More

    ಗಿರ್​ಮಿಟ್​: ಸೆಲ್ಪಿ ಕಂಡ ಹಿಡದವನ ಜೊತಿ ಒಂದ ಸೆಲ್ಪಿ…

    ಗಿರ್​ಮಿಟ್​: ಸೆಲ್ಪಿ ಕಂಡ ಹಿಡದವನ ಜೊತಿ ಒಂದ ಸೆಲ್ಪಿ...

    ಈಗ ಒಂದ ಆರ ತಿಂಗಳ ಹಿಂದ ಒಂದ ಸುದ್ದಿ ಬಂದಿತ್ತ. ಒಬ್ಬೊಂವಾ ಮುಂದ ತನ್ನ ಅತ್ತಿ ಆಗೋಕಿ ಕೈಯಾಗ ಮೊಬೈಲ್ ಕೊಟ್ಟ ‘ಈಗ ನಾ ನಿನ್ನ ಮಗಳಿಗೆ ಪ್ರಪೋಸ್ ಮಾಡ್ತೇನಿ ಅದನ್ನ ನೀ ವಿಡಿಯೋ ಮಾಡ’ ಅಂತ ಹೇಳಿದ್ನಂತ. ಇನ್ನ ಮುಂದ ಆಗೊ ಅಳಿಯಾ ಹೇಳಲಿಕತ್ತಾನ ಇಲ್ಲಾ ಅನ್ನಲಿಕ್ಕೆ ಬರಂಗಿಲ್ಲಾ ಅಂತ ಪಾಪ ಅಕಿ ಮೊಬೈಲನಾಗ ವಿಡಿಯೋ ಮಾಡಿದ್ಲು. ಅಂವಾ ಅಕಿ ಮಗಳಿಗೆ ಪ್ರಪೋಸ್ ಮಾಡಿದಾ. ಮಗಳ ಒಪ್ಪಕೊಂಡ್ಲು. ಆ ಅಳಿಯಾ ಆಗೊಂವಾ ಅಗದಿ Excite ಆಗಿ ಅವರತ್ತಿ ಮಾಡಿದ್ದ ವಿಡಿಯೋ ನೋಡಿದರ ಅಕಿ ಅಂವಾ ಪ್ರಪೋಸ್ ಮಾಡೋ ವಿಡಿಯೋ ಸೆಲ್ಪಿ ಮೋಡನಾಗ ರಿಕಾರ್ಡಿಂಗ್ ಮಾಡಿದ್ಲು. ಅದರ ಒಳಗ ಅಕಿದ ಗಾಬರಿ ಆಗಿದ್ದ ರಿಯಾಕ್ಷನ್ ಇತ್ತ ಹೊರತು ಅಕಿ ಮಗಳ Excite ಆಗಿದ್ದ ರಿಯಾಕ್ಷನ್ ಇರ್ಲಿಲ್ಲಾ. ಆದರು ಅಳಿಯಾ ಆಗೊಂವ ನನ್ನಂಗ ಭಾಳ ಜನರಸ್ ಇದ್ದಾ, ಹಿಂಗಾಗಿ ಆಗಿದ್ದ ಆಗಲಿ ಹಿಂಗಾದರೂ ನನ್ನ ಪ್ರಪೋಸಲ್ ಮೆಮೊರೇಬಲ್ ಆತಲಾ ಅಂತ ಸುಮ್ಮನಾದ. ಪಾಪ ಆ ಅತ್ತಿ ಆಗೋಕಿ I am not good at photography ಅಂತ ರಿಗ್ರೇಟ್ ಮಾಡಿದ್ಲು. ಇದ ನಡದಿದ್ದ ನ್ಯೂ ಮ್ಯಾಕ್ಸಿಕೋ ಒಳಗ. ಹಂಗ ಮುಂದ ಒಂದ ಸ್ವಲ್ಪ ದಿವಸಕ್ಕ ಆ ಪ್ರಪೋಸ್ ಮಾಡಿದಂವನೂ ನಮ್ಮಂಗ ಪ್ರಪೋಸ್ ಮಾಡಿದ್ದಕ್ಕ ರಿಗ್ರೇಟ್ ಮಾಡಿದ್ದರು ಮಾಡಿರ್ತಾನ ಆ ಮಾತ ಬ್ಯಾರೆ. ಅಲ್ಲಾ ಅದ ಅಮೆರಿಕ, ಅಲ್ಲೇ ಏನ ಬೇಕಾರ ಆಗಬಹುದು. ನಮ್ಮಂಗ ಪ್ರಪೋಸ್ ಮಾಡಿದೋಕಿಗೆ ಮಾಡ್ಕೊಬೇಕ ಅಂತನೂ ಏನ ಇರಂಗಿಲ್ಲಾ.

    ಹಂಗ ಇತ್ತೀಚೆಗೆ ಎಲ್ಲಾರಿಗೂ ಸೆಲ್ಪಿ ಹುಚ್ಚ ಜಾಸ್ತಿ ಆಗೇದ, ಎಲ್ಲೇ ಬೇಕಲ್ಲೇ ಸೆಲ್ಪಿ ಹೊಡ್ಕೋಳೊ ಚಟಾ. ಸಣ್ಣ ಹುಡುಗರಿಂದ ಹಿಡದ ವಯಸ್ಸಾದವರ ತನಕಾ ಎಲ್ಲಾರೂ ‘ಒಂದ ಸೆಲ್ಪಿ ಪ್ಲೀಸ್’ ಅಂತಾರ. ನನ್ನ ಪ್ರಕಾರ ಈ ಕ್ಷಣವನ್ನ ಅನುಭವಸಬೇಕ, ಆನಂದ ಪಡಬೇಕ ಹೊರತು ಆ ಕ್ಷಣದಾಗ ಫೋಟೋ ಹೊಡ್ಕೊಂಡ ಆಮ್ಯಾಲೆ ಅದನ್ನ ನೋಡಿ ಮೆಮರಿ ಎಂಜಾಯ್ ಮಾಡೋದಲ್ಲಾ.

    ಜನಾ ಹೆಂತಿಂತಾ ಜಗಾದಾಗ ಸೆಲ್ಪಿ ತೊಗೊತಾರ, ಹೆಂತಿಂತಾವರ ಜೊತಿ ತೊಗೊತಾರ.. ಅಯ್ಯಯ್ಯ ಅದರಾಗ ಏನೂ ಲಾಜಿಕ್ ಇಲ್ಲ ಬಿಡ್ರಿ. ನಮ್ಮ ದೋಸ್ತ ಸದು ಅಂತು ಒಬ್ಬಂವ ಇದ್ದಾನ. ಅವಂಗ ನಾವಂತು ‘ಸೆಲ್ಪಿ ಸದು’ ಅಂತ ಕರಿತೇವಿ. ಅಂವಾ ಏನಿಲ್ಲಾ ಅಂದರು ದಿವಸಕ್ಕ ಒಂದ ಇಪ್ಪತ್ತ-ಇಪ್ಪತೆôದ ಸೆಲ್ಪಿ ಹೋಡ್ಕೊತಾನ. ಸಾವಜಿ ಖಾನಾವಳಿ ಒಳಗ ಸಿರವಾದಿಂದ ಹಿಡದ ಡೆನಿಸನ್ಸ್ ಒಳಗಿನ ಚಿಕನ್ ಡ್ರಮಸ್ಟಿಕ್ ತನಕ ಏನ ತಿಂದರೂ ಸೆಲ್ಪಿ, ಯಾರ ಭೆಟ್ಟಿ ಆದರೂ ಸೆಲ್ಪಿ. ಅಂವಾ ‘I am documenting my life thru selfie’ ಅಂತ ಅದಕ್ಕ ಸಮಜಾಯಿಷಿ ಬ್ಯಾರೆ ಕೊಡ್ತಾನ. ಹೋಗ್ಲಿ ಬಿಡ ಅವನ ಮೊಬೈಲ್ ಅಂವಾ ಏನರ ಹಾಳಗುಂಡಿ ಬೀಳಲಿ ಅಂತ ಬಿಟ್ಟರ ಮಗಾ ಆ ಸೆಲ್ಪಿ ಎಲ್ಲಾ ಫೇಸಬುಕ್ಕಿನಾಗ ಅಪಲೋಡ್ ಮಾಡಿ ಮ್ಯಾಲೆ ಅದರಾಗ ಇದ್ದವರನ ಟ್ಯಾಗ್ ಮಾಡ್ತಾನ.

    ಮೊನ್ನೆ ಗುರವಾರ ನಾ ಮಠಾ ಒಪನ್ ಆಗೇದ ಅಂತ ಮಠಕ್ಕ ಹೋಗಿ ಬರ್ತೇನಿ ಅಂತ ಹೆಂಡ್ತಿಗೆ ಹೇಳಿ ಹೋಗಿದ್ದೆ, ಅಲ್ಲಾ ಖರೇನ ಮಠಕ್ಕ ಹೋಗಿದ್ದೆ. ವಾಪಸ ಬರಬೇಕಾರ ಈ ಸದ್ಯಾ ಸಿಕ್ಕಾ. ನಾ ಒಲ್ಲೆ ಅಂದರೂ ‘ಲೇ ಐಸ್​ಕ್ಯೂಬ್ ಒಪನ್ ಆಗೇದ ನಡಿ’ ಅಂತ ಕರಕೊಂಡ ಹೋದಾ. ಒಂದ ಹೆಂತಾದೋ ಮಾರ್ಟೀನಿ ಅಂತ ಹೇಳಿ ಅದರ ಜೊತಿ ನನ್ನೂ ಮಿಕ್ಸ್ ಮಾಡಿ ಒಂದ ಸೆಲ್ಪಿ ತೊಗೊಂಡಾ. ನಾ ಭಾಳ ತಲಿಗೆಡಸಿಕೊಂಡಿದ್ದಿಲ್ಲಾ.

    ಮರದಿವಸ ಮುಂಜಾನೆ ನಾ ಏಳೋದ ತಡಾ ‘ನಿನ್ನೆ ಮಠಕ್ಕ ಹೋಗಿದ್ದರೋ ಇಲ್ಲಾ ಮತ್ತೇಲ್ಲರ ಹೋಗಿದ್ದರೊ?’ ಅಂತ ನನ್ನ ಹೆಂಡತಿ ಕೇಳೆ ಬಿಟ್ಲು. ‘ಏ..ಮಠಕ್ಕ ಹೋಗಿದ್ದೆ. ಬೇಕಾರ ರಾಮಾಚಾರ್ಯರನ ಕೇಳ’ ಅಂತ ನಾ ಅಂದರ ‘ಹಂಗರ ಇದೇನ’ ಅಂತ ಫೇಸಬುಕ್ ಒಳಗಿನ ಅವನ ಸ್ಟೇಟಸ್ ಮಾರಿಗೆ ಹಿಡದ್ಲು. ಈ ಮಗಾ ನಡ ರಾತ್ರಾ್ಯಗ ಆ ಐಸ್​ಕ್ಯೂಬ್ ಫೋಟೋ ಫೇಸಬುಕ್ಕಿಗೆ ಅಪಲೋಡ್ ಮಾಡಿ ನಂಗ ಟ್ಯಾಗ್ ಮಾಡಿದ್ದಾ, ಅವಂಗ ಲೈಕ್ ಬಂದಾಗೊಮ್ಮೆ ನೋಟಿಫಿಕೇಶನ್ ನಂಗೂ ಬರ್ತಿದ್ವು. ಹಂಗ ನಂದ ಮನ್ಯಾಗ ನೋಟಿಫಿಕೇಶನ್ ಮ್ಯೂಟ್ ಇದ್ದರು ನನ್ನ ಹೆಂಡ್ತಿಗೆ ಬರ್ತಿದ್ವು… ಯಾಕಂದರ ನನ್ನ ಫೇಸಬುಕ್ ಸೆಟ್ಟಿಂಗ್ ನಮ್ಮಕಿ ಹಂಗ ಮಾಡ್ಯಾಳ. ಹಿಂಗಾಗಿ ಆ ಸುಡಗಾಡ ನೋಟಿಫಿಕೇಶನ್ ನೋಡಿ ಅಕಿಗೆ ಡೌಟ್ ಬಂದಿತ್ತ.

    ಮುಂದ ನಾ ಅಕಿಗೆ ಎಷ್ಟ ತಿಳಿಸಿ ‘ನಾ ಸದ್ಯಾನ ಜೊತಿ ಹೋಗಿದ್ದ ಖರೇ ಆದರ ಬರೇ ಲೈಮ್ ಜ್ಯೂಸ್ ಕುಡದ ಬಂದೇನಿ’ ಅಂತ ಹೇಳಿದರು ಅಕಿ ಏನ ನಂಬಲಿಲ್ಲಾ. ಅಲ್ಲಾ ಈ ವಿಷಯದಾಗ ನೀವು ನನ್ನ ನಂಬಂಗಿಲ್ಲ ಬಿಡ್ರಿ. ಆದರ ನಾ ಅವತ್ತ ಖರೇನ ಚಿಲ್ಡ್ ಪಾನಕಾ ಕುಡದ ಬಂದಿದ್ದೆ.

    ಹಿಂಗ ಇಂವಾ ಸೆಲ್ಪಿ ಹೊಡ್ಕೊಂಡ ಮಂದಿಗೂ ಸಿಗಿಸಿ ಇಡ್ತಾನ. ಹಂತಾವನ ಜೊತಿ ಸೇರಿ ಮೊನ್ನೆ ಕಟಿಂಗ್ ಅಂಗಡಿಗೆ ಮೂರ ನಾಲ್ಕ ತಿಂಗಳಿಂದ ಲಾಕಡೌನ್ ಒಳಗ ನೀರು ಗೊಬ್ಬರ ಹಾಕಿ ಬೆಳಸಿದ್ದ ದಾಡಿ ಚುಚ್ಚತಾವ ಅಂತ ತಗಸಲಿಕ್ಕೆ ಹೋದಾಗ ನಾನು ಒಂದ ನಾಲ್ಕ ಸೆಲ್ಪಿ ತೊಗೊಂಡ ಫೇಸಬುಕ್ಕಿನಾಗ ಹಾಕಿದ್ದೆ. ದಾಡಿ ನೋಡಿ ಜನಾ ನನಗ ಅಗದಿ intellectual ಕಂಡಂಗ ಕಾಣ್ತಿಲೇ ಅಂತಿದ್ದರ. ತಡಿ ಅಂತ ಮೊದ್ಲ ದಾಡಿ ಇರತ ಒಂದ ಸೆಲ್ಪಿ ತೊಗೊಂಡೆ. ಮುಂದ ದಾಡಿಯಿಂದ ಫ್ರೆಂಚ್ ಕಟ್ ಮಾಡಿಸಿಸಿ ಮತ್ತೊಂದ ಸೆಲ್ಪಿ ತೊಗೊಂಡೆ, ಆಮ್ಯಾಲ್ ಬರೇ ಮೀಸಿ ಮ್ಯಾಲೆ ಒಂದ ತೊಗೊಂಡೆ, ಲಾಸ್ಟಿಗೆ ಮೀಸಿ ತಗಿಸಿ ಒರಿಜನಲ್ ಫೇಸ್ ಮ್ಯಾಲೆ ಮತ್ತೊಂದ ಸೆಲ್ಪಿ ತೊಗೊಂಡ ‘ಏಷ್ಟಾತ’ ಅಂತ ಕೇಳಿದರ ಅಂಗಡಿಯಂವಾ ‘ಎರಡನೂರ ನಲವತ್ತ’ ಅಂದಾ. ‘ಅಷ್ಟಾ್ಯಕ’ ಅಂತ ಕೇಳಿದರ ‘ದಾಡಿ ತಗದದ್ದಕ್ಕ ಅರವತ್ತ, ಫ್ರೇಂಚ್ ಸ್ಟೈಲಿಗೆ ಅರವತ್ತ, ಬರೇ ಮೀಸಿಗೆ ಅರವತ್ತ, ಲಾಸ್ಟಿಗೆ ಮೀಸಿ ತಗದದ್ದಕ್ಕ ಅರವತ್ತ… ಒಂದೊಂದ ಸೆಲ್ಪಿ ಸ್ಟೇಜ್​ಗೆ ಅರವತ್ತ’ ಅಂದಾ.

    ಮನಿಗೆ ಬಂದ ಹೆಂಡ್ತಿಗೆ ಅಷ್ಟು ಸೆಲ್ಪಿ ತೊರಿಸಿದರ ಅಕಿ ‘ಮಂದಿ ನಿಮಗ multifaceted personality ಅಂತ ಅಂದಾಗ ನಂಗ ಗೊತ್ತಾಗಿರಲಿಲ್ಲಾ. ಈಗ ಗೊತ್ತಾತ ನಿಮಗ multiface personality disorder’ ಅಂತ ಅಂದ್ಲು. ಏನ್ಮಾಡ್ತಿರಿ?

    ಹಂಗ ಸೆಲ್ಪಿ ತೊಗೊಳೊರ ಜಗತ್ತಿನಾಗ ರಗಡ ಮಂದಿ ಇದ್ದಾರ. ಒಂದಿಷ್ಟಂತೂ ಇಷ್ಟ ವಿಚಿತ್ರ ವಿಚಿತ್ರ ಕಥಿ ಅವ ಅಂದರ ಒಬ್ಬೋಕಿ ದಿವಸಕ್ಕ ಒಂದ ನೂರ-ನೂರಾ ಐವತ್ತ ಸೆಲ್ಪಿ ಹೊಡ್ಕೊಂಡ ರಾತ್ರಿ ಐದ-ಆರ ತಾಸ ಕೂತ ಅವನ್ನ ಎಡಿಟ್ ಮಾಡ್ತಾಳ ಅಂತ. ಅಕಿನ್ನ ಮುಂದ ಹಾಸ್ಪಿಟಲಗೆ ಅಡ್ಮಿಟ್ ಮಾಡಿದರು ಆ ಮಾತ ಬ್ಯಾರೆ. ಒಬ್ಬೋಕಿ ಸೆಲ್ಪಿ ಸಂಬಂಧ ಹಾರ್ವೇನ್ ಇಂಜೆಕ್ಷನ್ ತೊಗೊಂಡ ದಪ್ಪಾ ಆಗಲಿಕತ್ತಾಳಂತ.

    ಅಲ್ಲಾ ಹಂಗ ನನ್ನ ಹೆಂಡ್ತಿ ಅಪರೂಪಕ್ಕೊಮ್ಮೆ ಸೆಲ್ಪಿ ತೊಗೊಬೇಕಾರ ‘ನೀ ಒಂದ ಮೊಬೈಲ್ ಸೆಲ್ಪಿ ಒಳಗ ಬರಂಗಿಲ್ಲಾ, ಎರೆಡ ಮೊಬೈಲ್ ಹಿಡ್ಕೊ ಇಲ್ಲಾ ಒಂದ 12 ಇಂಚ್ ಟ್ಯಾಬ್ ತೊಗೊ’ ಅಂತ ಕಾಡಸ್ತಿರ್ತೇನಿ. ಅಕಿ ಎಲ್ಲರ ಇದನ್ನ ಓದಿದರ ಸೆಲ್ಪಿ ಸಂಬಂಧ ಡಿಗ್ರೋಥ್ ಹಾರ್ವೇನ್ ಕೊಡಸರಿ ಅಂತ ಗಂಟ ಬಿದ್ದರೂ ಬೀಳಬಹುದು. ಇವೇಲ್ಲಾ ಬ್ಯಾರೆ ದೇಶದ್ದ ಕೇಸಿಸ ಇದ್ದರೂ ನಮ್ಮ ದೇಶದಾಗ ಸೆಲ್ಪಿ ಹಾವಳಿ ಜಾಸ್ತಿ ಆಗಿ ನಾವೇಲ್ಲಾ ಅಡಿಕ್ಟ್ ಆಗಿದ್ದಂತೂ ಖರೆ.

    ಹಂಗ ಮುಂದಿನ ವಾರ ಅಂದರ ಜೂನ್ 21ಕ್ಕ ಅಮೆರಿಕದವರ ‘ನ್ಯಾಷನಲ್ ಸೆಲ್ಪಿ ಡೇ’ ಮಾಡ್ತಾರ. ನಮ್ಮ ದೋಸ್ತ ಸದುಗ ‘ನೀನೂ ಸೆಲೆಬ್ರೇಟ್ ಮಾಡ್ಲೆ’ ಅಂತ ಹೇಳಿದರ ಅಂವಾ ಉಲ್ಟಾ ನಂಗ ‘ಲೇ… ಈ ಸೆಲ್ಪಿ ಕಂಡ ಹಿಡದವರ ಯಾರ ನೋಡಲೇ. ಅವರ ಜೊತಿ ಒಂದ ಸೆಲ್ಪಿ ತೊಗೊಬೇಕ’ ಅಂತ ಅಂದಾ.

    ಹಂಗ ಈ ಸೆಲ್ಪಿ ಇತ್ತಿಚೇಗೆ ಫೇಮಸ್ ಆಗಿದ್ದರೂ Robert Cornelius ಅನ್ನೊ ಫೋಟೋಗ್ರಾಫರ್ 1839ರಾಗ ಸೆಲ್ಪಿ ತೊಗೊಂಡಿದ್ದಾ ಮತ್ತ ಇದು ಜಗತ್ತಿನ ಮೊದಲ ಸೆಲ್ಪಿ. 2013ರ ತನಕ ಸೆಲ್ಪಿ ಅನ್ನೋ ಶಬ್ದ Oxford dictionary ಒಳಗೂ ಇರಲಿಲ್ಲಾ. ನೋಡ್ರಿ ಇನ್ನ ಇಷ್ಟೇಲ್ಲಾ ಓದಿದ ಮ್ಯಾಲೆ ನಾ ಎಲ್ಲರ ದುರ್ಗದಬೈಲಾಗ ಸಿಕ್ಕರ ‘ಏ, ನೀವು ಭಾರಿ ಬರಿತಿರಿ, ನಿಮ್ಮ ಜೋತಿ ಒಂದ ಸೆಲ್ಪಿ ತೊಗೊತೇನಿ?’ ಅನಬ್ಯಾಡ್ರಿ ಮತ್ತ. A selfie a day keeps your friends away ಅನ್ನೊದನ್ನ ಮರಿಬ್ಯಾಡ್ರಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts