More

    ಉದ್ಯೋಗ ಖಾತ್ರಿ ಪ್ರಗತಿಗೆ ಹಿನ್ನಡೆ

    ಕೋವಿಡ್, ಕಾರ್ವಿುಕರು, ಕಾಮಗಾರಿ, ಉದ್ಯೋಗ ಖಾತ್ರಿ ಯೋಜನೆ,
    ಉತ್ತರ ಕನ್ನಡ: ಹಳ್ಳಿ-ಹಳ್ಳಿಗೂ ಹಬ್ಬಿರುವ ಕರೊನಾ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಪ್ರಗತಿಗೆ ಹಿನ್ನಡೆ ಉಂಟುಮಾಡಿದೆ. ಲಾಕ್​ಡೌನ್ ನಂತರವೂ 40 ಜನರನ್ನು ಬಳಸಿ ಪರಸ್ಪರ ಅಂತರ ಹಾಗೂ ಮಾಸ್ಕ್ ಧರಿಸಿ ಕಾಮಗಾರಿ ನಡೆಸಲು ಸರ್ಕಾರ ಅನುವು ಮಾಡಿಕೊಟ್ಟಿದೆ. ಆದರೂ ರೋಗದ ಭಯದಿಂದ ಕೆಲಸಕ್ಕೆ ಜನರು ಬರುತ್ತಿಲ್ಲ. ಇನ್ನು ಹಲವು ಗ್ರಾಪಂ ವ್ಯಾಪ್ತಿಗಳಲ್ಲಿ ಕರೊನಾ ವಿಪರೀತವಾಗಿ ಸೀಲ್​ಡೌನ್ ಮಾಡಿರುವುದರಿಂದ ಕಾಮಗಾರಿ ಮಾಡಲು ಸಾಧ್ಯವೇ ಆಗುತ್ತಿಲ್ಲ. ಇದರಿಂದ ಜಿಪಂ ವೈಯಕ್ತಿಕ ಕಾಮಗಾರಿ ನಡೆಸುವಂತೆ ಪ್ರೇರೇಪಿಸುತ್ತಿದೆ.
    2020ರಲ್ಲಿ ಲಾಕ್​ಡೌನ್ ಆದ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಎನ್​ಆರ್​ಇಜಿಎ ಸಾಕಷ್ಟು ಪ್ರಗತಿಯಾಗಿತ್ತು. ಲಾಕ್​ಡೌನ್ ಕಾರಣ ಊರಿಗೆ ಬಂದ 250ಕ್ಕೂ ಅಧಿಕ ಪದವೀಧರರು ಕೂಲಿ ಕೆಲಸ ಮಾಡಿದ್ದರು. ಜಿಲ್ಲೆಯ ಕೆಲ ತಾಲೂಕುಗಳಲ್ಲಿ ಗುರಿ ಮೀರಿ ಸಾಧನೆಯಾಗಿತ್ತು. ಈ ಬಾರಿಯೂ ಜನತಾ ಕರ್ಫ್ಯೂ ಹಾಗೂ ಲಾಕ್​ಡೌನ್ ಅವಧಿಯಲ್ಲಿ ಕೂಲಿ ಮಾಡಲು ಅವಕಾಶವಿದೆ ಎಂದು ಜಿಪಂ ಪ್ರಚಾರ ಮಾಡಿತ್ತು. ಆದರೆ, ನಿರೀಕ್ಷಿತ ಗುರಿ ಸಾಧನೆಗೆ ಸಾಧ್ಯವಾಗುತ್ತಿಲ್ಲ. ಮೇ ತಿಂಗಳಲ್ಲಿ 3 ಲಕ್ಷ ಮಾನವ ದಿನಗಳನ್ನು ಸೃಜಿಸುವ ಗುರಿ ಹೊಂದಲಾಗಿತ್ತು. ದಿನಕ್ಕೆ ಸರಾಸರಿ 10 ಸಾವಿರ ಕಾರ್ವಿುಕರು ದುಡಿದರೆ ಈ ಗುರಿ ತಲುಪಲು ಸಾಧ್ಯವಾಗುತ್ತಿತ್ತು. ಸದ್ಯ ದಿನಕ್ಕೆ 5ರಿಂದ 6 ಸಾವಿರ ಕಾರ್ವಿುಕರು ಮಾತ್ರ ಕೆಲಸ ಮಾಡುತ್ತಿದ್ದಾರೆ. ತಾಲೂಕುವಾರು ಪರಿಸ್ಥಿತಿಯ ಅವಲೋಕನ ಇಲ್ಲಿದೆ.
    ಅಂಕೋಲಾದಲ್ಲಿ 1100 ಜನ ಕೆಲಸ: ಅಂಕೋಲಾದಲ್ಲಿ ಪಟ್ಟಣದಿಂದ ಬಂದ ಕೆಲವರು ನರೇಗಾ ಯೋಜನೆಯ ಕೂಲಿ ಕೆಲಸಕ್ಕೆ ತೆರಳುತ್ತಿದ್ದಾರೆ. ವಂದಿಗೆ ಗ್ರಾಪಂ ವ್ಯಾಪ್ತಿಯಲ್ಲಿ 110, ವಾಸರಕುದ್ರಿಗೆಯಲ್ಲಿ 14 ಒಟ್ಟಾರೆ ಸರಾಸರಿ 1100 ಕೂಲಿಕಾರರು ಕೆರೆ ಹೂಳೆತ್ತುವುದು, ಕೆರೆ ನಿರ್ವಣ, ಕಾಲುವೆ ನಿರ್ವಣ, ತಡೆಗೋಡೆ, ಕೃಷಿ ಹೊಂಡ, ಮಣ್ಣು ಭರಾವು ಮುಂತಾದ ಕಾರ್ಯದಲ್ಲಿ ತೊಡಗಿದ್ದಾರೆ.
    ವೈಯಕ್ತಿಕ ಕಾಮಗಾರಿಗೆ ಒತ್ತು: ಭಟ್ಕಳ ತಾಲೂಕಿನಲ್ಲಿ ಪ್ರಸ್ತುತ ಆರ್ಥಿಕ ವರ್ಷಕ್ಕೆ 45 ಸಾವಿರ ಮಾನವ ದಿನದ ಗುರಿ ನಿಗದಿ ಮಾಡಲಾಗಿದೆ. ಇದುವರೆಗೆ 5683 ಮಾನವ ದಿನಗಳನ್ನು ಸೃಜಿಸಲಾಗಿದೆ. 162 ಬಚ್ಚಲು ಗುಂಡಿ, 21 ದನದ ಕೊಟ್ಟಿಗೆ, 4 ಅಲ್ಪ ಆಳದ ಬಾವಿ ಹಾಗೂ 7 ಸಮುದಾಯ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಅನುಷ್ಠಾನ ಮಾಡಲಾಗುತ್ತಿದೆ. ತಾಲೂಕಿನಲ್ಲಿ 11359 ಕುಟುಂಬಗಳು ಜಾಬ್ ಕಾರ್ಡಗಳನ್ನು ಹೊಂದಿದ್ದು, ಅದರಲ್ಲಿ 3423 ಕುಟುಂಬಗಳು ಸಕ್ರಿಯವಾಗಿವೆ. ಒಟ್ಟು 38 ಕಾಮಗಾರಿಗಳು ಸದ್ಯ ಪ್ರಗತಿಯಲ್ಲಿದ್ದು, 224 ಕೂಲಿಕಾರರು ದುಡಿಯುತ್ತಿದ್ದಾರೆ.
    2063 ಮಾನವ ದಿನ: ಕುಮಟಾ ತಾಲೂಕಿನಲ್ಲಿ ನರೇಗಾ ಯೋಜನೆಯಡಿ 2020-21ರಲ್ಲಿ 2743 ಕುಟುಂಬಗಳ 3920 ಸದಸ್ಯರಿಗೆ ಕೆಲಸ ನೀಡಲಾಗಿದೆ. 61,475 ಮಾನವ ದಿನಗಳನ್ನು ಸೃಷ್ಟಿಸಲಾಗಿತ್ತು. 1.71 ಕೋಟಿ ರೂ. ಕಾಮಗಾರಿ ಮಾಡಲಾಗಿತ್ತು. ಈ ಆರ್ಥಿಕ ವರ್ಷದಲ್ಲಿ ಇದುವರೆಗೆ 2063 ಮಾನವ ದಿನ ಸೃಷ್ಟಿಸಲಾಗಿದೆ. 21 ಕೆರೆ, 350 ಬಚ್ಚಲುಗುಂಡಿ, 7 ಬಂಡು, 7 ಶಾಲಾ ಆವಾರ, ಪ್ರಕೃತಿ ವಿಕೋಪದಡಿ 5 ಕಾಮಗಾರಿ, 6 ಬಾವಿ, 12 ದನದ ಕೊಟ್ಟಿಗೆ ಹಾಗೂ 4 ಅರಣ್ಯ ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ.
    ಕೆರೆ ನಿರ್ಮಾಣ ಕಾಮಗಾರಿ: ಯಲ್ಲಾಪುರ ತಾಲೂಕಿನ ಆನಗೋಡ, ಕಣ್ಣಿಗೇರಿ ಮುಂತಾದ 2-3 ಗ್ರಾಮ ಪಂಚಾಯಿತಿಗಳನ್ನು ಬಿಟ್ಟರೆ ಉಳಿದೆಲ್ಲಾ ಗ್ರಾಪಂ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಕಾಮಗಾರಿಗಳು ನಡೆಯುತ್ತಿವೆ. ಕೆರೆ ನಿರ್ವಣ, ಬದು ನಿರ್ವಣದಂತಹ ಸಮುದಾಯದ ಕಾಮಗಾರಿಗಳು ಹಾಗೂ ವೈಯಕ್ತಿಕ ಕಾಮಗಾರಿಗಳೂ ಪ್ರಗತಿಯಲ್ಲಿವೆ. ಒಂದು ಕಡೆ 40 ಕಾರ್ವಿುಕರು ಮಿಕ್ಕದಂತೆ ಕೆಲಸ ನಿರ್ವಹಿಸಲು ಸರ್ಕಾರ ನೀಡಿದ ನಿರ್ದೇಶನದಂತೆ ಕೆಲಸ ನಡೆಯುತ್ತಿದೆ.
    ನಿತ್ಯ 700 ಕೂಲಿಕಾರರು: ಶಿರಸಿ ತಾಲೂಕಿನಲ್ಲಿ ಕೆರೆ ಅಭಿವೃದ್ಧಿ, ಅರಣ್ಯ ಕಾಮಗಾರಿ, ರಸ್ತೆ ಅಭಿವೃದ್ಧಿ, ಬಚ್ಚಲುಗುಂಡಿ ಕಾಮಗಾರಿ, ಕೊಟ್ಟಿಗೆ, ಆಟದ ಮೈದಾನ ನಿರ್ಮಾಣ ಕಾಮಗಾರಿಗಳನ್ನು ನರೇಗಾದಡಿ ನಡೆಸಲಾಗುತ್ತಿದೆ. ವಾರಕ್ಕೊಮ್ಮೆ ಕೂಲಿಕಾರರ ಖಾತೆಗೆ ನೇರವಾಗಿ ಹಣ ಜಮಾ ಮಾಡಲಾಗುತ್ತಿದೆ. ಪ್ರತಿ ದಿನ ಸರಾಸರಿ 700 ಜನ ಕೆಲಸ ಮಾಡುತ್ತಿದ್ದು, ಹೊರ ಪ್ರದೇಶದಿಂದ ಬಂದ ಶೇ. 15ರಷ್ಟು ಮಂದಿ ಕೆಲಸ ಮಾಡುತ್ತಿದ್ದಾರೆ.
    ಕಾಮಗಾರಿಗೆ ತೊಂದರೆ: ಸಿದ್ದಾಪುರ ತಾಲೂಕಿನಲ್ಲಿ ನರೇಗಾ ಕಾಮಗಾರಿ ಹೆಚ್ಚು ನಡೆಯುತ್ತಿದ್ದ ಮನಮನೆ, ಕೋಲಸಿರ್ಸಿ ಹಾಗೂ ಅಣಲೇಬ್ಯೆಲ್ ಗ್ರಾಪಂನಲ್ಲಿ ಕರೊನಾ ಹೆಚ್ಚಾಗಿ ಸೀಲ್​ಡೌನ್ ಆಗಿದೆ. ಇನ್ನುಳಿದ ಗ್ರಾಪಂನಲ್ಲಿ ಕರೊನಾ ನಡುವೆಯೇ ಕೆಲವರು ನರೇಗಾ ಕಾಮಗಾರಿಯಲ್ಲಿ ತೊಡಗಿಕೊಂಡಿದ್ದಾರೆ. ಕರೊನಾ ಆತಂಕದಿಂದ ಅಧಿಕಾರಿಗಳು ಹೆಚ್ಚು ಒತ್ತಾಯ ಮಾಡುತ್ತಿಲ್ಲ. ಕಾಮಗಾರಿ ನಿರೀಕ್ಷಿತ ಗುರಿ ಸಾಧಿಸಿಲ್ಲ.
    ಹಳಿಯಾಳದಲ್ಲಿ ಶುರುವಾಗಿಲ್ಲ
    ಕಳೆದ ವರ್ಷ ಲಾಕ್​ಡೌನ್ ಸಮಯದಲ್ಲಿ ಹೊರ ರಾಜ್ಯ ಹಾಗೂ ಜಿಲ್ಲೆಗಳಿಂದ ತಾಲೂಕಿಗೆ ಮರಳಿದ ಕಾರ್ವಿುಕರಿಗೆ, ಪದವೀಧರರಿಗೆ ಆಸರೆಯಾಗಿದ್ದ ನರೇಗಾಕ್ಕೆ ಈ ಬಾರಿ ಕೋವಿಡ್ ಅಡ್ಡಗಾಲು ಹಾಕುತ್ತಿದೆ. ಗ್ರಾಮೀಣ ಭಾಗದಲ್ಲಿ ಕಾಡ್ಗಿಚ್ಚಿನಂತೆ ಹಬ್ಬುತ್ತಿರುವ ಕರೊನಾ ಪರಿಣಾಮ ಶೀಘ್ರ ಉದ್ಯೋಗ ಖಾತ್ರಿ ಆರಂಭವಾಗುವ ಲಕ್ಷಣ ಕಾಣುತ್ತಿಲ್ಲ. ಕಳೆದ ಎರಡು ವರ್ಷ ಗುರಿ ಮೀರಿ ಸಾಧನೆ ಮಾಡಿ, ತಾಪಂ ಇಒ ಪ್ರವೀಣಕುಮಾರ ಪ್ರಶಸ್ತಿಗೆ ಭಾಜನರಾಗಿದ್ದರು. ಈ ವರ್ಷ ಏ. 1ರಿಂದ ಮೇ 10ರವರೆಗೆ 4200 ಜನರಿಗೆ ಉದ್ಯೋಗ ನೀಡಿ 27 ಸಾವಿರ ಮಾನವ ದಿನ ಸೃಜಿಸಲಾಗಿತ್ತು. ನಂತರ ಕಾಮಗಾರಿ ನಿಲ್ಲಿಸಲಾಗಿದೆ. 17 ಗ್ರಾಮಗಳನ್ನು ಕಂಟೇನ್ಮೆಂಟ್ ಜೋನ್ ಎಂದು ಘೋಷಿಸಿದ್ದರಿಂದ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಎಲ್ಲ ಪಿಡಿಒಗಳ ಸಭೆ ನಡೆಸಿ ಕಾಮಗಾರಿ ಪ್ರಾರಂಭಿಸಲು ತಯಾರಿ ನಡೆಸಲಾಗಿದೆ ಎಂದು ಇಒ ಮಾಹಿತಿ ನೀಡಿದ್ದಾರೆ.
    ಹೊರಗಿನಿಂದ ಬಂದ 25 ಜನ
    ಕಾರವಾರದಲ್ಲಿ ದಿನಕ್ಕೆ ಸರಾಸರಿ 500 ಜನ ಕಾರ್ಯನಿರ್ವಹಿಸುತ್ತಿದ್ದಾರೆ. ಘಾಡಸಾಯಿ, ಕೆರವಡಿ, ದೇವಳಮಕ್ಕಿ ಗ್ರಾಪಂಗಳಲ್ಲಿ ಹೊರ ಊರುಗಳಿಂದ ಬಂದ ಸುಮಾರು 25 ಜನ ಕಾರ್ಯನಿರ್ವಹಿಸುತ್ತಿದ್ದಾರೆ. ಮುಖ್ಯವಾಗಿ ಕಾಲುವೆ ನಿರ್ವಣ, ಕೆರೆ ಹೂಳೆತ್ತುವುದು, ಇಂಗುಗುಂಡಿ, ಅರಣ್ಯ ಇಲಾಖೆ ಕಾಮಗಾರಿಗಳನ್ನು ನಡೆಸಲಾಗುತ್ತಿದೆ.


    ಕರೊನಾ ಗ್ರಾಮೀಣ ಭಾಗಕ್ಕೆ ಹಬ್ಬಿದ್ದರಿಂದ ನರೇಗಾ ಕಾಮಗಾರಿಗೆ ಕೊಂಚ ಹಿನ್ನಡೆಯಾಗಿದೆ. ನಾವು ಬಚ್ಚಲಗುಂಡಿ, ಕೊಟ್ಟಿಗೆ ನಿರ್ವಣ, ಬಾವಿಗಳು ಮುಂತಾದ ವೈಯಕ್ತಿಕ ಕಾಮಗಾರಿಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದೇವೆ. ಅಲ್ಲಲ್ಲಿ ಕೆಲವು ಕೆರೆ ಹೂಳೆತ್ತುವಂತ ಸಾಮುದಾಯಿಕ ಕಾಮಗಾರಿಗಳನ್ನು 40 ಕೂಲಿಕಾರರಿಗೆ ಮಿತಿಗೊಳಿಸಿ ಕೈಗೊಳ್ಳಲಾಗುತ್ತಿದೆ.
    | ಪ್ರಿಯಾಂಗಾ ಎಂ. ಜಿಪಂ ಸಿಇಒ

    ಅಂಕೋಲಾ ತಾಲೂಕಿನಲ್ಲಿ ಲಾಕ್​ಡೌನ್ ನಿಮಿತ್ತ ಊರಿಗೆ ಬಂದವರು ಕೂಡ ಕೂಲಿ ಆಳುಗಳಾಗಿ ಬರುತ್ತಿದ್ದಾರೆ. ಉತ್ತಮ ಗುಣಮಟ್ಟದ ಅಭಿವೃದ್ಧಿ ಕಾರ್ಯವನ್ನು ಮಾಡಲಾಗುತ್ತಿದೆ.
    | ಸುನೀಲ, ಅಂಕೋಲಾ ತಾಪಂ ಎನ್​ಆರ್​ಇಜಿಎ ಸಹಾಯಕ ನಿರ್ದೇಶಕ

    ವೇಗ ಪಡೆಯದ ಎನ್​ಆರ್​ಇಜಿ
    ಶಿರಸಿ:
    ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಅಡಿ 2020-21ನೇ ಸಾಲಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಾಮಗ್ರಿ ಪೂರೈಕೆದಾರರಿಗೆ 9.29 ಕೋಟಿ ರೂಪಾಯಿ ಸಾಮಗ್ರಿ ವೆಚ್ಚ ನೀಡುವುದು ಬಾಕಿ ಇದೆ. ಕಾರಣ ಪ್ರಸಕ್ತ ವರ್ಷದ ಕಾಮಗಾರಿಗೆ ಸಾಮಗ್ರಿ ಪೂರೈಸಲು ಗುತ್ತಿಗೆದಾರರು ಹಿಂದೇಟು ಹಾಕುತ್ತಿದ್ದಾರೆ.
    ಜಿಲ್ಲೆಯಲ್ಲಿ ಒಟ್ಟು ಒಂದು ವರ್ಷದಿಂದ ಉದ್ಯೋಗ ಖಾತ್ರಿ ಅನುದಾನ ನಿರಂತರ ಬಳಕೆಯಾಗುತ್ತಿದೆ. ಅಂದಾಜು 50 ಕೋಟಿ ರೂ.ಗೂ ಹೆಚ್ಚು ಖರ್ಚಾಗಿದ್ದು, ಕೂಲಿಕಾರರ ಹಣ ನಿರಂತರವಾಗಿ ಪಾವತಿಯಾಗುತ್ತಿದೆ. ಆದರೆ, ಇದರಲ್ಲಿ ಸಾಮಗ್ರಿ ಸರಬರಾಜು, ಯಂತ್ರೋಪಕರಣ ಬಾಡಿಗೆ ಪಡೆದು ಕೆಲಸ ಮಾಡಿಸಿದ ಗುತ್ತಿಗೆದಾರರಿಗೆ ನೀಡುವ ಹಣದ ಬಾಕಿ ಬೆಟ್ಟದಷ್ಟಿದೆ. ಬಾಕಿ ಹಣಕ್ಕೆ ಗುತ್ತಿಗೆದಾರರು ಅಲೆದಾಡುತ್ತಿದ್ದಾರೆ.
    ವ್ಯತಿರಿಕ್ತ ಪರಿಣಾಮ: ಕರೊನಾ ಹಿನ್ನೆಲೆಯಲ್ಲಿ ಹೆಚ್ಚುವರಿ ಉದ್ಯೋಗ ಸೃಜಿಸಲು ಉದ್ಯೋಗ ಖಾತ್ರಿ ಯೋಜನೆ ಅನುದಾನ ಬಳಕೆಗೆ ಸೂಚಿಸಲಾಗಿದೆ. ಗುಂಪು ಕಾಮಗಾರಿ, ವೈಯಕ್ತಿಕ ಕೆಲಸಗಳಿಗೆ ಆದ್ಯತೆ ನೀಡಲಾಗುತ್ತಿದೆ. ಅನುದಾನ ಬಳಕೆಗೆ ಜಿಲ್ಲೆ ಹಿಂದೆ ಬಿದ್ದಿಲ್ಲ. ಮಾರ್ಚ್ ಅಂತ್ಯಕ್ಕೆ ಅಂದಾಜು 50 ಕೋಟಿ ರೂ. ಗೂ ಹೆಚ್ಚಿನ ಮೊತ್ತ ಈ ವರ್ಷದಲ್ಲಿ ಖರ್ಚಾಗಿದೆ. ಆದರೆ, ಮೂರು ತಿಂಗಳಿನಿಂದ ಸಾಮಗ್ರಿ ವೆಚ್ಚ ಪಾವತಿ ಮಾಡದೆ ತಡೆ ಹಿಡಿದಿದ್ದು, ಪ್ರಸಕ್ತ ವರ್ಷದ ಕಾಮಗಾರಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
    ಮುಂದಾಗದ ಗುತ್ತಿಗೆದಾರರು: ಗ್ರಾಮ ಪಂಚಾಯಿತಿ ಸದಸ್ಯರು, ಇತರ ಗುತ್ತಿಗೆದಾರರು ಕಾಮಗಾರಿ ವಹಿಸಿಕೊಂಡು ಉದ್ಯೋಗ ಖಾತ್ರಿ ನಿಯಮದ ಪ್ರಕಾರ ಮಾನವ ಕೂಲಿ ಜತೆಗೆ ಯಂತ್ರೋಪಕರಣಗಳನ್ನು ಬಳಕೆ ಮಾಡಿಕೊಂಡು ಕೆಲಸ ಮಾಡಿದ್ದಾರೆ. ಇವರಲ್ಲಿ ಬಹುತೇಕ ಗುತ್ತಿಗೆದಾರರು ಸಂಘ- ಸಂಸ್ಥೆಗಳಲ್ಲಿ ಸಾಲ ಪಡೆದು ಕಂತು ರೂಪದಲ್ಲಿ ಹಣ ಪಾವತಿ ಮಾಡುವ ಸ್ಥಿತಿಯಲ್ಲಿದ್ದಾರೆ. ಆದರೆ, ಮಾನವ ಕೂಲಿ ಕೆಲಸ(ಎನ್​ಎಂಆರ್ ತೆಗೆದರೆ)ದ ಹಣ ಪಾವತಿ ಮಾಡಲಾಗುತ್ತಿದೆ. ಮಾರ್ಚ್​ನಲ್ಲಿ ಬೇಕಾಬಿಟ್ಟಿಯಾಗಿ ಎಂಐಎಸ್ ತಯಾರಿಸಿ ಬೋಗಸ್ ಬಿಲ್ ಎತ್ತುವಳಿ ಮಾಡುವ ಸಾಧ್ಯತೆ ಹಿನ್ನೆಲೆಯಲ್ಲಿ ಬಿಒಸಿ ಸೆಟ್ ಅನ್ನು ಲಾಕ್ ಮಾಡಲಾಗಿದೆ. ಸರ್ಕಾರದಿಂದ ಸಾಮಗ್ರಿ ವೆಚ್ಚ ಭರಿಸಲು ಅನುದಾನವನ್ನೇ ಬಿಡುಗಡೆ ಮಾಡುತ್ತಿಲ್ಲ. ಇದರಿಂದ ಈ ವರ್ಷ ಉದ್ಯೋಗ ಖಾತ್ರಿ ಕಾಮಗಾರಿಗೆ ಸಾಮಗ್ರಿ ಜತೆಗೆ ಯಂತ್ರೋಪಕರಣ ಒದಗಿಸಲು ಸಂಬಂಧಪಟ್ಟ ಗುತ್ತಿಗೆದಾರರು ಮುಂದಾಗುತ್ತಿಲ್ಲ.
    ಎಷ್ಟು ಬಾಕಿ?
    ಉತ್ತರ ಕನ್ನಡ ಜಿಲ್ಲೆಯಲ್ಲಿ ಮೇ 15ರ ಅಂಕಿ ಅಂಶದಂತೆ ಒಟ್ಟಾರೆ 9.28 ಕೋಟಿ ರೂ. ಸಾಮಗ್ರಿ ವೆಚ್ಚ ನೀಡುವುದು ಬಾಕಿಯಿದೆ. ಅಂಕೋಲಾ ತಾಲೂಕಿಗೆ 1.30 ಕೋಟಿ ರೂ, ಭಟ್ಕಳ 34.18 ಲಕ್ಷ ರೂ., ದಾಂಡೇಲಿ 7.86 ಲಕ್ಷ ರೂ., ಹಳಿಯಾಳ 73.18 ಲಕ್ಷ ರೂ., ಹೊನ್ನಾವರ 84.68 ಲಕ್ಷ ರೂ., ಕಾರವಾರ 60.21 ಲಕ್ಷ ರೂ., ಕುಮಟಾ 41.63 ಲಕ್ಷ ರೂ., ಮುಂಡಗೋಡ 83.44 ಲಕ್ಷ ರೂ., ಸಿದ್ದಾಪುರ 49.37 ಲಕ್ಷ ರೂ., ಶಿರಸಿ 95.16 ಲಕ್ಷ ರೂ., ಜೊಯಿಡಾ 53.48 ಲಕ್ಷ ರೂ., ಯಲ್ಲಾಪುರ 2.15 ಕೋಟಿ ರೂ.. ಬರಬೇಕಿದೆ.

    ಕೆಲಸ ಮಾಡಿ ಕೆಲ ತಿಂಗಳು ಕಳೆದರೂ ಸಾಮಗ್ರಿ ಪೂರೈಕೆ ಮಾಡಿದ ಮೊತ್ತ ಪಾವತಿಯಾಗಿಲ್ಲ. ಕುಟುಂಬ ನಿರ್ವಹಣೆ, ಸಂಘ- ಸಂಸ್ಥೆ ಹಣ ಮರುಪಾವತಿಗೆ ಅವರಿವರ ಬಳಿ ಕೈಗಡ ತಂದು ಕಟ್ಟುತ್ತಿದ್ದೇವೆ. ನಿಗದಿತ ಸಮಯದಲ್ಲಿ ಹಣ ನೀಡದಿದ್ದರೆ ನಮಗೂ ತೊಂದರೆ ಆಗುತ್ತದೆ. ಮುಂಬರುವ ಕಾಮಗಾರಿಗೆ ಯಂತ್ರೋಪಕರಣ, ಸಾಮಗ್ರಿ ಪೂರೈಸಲು ಸಾಧ್ಯವಾಗುವುದಿಲ್ಲ. ತಕ್ಷಣ ಬಾಕಿಯಿರುವ ಮೊತ್ತ ನೀಡುವ ಕಾರ್ಯ ಆಗಬೇಕು.
    | ಮಂಜುನಾಥ ನಾಯ್ಕ ಶಿರಸಿ, ಸಾಮಗ್ರಿ ಪೂರೈಕೆದಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts