More

    ವಿಶ್ವದ ಅತಿದೊಡ್ಡ ಹಾವು ಹಸಿರು ಅನಕೊಂಡದ ಹೊಸ ಪ್ರಭೇದ ಕಂಡು ಅಚ್ಚರಿಗೀಡಾದ ಸಂಶೋಧಕರು!

    ಈ ಜಗತ್ತೇ ಒಂದು ಅಚ್ಚರಿಯ ತಾಣ. ಮನುಷ್ಯ ಇಂದಿಗೂ ಭೇದಿಸಲಾಗದ ಅದೆಷ್ಟೋ ರಹಸ್ಯಗಳು ಈ ವಿಶಾಲ ಪ್ರಪಂಚದಲ್ಲಿ ಅಡಗಿದೆ. ಒಂದೊಂದೆ ನಿಗೂಢಗಳು ಹೊರಬಂದಾಗ ಮೈ ರೋಮಾಂಚನ ಆಗುತ್ತದೆ. ಇದೀಗ ಅಂಥದ್ದೇ ನಿಗೂಢವೊಂದು ಬೆಳಕಿಗೆ ಬಂದಿದೆ. ವಿಶ್ವದ ಅತಿದೊಡ್ಡ ಉಷ್ಣವಲಯದ ಮಳೆಕಾಡು ಅಮೇಜಾನ್​ನಲ್ಲಿ ಹಸಿರು ಅನಕೊಂಡವನ್ನು​ ಅತ್ಯಂತ ಅಸಾಧಾರಣ ಮತ್ತು ನಿಗೂಢ ಪ್ರಾಣಿಗಳೆಂದು ಪರಿಗಣಿಸಲಾಗಿದೆ. ಇದೀಗ ಅನಕೊಂಡ ವಿಚಾರದಲ್ಲಿ ಅಚ್ಚರಿಯ ಸಂಗತಿಯೊಂದು ಹೊರಬಿದ್ದಿದೆ.

    ಹೌದು, ಹಸಿರು ಅನಕೊಂಡದಲ್ಲಿ ತಳೀಯವಾಗಿ ಎರಡು ವಿಭಿನ್ನ ಪ್ರಭೇದಗಳಿರುವುದು ಹೊಸ ಸಂಶೋಧನೆಯಲ್ಲಿ ಕಂಡುಬಂದಿದೆ. ಈ ಆಶ್ಚರ್ಯಕರ ಸಂಶೋಧನೆಯು ಕಾಡಿನ ಅಗ್ರ ಪರಭಕ್ಷಕವಾಗಿರುವ ಹಸಿರು ಅನಕೊಂಡ ಸಂರಕ್ಷಣೆಯಲ್ಲಿ ಹೊಸ ಅಧ್ಯಾಯವನ್ನು ತೆರೆದಿದೆ.

    ಅಂದಹಾಗೆ ವಿಶ್ವದ ಅತ್ಯಂತ ತೂಕದ ಮತ್ತು ಉದ್ದದ ಹಾವು ಎಂಬ ದಾಖಲೆಯು ಹಸಿರು ಅನಕೊಂಡ ಹೆಸರಿನಲ್ಲಿದೆ. ಈ ಹಾವುಗಳು ಹೆಚ್ಚಾಗಿ ದಕ್ಷಿಣ ಅಮೆರಿಕದ ತೇವ ಪ್ರದೇಶ ಮತ್ತು ನದಿಗಳನ್ನು ಕಂಡುಬರುತ್ತವೆ. ತಮ್ಮ ಮಿಂಚಿನ ವೇಗ ಮತ್ತು ದೊಡ್ಡ ದೊಡ್ಡ ಬೇಟೆಯನ್ನೂ ಬಹುಬೇಗ ಉಸಿರುಗಟ್ಟಿಸಿ, ಸಂಪೂರ್ಣವಾಗಿ ನುಂಗುವ ಸಾಮರ್ಥ್ಯಕ್ಕೆ ಹಸಿರು ಅನಕೊಂಡ ಹೆಸರುವಾಸಿಯಾಗಿದೆ.

    ಹವಾಮಾನ ಬದಲಾವಣೆ, ಆವಾಸಸ್ಥಾನದ ಅವನತಿ ಮತ್ತು ಮಾಲಿನ್ಯದಂತಹ ಬೆದರಿಕೆಗಳನ್ನು ನಿಯಂತ್ರಿಸಿ, ಪ್ರತಿಯೊಂದು ವಿಶಿಷ್ಟ ಪ್ರಭೇದಗಳಿಗೆ ಸಹಾಯ ಮಾಡಲು ಹಸಿರು ಅನಕೊಂಡಗಳ ಸಂರಕ್ಷಣಾ ಕಾರ್ಯತಂತ್ರಗಳನ್ನು ಈಗ ಮರು ಮೌಲ್ಯಮಾಪನ ಮಾಡಬೇಕಾಗಿದೆ. ಈ ವಿಚಾರದಲ್ಲಿ ತಡಮಾಡದೆ ಈ ಭೂಮಿ ಮೇಲಿನ ಪ್ರಾಣಿ ಮತ್ತು ಸಸ್ಯ ಪ್ರಭೇದಗಳ ವೈವಿಧ್ಯತೆಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವ ತುರ್ತು ಅಗತ್ಯವನ್ನು ಈ ಸಂಶೋಧನೆಗಳು ಎತ್ತಿ ತೋರಿಸಿದೆ.

    ಅಗ್ರ ಪರಭಕ್ಷಕ
    ಹಸಿರು ಅನಕೊಂಡ ಸೇರಿದಂತೆ ಐತಿಹಾಸಿಕವಾಗಿ ನಾಲ್ಕು ಅನಕೊಂಡ ಪ್ರಭೇದಗಳನ್ನು ಪತ್ತೆಹಚ್ಚಲಾಗಿದೆ. ಈ ಹಸಿರು ಅನಕೊಂಡಗಳು ಸರೀಸೃಪ ಪ್ರಪಂಚದ ನಿಜವಾದ ದೈತ್ಯ ಜೀವಿಗಳಾಗಿವೆ. ವಯಸ್ಸಾದ ಹೆಣ್ಣು ಅನಕೊಂಡ ಏಳು ಮೀಟರ್​ಗಿಂತಲೂ ಹೆಚ್ಚು ಉದ್ದ ಬೆಳೆಯುತ್ತವೆ ಮತ್ತು 250 ಕೆಜಿಗಿಂತ ಹೆಚ್ಚು ತೂಕವಿರುತ್ತವೆ. ಈ ಹಾವುಗಳು ಹೆಚ್ಚಾಗಿ ನೀರಿನಲ್ಲಿ ಚೆನ್ನಾಗಿ ಹೊಂದಿಕೊಳ್ಳುತ್ತವೆ. ಈ ಹಾವಿನಲ್ಲಿ ಮೂಗಿನ ಹೊಳ್ಳೆಗಳು ಮತ್ತು ಕಣ್ಣುಗಳು ತಲೆಯ ಮೇಲಿರುತ್ತವೆ. ಈ ಕಾರಣದಿಂದ ತಮ್ಮ ದೇಹದ ಉಳಿದ ಭಾಗವು ನೀರಿನಲ್ಲಿ ಮುಳುಗಿರುವಾಗಲೂ ಎಲ್ಲವನ್ನು ನೋಡಬಹುದು ಮತ್ತು ಸುಲಭವಾಗಿ ಉಸಿರಾಡಬಹುದು. ಅನಕೊಂಡಗಳು ದೊಡ್ಡ ಕಪ್ಪು ಚುಕ್ಕೆಗಳೊಂದಿಗೆ ಆಲಿವ್-ಬಣ್ಣವನ್ನು ಹೊಂದಿರುತ್ತವೆ ಮತ್ತು ಸುತ್ತಮುತ್ತಲಿನ ಪ್ರದೇಶಗಳೊಂದಿಗೆ ಬೆರೆಯಲು ಇದು ಅನುವು ಮಾಡಿಕೊಡುತ್ತದೆ.

    ಈ ಹಾವುಗಳು ದಕ್ಷಿಣ ಅಮೆರಿಕಾದ ಅಮೆಜಾನ್ ಮತ್ತು ಒರಿನೊಕೊ ಜಲಾನಯನ ಪ್ರದೇಶಗಳಲ್ಲಿನ ಸೊಂಪಾದ, ಸಂಕೀರ್ಣವಾದ ಜಲಮಾರ್ಗಗಳಲ್ಲಿ ವಾಸಿಸುತ್ತವೆ. ತಮ್ಮ ತಾಳ್ಮೆ ಮತ್ತು ಆಶ್ಚರ್ಯಕರ ಚುರುಕುತನಕ್ಕೆ ಹೆಸರುವಾಸಿಯಾಗಿವೆ. ಹಸಿರು ಅನಕೊಂಡಗಳು ವಿಷಕಾರಿಯಲ್ಲ. ಬದಲಾಗಿ ದೊಡ್ಡ ಹಾಗೂ ಹೊಂದಿಕೊಳ್ಳುವ ದವಡೆಗಳನ್ನು ಬಳಸಿ ಬೇಟೆಯಾಡುತ್ತವೆ. ಬೇಟೆಯನ್ನು ನುಂಗುವ ಮೊದಲು ತಮ್ಮ ಬಲವಾದ ದೇಹದಿಂದ ಬೇಟೆಯನ್ನು ಪುಡಿಮಾಡುತ್ತದೆ.

    ಹಸಿರು ಅನಕೊಂಡಗಳು ತಮ್ಮ ಪರಿಸರ ವ್ಯವಸ್ಥೆಗಳಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಲು ಪ್ರಮುಖವಾಗಿವೆ. ಅನಕೊಂಡಗಳು ಪರಿಸರ ಬದಲಾವಣೆ ವಿಚಾರದಲ್ಲಿ ಹೆಚ್ಚು ಸಂವೇದನಾಶೀಲವಾಗಿವೆ. ಆರೋಗ್ಯಕರ ಅನಕೊಂಡ ಜನಸಂಖ್ಯೆಯು ಸಾಕಷ್ಟು ಆಹಾರ ಸಂಪನ್ಮೂಲಗಳು ಮತ್ತು ಶುದ್ಧ ನೀರನ್ನು ಹೊಂದಿರುವ ಉತ್ತಮ ಪರಿಸರ ವ್ಯವಸ್ಥೆಗಳನ್ನು ಸೂಚಿಸುತ್ತದೆ. ಅನಕೊಂಡ ಸಂಖ್ಯೆಗಳು ಕಡಿಮೆಯಾಗುವುದು ಪರಿಸರದ ಅಸಮತೋಲನಕ್ಕೆ ಕಾರಣವಾಗಬಹುದು. ಆದ್ದರಿಂದ ಯಾವ ಯಾವ ಅನಕೊಂಡ ಜಾತಿಗಳು ಅಸ್ತಿತ್ವದಲ್ಲಿವೆ ಎಂಬುದನ್ನು ತಿಳಿದುಕೊಳ್ಳುವುದು ಮತ್ತು ಅವುಗಳ ಸಂಖ್ಯೆಯನ್ನು ಮೇಲ್ವಿಚಾರಣೆ ಮಾಡುವುದು ನಿರ್ಣಾಯಕವಾಗಿದೆ ಎಂದು ಸಂಶೋಧನೆ ತಿಳಿಸಿದೆ. (ಏಜೆನ್ಸೀಸ್​)

    ವಿಶ್ವದ ಅತೀ ಉದ್ದದ ಹಾವು ಯಾವುದು? 32 ಅಡಿ, 9.5 ಇಂಚು, ಅನಕೊಂಡ ಅಂತು ಅಲ್ವೇ ಅಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts