More

    ಹಿರಿಯ ವಿದ್ವಾಂಸ, ಸಾಹಿತಿ, ಭಾಷಾ ವಿಜ್ಞಾನಿ ಪ್ರೊ.ಕೋಡಿ ಕುಶಾಲಪ್ಪ ಗೌಡ ನಿಧನ

    ಸುಳ್ಯ: ಹಿರಿಯ ವಿದ್ವಾಂಸ, ಭಾಷಾ ವಿಜ್ಞಾನಿ, ಖ್ಯಾತ ಸಾಹಿತಿ ಪ್ರೊ.ಕೋಡಿ ಕುಶಾಲಪ್ಪ ಗೌಡ(91) ಶುಕ್ರವಾರ ರಾತ್ರಿ ನಿಧನರಾದರು.

    ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಪುತ್ತೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಕವಿ ಹೃದಯದ ವಿದ್ವಾಂಸ ಡಾ.ಕೋಡಿ ಕುಶಾಲಪ್ಪ ಗೌಡ ಅವರು ಭಾಷಾ ವಿಜ್ಞಾನ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದವರು. ವ್ಯಾಕರಣ ಹಾಗೂ ಭಾಷಾ ವಿಜ್ಞಾನವನ್ನು ನೀರಸವೆಂದು ಪಂಪನಂತಹ ರಸಿಕ ಪ್ರೌಢ ಕವಿಯೇ ಹೀಗಳೆದಿರುವಾಗ ತಮ್ಮ ಒಡನಾಡಿಗಳಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಆಸಕ್ತಿ ಹೊಮ್ಮುವಂತೆ ಮಾಡಿರುವುದೇ ಗೌಡರ ವ್ಯಕ್ತಿ ವೈಶಿಷ್ಟ್ಯ.

    ದಕ್ಷಿಣ ಕನ್ನಡದ ಅಂಚಿನ ಪೆರಾಜೆ ಗ್ರಾಮದ ಕೋಡಿ ಮನೆತನದ ಕೃಷ್ಣಪ ಗೌಡರ ಹಾಗೂ ಗೌರಮ್ಮನವರ ತೃತೀಯ ಪುತ್ರರಾಗಿ 1931 ಮೇ 30ರಂದು ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಪೆರಾಜೆ ಹಾಗೂ ಸುಳ್ಯದಲ್ಲಿ ಮುಗಿಸಿ ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಪುತ್ತೂರಿನ ಬೋರ್ಡ್ ಹೈಸ್ಕೂಲಿನಲ್ಲಿ ಮಾಡಿದರು. ಮಡಿಕೇರಿ ಸರಕಾರಿ ಕಾಲೇಜಿನಲ್ಲಿ ಬಿ.ಎ. ಆನರ್ಸ್‌ ಮಾಡಿ 1956 ರಲ್ಲಿ ಮದರಾಸು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪದವೀಧರರಾದರು. ಪ್ರೊ.ಟಿ.ಪಿ. ಮೀನಾಕ್ಷಿ ಸುಂದರಂ ಅವರ ಮಾರ್ಗದರ್ಶನದಲ್ಲಿ ವಡ್ಡಾರಾಧನೆಯ ಭಾಷಿಕ ಅಧ್ಯಯನ ಎಂಬ ಸಂಶೋಧನಾ ಪ್ರಬಂಧಕ್ಕೆ ಅಣ್ಣಾಮಲೈ ವಿಶ್ವವಿದ್ಯಾಲಯದ ಎಂ.ಲಿಟ್ ಪದವಿ ಪಡೆದರು . ಮುಂದೆ ಅದೇ ವಿಶ್ವವಿದ್ಯಾಲಯದ ಪ್ರೊ. ಅಗಸ್ತಯ ಅವರ ನಿರ್ದೇಶನದಲ್ಲಿ ಕೊಡಗು, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಕ್ರಿ.ಶ. 1,000 ದಿಂದ 1,400 ವರೆಗಿನ ಕನ್ನಡ ಶಾಸನಗಳ ಭಾಷಾವಿಶ್ಲೇಷಣೆ ಎಂಬ ಸಂಶೋಧನಾ ಪ್ರಬಂಧಕ್ಕೆ 67 ರಲ್ಲಿ ಡಾಕ್ಟರೇಟ್ ಪದವಿ ದೊರಕಿತು. ಇಂಗ್ಲೆಂಡಿನ ಮ್ಯಾಂಚೆಸ್ಟರ್ ವಿ.ವಿ.ಯಲ್ಲಿ ಹತ್ತು ತಿಂಗಳ ಕಾಲ ವಿಶೇಷ ಅಧ್ಯಯನ ಹಾಗೂ ಜರ್ಮನಿ, ಸ್ವಿಜರ್‌ಲ್ಯಾಂಡ್‌ಗಳ ಪ್ರವಾಸ , ಅಕಾಡೆಮಿಕ್ ಜೀವನದಲ್ಲಿನ ಮೈಲಿಗಲ್ಲು. ಮುಂದೆ ಆಂಧ್ರ ಹಾಗೂ ತಮಿಳುನಾಡಿನ ಹಲವಾರು ವಿಶ್ವವಿದ್ಯಾನಿಲಯಗಳಲ್ಲಿ ಸೇವೆ ಸಲ್ಲಿಸಿದರು.1955-56ರಲ್ಲಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರೊಫೆಸರ್ ಆಗಿ ಮುಂದೆ ಆಂಧ್ರ ಪ್ರದೇಶದ ಮದನಪಳ್ಳಿಯ ಥೀಯೋಸಾಫಿಕಲ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ.1957ರಲ್ಲಿ ಅಣ್ಣಾಮಲೈ ವಿ.ವಿ.ದಲ್ಲಿ ಕನ್ನಡ ಉಪನ್ಯಾಸಕರಾಗಿ ನೇಮಕಗೊಂಡು 1966 ರಲ್ಲಿ ಅದೇ ವಿ.ವಿ.ದಲ್ಲಿ ಭಾಷಾವಿಜ್ಞಾನದಲ್ಲಿ ಪ್ರವಾಚಕರಾಗಿ ಭಡ್ತಿ , ಭಾಷಾ ವಿಜ್ಞಾನದ ಪ್ರೌಢ ಅಧ್ಯಯನ ಕೇಂದ್ರದ ಕಾರ್ಯ ನಿರ್ವಾಹಕ ನಿರ್ದೇಶಕರಾಗಿ ನಂತರ 1976 ರಿಂದ 91 ರವರೆಗೆ ಮದರಾಸು ಕನ್ನಡ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥರಾಗಿ ಕನ್ನಡಕ್ಕೆ ಸೇವೆ ಸಲ್ಲಿಸಿದರು. ಮದರಾಸು ವಿಶ್ವ ವಿದ್ಯಾನಿಲಯವು 1984ರಿಂದ ನಿವೃತ್ತಿಯಾಗುವ ತನಕ ಇವರಿಗೆ ಓರಿಯಂಟಲ್ ರಿಸರ್ಚ್ ಇನ್ಸಿಟ್ಯೂಟ್‌ನ ಕರೆಸ್ಪಾಂಡೆಂಟ್ ಎಂಬ ಗೌರವ
    ಪದವಿಯನ್ನು ನೀಡಿ ಗೌರವಿಸಿತು.

    ಇವರ ಸುಮಾರು 17 ಕೃತಿಗಳು ಪ್ರಕಟವಾಗಿವೆ. 4 ಪುಸ್ತಕಗಳು ಅಂಗ್ಲ ಭಾಷೆಯಲ್ಲಿ, 70 ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಕನ್ನಡ ಮತ್ತು ಇಂಗ್ಲೀಷ್‌ನಲ್ಲಿ ಪ್ರಕಟಿಸಿದ್ದಾರೆ.ಲಘು ಪ್ರಬಂಧ, ಹರಟೆ,ಕವಿತೆ, ವಿವಿಧ ಕಡೆಯಲ್ಲಿ ಬೆಳಕು ಕಂಡಿವೆ. ಊರೊಸಗೆ, ಕಡಲತಡಿಯ ಕನವರಿಕೆಗಳು , ಬೆಟ್ಟದಾ ಮೇಲೊಂದು ಮನೆಯ ಮಾಡಿ, ಕಮಲ ನಿಮೀಲನ, ಸಂಕಲನಗಳ ಪ್ರಬಂಧಗಳು ಗದ್ಯ ಕಾವ್ಯಕ್ಕೆ ಉತ್ತಮ ಮಾದರಿಗಳು. ಸಂಶೋಧನೆ, ಭಾಷಾವಿಜ್ಞಾನ ಕ್ಷೇತ್ರದಲ್ಲಿ ಹಾಗೂ ಸಂಶೋಧನಾತ್ಮಕ ಪ್ರೌಢ ಪ್ರಬಂಧಗಳ ರಚನೆಯಲ್ಲಿ ಹಲವಾರು ವಿದ್ಯಾರ್ಥಿಗಳು ಇವರ ಮಾರ್ಗದರ್ಶನ ಪಡೆದುಕೊಂಡಿದ್ದಾರೆ.

    ಪ್ರಾಮಾಣಿಕ ಕನ್ನಡ ಸೇವೆಯನ್ನು ಮಾಡಿದ ಡಾ. ಗೌಡರನ್ನು ಕಾಂಚಿ ಕಾಮಕೋಟಿ ಪೀಠಾಧಿಪತಿ ಜಯೇಂದ್ರ ಸರಸ್ವತಿಯವರ 50ನೇ ಕಾಂಚಿ ಕಾಮಕೋಟಿ ವರ್ಧಂತಿಯಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಕೊಟ್ಟ ಕೊಡುಗೆಯನ್ನು ಗೌರವಿಸಿ ಚಿನ್ನದ ಪದಕ ನೀಡಿ ಗೌರವಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಕೈಫಿಯತ್ತುಗಳು ಮಸ್ತಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಇವರ ಪ್ರತಿಭೆಗೆ ಸೋವಿಯತ್ ಲ್ಯಾಂಡಿನ ಚಿನ್ನದ ಪದಕ ದೊರೆತಿದೆ. ಕನ್ನಡ ಭಾಷಾವಲೋಕನವೆಂಬ ಗ್ರಂಥವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ವರ್ಷದ ಉತ್ತಮ ಸೃಜನಶೀಲ ಗ್ರಂಥವೆಂದು ಆಯ್ಕೆ ಮಾಡಿದೆ . ಹೊರನಾಡಿನಲ್ಲಿದ್ದು ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಕೊಟ್ಟ ಕೊಡುಗೆಯನ್ನು ಗಮನಿಸಿ ಕರ್ನಾಟಕ ಸಾಹಿತ್ಯ ಅಕಾಡೆಮಿ 1987ರಲ್ಲಿ ಗೌರವ ಪ್ರಶಸ್ತಿಯನ್ನು ಹಾಗೂ ಕರ್ನಾಟಕ ಸರ್ಕಾರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.ದ.ಕ. ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts