More

    ಜಿಪಂ ಸ್ಥಾನ ಹೆಚ್ಚಳ, ತಾಪಂ ಕಡಿತ, ಕ್ಷೇತ್ರಗಳ ಮರುವಿಂಗಡಣೆಗೆ ಚುನಾವಣಾ ಆಯೋಗ ಆದೇಶ ಹಿನ್ನೆಲೆ

    ಅವಿನ್ ಶೆಟ್ಟಿ, ಉಡುಪಿ

    ಅಧಿಕಾರ ಅವಧಿ ಮುಕ್ತಾಯವಾಗುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳಿಗೆ ಶೀಘ್ರ ಚುನಾವಣೆ ನಡೆಯಲಿದೆ.
    ರಾಜ್ಯ ಚುನಾವಣಾ ಆಯೋಗ ಆದೇಶದಂತೆ, ಕ್ಷೇತ್ರಗಳ ಮರುವಿಂಗಡಣೆ ಮಾಡಲಾಗಿದೆ. ಗ್ರಾಮೀಣ ಪ್ರದೇಶದ ಜನಸಂಖ್ಯೆ ಹಾಗೂ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಅಧಿನಿಯಮದಂತೆ ಸದಸ್ಯ ಸ್ಥಾನ ನಿಗದಿಪಡಿಸಲಾಗಿದೆ. ಜಿಲ್ಲೆಯಲ್ಲಿ ಜಿಪಂ ಕ್ಷೇತ್ರ ಹೆಚ್ಚಳವಾದರೆ, ತಾಪಂಗಳ ಪೈಕಿ 9 ಕ್ಷೇತ್ರ ಕಡಿತವಾಗಿದೆ.

    ಜಿಪಂನಲ್ಲಿ ಪ್ರಸ್ತುತ 26 ಕ್ಷೇತ್ರಗಳಿವೆ. 20 ಬಿಜೆಪಿ, 6 ಕಾಂಗ್ರೆಸ್ ಸದಸ್ಯರಿದ್ದಾರೆ. ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ಉಡುಪಿ ಜಿಪಂ ಇನ್ನು 30 ಸದಸ್ಯರನ್ನು ಹೊಂದಲಿದೆ. ಈ ಹಿಂದಿಗಿಂತ ನಾಲ್ಕು ಸದಸ್ಯ ಸ್ಥಾನ ಹೆಚ್ಚುವರಿಯಾಗಿ ಲಭಿಸಲಿದೆ. ಮರುವಿಂಗಡಣೆ ಬಳಿಕ ತಾಲೂಕುವಾರು ಉಡುಪಿ ಮತ್ತು ಕಾಪು ತಲಾ 4, ಬ್ರಹ್ಮಾವರ ಮತ್ತು ಕಾರ್ಕಳ ತಲಾ 5, ಬೈಂದೂರು 3, ಹೆಬ್ರಿ 2 ಹಾಗೂ ಕುಂದಾಪುರ 7 ಕ್ಷೇತ್ರಗಳನ್ನು ಹೊಂದಲಿದೆ.

    ತಾಪಂ 9 ಕ್ಷೇತ್ರ ಕಡಿತ: ಇದೇ ವೇಳೆ, ಜಿಲ್ಲೆಯಲ್ಲಿ ತಾಲೂಕುಗಳ ಸಂಖ್ಯೆ ಮೂರರಿಂದ 7ಕ್ಕೇರಿದೆ. ಹೊಸ ತಾಲೂಕು ರಚನೆ ನಂತರ ಇರುವ ತಾಪಂ ಕ್ಷೇತ್ರಗಳನ್ನೇ ವಿಂಗಡಿಸಿ, ಆಯಾ ತಾಲೂಕುಗಳಿಗೆ ಹಂಚಲಾಗಿತ್ತು. ತಾಪಂ ಸಾರ್ವತ್ರಿಕ ಚುನಾವಣೆಗೆ ಜಿಲ್ಲೆಯಲ್ಲಿ ಒಟ್ಟು 86 ಕ್ಷೇತ್ರಗಳನ್ನು ನಿಗದಿಗೊಳಿಸಿ ಚುನಾವಣಾ ಆಯೋಗ ಆದೇಶಿಸಿದೆ. ಅದರನ್ವಯ ಹಿಂದಿಗಿಂತ 9 ಸ್ಥಾನಗಳು ಕಡಿತಗೊಂಡಿವೆ. ಕಾಪು ಪುರಸಭೆ ಹಾಗೂ ಬೈಂದೂರು ಪಪಂ ರಚನೆ ಆಗಿರುವುದರಿಂದ ತಾಪಂ ಕ್ಷೇತ್ರಗಳ ಸಂಖ್ಯೆ ಕಡಿಮೆಯಾಗಿದೆ. ಉಡುಪಿ 13ರಿಂದ 11ಕ್ಕೆ, ಕಾಪು 12ರಿಂದ 10ಕ್ಕೆ, ಬ್ರಹ್ಮಾವರ 16ರಿಂದ 13ಕ್ಕೆ, ಬೈಂದೂರು 10ರಿಂದ 9ಕ್ಕೆ, ಕುಂದಾಪುರ 23ರಿಂದ 19ಕ್ಕೆ, ಕಾರ್ಕಳ 15ರಿಂದ 13ಕ್ಕೆ ಇಳಿದಿದ್ದರೆ, ಹೆಬ್ರಿ ತಾಪಂನಲ್ಲಿ ಮಾತ್ರ ಕ್ಷೇತ್ರಗಳ ಸಂಖ್ಯೆ 6ರಿಂದ 11ಕ್ಕೆ ಏರಿದೆ. ಜಿಲ್ಲಾ ವ್ಯಾಪ್ತಿಯಲ್ಲಿ ತಾಪಂ ಕ್ಷೇತ್ರಗಳ ಸಂಖ್ಯೆ 95ರಿಂದ 86ಕ್ಕೆ ಇಳಿದಿದೆ.

    ಚುನಾವಣಾ ಆಯೋಗ ತಾಲೂಕುವಾರು ಜಿಪಂ ಮತ್ತು ತಾಪಂ ಕ್ಷೇತ್ರಗಳನ್ನು ನಿಗದಿಪಡಿಸಿದೆ. ಕ್ಷೇತ್ರಗಳ ಮರು ವಿಂಗಡಣೆ ಮಾಡಿ ಗಡಿ ನಿಗದಿಪಡಿಸಲಾಗುತ್ತದೆ. ಪ್ರಾಥಮಿಕ ಗಡಿ ಗುರುತಿಸಲು ತಹಸೀಲ್ದಾರ್‌ಗೆ ಸೂಚನೆ ನೀಡಲಾಗಿದೆ. ನಕ್ಷೆ, ವರದಿ ಸಲ್ಲಿಕೆ ಬಳಿಕ ಮರು ಪರಿಶೀಲಿಸಿ, ಆಯೋಗಕ್ಕೆ ಸಲ್ಲಿಸಲಾಗುತ್ತದೆ. ಫೆ.20ರಂದು ಆಯೋಗದ ಸಭೆಯಲ್ಲಿ ಪರಿಶೀಲಿಸಿ ಅಂತಿಮ ಮಾಡಲಾಗುವುದು.

    ಜಿ. ಜಗದೀಶ್
    ಜಿಲ್ಲಾಧಿಕಾರಿ, ಉಡುಪಿ

    ದ.ಕ.ದಲ್ಲಿ ಹೊಸ ತಾಲೂಕುಗಳಿಗೆ ಸದ್ಯದಲ್ಲೇ ಹಂಚಿಕೆ: ಮಂಗಳೂರು: ದಕ್ಷಿಣ ಕನ್ನಡ ಜಿಪಂ ವ್ಯಾಪ್ತಿಯಲ್ಲಿ ಸ್ಥಾನಗಳ ಸಂಖ್ಯೆ 35ರಿಂದ 41ಕ್ಕೆ ಏರಿಕೆಯಾಗಲಿವೆ. ಹೊಸದಾಗಿ ರಚನೆಯಾಗಿರುವ ಮೂಡುಬಿದಿರೆ, ಕಡಬ ತಾಲೂಕುಗಳ ಹಿನ್ನೆಲೆಯಲ್ಲಿ ಕ್ಷೇತ್ರ ಮರುವಿಂಗಡಣೆ ಕಾರ್ಯ ತಾಲೂಕು ಮಟ್ಟದಲ್ಲಿ ನಡೆಯುತ್ತಿದ್ದು ನಕ್ಷೆ, ಗಡಿ ಗುರುತು ಇತ್ಯಾದಿ ಆಗಬೇಕಿದೆ. ಫೆ.20ರೊಳಗೆ ತಾಲೂಕುವಾರು ವಿವರ ಕೇಳಲಾಗಿದೆ.

    ಬಳಿಕ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಚುನಾವಣಾ ಶಾಖೆಯಲ್ಲಿ ಅಂತಿಮಗೊಳಿಸಲಾಗುವುದು. ಹೊಸ ಕ್ಷೇತ್ರಗಳ ಹೆಸರು ನಂತರ ತಿಳಿಯಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಿಪಂ ಕ್ಷೇತ್ರಗಳ ಸಂಖ್ಯೆಯಲ್ಲಿ ಏರಿಕೆಯಾಗಿದ್ದರೆ ತಾಪಂ ಕ್ಷೇತ್ರಗಳ ಸಂಖ್ಯೆ ಮಾತ್ರ 136ರಿಂದ 110ಕ್ಕೆ ಇಳಿಕೆಯಾಗಿದೆ. ಮಂಗಳೂರು ತಾಪಂ 39ರಿಂದ 21ಕ್ಕೆ, ಬಂಟ್ವಾಳ 34ರಿಂದ 28ಕ್ಕೆ, ಪುತ್ತೂರು 24ರಿಂದ 11, ಸುಳ್ಯ 13ರಿಂದ 9ಕ್ಕೆ ಇಳಿದಿದೆ. ನೂತನವಾಗಿ ರಚನೆಯಾದ ಮೂಡುಬಿದಿರೆಗೆ 11 ಕ್ಷೇತ್ರ ಹಾಗೂ ಕಡಬಕ್ಕೆ 9 ತಾಪಂ ಕ್ಷೇತ್ರ ಅಂತಿಮಗೊಂಡಿದೆ. ಜಿಪಂ ಕ್ಷೇತ್ರಗಳನ್ನು ತಾಲೂಕುವಾರು ನೋಡಿದರೆ ಮಂಗಳೂರಿಗೆ 8, ಬಂಟ್ವಾಳ 10, ಮೂಡುಬಿದಿರೆ 3, ಪುತ್ತೂರು ಮತ್ತು ಸುಳ್ಯ ತಲಾ 4, ಬೆಳ್ತಂಗಡಿ 8, ಕಡಬಕ್ಕೆ 4 ಕ್ಷೇತ್ರಗಳನ್ನು ಹಂಚಲಾಗಿದೆ.

    ಕ್ಷೇತ್ರ ಮರುವಿಂಗಡನೆ ಬಗ್ಗೆ ನಿರಂತರ ಸಭೆಗಳು ನಡೆಯುತ್ತಿವೆ. ತಹಸೀಲ್ದಾರರು ಕ್ಷೇತ್ರ ಮರುವಿಂಗಡಣೆಯ ಕೆಲಸ ಮಾಡುತ್ತಾರೆ, 20ರಂದು ಚುನಾವಣಾ ತಹಸೀಲ್ದಾರರು ಬೆಂಗಳೂರಿನಲ್ಲಿ ಇದನ್ನು ಮಂಡಿಸಲಿದ್ದಾರೆ.

    ಡಾ.ರಾಜೇಂದ್ರ ಕೆ.ವಿ, ದ.ಕ. ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts