More

    ಬಂದರಿನಲ್ಲಿ ರಡಾರ್ ಸಾಧನ ಅಳವಡಿಕೆ

    ಸುಭಾಸ ಧೂಪದಹೊಂಡ ಕಾರವಾರ
    ಇಲ್ಲಿನ ಬಂದರಿನ ಭದ್ರತೆ ಹಾಗೂ ಹಡಗುಗಳ ಸುಗಮ ಸಂಚಾರಕ್ಕೆ ಅನುಕೂಲವಾಗಲು ಅತ್ಯಾಧುನಿಕ ರಡಾರ್ ತಂತ್ರಜ್ಞಾನ ಆಧಾರಿತ ಎಐಎಸ್ ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದೆ.
    ಮೆರಿಟೈಮ್ ಬೋರ್ಡ್‌ನಿಂದ ಅಂದಾಜು 50 ಲಕ್ಷ ರೂ. ವೆಚ್ಚದ ಟೆಂಡರ್ ಪಡೆದ ಅಲ್ಕೋ ಮರೈನ್ ಸರ್ವೀಸ್ ಪ್ರೈ.ಲಿ ಎಂಬ ಕಂಪನಿ ಈ ವ್ಯವಸ್ಥೆಯನ್ನು ಇಲ್ಲಿನ ಅಲಿಗದ್ದಾ ಬಾವುಟೆಕಟ್ಟೆಯ ಟವರ್ ಮೇಲೆ ಈಗಾಗಲೇ ಅಳವಡಿಸಿದೆ. ಮೆರಿಟೈಮ್ ಬೋರ್ಡ್ ಅಧಿಕಾರಿಗಳಿಗೆ ತರಬೇತಿ ನೀಡಿದ ನಂತರ ಒಂದೆರಡು ತಿಂಗಳಲ್ಲೇ ಈ ವ್ಯವಸ್ಥೆಗೆ ಚಾಲನೆ ದೊರೆಯಲಿದೆ.
    ಏನಿದು ಎಐಎಸ್ ..?
    ಸೆಟಲೈಟ್ ಆಧಾರಿತ ಸಂವಹನ ವ್ಯವಸ್ಥೆ ಇದಾಗಿದ್ದು, ಆಟೊಮ್ಯಾಟಿಕ್ ಐಡೆಂಟಿಫಿಕೇಷನ್ ಸಿಸ್ಟಂ ಎಂದು ಕರೆಯಲಾಗುತ್ತದೆ. ವಾಣಿಜ್ಯ ಹಾಗೂ ನೌಕಾ ಹಡಗುಗಳಲ್ಲಿ ಈ ವ್ಯವಸ್ಥೆ ಇರುತ್ತದೆ. ಇದರಿಂದ ಹಡಗುಗಳಿಂದ ಹಡಗಿಗೆ ಮತ್ತು ಹಡಗುಗಳಿಂದ ದಡಕ್ಕೂ ಸಂದೇಶ ಕಳಿಸಬಹುದು. ರಡಾರ್ ಎಂಬ ಸಾಧನ ಅಳವಡಿಸಲಾಗುತ್ತಿದ್ದು, ಅದು ಸಮುದ್ರದ ಮಾಹಿತಿಯನ್ನು ಕಲೆ ಹಾಕುತ್ತದೆ. ಈ ಎಐಎಸ್ ವ್ಯವಸ್ಥೆಯ ಮೂಲಕ ದಡದಿಂದ ಸಮುದ್ರದ 30 ಕಿಮೀ ವ್ಯಾಪ್ತಿಯಲ್ಲಿ ಓಡಾಡುವ ಹಡಗು, ಸಣ್ಣ ದೋಣಿಗಳ ಮಾಹಿತಿಯನ್ನು ಕುಳಿತಲ್ಲಿಂದಲೇ ಪಡೆದುಕೊಳ್ಳಬಹುದು. ಅಲ್ಲದೆ, ಈ ವ್ಯವಸ್ಥೆಯು ಸಮುದ್ರದಾಳದ ಜಿಪಿಎಸ್ ಆಧಾರಿತ ನೇವಿಗೇಷನ್ (ನೌಕಾಯಾನ) ನಕ್ಷೆ ಒದಗಿಸಲಿದೆ ಇದರಿಂದ ಹಡುಗಳಿಗೆ ಯಾವುದೇ ಹಾನಿಯಾಗದಂತೆ ಬಂದರಿನ ದಕ್ಕೆಗೆ ತಂದು ನಿಲ್ಲಿಸುವುದು ಹಾಗೂ ಆಳ ಸಮುದ್ರಕ್ಕೆ ಕಳಿಸಬಹುದಾಗಿದೆ. ಅಲ್ಲದೆ, ಹಡಗುಗಳ ಸಂಚಾರದ ನಿಖರ ವೇಗದ ಮಾಹಿತಿಯೂ ಸಿಗುವುದರಿಂದ ಸಂಭಾವ್ಯ ಅಪಘಾತಗಳನ್ನೂ ತಪ್ಪಿಸಬಹುದು ಎಂಬುದು ಬಂದರು ಅಧಿಕಾರಿಗಳ ಅಭಿಪ್ರಾಯ.
    ಸೂಕ್ಷ್ಮ ಪ್ರದೇಶ:
    ನೌಕಾನೆಲೆ ಸಮೀಪದಲ್ಲೇ ಇರುವುದರಿಂದ ಕಾರವಾರ ಈಗ ಸೂಕ್ಷ್ಮ ಪ್ರದೇಶವಾಗಿದೆ. ಬಂದರಿನ ಹಡಗುಗಳ ಹಾಗೂ ದೋಣಿಗಳ ಸಂಚಾರದ ಮೇಲೆ ನಿಗಾ ಇಡಬಹುದಾದ ವ್ಯವಸ್ಥೆ ಇದಾಗಿದ್ದು, ಭದ್ರತೆಯ ದೃಷ್ಟಿಯಿಂದಲೂ ಇದು ಅತಿ ಮುಖ್ಯವಾಗಿದೆ ಎನ್ನುತ್ತಾರೆ ಬಂದರು ಅಧಿಕಾರಿಗಳು.

    ಎಐಎಸ್ ಅಳವಡಿಕೆ ಕಾರ್ಯ ಈಗಾಗಲೇ ಮುಕ್ತಾಯವಾಗಿದೆ. ಅದರ ಬಳಕೆಯ ಬಗ್ಗೆ ತರಬೇತಿ ಪಡೆದ ನಂತರ ವ್ಯವಸ್ಥೆಯನ್ನು ಪ್ರಾರಂಭಿಸಲಾಗುವುದು. ವಾಣಿಜ್ಯ ಹಡಗುಗಳನ್ನು ನಿರ್ದಿಷ್ಟವಾಗಿ ದಕ್ಕೆಗೆ ತಂದು ನಿಲ್ಲಿಸುವುದು ಈ ವ್ಯವಸ್ಥೆಯಿಂದ ಸುಲಭವಾಗಲಿದೆ.
    ಸುರೇಶ ಶೆಟ್ಟಿ ಆಡಳಿತಾಧಿಕಾರಿ ಮೆರಿಟೈಮ್ ಬೋರ್ಡ್, ಕಾರವಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts