More

    ಕುತೂಹಲ ಸೃಷ್ಟಿಸಿದ ಕಡಲ ಆಮೆ ಮೊಟ್ಟೆ !

    ಸುಭಾಸ ಧೂಪದಹೊಂಡ ಕಾರವಾರ
    ಹೊನ್ನಾವರ ಕಾಸರಕೋಡು ತೀರದಲ್ಲಿ ಆಮೆಯೊಂದು ಮೊಟ್ಟೆ ಇಟ್ಟಿರುವುದು ಈಗ ಹಿರಿಯ ಅರಣ್ಯ ಅಧಿಕಾರಗಳ ಕಿವಿ ನೆಟ್ಟಗಾಗುವಂತೆ ಮಾಡಿದೆ. ಆಮೆ ಮೊಟ್ಟೆ ಇಡುವ ಸ್ಥಳಗಳ ಬಗ್ಗೆ ದಾಖಲೆ ಹುಡುಕುವಂತೆ ಮಾಡಿದೆ.

    ಹೌದು, ಕಾಸರಕೋಡಿನಲ್ಲಿ ಆಮೆ ಮೊಟ್ಟೆ ಇಟ್ಟ ವಿಚಾರದ ಬಗ್ಗೆ ಪರಿಶೀಲಿಸುವಂತೆ ಕೆನರಾ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ಸಿಸಿಎಫ್)ಅಧೀನ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಹೊನ್ನಾವರ ಡಿಎಫ್​ಇ ಈ ಸಂಬಂಧ ವರದಿಯೊಂದನ್ನೂ ನೀಡಿದ್ದಾರೆ. ಅದರ ಕುತೂಹಲಕಾರಿ ವಿವರ ಇಲ್ಲಿದೆ.

    ಏಕಿಷ್ಟು ಮಹತ್ವ?: ಹೊನ್ನಾವರ ತೀರದಲ್ಲಿ ಆಮೆ ಮೊಟ್ಟೆ ಇಡುವುದು ವಿಶೇಷವೇನಲ್ಲ. ಪ್ರತಿ ವರ್ಷ ಚಳಿಗಾಲದಲ್ಲಿ ಕುಮಟಾ ಧಾರೇಶ್ವರದಿಂದ ಹೊನ್ನಾವರದ ಕಾಸರಕೋಡಿನಾಚೆಯವರೆಗೂ ಆಲಿವ್ ರೆಡ್ಲಿ ಎಂಬ ಪ್ರಭೇದದ ಕಡಲ ಆಮೆಗಳು ಬಂದು ಮೊಟ್ಟೆ ಇಡುತ್ತವೆ. ಹಲವು ವರ್ಷಗಳಿಂದ ಅರಣ್ಯ ಇಲಾಖೆಯು ಸ್ಥಳೀಯ ಮೀನುಗಾರರ ಸಹಕಾರದಲ್ಲಿ ಮೊಟ್ಟೆಗಳ ಸಂರಕ್ಷಣಾ ಕಾರ್ಯ ಮಾಡಿಕೊಂಡು ಬಂದಿದೆ. ಆದರೆ, ಕಾಸರಕೋಡಿನಲ್ಲಿ ಖಾಸಗಿ ಕಂಪನಿಯೊಂದು ಬಂದರು ನಿರ್ವಣಕ್ಕೆ ಮುಂದಾಗಿರುವುದು ಈ ಬಾರಿ ಆಮೆ ಮೊಟ್ಟೆಯ ವಿಚಾರ ಗಂಭೀರ ಚರ್ಚೆಗೆ ಕಾರಣವಾಗಿದೆ. ಕಾಸರಕೋಡು ಬಳಿ ಹೊನ್ನಾವರ ಪೋರ್ಟ್ ಪ್ರೖೆವೇಟ್ ಲಿಮಿಟೆಡ್ ಎಂಬ ಕಂಪನಿ ಬಂದರು ನಿರ್ವಣಕ್ಕೆ ಅಗತ್ಯ ಅನುಮತಿ ಪಡೆದು ಕೆಲಸ ಪ್ರಾರಂಭಿಸಿದೆ. ಅದನ್ನು ಸ್ಥಳೀಯ ಮೀನುಗಾರರು ಎರಡು ವರ್ಷದಿಂದ ವಿರೋಧಿಸಿ ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಹೈಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನೂ ಸಲ್ಲಿಸಿದ್ದರು. ಬಂದರು ನಿರ್ವಣಕ್ಕೆ ಯೋಜಿತ ಸ್ಥಳ ಆಮೆ ಮೊಟ್ಟೆ ಇಡುವ ಸೂಕ್ಷ್ಮ ಜಾಗವಾಗಿದೆ. ನದಿಯಿಂದ ಹರಿದು ಬಂದ ಮರಳು ಶೇಖರಣೆಯಾಗಿ ನಿರ್ವಣವಾದ ಸ್ಥಳವಾಗಿದೆ. ಜಾಗಕ್ಕೆ ಮೂಲ ಸರ್ವೆ ನಂಬರ್ ಕೂಡ ಇಲ್ಲ. ಇದರಿಂದ ಬಂದರು ನಿರ್ವಣಕ್ಕೆ ಅವಕಾಶ ನೀಡಬಾರದು ಎಂದು ವಾದಿಸಿದ್ದರು. ಹೈಕೋಟ್ ಈ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಚೆನ್ನೈನ ನ್ಯಾಷನಲ್ ಸೆಂಟರ್ ಫಾರ್ ಸಸ್ಟೆನೆಬಲ್ ಕೋಸ್ಟಲ್ ಮ್ಯಾನೇಜ್​ವೆುಂಟ್(ಎನ್​ಸಿಎಸ್​ಸಿಎಂ) ಎಂಬ ಸರ್ಕಾರಿ ಸ್ವಾಮ್ಯದ ಸಂಸ್ಥೆಗೆ ಸೂಚಿಸಿತ್ತು.

    ದಾಖಲೆ ಕೊಟ್ಟಿಲ್ಲ ಎಂದ ಅರಣ್ಯ ಇಲಾಖೆ:

    ಎನ್​ಸಿಎಸ್​ಸಿಎಂ ತಜ್ಞರು ಸ್ಥಳ ಪರಿಶೀಲನೆ ನಡೆಸಿ, ಬಂದರು ನಿರ್ವಣಕ್ಕೆ ಯೋಜಿತ ಸ್ಥಳದಲ್ಲಿ ಆಮೆಗಳ ಚಿಪ್ಪು, ಮೂಳೆ ಮುಂತಾದ ಯಾವುದೇ ಕುರುಹು ಅಥವಾ ಆಮೆಗಳ ಮೊಟ್ಟೆಗಳು ಕಂಡುಬಂದಿಲ್ಲ. ಅರಣ್ಯ ಇಲಾಖೆಯಿಂದ 2015 ರಿಂದ 21 ರವರೆಗೆ ಪಡೆದ ದಾಖಲೆಗಳಲ್ಲೂ ಈ ಜಾಗದಲ್ಲಿ ಆಮೆ ಮೊಟ್ಟೆ ಇಟ್ಟ ಕುರುಹುಗಳಿಲ್ಲ ಎಂದು ಹೈಕೋರ್ಟ್​ಗೆ ವರದಿ ನೀಡಿದ್ದರು.

    ವರದಿಯ ಆಧಾರದ ಮೇಲೆ ಹೈಕೋರ್ಟ್ ಮೀನುಗಾರರ ಪಿಐಎಲ್ ತಿರಸ್ಕಾರ ಮಾಡಿತ್ತು. ಆದರೆ, ವಾರದ ಹಿಂದೆ ಬಂದರು ನಿರ್ವಣಕ್ಕೆ ಯೋಜಿತ ಸ್ಥಳದ ಅತಿ ಸಮೀಪದಲ್ಲೇ ಕಡಲ ಆಮೆಯೊಂದು ಬಂದು ಮೊಟ್ಟೆ ಇಟ್ಟಿದೆ.

    ಇದು ಎನ್​ಸಿಎಸ್​ಸಿಎಂ ವರದಿಯ ಬಗ್ಗೆ ಅನುಮಾನ ಮೂಡುವಂತೆ ಮಾಡಿದೆ. ಸ್ಥಳೀಯ ಮೀನುಗಾರ ಗಣಪತಿ ಈಶ್ವರ ತಾಂಡೇಲ ಎಂಬುವವರು ಕೆನರಾ ಸಿಸಿಎಫ್​ಗೆ ಈ ಸಂಬಂಧ ಪತ್ರ ಬರೆದು, ಅರಣ್ಯ ಇಲಾಖೆ ಆಮೆ ಮೊಟ್ಟೆ ಇಡುವ ಸ್ಥಳವನ್ನು ತಪ್ಪಾಗಿ ಗುರುತಿಸಿದೆ ಎಂದು ದೂರಿದ್ದರು.

    ದೂರಿನ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಸಿಸಿಎಫ್ ಅವರು ಹೊನ್ನಾವರ ಡಿಎಫ್​ಒಗೆ ಸೂಚನೆ ನೀಡಿದ್ದರು. ಹೊನ್ನಾವರ ಅರಣ್ಯಾಧಿಕಾರಿಗಳು ಸಿಸಿಎಫ್ ಅವರಿಗೆ ಪತ್ರ ಬರೆದು, ಎನ್​ಸಿಎಸ್​ಸಿಎಂನವರು ನಮ್ಮ ಬಳಿ ಆಮೆ ಮೊಟ್ಟೆ ಇಡುವ ಸ್ಥಳಗಳ ಬಗ್ಗೆ ಯಾವುದೇ ದಾಖಲೆಗಳನ್ನು ಪಡೆದುಕೊಂಡಿಲ್ಲ ಎಂದು ತಿಳಿಸಿದ್ದಾರೆ.

    ಆ ಮೂಲಕ ಪ್ರಕರಣಕ್ಕೆ ಅಚ್ಚರಿಯ ತಿರುವು ನೀಡಿದ್ದಾರೆ. ಈಗ ಅರಣ್ಯ ಇಲಾಖೆ ತಪು್ಪ ಮಾಹಿತಿ ನೀಡುತ್ತಿದೆಯೇ? ಅಥವಾ ಎನ್​ಸಿಎಂಎಸ್ ನೀಡಿದ ಮಾಹಿತಿ ತಪ್ಪೇ ಎಂಬ ವಿಚಾರ ಚರ್ಚೆಗೆ ಕಾರಣವಾಗಿದೆ.

    ಆಲಿವ್ ರೆಡ್ಲಿ ಆಮೆಗಳು ಪ್ರತಿ ವರ್ಷ ಒಂದೇ ಪ್ರದೇಶಕ್ಕೆ ಬಂದು ಮೊಟ್ಟೆ ಇಟ್ಟು ಹೋಗುತ್ತವೆ. ದಾಖಲೆಗಳು ತಪ್ಪಬಹುದು. ಆದರೆ, ಆಮೆ ಮೊಟ್ಟೆ ಇಡುವ ಜಾಗ ತಪ್ಪದು. ಆಮೆ ಮೊಟ್ಟೆ ಕಂಡಿಲ್ಲ ಎಂದು ಎನ್​ಸಿಎಸ್​ಸಿಎಂ ನೀಡಿದ್ದ ವರದಿ ತಪ್ಪು ಎಂದು ಅರಣ್ಯ ಇಲಾಖೆಯೇ ಹೇಳಿದಂತಾಗಿದೆ.
    | ಪ್ರಕಾಶ ಮೇಸ್ತ ಪರಿಸರ ವಿಜ್ಞಾನಿ

    ಹೊನ್ನಾವರ ಅರಣ್ಯ ವಿಭಾಗದಲ್ಲಿ 2012-13 ನೇ ಸಾಲಿನಿಂದ 2021 ರವರೆಗೆ ಕಡಲಾಮೆಗಳ ಮೊಟ್ಟೆಗಳು ದೊರೆತ ಸ್ಥಳದ ಬಗ್ಗೆ ನಮೂದಿಸಿದ ಜಿಪಿಎಸ್ ದತ್ತಾಂಶವನ್ನು ಅವರ ಸೂಚನೆಯ ಮೇರೆಗೆ ಕೆನರಾ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸಲ್ಲಿಸಿದ್ದೇವೆ.
    | ಕೆ.ಗಣಪತಿ ಡಿಎಫ್​ಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts