More

    ಕಡಲ ಒಡಲ ಸೇರಿದ ಮರಿಕೂರ್ಮ ಪಡೆ

    ಕಾರವಾರ: ಅತಿ ಚಿಕ್ಕ ಗಾತ್ರದ ಕಪ್ಪು ಮರಿಗಳು, ಮರಳಿನಲ್ಲಿ ಪಟಪಟನೆ ಕಾಲು ಬಡಿದುಕೊಂಡು ವಿಶಾಲ ನೀಲ ಸಾಗರದತ್ತ ತೆವಳಿ ಹೋಗುತ್ತಿದ್ದಂತೆ ಹಿಂದೆ ನಿಂತವರಲ್ಲಿ ಏನೋ ಒಂದು ತರದ ನಿರಾಳ ಭಾವ. ಇನ್ನೊಂದೆಡೆ ತಾಯಿಯಿಲ್ಲದ ತಬ್ಬಲಿ ಎಲ್ಲಿ ಅಪಾಯಕ್ಕೆ ಸಿಲುಕೀತೋ ಎಂಬ ಆತಂಕ ಕೂಡ ಕಾಡಿತ್ತು.

    ತಾಲೂಕಿನ ಮಾಜಾಳಿಯಲ್ಲಿ ಸಂರಕ್ಷಿಸಿದ 105 ಕ್ಕೂ ಹೆಚ್ಚು ಕಡಲಾಮೆ ಮೊಟ್ಟೆಗಳು ಒಡೆದು ಮರಿಗಳಾಗಿದ್ದು, ಶುಕ್ರವಾರ ಅವುಗಳನ್ನು ಸಮುದ್ರಕ್ಕೆ ಬಿಡಲಾಯಿತು. ಅರಣ್ಯ ಇಲಾಖೆಯ ಮರೈನ್ ಇಕೋ ಸಿಸ್ಟಂ ಘಟಕದ ಆರ್​ಎಫ್​ಒ ಪ್ರಮೋದ, ಕವಿವಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ಡಾ. ಜೆ.ಎಲ್. ರಾಠೋಡ್, ಪ್ರಾಧ್ಯಾಪಕ ಡಾ. ಶಿವಕುಮಾರ ಹರಗಿ, ಚಿತ್ತಾಕುಲಾ ಗ್ರಾಪಂ ಅಧ್ಯಕ್ಷೆ ಸ್ವಾತಿ ದೇಸಾಯಿ, ಸದಸ್ಯರಾದ ಉಲ್ಲಾಸ ಜೋಶಿ, ಚಂದ್ರಹಾಸ ಗಿರಫ್, ಸೂರಜ್ ದೇಸಾಯಿ, ಇತರರು ಆಮೆ ಮರಿಗಳನ್ನು ಕಡಲಿಗೆ ಬಿಡುವ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾದರು.

    ಏನಿದರ ವಿಶೇಷ..?: ಆಲಿವ್ ರಿಡ್ಲಿ ಜಾತಿಯ ಕಡಲಾಮೆಗಳು ಹೊನ್ನಾವರ ತಾಲೂಕು ಕಾಸರಕೋಡು, ಕುಮಟಾ ತಾಲೂಕು ಧಾರೇಶ್ವರ ಮುಂತಾದ ಕಡಲ ತೀರದಲ್ಲಿ ದೊಡ್ಡ ಪ್ರಮಾಣದಲ್ಲಿ ಬಂದು ಮೊಟ್ಟೆ ಇಡುತ್ತಿರುವುದನ್ನು ಅರ್ಧ ಶತಮಾನದ ಹಿಂದೆಯೇ ಗುರುತಿಸಲಾಗಿತ್ತು. ಆ ಭಾಗದಲ್ಲಿ ಸ್ಥಳೀಯ ಅರಣ್ಯಾಧಿಕಾರಿಗಳು, ಮೀನುಗಾರರು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಮೊಟ್ಟೆಗಳನ್ನು ರಕ್ಷಿಸುವ ಕಾರ್ಯ ಹಲವು ವರ್ಷಗಳಿಂದ ನಡೆದಿದೆ.

    ಕಾರವಾರ ಮತ್ತು ಅಂಕೋಲಾ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯ ಮರೈನ್ ಹಾಗೂ ಎಕೋ ಸಿಸ್ಟಂ ಘಟಕ ಸ್ಥಾಪನೆಯಾದ ನಂತರ ಎರಡು ವರ್ಷಗಳಲ್ಲಿ ಇಲ್ಲೂ ಕಡಲಾಮೆಗಳು ಬಂದು ಮೊಟ್ಟೆ ಇಡುತ್ತಿರುವುದನ್ನು ಗುರುತಿಸಲಾಗಿದೆ. ಮಾತ್ರವಲ್ಲದೆ, ಅವುಗಳನ್ನು ರಕ್ಷಿಸುವ ಕಾರ್ಯ ನಡೆದಿದೆ. ಕಡಲಾಮೆ ಮೊಟ್ಟೆ ಇಡುವ ಬಗ್ಗೆ ಮಾಹಿತಿ ನೀಡುವ ಮೀನುಗಾರರಿಗೆ 1 ಸಾವಿರ ರೂ. ಪ್ರೋತ್ಸಾಹಧನ ನೀಡಲಾಗುತ್ತಿದೆ. ಕಾರವಾರ, ಅಂಕೋಲಾ ತಾಲೂಕುಗಳ ದೇವಬಾಗ, ಮುದಗಾ, ಮಾಜಾಳಿ, ಬಾವಿಕೇರಿ, ಹಾರವಾಡ, ಮಂಜಗುಣಿ ಭಾಗದಲ್ಲಿ ಕಳೆದ ವರ್ಷ 14 ಆಮೆಗಳು ಮೊಟ್ಟೆ ಇಟ್ಟಿದ್ದು ಪತ್ತೆಯಾಗಿತ್ತು. ಈ ವರ್ಷ ಇದುವರೆಗೆ 30 ಆಮೆಗಳ ಸಾವಿರಕ್ಕೂ ಅಧಿಕ ಮೊಟ್ಟೆಗಳನ್ನು ಸಂರಕ್ಷಿಸಲಾಗಿದೆ. ಈ ವರ್ಷ ಮರಿಯಾಗಿ ಹೊರಗೆ ಬಂದ ನಾಲ್ಕನೇ ಆಮೆಯ ಮೊಟ್ಟೆಗಳು ಇವಾಗಿವೆ.

    ಸಂರಕ್ಷಿತ ಜೀವಿ ಆಲಿವ್ ರಿಡ್ಲಿ: ಆಲಿವ್ ರಿಡ್ಲಿ ಕಡಲಾಮೆಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅನುಬಂಧ 1 ರಲ್ಲಿ ಸಂರಕ್ಷಿತ ಜೀವಿಗಳಾಗಿವೆ. ಇವು ಸಮುದ್ರದಲ್ಲಿ ಸಾವಿರಾರು ಕಿಮೀ ಸಂಚರಿಸಿದರೂ, ಮೊಟ್ಟೆ ಇಡಲು ನಿಗದಿತ ಸ್ಥಳವನ್ನು ಗುರುತಿಸಿಕೊಂಡು ಪ್ರತಿ ಬಾರಿಯೂ ಅದೇ ಸ್ಥಳಕ್ಕೆ ಆಗಮಿಸುತ್ತವೆ. ಅಂಥ ಅಪರೂಪದ ಸ್ಥಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಡಲ ತೀರಗಳೂ ಸೇರಿವೆ ಎಂಬುದೆ ವಿಶೇಷ. ತಾಯಿ ಆಮೆ ದಡಕ್ಕೆ ಬಂದು ಮರಳಿನಲ್ಲಿ ಹೊಂಡ ತೋಡಿ ಮೊಟ್ಟೆ ಇಡುತ್ತದೆ. ಆದರೆ, ಅವು ಮರಿಯಾಗುವವರೆಗೂ ಕಾಯದೆ ತನ್ನ ಪಾಡಿಗೆ ಸಮುದ್ರಕ್ಕೆ ಹೊರಟು ಹೋಗುತ್ತದೆ. ಹೀಗೆ, ತಾಯಿಯಿಲ್ಲದ ತಬ್ಬಲಿಗಳಾದ ಈ ಮೊಟ್ಟೆಗಳನ್ನು ನಾಯಿಗಳು, ಹಾವು ಅಷ್ಟೇ ಏಕೆ ಮನುಷ್ಯರು ತಿನ್ನುತ್ತಿದ್ದರು. ಹೀಗಾಗಿ ಅರಣ್ಯ ಇಲಾಖೆ ಅದನ್ನು ಸಂರಕ್ಷಿಸುವ ಕಾರ್ಯದಲ್ಲಿ ತೊಡಗಿದೆ. ಒಂದು ಹೆಣ್ಣು ಆಮೆ ಒಂದು ವರ್ಷ 45ರಿಂದ 170 ರವರೆಗೂ ಮೊಟ್ಟೆ ಇಡುತ್ತದೆ. ಅದಕ್ಕೆ ವಯಸ್ಸಾದಂತೆ ಇಡುವ ಮೊಟ್ಟೆಗಳ ಸಂಖ್ಯೆಯೂ ಹೆಚ್ಚುತ್ತದೆ ಎನ್ನುತ್ತಾರೆ ಆರ್​ಎಫ್​ಒ ಪ್ರಮೋದ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts