More

    ಸಮುದ್ರ ಸಂಪನ್ಮೂಲ ಸಂಶೋಧನಾ ಕೇಂದ್ರ

    ಹರೀಶ್ ಮೋಟುಕಾನ, ಮಂಗಳೂರು
    ಸಮುದ್ರ ಸಂಪನ್ಮೂಲಗಳ ಸಂಶೋಧನೆಗೆ ಸರ್ಕಾರ ಮಂಗಳೂರಿನಲ್ಲಿ ಬಯೋಟೆಕ್ ಇನವೇಶನ್ ಸೆಂಟರ್ ಫಾರ್ ಅಕ್ವಾಮರೈನ್ ಸ್ಥಾಪಿಸಲು ಮುಂದಾಗಿದೆ.
    ಮೀನುಗಾರಿಕೆ ಮಾತ್ರ ನಡೆಯುವ ಅರಬ್ಬಿ ಸಮುದ್ರದಲ್ಲಿ ಭವಿಷ್ಯದಲ್ಲಿ ಔಷಧ ಉತ್ಪನ್ನ, ಕೈಗಾರಿಕೆಗಳಿಗೆ ಅಗತ್ಯವಾದ ರಾಸಾಯನಿಕ ಮತ್ತು ಆಹಾರ ವಸ್ತು ಉತ್ಪಾದನೆಯೂ ಇದರಿಂದಾಗಿ ಸಾಧ್ಯವಾಗಲಿದೆ. 6 ಕೋಟಿ ರೂ.ವೆಚ್ಚದಲ್ಲಿ ಈ ಕೇಂದ್ರ ಸ್ಥಾಪಿಸಲು ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಉಲ್ಲೇಖಿಸಿದ್ದು, ಇದು ಸ್ಥಾಪನೆಯಾದರೆ ಕರಾವಳಿಯಲ್ಲಿ ಮತ್ತಷ್ಟು ಹೂಡಿಕೆ, ಉದ್ಯೋಗ ಅವಕಾಶಗಳು ತೆರೆದುಕೊಳ್ಳಲಿವೆ.

    ಕೇಂದ್ರ ಸರ್ಕಾರದ ಭೂ ವಿಜ್ಞಾನ ಸಚಿವಾಲಯ ಪ್ರಕಟಿಸಿರುವ ಬ್ಲೂ ಇಕಾನಮಿ ನೀತಿಯಲ್ಲಿ ಪ್ರಸ್ತಾವವಾಗಿರುವ ಮರೈನ್ ಬಯೋಟೆಕ್ ಕೇಂದ್ರದ ಮಾದರಿಯಲ್ಲಿ ಮಂಗಳೂರು ಮೀನುಗಾರಿಕಾ ಕಾಲೇಜಿನಲ್ಲಿ ಕೇಂದ್ರ ನಿರ್ಮಾಣವಾಗಲಿದೆ. ವಿದೇಶಗಳಲ್ಲಿ ಕಡಲಿನ ಜೈವಿಕ ಅಂಶಗಳನ್ನು ಸಂಶೋಧಿಸಿ ಹೊಸ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಅಲ್ಲಿ ಔಷಧ ಸಹಿತ ವಿವಿಧ ಕ್ಷೇತ್ರಗಳಲ್ಲಿ ಸಮುದ್ರ ಉತ್ಪನ್ನಗಳ ಪಾಲು ಗಮನಾರ್ಹ ಪ್ರಮಾಣದಲ್ಲಿದೆ. ಆದರೆ ಭಾರತದಲ್ಲಿ ಈ ಕುರಿತ ಸಂಶೋಧನೆ ದೊಡ್ಡ ಮಟ್ಟದಲ್ಲಿಲ್ಲ.

    ಸಮುದ್ರದ ಸಂಪನ್ಮೂಲಗಳ ಕುರಿತ ಸಂಶೋಧನೆಗೆ ಗುಜರಾತ್, ಮಹಾರಾಷ್ಟ್ರಗಳಲ್ಲಿ ಕೇಂದ್ರಗಳಿವೆ. ಕೇರಳದಲ್ಲಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅರ್ತ್ ಸೈನ್ಸ್ ಸ್ಟಡೀಸ್ ಇದೆ. ತಮಿಳುನಾಡು, ಆಂಧ್ರಪ್ರದೇಶಗಳಲ್ಲೂ ಇವೆ. ಕರ್ನಾಟಕದಲ್ಲಿ ಸಮುದ್ರ ಸಂಪನ್ಮೂಲಗಳ ಸಂಶೋಧನೆಗೆ ಸೂಕ್ತ ಕೇಂದ್ರ ಇಲ್ಲ. ಪ್ರಸ್ತಾವಿತ ಕೇಂದ್ರ ಈ ಕೊರತೆಯನ್ನು ನೀಗಿಸಲಿದೆ.

    ಶೀಘ್ರ ಸಾಕಾರ: ಈ ಕೇಂದ್ರ ಶೀಘ್ರ ಸಾಕಾರವಾಗುವ ನಿರೀಕ್ಷೆ ಇದೆ. ಎರಡು ದಿನಗಳ ಹಿಂದೆ ಸರ್ಕಾರದ ಮಟ್ಟದಲ್ಲಿ ಸಭೆ ನಡೆದು, ಯೋಜನೆಗೆ ಸಂಬಂಧಿಸಿ ವಿಸ್ತೃತ ಮಾಹಿತಿ ಪಡೆದುಕೊಂಡಿದ್ದಾರೆ. ಈ ತಿಂಗಳ ಅಂತ್ಯದಲ್ಲಿ ಕೇಂದ್ರಕ್ಕೆ ಬೇಕಾದ ಪರಿಕರಗಳು ಬರುವ ನಿರೀಕ್ಷೆ ಇದೆ. ಇದಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಮೀನುಗಾರಿಕಾ ಕಾಲೇಜಿನ ಡೀನ್ ಡಾ.ಸೆಂಥಿಲ್‌ವೇಲ್ ತಿಳಿಸಿದ್ದಾರೆ.

    ಇದರಿಂದ ಏನು ಲಾಭ?: ಸೀ ವೀಡ್ ಮೂಲಕ ಹೊಸ ಉತ್ಪನ್ನಗಳನ್ನು ಸೃಷ್ಟಿಸುವುದು, ಕೈಗಾರಿಕೆಗಳಿಗೆ ಬಳಸುವ ಹಲವು ರಾಸಾಯನಿಕಗಳ ಸಂಶೋಧನೆ, ಉತ್ಪಾದನೆ, ಪ್ರಾಣಿ ಆಹಾರ ಸಂಶೋಧನೆ, ಉತ್ಪಾದನೆ, ಸಮುದ್ರ ಪಾಚಿಯಿಂದ ಬಯೋ ಇಂಧನ ಉತ್ಪಾದನೆ ಕುರಿತ ಸಂಶೋಧನೆ, ಜೈವಿಕ ತಂತ್ರಜ್ಞಾನ ಬಳಕೆ, ಉಪ್ಪು ನೀರು ಸಂಸ್ಕರಣೆ ಈ ಕೇಂದ್ರದಿಂದ ಸಾಧ್ಯವಾಗಲಿದೆ.

    ಸಮುದ್ರದ ಸಂಪನ್ಮೂಲ ಬಳಸಿಕೊಂಡು ಕರಾವಳಿಯಲ್ಲಿ ಹೊಸ ಅನ್ವೇಷಣೆ ಮತ್ತು ಉತ್ಪಾದನೆಗೆ ಅವಕಾಶವಿದೆ. ವಿದೇಶದಲ್ಲಿ ಔಷಧ ಬಳಕೆಗೂ ಜಲಸಂಪನ್ಮೂಲ ಬಳಸುತ್ತಿದ್ದು, ರಾಜ್ಯದಲ್ಲಿಯೂ ಈ ಬಗೆಗಿನ ಸಂಶೋಧನೆ ಅಗತ್ಯವಾಗಿ ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಕೇಂದ್ರ ಸ್ಥಾಪನೆಗೆ ಮುಂದಾಗಿದೆ.

    ಡಾ.ಸೆಂಥಿಲ್‌ವೇಲ್ ಡೀನ್ ಮೀನುಗಾರಿಕಾ ಕಾಲೇಜು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts