೇರಿ ಕ್ರಿಯಾಶೀಲವಾಗಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯ’ ಎಂದು ಕನ್ನಡಪರ ಹೋರಾಟಗಾರ ಅಶೋಕ ಚಂದರಗಿ, ನೇಕಾರ ಸಂಘಟನೆ ಮುಖಂಡ ಗಜಾನನ ಗುಂಜೇರಿ ಎಚ್ಚರಿಕೆ ನೀಡಿದ್ದಾರೆ.

    ಉ.ಕ.ಕ್ಕೆ ಬರಬೇಕಾದ ಏಳು ಕಚೇರಿಗಳು

    ಬೆಳಗಾವಿಗೆ ಸಕ್ಕರೆ ನಿರ್ದೇಶಕರು, ಕಬ್ಬು ಅಭಿವೃದ್ಧಿ ಆಯುಕ್ತರ ಕೇಂದ್ರ ಕಚೇರಿ, ದಾವಣಗೆರೆಗೆ ಕರ್ನಾಟಕ ನೀರಾವರಿ ನಿಗಮ, ಆಲಮಟ್ಟಿಗೆ ಕೃಷ್ಣಾ ಭಾಗ್ಯ ಜಲ ನಿಗಮ, ಹಂಪಿಗೆ ಪುರಾತತ್ವ ಸರ್ವೇಕ್ಷಣಾ ಇಲಾಖೆ ಕಚೇರಿ, ಹುಬ್ಬಳ್ಳಿಗೆ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಪ್ರತ್ಯೇಕ ಕಚೇರಿ, ಧಾರವಾಡಕ್ಕೆ ಉಪ ಲೋಕಾಯುಕ್ತರ ಕಚೇರಿ, ಕಲಬುರಗಿ ಮತ್ತು ಬೆಳಗಾವಿ ಪೀಠಕ್ಕೆ ರಾಜ್ಯ ಮಾಹಿತಿ ಆಯೋಗದ ಆಯುಕ್ತರ ಕಚೇರಿಗಳು ಬರಬೇಕಿದೆ. 2019ರ ಜನವರಿ ತಿಂಗಳಲ್ಲೇ ಸರ್ಕಾರ ಆದೇಶ ಹೊರಡಿಸಿ ವರ್ಷ ಕಳೆದರೂ, ಈ ಕಚೇರಿಗಳು ಉತ್ತರದತ್ತ ಹೊರಳಿಲ್ಲ.


    ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರದ ನಿರ್ಣಯ

    ಉತ್ತರ ಕರ್ನಾಟಕ ಭಾಗಕ್ಕೆ ಆದ್ಯತೆ ನೀಡುವ ಹಿನ್ನೆಲೆಯಲ್ಲಿ ಯಾವ ಇಲಾಖೆ ಮತ್ತು ನಿಗಮಗಳ ಕಚೇರಿಗಳನ್ನು ಸ್ಥಳಾಂತರಿಸಬೇಕು ಎನ್ನುವ ಕುರಿತು ಪರಿಶೀಲನೆ ನಡೆಸಿ ಅಧ್ಯಯನ ವರದಿ ಸಲ್ಲಿಸಲು 2018ರಲ್ಲಿ ಆಗಿನ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಅಧ್ಯಕ್ಷತೆಯಲ್ಲಿ ಸಂಪುಟ ಉಪ ಸಮಿತಿ ರಚಿಸಲಾಗಿತ್ತು. ಅದು ಸಲ್ಲಿಸಿದ ವರದಿ ಆಧರಿಸಿ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಪ್ರಸ್ತಾವನೆ ಸಿದ್ಧಪಡಿಸಿ, 2018ರ ಡಿ. 20ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿತ್ತು. ಅದಕ್ಕೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಗ್ರೀನ್ ಸಿಗ್ನಲ್ ನೀಡಿತ್ತು. 6 ಇಲಾಖೆಗಳ 9 ಕಚೇರಿಗಳನ್ನು ಉತ್ತರ ಕರ್ನಾಟಕಕ್ಕೆ ಸ್ಥಳಾಂತರಿಸುವ ಮಹತ್ವದ ನಿರ್ಣಯ ಕೈಗೊಂಡಿತ್ತು. ಈ ಪೈಕಿ ಧಾರವಾಡಕ್ಕೆ ಬರಬೇಕಿದ್ದ ರಾಜ್ಯ ಮಾನವ ಹಕ್ಕುಗಳ ಆಯೋಗದ ಕಚೇರಿಯನ್ನು ಕಳೆದ ಸೆಪ್ಟೆಂಬರ್‌ನಲ್ಲಿ ಕೈ ಬಿಡಲಾಗಿದೆ. ಏಳು ಕಚೇರಿಗಳು ಉತ್ತರಕ್ಕೆ ಬರಬೇಕಿದೆ.

    ಬೆಂಗಳೂರು ಹಂತದಲ್ಲಿ ಆಗಬೇಕಿರುವ ಒಂದಿಷ್ಟು ಕೆಲಸ ಬಾಕಿ ಉಳಿದಿವೆ. ಆಗಾಗ, ಸಚಿವರ ಹಂತದಲ್ಲಿ ಸಭೆಗಳು ನಡೆಯುತ್ತಿವೆ. ನಾವು ವಾರಕ್ಕೊಮ್ಮೆ ಬೆಳಗಾವಿಗೆ ತೆರಳಿ, ಅಲ್ಲಿನ ಅಭಿವೃದ್ಧಿ ಚಟುವಟಿಕೆ ಪರಿಶೀಲಿಸಿ ಬರುತ್ತಿದ್ದೇವೆ. ಬಾಕಿ ಉಳಿದ ಕೆಲಸಗಳು ತ್ವರಿತವಾಗಿ ಪೂರ್ಣಗೊಳ್ಳಲಿದ್ದು, ನಂತರ ಎಲ್ಲ ಅಧಿಕಾರಿಗಳು, ಸಿಬ್ಬಂದಿ ಬೆಳಗಾವಿಯಿಂದಲೇ ಕಾರ್ಯ ನಿರ್ವಹಿಸಲಿದ್ದಾರೆ.
    | ಕೆ.ಕೋದಂಡರಾಮ್. ಪ್ರಧಾನ ವ್ಯವಸ್ಥಾಪಕ, ಕೆಎಸ್‌ಟಿಐಡಿಸಿಎಲ್, ಬೆಳಗಾವಿ


    ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಸೂಚಿತ ಕಚೇರಿಗಳನ್ನು 2019ರ ಅಕ್ಟೋಬರ್ ಅಂತ್ಯದೊಳಗೆ ಸ್ಥಳಾಂತರಿಸಲು ಆಯಾ ಇಲಾಖೆಗಳಿಗೆ ಸೂಚಿಸಲಾಗಿತ್ತು. ಈ ಪ್ರಕ್ರಿಯೆ ವಿಳಂಬವಾದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಸಂಬಂಧಿಸಿದ ಇಲಾಖೆ ಮುಖ್ಯಸ್ಥರಿಗೆ ನಿರ್ದೇಶನ ನೀಡಿ, ಸೂಚಿತ ಕಚೇರಿಗಳ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳುವಂತೆ ಆದೇಶಿಸಲಾಗುವುದು.
    | ಶಾಲಿನಿ ರಜನೀಶ ಪ್ರಧಾನ ಕಾರ್ಯದರ್ಶಿ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ, ಬೆಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts