More

    ನೀವೂ ವಿಜ್ಞಾನಿ ಆಗ್ಬೇಕಾ?; ವಿಜ್ಞಾನ ಕಬ್ಬಿಣದ ಕಡಲೆಯಲ್ಲ…

    ಮಕ್ಕಳೇ, ನೀವೂ ವಿಜ್ಞಾನಿ ಆಗಬಹುದು. ‘ಅರೆ! ಅದ್ಹೇಗೆ ಸಾಧ್ಯ?’ ಎನ್ನಬೇಡಿ. ನಿಮ್ಮೊಳಗೂ ಒಬ್ಬ ವಿಜ್ಞಾನಿಯ ಪ್ರತಿಭೆ ಸುಪ್ತವಾಗಿ ಅಡಗಿರುತ್ತದೆ, ಅದನ್ನು ಹೊರ ತರುವ ಪ್ರಯತ್ನ ಆಗಿರುವುದಿಲ್ಲ ಅಷ್ಟೆ. ಇಂತಹ ಮಕ್ಕಳಿಗಾಗಿಯೇ ಈ ಬರಹ.

    | ರಮೇಶ ಜಹಗೀರದಾರ್ ದಾವಣಗೆರೆ

    ವಿಜ್ಞಾನ ಕಬ್ಬಿಣದ ಕಡಲೆಯಲ್ಲ, ಆಸಕ್ತಿಯಿಂದ ಓದಿದರೆ ಅದೇ ನಿಮ್ಮ ಫೇವರಿಟ್ ವಿಷಯ ಆಗುತ್ತದೆ. ಓದಿನ ಜತೆಗೆ ಪ್ರಯೋಗಶೀಲತೆ ಇದ್ದಲ್ಲಿ ಹೊಸ ಆವಿಷ್ಕಾರಗಳನ್ನು ಮಾಡುತ್ತಾ ಸಮಾಜಕ್ಕೆ ಕೊಡುಗೆ ನೀಡಬಹುದು. ಓದುವ ಮತ್ತು ವೈಜ್ಞಾನಿಕವಾಗಿ ವಿಶ್ಲೇಷಿಸುವ ಸಾಮರ್ಥ್ಯವನ್ನು ಎಳೆವಯಸ್ಸಿನಲ್ಲಿಯೇ ಬೆಳೆಸಿಕೊಂಡರೆ ಮುಂದಿನ ಹಾದಿ ಸುಗಮ. ಇದನ್ನು ಅರಿತ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ರಾಜ್ಯ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಪ್ರಾಯೋಜಕತ್ವದಲ್ಲಿ ಪ್ರತಿ ವರ್ಷ ಸಮಾವೇಶ ಆಯೋಜಿಸಿ ಹೊಸ ಹೊಸ ಬಾಲವಿಜ್ಞಾನಿಗಳನ್ನು ಬೆಳಕಿಗೆ ತರುತ್ತಿದೆ. ಇದಕ್ಕಾಗಿ ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ವಿಶೇಷ ಸ್ಪರ್ಧೆಗಳನ್ನ ಆಯೋಜಿಸಲಾಗುತ್ತಿದೆ.

    ರಾಜ್ಯದ ಬಾಲ ವಿಜ್ಞಾನಿಗಳು ಇವರು: ಯಾದಗಿರಿ ಜಿಲ್ಲೆ ಸೈದಾಪುರ ಪಟ್ಟಣದಲ್ಲಿ ಇತ್ತೀಚೆಗೆ ನಡೆದ ಪ್ರಸಕ್ತ ಸಾಲಿನ ರಾಜ್ಯಮಟ್ಟದ ಯುವ ವಿಜ್ಞಾನಿಗಳ ಸಮಾವೇಶದಲ್ಲಿ ನಾಲ್ಕು ಮಕ್ಕಳು ‘ರಾಜ್ಯ ಬಾಲವಿಜ್ಞಾನಿ’ ಸ್ಥಾನ ಅಲಂಕರಿಸಿದ್ದಾರೆ. ಆ ಸಾಧಕರೇ ಯೋಗಪ್ರಿಯ, ಯಶಸ್ವಿ ಶೆಟ್ಟಿ, ಸುಮೇಧ ಮತ್ತು ಕಾರ್ತಿಕ.

    ನೀವೂ ವಿಜ್ಞಾನಿ ಆಗ್ಬೇಕಾ?; ವಿಜ್ಞಾನ ಕಬ್ಬಿಣದ ಕಡಲೆಯಲ್ಲ...ದಾವಣಗೆರೆಯ ಯೋಗಪ್ರಿಯ: ಕೈಗಾರಿಕೆಗಳಲ್ಲಿ ದ್ರವ ಸೋರಿಕೆ ಸಾಮಾನ್ಯ, ಅದನ್ನು ಪತ್ತೆಹಚ್ಚುವುದು ದೊಡ್ಡ ಸವಾಲು. ಇದೇ ವಿಷಯದಲ್ಲಿ ಪ್ರಾಜೆಕ್ಟ್ ಮಂಡಿಸಿದವನು ದಾವಣಗೆರೆ ಕೇಂದ್ರೀಯ ವಿದ್ಯಾಲಯದ 10ನೇ ತರಗತಿ ವಿದ್ಯಾರ್ಥಿ ವೈ.ಇ. ಯೋಗಪ್ರಿಯ. ದ್ರವ ಸೋರಿಕೆ ಪತ್ತೆ ಮಾಡುವ ಹೊಸ ವಿಧಾನ, ಎಷ್ಟು ಆಳದಲ್ಲಿ ರಂಧ್ರವಾಗಿದೆ ಎಂದು ಪತ್ತೆ ಮಾಡುವ ಕುರಿತು ಶೋಧಿಸಿದ್ದಾನೆ. ಇದನ್ನು 5 ದಿನದಲ್ಲೇ ಸಿದ್ಧಪಡಿಸಿದ್ದಾಗಿ ಹೇಳುವ ಈತ, ಶಿಕ್ಷಕಿ ಪೂರ್ಣಿಮಾ ಮತ್ತು ತನ್ನ ತಂದೆಯ ಸಹಕಾರವನ್ನು ಸ್ಮರಿಸುತ್ತಾನೆ. ಈತನ ತಂದೆ ಡಾ. ಕೆ.ಎಂ. ಈಶ್ವರಪ್ಪ ದಾವಣಗೆರೆ ವಿವಿ ಭೌತಶಾಸ್ತ್ರ ಸಹಪ್ರಾಧ್ಯಾಪಕರು.\

    ನೀವೂ ವಿಜ್ಞಾನಿ ಆಗ್ಬೇಕಾ?; ವಿಜ್ಞಾನ ಕಬ್ಬಿಣದ ಕಡಲೆಯಲ್ಲ...ಗದಗಿನ ಕಾರ್ತಿಕ ಮೋಹನಲಾಲ್ ದಾನಿ: ಅಂಧರ ಬಾಳಿಗೆ ದಾರಿದೀಪ ಆಗುವ ನಿಟ್ಟಿನಲ್ಲಿ ‘ಸ್ಮಾರ್ಟ್ ಬ್ಲೈಂಡ್ ಸ್ಟಿಕ್’ ಮಾದರಿ ತಯಾರಿಸಿರುವ ಕಾರ್ತಿಕ ಮೋಹನಲಾಲ್ ದಾನಿ ಗದಗಿನ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿ. ಕಡಿಮೆ ವೆಚ್ಚದಲ್ಲಿಯೇ ಈ ಸ್ಟಿಕ್ ತಯಾರಿಸಿದ್ದು, ಇದನ್ನು ಹಿಡಿದು ಅಂಧರು ನಡೆಯುವಾಗ ದಾರಿಯಲ್ಲಿ ಏನಾದರೂ ಅಡೆತಡೆ ಇದ್ದರೆ ವಾಯ್್ಸ ಕಮಾಂಡ್ ಮೂಲಕ ತಿಳಿಸುತ್ತದೆ. ಕಾರ್ತಿಕ ಈ ಸಾಧನೆಯನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯಲು ಸಿದ್ಧತೆ ನಡೆಸುತ್ತಿದ್ದಾನೆ. ಭೌತಶಾಸ್ತ್ರ ಉಪನ್ಯಾಸಕ ಜಗದೀಶ್ ಮಠಪತಿ ಮಾರ್ಗದರ್ಶನ ಮಾಡುತ್ತಿದ್ದಾರೆ.

    ನೀವೂ ವಿಜ್ಞಾನಿ ಆಗ್ಬೇಕಾ?; ವಿಜ್ಞಾನ ಕಬ್ಬಿಣದ ಕಡಲೆಯಲ್ಲ...ಬಳ್ಳಾರಿಯ ಸುಮೇಧ: ಒಳಚರಂಡಿ ನೀರು, ಬೋರ್​ವೆಲ್ ನೀರು, ಛಾವಣಿ ಮೇಲೆ ಬೀಳುವ ಮಳೆನೀರಿನಿಂದ ವಿದ್ಯುತ್ ಉತ್ಪಾದಿಸುವ ಮಾದರಿ ಬಳ್ಳಾರಿಯ ಜಿಂದಾಲ್ ವಿದ್ಯಾಮಂದಿರದ 10ನೇ ತರಗತಿ ವಿದ್ಯಾರ್ಥಿ ಎಸ್.ಎಸ್. ಸುಮೇಧನದು. ಇದಕ್ಕೆ ಮಾಡಿದ ವೆಚ್ಚ ಅತ್ಯಂತ ಕಡಿಮೆ. ರೈತರು, ನಗರ ಪ್ರದೇಶದ ಜನರು ಮತ್ತು ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಹೆಚ್ಚು ಉಪಯುಕ್ತ. ತನ್ನ ಸಾಧನೆಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಅಭಿಷೇಕ್ ಅವರ ಮಾರ್ಗದರ್ಶನ ಇದೆ ಎಂದು ಸ್ಮರಿಸುತ್ತಾನೆ ಸುಮೇಧ.

    ನೀವೂ ವಿಜ್ಞಾನಿ ಆಗ್ಬೇಕಾ?; ವಿಜ್ಞಾನ ಕಬ್ಬಿಣದ ಕಡಲೆಯಲ್ಲ...ದಕ್ಷಿಣ ಕನ್ನಡದ ಯಶಸ್ವಿ ಶೆಟ್ಟಿ: ಪೆಟ್ರೋಲ್-ಡೀಸೆಲ್ ಇಲ್ಲದೆ ವಾಹನಗಳ ಚಕ್ರಕ್ಕೆ ಪೀಜೋ ಎಲೆಕ್ಟ್ರಿಕ್ ಪ್ಲೇಟ್​ಗಳನ್ನ ಅಳವಡಿಸಿ ಅವುಗಳ ಮೇಲೆ ಒತ್ತಡ ಹಾಕುವ ಮೂಲಕ ಆ ಶಕ್ತಿಯನ್ನ ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸಿ ವಾಹನ ಚಲಿಸುವಂತೆ ಮಾಡುವ ನ್ಯಾನೊಟೋ ಹೆಸರಿನ ಮಾದರಿ ತಯಾರಿಸಿದ್ದಾಳೆ ಯಶಸ್ವಿ ಎಸ್ ಶೆಟ್ಟಿ. ಈಕೆ ದಕ್ಷಿಣ ಕನ್ನಡ ಜಿಲ್ಲೆಯ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ. ಈ ವಿಧಾನ ವಾತಾವರಣ ಕಲುಷಿತವಾಗುವುದನ್ನು ತಡೆಯುವ ಜತೆಗೆ ಹಣವನ್ನೂ ಉಳಿತಾಯ ಮಾಡುತ್ತದೆ. ಪುತ್ತೂರಿನ ಕೊಂಬೆಟ್ಟು ಸರ್ಕಾರಿ ಪಿಯು ಕಾಲೇಜಿನ ಸಿಂಧು ವಿ.ಕೆ. ಮತ್ತು ಐಟಿ ಲೆಕ್ಚರರ್ ಅಶ್ಲೇಶ್ ಕುಮಾರ್​ರ ಮಾರ್ಗದರ್ಶನದಲ್ಲಿ ಯಶಸ್ವಿ ಈ ಪ್ರಾಜೆಕ್ಟ್ ಮಾಡಿದ್ದಾಳೆ.

    ನೀವೂ ವಿಜ್ಞಾನಿ ಆಗ್ಬೇಕಾ?; ವಿಜ್ಞಾನ ಕಬ್ಬಿಣದ ಕಡಲೆಯಲ್ಲ...ವಿದ್ಯಾರ್ಥಿಗಳನ್ನು ವಿಜ್ಞಾನಿಗಳನ್ನಾಗಿ ರೂಪಿಸುವುದು, ವೈಜ್ಞಾನಿಕ ವಿಧಾನದ ಪರಿಚಯ ಮಾಡುವುದು, ರಾಜ್ಯ ಮತ್ತು ರಾಷ್ಟ್ರಮಟ್ಟದ ವೈಜ್ಞಾನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ವಿದ್ಯಾರ್ಥಿಗಳನ್ನು ಪ್ರೇರೇಪಿಸುವುದು, ಮೂಲ ವಿಜ್ಞಾನ ವಿಷಯದಲ್ಲಿ ಮಕ್ಕಳ ಆಸಕ್ತಿ ಹಾಗೂ ಚಿಂತನಾ ಕೌಶಲ ವೃದ್ಧಿಸುವುದು ಯುವ ವಿಜ್ಞಾನ ಸಮಾವೇಶದ ಉದ್ದೇಶ.

    | ಗಿರೀಶ ಕಡ್ಲೇವಾಡ ಅಧ್ಯಕ್ಷ, ರಾಜ್ಯ ವಿಜ್ಞಾನ ಪರಿಷತ್ತು

    ಆಯ್ಕೆ ಪ್ರಕ್ರಿಯೆ ಹೇಗೆ?

    • ಬಾಲವಿಜ್ಞಾನಿಗಳ ಸ್ಪರ್ಧೆ 9ನೇ ತರಗತಿಯಿಂದ ಪಿಯುಸಿವರೆಗಿನ ವಿದ್ಯಾರ್ಥಿಗಳಿಗೆ ನಡೆಯುತ್ತದೆ.
    • ಜಿಲ್ಲಾ ಹಂತದ ಆಯ್ಕೆ ಬಳಿಕ ಆಯಾ ಜಿಲ್ಲೆಯಿಂದ ತಲಾ ಇಬ್ಬರನ್ನು ರಾಜ್ಯಮಟ್ಟಕ್ಕೆ ಕಳಿಸಲಾಗುತ್ತದೆ.
    • ವಿಜ್ಞಾನ ಅಥವಾ ಗಣಿತ ವಿಷಯದಲ್ಲಿ ಸ್ವಂತ ಅಧ್ಯಯನ ಕೈಗೊಂಡು ಸಂಶೋಧಿಸಿದ ವೈಜ್ಞಾನಿಕ ವಿಶ್ಲೇಷಣೆ ಅಥವಾ ಅವಲೋಕನದಿಂದ ಕೂಡಿದ ಯಾವುದಾದರೂ ಯೋಜನೆ ಯನ್ನು ಜಿಲ್ಲಾ ಹಂತದ ನಿರ್ಣಾಯಕರ ಮುಂದೆ ಮಕ್ಕಳು ಮಂಡಿಸಬೇಕು. ಇದಕ್ಕೆ ಗರಿಷ್ಠ 8 ನಿಮಿಷ.
    • ಮೊದಲು ಲಿಖಿತ ಪರೀಕ್ಷೆ ನಡೆಯುತ್ತದೆ. 40 ಪ್ರಶ್ನೆಗಳಿಗೆ 40 ನಿಮಿಷದಲ್ಲಿ ಉತ್ತರಿಸಬೇಕು. ವಿಜ್ಞಾನಿಗಳ ಸಾಧನೆ, ಭೌತವಿಜ್ಞಾನ, ಗಣಿತ, ಜೀವವಿಜ್ಞಾನ ಹಾಗೂ ರಸಾಯನ ವಿಜ್ಞಾನದ ಬಗ್ಗೆ ತಲಾ 8 ಪ್ರಶ್ನೆಗಳಿರುತ್ತವೆ.
    • ಒಟ್ಟು 100 ಅಂಕ. ಆ ಪೈಕಿ ಲಿಖಿತ ಪರೀಕ್ಷೆಗೆ 40, ವಿಷಯ ಮಂಡನೆಗೆ 50 ಹಾಗೂ ಸಂದರ್ಶನಕ್ಕೆ 10 ಅಂಕ.
    • ಜಿಲ್ಲಾ ಹಂತದಲ್ಲಿ ಮೊದಲ ಸ್ಥಾನ ಪಡೆದವರಿಗೆ 5 ಸಾವಿರ ರೂ., ದ್ವಿತೀಯ ಸ್ಥಾನಕ್ಕೆ 3 ಸಾವಿರ ರೂ. ಬಹುಮಾನ.
    • ರಾಜ್ಯ ಮಟ್ಟದಲ್ಲಿ ನಾಲ್ವರನ್ನು ಯುವ ವಿಜ್ಞಾನಿಗಳನ್ನಾಗಿ ಆಯ್ಕೆ ಮಾಡಿ, ತಲಾ 10 ಸಾವಿರ ರೂ. ನಗದು ಬಹುಮಾನ, ಪಾರಿತೋಷಕ ನೀಡಿ ಗೌರವಿಸಲಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts