More

    ಹಸಿರು ದೀಪಾವಳಿ ; ಮಕ್ಕಳ ಮೂಲಕ ಜನಜಾಗೃತಿ

    ಕೋಲಾರ : ಭಾರತ್ ಸ್ಕೌಟ್ಸ್-ಗೈಡ್ಸ್-ಕರ್ನಾಟಕದಾದ್ಯಂತ ಮಕ್ಕಳಿಂದ ವಿವಿಧ ಚಟುವಟಿಕೆಗಳ ಮೂಲಕ ಪರಿಸರ ಸ್ನೇಹಿ ದೀಪಾವಳಿಗೆ ಜನಜಾಗೃತಿ ಮೂಡಿಸುವ ಕಾರ್ಯದಲ್ಲಿ ನಿರತವಾಗಿದೆ.

    ದೀಪಾವಳಿಗೆ ಪಟಾಕಿ ಸಿಡಿಸುವುದರಿಂದ ಮಾಲಿನ್ಯ ಉಂಟಾಗಿ ಕರೊನಾ ಸೋಂಕು ಉಲ್ಬಣಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪಟಾಕಿ ನಿಷೇಧಿಸಿ ಹಸಿರು ಪಟಾಕಿ ಮಾರಾಟಕ್ಕೆ ಅವಕಾಶ ನೀಡಿದೆ. ಆದರೆ ಸರ್ಕಾರಕ್ಕಿಂತ ಮುಂಚಿತವಾಗಿಯೇ ಸ್ಕೌಟ್ಸ್-ಗೈಡ್ಸ್ ಸಂಸ್ಥೆ ಪರಿಸರ ಸ್ನೇಹಿ ದೀಪಾವಳಿ ಆಚರಿಸುವ ನಿಟ್ಟಿನಲ್ಲಿ ಹಸಿರು ದೀಪಾವಳಿ ಸಪ್ತಾಹ ಹಮ್ಮಿಕೊಂಡಿದೆ.

    ಹಸಿರು ದೀಪಾವಳಿ ಆಚರಣೆಯಡಿ ಮಕ್ಕಳಿಗೆ ಆರು ಪ್ರಮುಖ ಚಟುವಟಿಕೆ ನೀಡಿದ್ದು, ಜಾಗೃತಿ ಮೂಡಿಸುವುದು, ಕೌಶಲ ಪ್ರತಿಭೆ ಹೊರಹೊಮ್ಮಿಸುವುದು, ಪ್ರೀತಿ, ಶಾಂತಿ ಸಾರುವುದು, ಗ್ರೀಟಿಂಗ್ಸ್ ಹಂಚುವುದು, ಇತರರ ಬಗೆಗೆ ಕಾಳಜಿ ವ್ಯಕ್ತಪಡಿಸುವುದು ಪ್ರಮುಖ ಆದ್ಯತೆಗಳಾಗಿವೆ.

    ಸಗಣಿ, ಮಣ್ಣು, ಅಕ್ಕಿಹಿಟ್ಟು ಹಾಗೂ ಅರಶಿಣ ಬಳಸಿ ಹಣತೆ ತಯಾರಿಕೆ, ವಿದ್ಯುತ್ ದೀಪ ಬದಲು ಪೇಪರ್‌ನಿಂದ ಆಕಾಶ ಬುಟ್ಟಿ ತಯಾರಿಸಿ ಬಳಸುವುದು ಹಾಗೂ ಅಕ್ಕಪಕ್ಕದವರಿಗೂ ತಯಾರಿಸಿ ನೀಡುವುದಕ್ಕೆ ಮತ್ತು ಸಾರ್ವಜನಿಕರು ಕೂಡ ಹಣತೆ, ಆಕಾಶಬುಟ್ಟಿ ತಯಾರಿಸುವಂತೆ ಪ್ರೇರೇಪಿಸಲಾಗುತ್ತಿದೆ.

    ದೀಪಾವಳಿ ಶುಭಾಶಯ ಕೋರಲು ಹಳೆಯ ಲಗ್ನಪತ್ರಿಕೆ ಇಲ್ಲವೇ ಡ್ರಾಯಿಂಗ್ ಶೀಟ್‌ನಿಂದ ಗ್ರೀಟಿಂಗ್ಸ್ ಕಾರ್ಡ್ ಬರೆದು ಬಂಧುಗಳು, ಸ್ನೇಹಿತರಿಗೆ ನೀಡುವುದು, ದೀಪಾವಳಿಗೆ ಪಟಾಕಿ ಬೇಡ, ದೀಪ ಬೆಳಗಿಸಿ, ಅಪ್ಪಾ ನನಗೆ ಪಟಾಕಿ ಖರೀದಿಸಿ ಕೊಡಬೇಡ, ದೀಪ ಬೆಳಗಿಸಿ, ಶಬ್ದವನ್ನಲ್ಲ ಎನ್ನುವುದು ಸೇರಿ ಇನ್ನಿತರ ಘೋಷ ವಾಕ್ಯ ಬರೆದು ಜನನಿಬಿಡ ಪ್ರದೇಶಗಳಲ್ಲಿ ಕರಪತ್ರ ವಿತರಣೆ, ಪೋಸ್ಟರ್ ಅಂಟಿಸುವುದು ಸಪ್ತಾಹದ ಕಾರ್ಯಚಟುವಟಿಕೆಗಳು.

    ಯಾವುದೇ ಕಾರಣಕ್ಕೂ ಪಟಾಕಿ ಬಳಸುವುದಿಲ್ಲ ಹಾಗೂ ಬಳಕೆಗೆ ಪ್ರೋತ್ಸಾಹಿಸುವುದಿಲ್ಲವೆಂದು ಕುಟುಂಬ ಸಮೇತ ಪ್ರತಿಜ್ಞಾವಿಧಿ ಸ್ವೀಕರಿಸುವುದು, ಅವಶ್ಯಕತೆ ಇರುವ ಬಡವರಿಗೆ ದೀಪಾವಳಿಗೆ ಸಿಹಿ ತಿಂಡಿ, ಬಟ್ಟೆ ಬರೆ, ಧವಸ ಧಾನ್ಯ ನೀಡುವ ಆಶಯದೊಂದಿಗೆ ಸಂಸ್ಥೆ ಹಸಿರು ದೀಪಾವಳಿಯ ಕಾರ್ಯಚಟುವಟಿಕೆಗಳಿಗೆ ಚಾಲನೆ ನೀಡಿದೆ.

    ಜಿಲ್ಲಾದ್ಯಂತ 250ಕ್ಕೂ ಹೆಚ್ಚು ಮಕ್ಕಳು, 40ಕ್ಕೂ ಹೆಚ್ಚು ಶಿಕ್ಷಕರು ಹಸಿರು ದೀಪಾವಳಿಯ ಸಕ್ರಿಯ ಚಟುವಟಿಕೆಗಳಲ್ಲಿ ತೊಡಗಿದ್ದು, ಮಣ್ಣು, ಸಗಣಿ ಬಳಸಿ ಹಣತೆ ತಯಾರಿಸುತ್ತಿದ್ದಾರೆ. ಗ್ರೀಟಿಂಗ್ಸ್ ಕಾರ್ಡ್ ಬರೆದು ಸ್ನೇಹಿತರು, ಬಂಧುಗಳಿಗೆ ವಿತರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಪಟಾಕಿ ಬೇಡ, ಶಬ್ದ ಬೇಡ ಎಂಬ ಘೋಷವಾಕ್ಯ ಬರೆದು ಜಾಗೃತಿ ಮೂಡಿಸುವ ಪ್ರಯತ್ನ ನಡೆಸುತ್ತಿದ್ದಾರೆ.

    ಕರೊನಾದಿಂದ ಶಾಲೆಗಳು ಆರಂಭವಾಗಿಲ್ಲ. ಮಕ್ಕಳನ್ನು ಕ್ರಿಯಾಶೀಲರನ್ನಾಗಿಡಲು ದೀಪಾವಳಿಗೆ 6 ಚಟುವಟಿಕೆ ನೀಡಲಾಗಿದೆ. ಹಸಿರು ದೀಪಾವಳಿ ಆಚರಿಸುವ ಜತೆಗೆ ಜನಜಾಗೃತಿ ಮೂಡಿಸುವುದು ಇದರ ಉದ್ದೇಶ. ಪಾಲ್ಗೊಂಡ ಎಲ್ಲ ಮಕ್ಕಳಿಗೂ ರಾಜ್ಯ ಸಂಸ್ಥೆಯಿಂದ ಪದಕ ಮತ್ತು ಪ್ರಮಾಣ ಪತ್ರ ನೀಡಲಾಗುವುದು.
    ವಿ. ಬಾಬು, ಸಂಘಟನಾ ಆಯುಕ್ತ, ಸ್ಕೌಟ್ಸ್-ಗೈಡ್ಸ್, ಕೋಲಾರ

    ಕರೊನಾದಿಂದ ಎಲ್ಲರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪಟಾಕಿ ಸಿಡಿಸುವುದರಿಂದ ಅನೇಕರು ದೃಷ್ಟಿ ಕಳೆದುಕೊಳ್ಳುತ್ತಿದ್ದಾರೆ. ಶಬ್ದ, ವಾಯು ಮಾಲಿನ್ಯ ತಪ್ಪಿಸಲು ಹಸಿರು ದೀಪಾವಳಿ ಆಚರಿಸಲು ಸಂಸ್ಥೆ ನೀಡಿರುವ ಎಲ್ಲ ಚಟುವಟಿಕೆಗಳಲ್ಲಿ ಖುಷಿಯಿಂದ ಪಾಲ್ಗೊಂಡಿದ್ದೇನೆ. ಗ್ರೀಟಿಂಗ್ಸ್, ಭಿತ್ತಿಫಲಕ ಸಿದ್ಧಪಡಿಸಿದ್ದೇನೆ.
    ತೇಜಸ್, ವಿಐಪಿ ಶಾಲೆ, ರೋಣೂರು ಶ್ರೀನಿವಾಸಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts