More

    ಲಾಕ್​ಡೌನ್ ಹಿನ್ನೆಲೆ ಟೆಂಡರ್ ಪ್ರಕ್ರಿಯೆ ಸ್ಥಗಿತ -ಖರೀದಿಗೂ ಸಿಕ್ಕಿಲ್ಲ ಅನುಮತಿ: ಶಾಲಾರಂಭಕ್ಕೆ ಸಿಗಲ್ಲ ಸೈಕಲ್, ಸಮವಸ್ತ್ರ

    ಬೆಂಗಳೂರು: ಲಾಕ್​ಡೌನ್ ಹಿನ್ನೆಲೆ 2020-21ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿಯಲ್ಲಿ ಭಾರಿ ವ್ಯತ್ಯಾಸವಾಗಲಿರುವ ಪರಿಣಾಮ ಶಾಲಾ ಮಕ್ಕಳಿಗೆ ನಿಗದಿತ ಸಮಯದಲ್ಲಿ ಸಮವಸ್ತ್ರ, ಬೈಸಿಕಲ್, ಶೂ ಮತ್ತು ಸಾಕ್ಸ್ ಸಿಗುವುದಿಲ್ಲ. ಏಕೆಂದರೆ, ಕರೊನಾ ಕಾರಣಕ್ಕೆ ಟೆಂಡರ್ ಪ್ರಕ್ರಿಯೆ ಸ್ಥಗಿತಗೊಂಡಿದೆ. ಈಗಾಗಲೇ ಶಿಕ್ಷಣ ಇಲಾಖೆ ಶಾಲೆಯ ಪ್ರವೇಶ ಪ್ರಕ್ರಿಯೆ ಮುಂದೂಡಿದೆ.

    ಪ್ರತಿವರ್ಷ ಮೇ 29ಕ್ಕೆ ಶಾಲೆಗಳು ಆರಂಭಗೊಳ್ಳುತ್ತಿದ್ದವು. ಈ ವರ್ಷ ಇನ್ನೂ ಎಸ್ಸೆಸ್ಸೆಲ್ಸಿ, ಪಿಯುನ ಒಂದು ವಿಷಯ ಪರೀಕ್ಷೆ ಬಾಕಿ ಇದೆ. ಪ್ರವೇಶ ಪ್ರಕ್ರಿಯೆ ಕೂಡ ನಡೆಯದ್ದರಿಂದ ಶಾಲೆ ಆರಂಭವಾಗುವುದೇ ವಿಳಂಬವಾಗುವ ಸಾಧ್ಯತೆ ಇದೆ. ಸಮವಸ್ತ್ರ ಹೊರತಾಗಿ ಶೂ-ಸಾಕ್ಸ್, ಬೈಸಿಕಲ್ ಖರೀದಿಗೆ ಈವರೆಗೆ ಟೆಂಡರ್ ಪ್ರಕ್ರಿಯೆ ಕೂಡ ಆರಂಭವಾಗಿಲ್ಲ.

    ಪ್ರತಿ ವರ್ಷ ಯೋಜನೆಗಳನ್ನು ಮುಂದುವರಿಸುವುದು ಮತ್ತು ಕೈ ಬಿಡುವ ವಿಚಾರ ಬಜೆಟ್ ನಂತರದಲ್ಲಿ ತಿಳಿಯುತ್ತದೆ. ಈ ಬಾರಿ ಬಜೆಟ್​ನಲ್ಲಿ ಶಿಕ್ಷಣ ಇಲಾಖೆಯ ಪ್ರಮುಖ ಯೋಜನೆಗಳನ್ನು ಕಡಿತಗೊಳಿಸದೆ ಮುಂದುವರಿಸಲಾಗಿದೆ. ಈ ಆದೇಶ ಶಿಕ್ಷಣ ಇಲಾಖೆಗೆ ತಲುಪಿ ಟೆಂಡರ್ ಕರೆಯಬೇಕಾಗುತ್ತದೆ. ಆದರೆ, ಇದುವರೆಗೆ ಸೈಕಲ್, ಶೂ-ಸಾಕ್ಸ್ ಖರೀದಿಗೆ ಸರ್ಕಾರದ ಇನ್ನೂ ಅನುಮತಿಯೇ ಸಿಗದಿರುವುದರಿಂದ ಮತ್ತಷ್ಟು ವಿಳಂಬವಾಗಲಿದೆ.

    ಟೆಂಡರ್ ಪ್ರಕ್ರಿಯೆ: ಪ್ರತಿ ವರ್ಷ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಅಂದಾಜು ಲೆಕ್ಕಾಚಾರದ ಮೇಲೆ ಸಮವಸ್ತ್ರ ಖರೀದಿಗೆ ಶಿಕ್ಷಣ ಇಲಾಖೆ ಮುಂದಾಗುತ್ತದೆ. 43ರಿಂದ 44 ಲಕ್ಷ ವಿದ್ಯಾರ್ಥಿಗಳಿಗೆ ಸಮವಸ್ತ್ರ ಅಗತ್ಯವಿದ್ದು, ರಾಜ್ಯ ಸರ್ಕಾರ 77 ಕೋಟಿ ರೂ. ಅನ್ನು ಬಜೆಟ್​ನಲ್ಲಿ ನಿಗದಿಪಡಿಸಿದೆ. ಕಳೆದ ತಿಂಗಳೇ ಇದಕ್ಕಾಗಿ ಟೆಂಡರ್ ಕರೆದಿದ್ದು, ಎಲ್-1ನಲ್ಲೂ ಹೆಚ್ಚಿನ ಬೆಲೆ ನಮೂದಿಸಲಾಗಿದೆ. ಇದರಿಂದ ಶಿಕ್ಷಣ ಇಲಾಖೆ ಏಪ್ರಿಲ್​ನಲ್ಲಿ ಮರು ಟೆಂಡರ್ ಕರೆದಿದೆ. ಪ್ರಸ್ತಾವನೆ ಸಲ್ಲಿಸಿ, ಇದಕ್ಕೆ ಒಪ್ಪಿಗೆ ಸೂಚಿಸಿ ಕಂಪನಿಗಳಿಗೆ ಕಾರ್ಯಾದೇಶ ನೀಡುವುದಕ್ಕೆ ಸ್ವಲ್ಪ ಕಾಲ ವಿಳಂಬವಾಗಲಿದೆ.

    ಸೈಕಲ್, ಶೂ-ಸಾಕ್ಸ್: ಪ್ರತಿ ವರ್ಷ 5 ಲಕ್ಷ ಮಕ್ಕಳಿಗೆ ಸೈಕಲ್ ಖರೀದಿಸಲು ಸರ್ಕಾರ 183 ಕೋಟಿ ರೂ. ವೆಚ್ಚ ಮಾಡುತ್ತಿದೆ. 43.61 ಲಕ್ಷ ವಿದ್ಯಾರ್ಥಿಗಳಿಗೆ 123 ಕೋಟಿ ರೂ. ವೆಚ್ಚ ಮಾಡಿ ಶೂ-ಸಾಕ್ಸ್ ಖರೀದಿಸಿ ನೀಡಲಾಗುತ್ತಿದೆ. ಲೌಕ್​ಡೌನ್ ಮುಗಿದ ಬಳಿಕ ಈ 2 ಯೋಜನೆಗಳಿಗೆ ಸರ್ಕಾರದ ಅನುಮತಿ ಪಡೆದು ಟೆಂಡರ್ ಪ್ರಕ್ರಿಯೆ ಆರಂಭಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.

    ಲಾಕ್​ಡೌನ್ ಆಗಿರುವುದರಿಂದ ಈ ವರ್ಷ ಸೈಕಲ್, ಶೂ-ಸಾಕ್ಸ್ ವಿಳಂಬವಾಗಲಿದೆ. ಆದರೂ, ಶಾಲಾ ಪ್ರಾರಂಭೋತ್ಸವ ವೇಳೆಗೆ ಪಠ್ಯಪುಸ್ತಕ ಮತ್ತು ಸಮವಸ್ತ್ರ ನೀಡಲು ಪ್ರಯತ್ನಿಸಲಾಗುತ್ತಿದೆ.
    | ಡಾ.ಕೆ.ಜಿ.ಜಗದೀಶ್ ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ

    ದೇವರಾಜ್ ಎಲ್.

    ಕರೊನಾ ಸೋಂಕು ತಗುಲಿ ಕಣ್ಣಾರೆ ಸಾವು ಕಂಡ ಆ ಕ್ಷಣ – ಮಹಿಳೆಯೊಬ್ಬರ ಅನುಭವ ಕಥನ

    ಭರ್ಜರಿ ಹನಿಮೂನ್​!- ಐಷಾರಾಮಿ ರೆಸಾರ್ಟ್​ನಲ್ಲಿ ಇರೋದು ಇದೊಂದೇ ಜೋಡಿ- 6 ದಿನಕ್ಕೆ ಬಂದವರೀಗ 26 ದಿನ ಇರುವಂತಾಗಿದೆ ನೋಡಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts