More

    ಗುಜರಿ ವಸ್ತು ಬಳಸಿ ಕೃಷಿ

    ಅನ್ಸಾರ್ ಇನೋಳಿ ಉಳ್ಳಾಲ

    ನಗರ ಪ್ರದೇಶದಲ್ಲಿ ಕೃಷಿ ಭೂಮಿ ಕೊರತೆ ಜನರನ್ನು ಕೃಷಿಯತ್ತ ಆಕರ್ಷಿತಗೊಳಿಸುವ ಯೋಜನೆಗೆ ಉಳ್ಳಾಲ ನಗರಸಭೆ ಮುಮದಾಗಿದೆ. ಗುಜರಿ ವಸ್ತುಗಳನ್ನೇ ಬಳಸಿ ಉಳ್ಳಾಲ ನಗರಸಭೆ ನೇತೃತ್ವದಲ್ಲಿ ತರಕಾರಿ ಬೆಳೆಯಲು ಆದ್ಯತೆ ನೀಡಲಾಗುತ್ತಿದೆ.

    ಕೆಲವು ವರ್ಷಗಳ ಹಿಂದೆ ಕೋಟೆಪುರ ಟಿಪ್ಪು ಸುಲ್ತಾನ್ ಶಾಲೆ ಮುಖ್ಯ ಶಿಕ್ಷಕ ಎಂ.ಎಚ್.ಮಲಾರ್ ಮುತುವರ್ಜಿಯಲ್ಲಿ ಟೆರೇಸ್‌ನಲ್ಲಿ ತರಕಾರಿ ಬೆಳೆದು ಮಧ್ಯಾಹ್ನದೂಟಕ್ಕೆ ಬಳಸುವ ಯೋಜನೆ ಆರಂಭಿಸಲಾಗಿತ್ತು. ಬಳಿಕ ಹಳೇಕೋಟೆ ಸಯ್ಯಿದ್ ಮದನಿ ಶಾಲೆಯ ಟೆರೇಸ್‌ನಲ್ಲಿ ಭತ್ತ ಬೆಳೆಯಲಾಗಿತ್ತು. ಪ್ರಸ್ತುತ ರಾಯಪ್ಪ ಪೌರಾಯುಕ್ತರಾಗಿ ಬಂದ ಬಳಿಕ ಮನೆಯಂಗಳದಲ್ಲೂ ತರಕಾರಿ ಬೆಳೆಯುವ ಟ್ರೆಂಡ್ ಶುರುವಾಗಿದೆ.

    ಗುಜರಿಯಲ್ಲಿ ಸಿಗುವ ಫ್ರೀಜರ್ ಬಳಸಿ ಅದರಲ್ಲೇ ತರಕಾರಿ ಬೆಳೆಯುವ ಯೋಜನೆ ಉಳ್ಳಾಲ ವ್ಯಾಪ್ತಿಯಲ್ಲಿ ನಡೆಯುತ್ತಿದೆ. ಮೊದಲ ಪ್ರಯೋಗ ನಗರಸಭೆ ಆವರಣದಲ್ಲೇ ನಡೆದಿದ್ದು, ಫಲವೂ ಬಂದಿದೆ. ಮನೆಗಳಿಗೂ ಈ ಯೋಜನೆ ವಿಸ್ತರಣೆಯಾಗಿದೆ. ತರಕಾರಿ ಬೆಳೆಯುವ ಉತ್ಸಾಹಿಗಳಿಗೆ ನಗರಸಭೆಯಿಂದ ವ್ಯವಸ್ಥೆ ಮಾಡಿ ಕೊಡಲಾಗುತ್ತಿದೆ.

    ಒಣ ಕಸ ನಿರ್ವಹಣೆ ಒಪ್ಪಂದ
    ನಗರಸಭಾ ವ್ಯಾಪ್ತಿಯಲ್ಲಿ ಹಸಿಕಸ ನಿರ್ವಹಣೆಗೆ ತರಕಾರಿ ಕೃಷಿ ಯೋಜನೆ ಪ್ರಯೋಗಿಸಲಾಗಿದೆ. ಇದೇ ವೇಳೆ ಒಣ ಕಸ ಸಂಗ್ರಹಿಸಿ ಸಂಪನ್ಮೂಲವಾಗಿಸಲು ಖಾಸಗಿ ಸಂಸ್ಥೆ ಮುಂದೆ ಬಂದಿದ್ದು ಈಗಾಗಲೇ ನಗರಸಭೆ ಜತೆ ಒಪ್ಪಂದ ಮಾಡಿಕೊಂಡಿದೆ. ಸಂಸ್ಥೆಯ ಪ್ರತಿನಿಧಿಗಳು ಎಲ್ಲ ಮನೆಗಳಿಗೆ ಭೇಟಿ ನೀಡಿ ಒಣ ಕಸ ಸಂಗ್ರಹಿಸಲಿದ್ದಾರೆ. ಈ ಯೋಜನೆ ಯಶಸ್ವಿಯಾದಲ್ಲಿ ಮುಂದಕ್ಕೆ ಉಳ್ಳಾಲದಲ್ಲಿ ಹಸಿ ಮತ್ತು ಒಣ ಕಸದ ಸಮಸ್ಯೆ ಇರದು. ತ್ಯಾಜ್ಯ ನಿರ್ವಹಣಾ ಘಟಕದ ಅವಶ್ಯಕತೆಯೂ ಇರದು.

    ನಗರಸಭಾ ವ್ಯಾಪ್ತಿಯ ಜಮೀನು ಇರುವ ಎಲ್ಲ ಮನೆಯಲ್ಲೂ ಹಸಿ ಕಸ ಬೇರ್ಪಡಿಸಿ ಸಾವಯವ ಗೊಬ್ಬರವಾಗಿ ಮಾರ್ಪಡಿಸಿ ತರಕಾರಿ ಬೆಳೆದರೆ ಆರೋಗ್ಯಕ್ಕೂ ಉತ್ತಮ. ಮೂಲದಿಂದಲೇ ತ್ಯಾಜ್ಯ ಸಮಸ್ಯೆ ನಿವಾರಿಸಲೂ ಸಾಧ್ಯ. ಈ ನಿಟ್ಟಿನಲ್ಲಿ ನಗರಸಭೆಯಿಂದ ಜಾಗೃತಿ ಮೂಡಿಸಲಾಗುತ್ತಿದೆ.
    ರಾಯಪ್ಪ
    ಪೌರಾಯುಕ್ತ, ಉಳ್ಳಾಲ ನಗರಸಭೆ

    ದರ್ಗಾ ವಠಾರದಲ್ಲೂ ತರಕಾರಿ ಬೀಜ ಹಾಕಲಾಗಿದೆ. ಖಾಲಿ ಜಮೀನಿನಲ್ಲಿ ಇನ್ನಷ್ಟು ಬೀಜ ಬಿತ್ತುವುದಾಗಿ ತಿಳಿಸಿರುವ ಪೌರಾಯುಕ್ತರು, ಗಿಡಗಳಿಗೆ ಭದ್ರತಾ ವ್ಯವಸ್ಥೆ ಮಾಡುವಂತೆ ಕೋರಿದ್ದಾರೆ. ಅವರ ಬೇಡಿಕೆಗೆ ಸ್ಪಂದಿಸಿ ತರಕಾರಿ ಕೃಷಿ ಯೋಜನೆಗೆ ಪ್ರೋತ್ಸಾಹ ನೀಡಲಾಗುವುದು.
    ಅಬ್ದುಲ್ ರಶೀದ್, ಉಳ್ಳಾಲ ದರ್ಗಾ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts