More

  ಧಾರ್ವಿುಕ ಪ್ರಜ್ಞೆ ಜಾಗೃತಗೊಳಿಸಿದ ಶ್ರೀಗಳು

  ನರೇಗಲ್ಲ: ಹಾಲಕೆರೆಯ ಅನ್ನದಾನೀಶ್ವರ ಸಂಸ್ಥಾನಮಠಕ್ಕೆ ಒಂದು ಘನಪ್ರಜ್ಞೆ ತಂದುಕೊಟ್ಟ ಕೀರ್ತಿ ಲಿಂ. ಹಿರಿಯ ಅನ್ನದಾನ ಸ್ವಾಮೀಜಿಗೆ ಸಲ್ಲುತ್ತದೆ ಎಂದು ತೆಲಂಗಾಣ ನೇರಡಗಂ ಪಶ್ಚಿಮಾದ್ರಿಮಠದ ಪಂಚಮಸಿದ್ಧಲಿಂಗ ಸ್ವಾಮೀಜಿ ಹೇಳಿದರು.

  ಸಮೀಪದ ಹಾಲಕೆರೆಯ ಶ್ರೀ ಅನ್ನದಾನೀಶ್ವರ ಸಂಸ್ಥಾನಮಠದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಲಿಂ. ಹಿರಿಯ ಅನ್ನದಾನ ಶಿವಯೋಗಿಗಳ 107ನೇ ಪುಣ್ಯಸ್ಮರಣೋತ್ಸವದಲ್ಲಿ ಅವರು ಆಶೀರ್ವಚನ ನೀಡಿದರು.

  ಹಾಲಕೆರೆಯ ಅನ್ನದಾನೀಶ್ವರ ಸಂಸ್ಥಾನ ಪೀಠ ಪರಂಪರೆಯಲ್ಲಿ 12 ಪರಮ ಪೂಜ್ಯ ಪೀಠಾಧಿಪತಿಗಳು ಇಷ್ಟಲಿಂಗಾನುಸಂಧಾನ ಪ್ರಧಾನವಾದ ಧಾರ್ವಿುಕ ಪ್ರಜ್ಞೆ ಜಾಗೃತಗೊಳಿಸಿದ್ದಾರೆ. ತಮ್ಮ ಕರ್ತೃತ್ವ ಶಕ್ತಿಯಿಂದ ಮಠವನ್ನು ಕಾಮಧೇನು, ಕಲ್ಪವೃಕ್ಷ, ಚಿಂತಾಮಣಿಗಳಂತೆ ಇಷ್ಟಾರ್ಥ ಸಿದ್ಧಿಯ ಕೇಂದ್ರವಾಗಿ ಪರಿವರ್ತಿಸಲು ಕಾರಣರಾಗಿದ್ದಾರೆ. ಪೀಠ ಪರಂಪರೆಯ ಒಂಬತ್ತನೆಯ ಪೀಠಾಧಿಪತಿಗಳಾಗಿದ್ದ ಲಿಂ. ಹಿರಿಯ ಅನ್ನದಾನ ಶಿವಯೋಗಿಗಳು ಹಿಮಾಲಯದಲ್ಲಿ ಅನುಷ್ಠಾನಗೈದು ಮಹಾ ತಪಸ್ವಿಗಳೆನಿಸಿಕೊಂಡರು ಎಂದರು.

  ಹಾಲಕೆರೆಯ ಡಾ. ಅಭಿನವ ಅನ್ನದಾನ ಸ್ವಾಮೀಜಿ ಮಾತನಾಡಿ, ಸನ್ಯಾಸಿ ಎಂದರೆ ಯಾರು? ಸನ್ಯಾಸಿ ಹೇಗೆ ಬಾಳಿ ಬದುಕಬೇಕು ಎಂಬುದನ್ನು ಮಠದ ಪರಂಪರೆಯ ಎಲ್ಲ ಗುರುಗಳು ತೋರಿಸಿಕೊಟ್ಟಿದ್ದಾರೆ. ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ನಾವು ಮುನ್ನಡೆಯುತ್ತಿದ್ದೇವೆ ಎಂದು ಹೇಳಿದರು.

  ಪೇಜಾವರ ಶ್ರೀಗಳ ನಿಧನಕ್ಕೆ ಸಂತಾಪ: ಪೇಜಾವರ ಶ್ರೀಗಳು ಕೃಷ್ಣೈಕ್ಯರಾದ ಹಿನ್ನೆಲೆಯಲ್ಲಿ ಸಮಾರಂಭದಲ್ಲಿ ಎರಡು ನಿಮಿಷ ಮೌನ ಆಚರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

  ಡಾ. ಅಭಿನವ ಅನ್ನದಾನ ಸ್ವಾಮೀಜಿ ಮಾತನಾಡಿ, ಸಂತ ಪರಂಪರೆಗೆ ಕಿರೀಟಪ್ರಾಯರಾಗಿದ್ದ ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಗಳು ಇನ್ನಷ್ಟು ದಿನಗಳ ಕಾಲ ನಮ್ಮೊಂದಿಗೆ ಇರಬೇಕಾಗಿತ್ತು. ಕಳೆದ ವರ್ಷ ಉಡುಪಿ ಮಠಕ್ಕೆ ಭೇಟಿ ನೀಡಿ ಕುಶಲೋಪರಿ ವಿಚಾರಿಸಿ ಬಂದಿದ್ದೆವು. ಹೊಸಪೇಟೆಯ ಮಠದ ಅನೇಕ ಕಾರ್ಯಕ್ರಮಗಳಿಗೆ ಶ್ರೀಗಳು ಸಂತೋಷದಿಂದ ಆಗಮಿಸಿ, ಆತಿಥ್ಯ ಸ್ವೀಕರಿಸಿದ್ದರು. ಕಳೆದ 35 ವರ್ಷಗಳಿಂದ ಶ್ರೀಗಳೊಂದಿಗೆ ಒಡನಾಟ ಹೊಂದಿರುವ ಬಗ್ಗೆ ತಿಳಿಸುತ್ತ ಸ್ವಾಮೀಜಿಗಳು ಭಾವುಕರಾದರು.

  ನೀಲಗುಂದ ಗುದ್ನೇಶ್ವರಮಠದ ಪ್ರಭುಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಹಂಪಸಾಗರ ನವಲಿಹಿರೇಮಠದ ಅಭಿನವ ಶಿವಲಿಂಗ ರುದ್ರಮುನಿ ಸ್ವಾಮೀಜಿ, ಮರಿಯಮ್ಮನಹಳ್ಳಿ ಗುರುಪಾದೇಶ್ವರ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ದರೂರನ ಕೊಟ್ಟೂರು ದೇಶಿಕರು, ವಳಬಳ್ಳಾರಿಯ ನಿಯೋಜಿತ ಉತ್ತರಾಧಿಕಾರಿ ಸದಾಶಿವ ಸ್ವಾಮೀಜಿ, ಹಳಿಂಗಳಿ ಕಮರಿಮಠದ ಶಿವಾನಂದ ಸ್ವಾಮೀಜಿ, ಬನವಾಸಿಯ ಶಿವಲಿಂಗ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಹಾಲಕೆರೆಯ ದೇವಪ್ಪ ಮಾಸ್ತರ, ದ್ಯಾಮಣ್ಣ ಬಡಿಗೇರ, ಕೋಡಿಕೊಪ್ಪದ ಕಳಕಮಲ್ಲಯ್ಯ ಅಣ್ಣಿಗೇರಿ ಸಂಗೀತ ಸೇವೆ ಸಲ್ಲಿಸಿದರು. ಎಸ್.ಎನ್. ಹೂಲಗೇರಿ, ಎಫ್.ಎನ್. ಹುಡೇದ ನಿರ್ವಹಿಸಿದರು.

  2000 ವಿದ್ಯಾರ್ಥಿಗಳಿಂದ ಪಾದಯಾತ್ರೆ: ಹಾಲಕೆರೆಯ ಶ್ರೀ ಅನ್ನದಾನೀಶ್ವರ ಜಾತ್ರಾ ಮಹೋತ್ಸವಕ್ಕೆ ನರೇಗಲ್ಲನ ಶ್ರೀ ಅನ್ನದಾನೀಶ್ವರ ಪದವಿ ಪೂರ್ವ ಕಾಲೇಜಿನ 2000 ವಿದ್ಯಾರ್ಥಿಗಳು, ಸಿಬ್ಬಂದಿ ನರೇಗಲ್ಲನಿಂದ ಹಾಲಕೆರೆವರೆಗೆ 12 ಕಿ.ಮೀ. ಪಾದಯಾತ್ರೆ ಮೂಲಕ ತೆರಳಿದರು. ಉತ್ತಮ ಅಂಕ ಗಳಿಸಲು ಯಾತ್ರೆಯುದ್ದಕ್ಕೂ ಅನ್ನದಾನೀಶ್ವರರ ಸ್ಮರಣೆ ಮಾಡುತ್ತ ಹಾಲಕೆರೆ ಮಠದಲ್ಲಿನ ಗುದ್ದುಗೆ ದರ್ಶನ ಪಡೆದುಕೊಂಡರು. ಕಳೆದ 5 ವರ್ಷಗಳಿಂದ ವಿದ್ಯಾರ್ಥಿಗಳು ಪಾದಯಾತ್ರೆಯಲ್ಲಿ ಭಾಗವಹಿಸುತ್ತಿದ್ದು, ವರ್ಷದಿಂದ ವರ್ಷಕ್ಕೆ ಫಲಿತಾಂಶದಲ್ಲಿ ಸುಧಾರಣೆ ಕಾಣುತ್ತಿರುವುದು ವಿಶೇಷ. ಪ್ರಾಚಾರ್ಯ ವೈ.ಸಿ. ಪಾಟೀಲ. ಸಿಬ್ಬಂದಿ ಎಫ್.ಎನ್. ಹುಡೇದ, ವಿದ್ಯಾಸಾಗರ, ನಂದೀಶ ಅಚ್ಚಿ, ಸಿಬ್ಬಂದಿ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts