More

    ಉದ್ಯೋಗ ಮೇಳ ಯಶಸ್ಸಿಗೆ ಶ್ರಮಿಸಿ

    ಸೇಡಂ: ಕೌಶಲಾಭಿವೃದ್ಧಿ ಇಲಾಖೆ ಪಟ್ಟಣದಲ್ಲಿ ಅ.೧೩ರಂದು ಹಮ್ಮಿಕೊಂಡಿರುವ ಬೃಹತ್ ಉದ್ಯೋಗ ಮೇಳ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಹೇಳಿದರು.

    ತಾಪಂ ಸಭಾಂಗಣದಲ್ಲಿ ಮಂಗಳವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಜಿಲ್ಲೆ ವ್ಯಾಪ್ತಿಯಲ್ಲಿ ಇಂತಹದ್ದೊಂದು ಉದ್ಯೋಗ ಮೇಳ ನಡೆಯಲಿದ್ದು, ಸಾವಿರಾರು ಯುವಕ, ಯುವತಿಯರಿಗೆ ಕೆಲಸ ಸಿಗಲಿದೆ. ಹೀಗಾಗಿ ಸೇಡಂ ಮತಕ್ಷೇತ್ರದ ಎಲ್ಲ ಹಳ್ಳಿಗಳಿಗೂ ಈ ಬಗ್ಗೆ ಮಾಹಿತಿ ಮುಟ್ಟುವ ಕೆಲಸವಾಗಬೇಕು ಎಂದರು.

    ಮೇಳದಲ್ಲಿ ೧೦ ಸಾವಿರ ಜನ ಸೇರುವ ನಿರೀಕ್ಷೆ ಇದ್ದು, ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ೭೬ ಕಂಪನಿಗಳ ಪ್ರತ್ಯೇಕ ಕೌಂಟರ್ ಮತ್ತು ಯಾವ ವಿದ್ಯಾರ್ಹತೆ ಅಭ್ಯರ್ಥಿಗಳಿಗೆ ಯಾವ ಕೌಂಟರ್‌ನಲ್ಲಿ ಸಂದರ್ಶನ ಎಂಬ ಮಾಹಿತಿ ಸರಿಯಾಗಿ ನೀಡಬೇಕು. ಪೊಲೀಸ್ ಇಲಾಖೆ ಪಾರ್ಕಿಂಗ್ ಮತ್ತು ಭದ್ರತೆಯಲ್ಲಿ ಲೋಪವಾಗದಂತೆ ನೋಡಿಕೊಳ್ಳಬೇಕು. ಅಭ್ಯರ್ಥಿಗಳಿಗೆ ಅಚ್ಚುಕಟ್ಟಾದ ಭೋಜನ ವ್ಯವಸ್ಥೆ ಮಾಡಬೇಕು. ಎಲ್ಲಿಯೂ ಗದ್ದಲವಾಗದಂತೆ ಆಹಾರ ಇಲಾಖೆ ಎಚ್ಚರ ವಹಿಸಬೇಕು ಅಧಿಕಾರಿಗಳಿಗೆ ತಾಕೀತು ಮಾಡಿದರು.

    ಕೌಶಲಾಭಿವೃದ್ಧಿ ಇಲಾಖೆ ಕಾರ್ಯನಿರ್ವಾಹಕ ನಿರ್ದೇಶಕ ಕೃಷ್ಣಕುಮಾರ ಮಾತನಾಡಿ, ಉದ್ಯೋಗ ನೀಡಲು ಸುಮಾರು ೭೬ ಕಂಪನಿಗಳು ಮುಂದೆ ಬಂದಿದ್ದು, ನೋಂದಣಿ ಪ್ರಮಾಣ ಕಡಿಮೆ ಇದೆ. ಐಟಿಐ ಮಾಡಿದವರಿಗಾಗಿ ೮ ಸಾವಿರ ಉದ್ಯೋಗ ಅವಕಾಶಗಳಿವೆ. ಇದರ ಉಪಯೋಗವನ್ನು ಉದ್ಯೋಗ ಆಕಾಂಕ್ಷಿಗಳು ಪಡೆಯಬೇಕು. ಪ್ರತಿ ಅಭ್ಯರ್ಥಿಗೂ ೧೦ ಕಂಪನಿಗಳಿಗೆ ಸಂದರ್ಶನ ನೀಡುವ ಅವಕಾಶ ಕಲ್ಪಿಸಲಾಗಿದ್ದು, ಪ್ರತಿಯೊಬ್ಬರೂ ೧೦ ಸ್ವವಿವರದೊಂದಿಗೆ ಬರುವಂತೆ ಕೋರಿದರು.

    ಸಹಾಯಕ ಆಯುಕ್ತ ಆಶಪ್ಪ ಪೂಜಾರಿ, ತಹಸೀಲ್ದಾರ್ ಶ್ರೀಯಾಂಕ ಧನಶ್ರೀ, ತಾಪಂ ಇಒ ಚನ್ನಪ್ಪ ರಾಯಣ್ಣವಾರ, ಜಿಲ್ಲಾ ಕೌಶಲಾಧಿಕಾರಿ ಮುರುಳೀಧರ, ಡಿವೈಎಸ್‌ಪಿ ಕೆ.ಬಸವರಾಜ, ಸಹಾಯಕ ಕೃಷಿ ನಿರ್ದೇಶಕ ವೈ.ಎಲ್. ಹಂಪಣ್ಣ, ಪುರಸಭೆ ಮುಖ್ಯಾಧಿಕಾರಿ ಬಿ.ಪ್ರಹ್ಲಾದ್ ಇತರರಿದ್ದರು.

    ತಾಲೂಕಿನ ವಿವಿಧೆಡೆ ಭೇಟಿ: ಮಳಖೇಡ ಗ್ರಾಪಂ ಕಚೇರಿ, ಕೋಡ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿದ ಡಿಸಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದರು. ನಂತರ ಅಗ್ಗಿ ಬಸವೇಶ್ವರ ಕಾಲನಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಸವೇಶ್ವರ ವೃತ ಸೇರಿ ವಿವಿಧೆಡೆ ಭೇಟಿ ನೀಡಿ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಪರಿಶೀಲಿಸಿದರು.

    ಜೆಸ್ಕಾಂ ಅಧಿಕಾರಿಗಳು ವಿದ್ಯುತ್ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕು. ಪುರಸಭೆ ಅಧಿಕಾರಿಗಳು ಸ್ವಚ್ಛತೆ ಬಗ್ಗೆ ನಿಗಾ ವಹಿಸಬೇಕು. ಶೌಚಗೃಹಗಳ ವ್ಯವಸ್ಥೆ ಕಲ್ಪಿಸಬೇಕು. ಎಲ್ಲ ಅಗತ್ಯ ವ್ಯವಸ್ಥೆ ಮಾಡುವ ಹೊಣೆಯನ್ನು ಆಯಾ ಇಲಾಖೆಗೆ ನೀಡಬೇಕು. ಯಾರೊಬ್ಬರೂ ಗೈರುಹಾಜರಾಗದೆ ವಹಿಸಿದ ಕೆಲಸ ಸರಿಯಾಗಿ ಮಾಡಬೇಕು. ಇಲ್ಲವಾದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು.
    | ಫೌಜಿಯಾ ತರನ್ನುಮ್ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts