More

    ಕೊಠಡಿಯಲ್ಲಿ ದನಗಳ ಠಿಕಾಣಿ – ಕಂಪ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ದುಸ್ಥಿತಿ

    ಕಂಪ್ಲಿ: ಶಾಲಾ ಕೊಠಡಿಗಳಲ್ಲಿ ವಿದ್ಯಾರ್ಥಿಗಳ ಬದಲಿಗೆ ಬಿಡಾಡಿ ದನಗಳು ಠಿಕಾಣಿ ಹೂಡಿವೆ. ವರ್ಷದಿಂದ ವರ್ಷಕ್ಕೆ ಪ್ರವೇಶ ಪಡೆಯುವ ಮಕ್ಕಳ ಸಂಖ್ಯೆ ಕುಸಿಯುತ್ತಿದ್ದರೆ, 1ರಿಂದ 5ನೇ ತರಗತಿಗೆ ಒಬ್ಬರೇ ಶಿಕ್ಷಕರಿದ್ದು, ಕಟ್ಟಡವೂ ದುಸ್ಥಿತಿಗೆ ತಲುಪಿದೆ.

    ಪಟ್ಟಣದ ಕುಂಬಾರ ಓಣಿಯಲ್ಲಿ 1959ರಲ್ಲಿ ಬಸವೇಶ್ವರ ಶಾಲೆಯೆಂದು ಜನಪ್ರಿಯಗೊಂಡಿದ್ದ 1999ರಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಾಗಿ 3ನೇ ವಾರ್ಡ್‌ನ ಇಂದಿರಾನಗರಕ್ಕೆ ಸ್ಥಳಾಂತರಗೊಂಡ ಕಟ್ಟಡ ಚಿತ್ರಣವಿದು. ಅಲೆಮಾರಿ, ಅರೆಅಲೆಮಾರಿ ಬುಡಕಟ್ಟು ಹಕ್ಕಿಪಿಕ್ಕಿ ಸಮುದಾಯದ ಮಕ್ಕಳೇ ಈ ಶಾಲೆಯ ಸಂಪನ್ಮೂಲ. ಆರಂಭದ ಕೆಲ ವರ್ಷ ಚೆನ್ನಾಗಿ ನಡೆದ ಶಾಲೆ ನಂತರ ಶಿಕ್ಷಕರ ಆಜಾಗರೂಕತೆಯಿಂದ ಮಕ್ಕಳ ಪ್ರವೇಶ ತಗ್ಗಿತು.

    ಇದನ್ನೂ ಓದಿ: ಫೇಸ್​ಬುಕ್ ಖಾತೆಯಲ್ಲಿ ಸರ್ಕಾರದ ವಿರುದ್ಧ ಅವಹೇಳನಕಾರಿ ಪೋಸ್ಟ; ಸರ್ಕಾರಿ ಶಾಲಾ ಶಿಕ್ಷಕ ಅಮಾನತ್

    2021-22ನೇ ಸಾಲಿನಲ್ಲಿ 42, 2022-23ನೇ ಸಾಲಿನಲ್ಲಿ 34 ಹಾಗೂ ಈಗ 2023-24ನೇ ಸಾಲಿನಲ್ಲಿ 2ನೇ ತರಗತಿಗೆ 10 ಮಕ್ಕಳು, 3ನೇ ತರಗತಿಗೆ 4, 4ನೇ ತರಗತಿಗೆ ಮೂವರು, ಐದನೇ ತರಗತಿಗೆ 8 ಮಕ್ಕಳಿದ್ದು, ಒಂದನೇ ತರಗತಿಗೆ ಯಾರೂ ಪ್ರವೇಶ ಪಡೆದಿಲ್ಲ.

    ನಿಯೋಜನೆ ಮೇರೆಗೆ ಮುಖ್ಯಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಟಿ.ನಾಗರತ್ನ, ಇದೇ ತಿಂಗಳು (ಜೂ.25) ನಿವೃತ್ತಿ ಹೊಂದಲಿದ್ದಾರೆ. ಸದ್ಯ ಏಕೋಪದ್ಯಾಯ ಶಾಲೆಯಾಗಿದ್ದು ಐದು ತರಗತಿಗಳ ಮಕ್ಕಳನ್ನು ಒಂದೆಡೆ ಸೇರಿ ಪಾಠ ಮಾಡಬೇಕಿದೆ. ಒಬ್ಬರು ಅತಿಥಿ ಶಿಕ್ಷಕ ಹುದ್ದೆ ಮಂಜೂರಾಗಿದ್ದು, ನೇಮಕವಾಗಬೇಕಿದೆ.

    ದುರಸ್ತಿ ಕಾಣದ ಶೌಚಗೃಹ

    ಮಕ್ಕಳ ಶೌಚಗೃಹ ದುರಸ್ತಿಗೆ ಬಂದಿದ್ದು, ಮಕ್ಕಳು ಮೂತ್ರ ಮತ್ತು ಶೌಚಕ್ಕೆ ಬಯಲನ್ನೇ ನೆಚ್ಚಿಕೊಂಡಿದ್ದಾರೆ. ಕಚೇರಿ ಹೊರತುಪಡಿಸಿ ಉಳಿದ ಕೋಣೆಗಳಿಗೆ ವಿದ್ಯುತ್ ಸೌಲಭ್ಯವಿಲ್ಲ. ಕಾಂಪೌಂಡ್, ಶುದ್ಧ ಕುಡಿವ ನೀರಿನ ವ್ಯವಸ್ಥೆ ಇಲ್ಲ. ಸಂಜೆಯಾದರೆ ಕಿಡಿಗೇಡಿಗಳ ಹಾವಳಿ ಹೆಚ್ಚಾಗಿದ್ದು, ತರಗತಿಗಳ ಬಾಗಿಲು, ಕಿಟಕಿಗಳ ಮುರಿದು ಹಾಕಿದ್ದಾರೆ. ಕೊಠಡಿ ಬಾಗಿಲು ಜಖಂಗೊಂಡಿದ್ದರಿಂದ ಬಿಡಾಡಿ ದನಗಳು ಬೀಡು ಬಿಟ್ಟಿವೆ.

    ಕೆಲ ಮಕ್ಕಳ ಪಾಲಕರ ಆಧಾರ್‌ಕಾರ್ಡ್ ಇಲ್ಲದ್ದರಿಂದ ಶಾಲಾ ಪ್ರವೇಶಕ್ಕೆ ತೊಂದರೆಯಾಗಿದೆ. ಕೆಲ ಶಾಲೆಯವರು ನಾವೇ ಆಧಾರ್‌ಕಾರ್ಡ್ ಮಾಡಿಸಿಕೊಡುತ್ತೇವೆಂದು ಆಮಿಷ ತೋರಿ ಮಕ್ಕಳನ್ನು ಅವರ ಶಾಲೆಗೆ ಪ್ರವೇಶ ಪಡೆಯುತ್ತಿದ್ದು, ಇಲ್ಲಿ ಸೇರುವ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ ಎನ್ನಲಾಗುತ್ತಿದೆ.

    • ಕಾಂಪೌಂಡ್ ಇಲ್ಲದ್ದರಿಂದ ಕಿಡಿಗೇಡಿಗಳ ಕಾಟ ಹೆಚ್ಚಾಗಿದ್ದು, ಶಾಲೆ ವಾತಾವರಣ ಹಾಳು ಮಾಡುತ್ತಿದ್ದಾರೆ. ಮನೆ ಮನೆಗೂ ಹೋಗಿ ಕರೆದರೂ ಮಕ್ಕಳು ಶಾಲೆಗೆ ಬರುತ್ತಿಲ್ಲ. ಐಸ್‌ಕ್ರೀಮ್, ಬಲೂನ್ ಮಾರಲು ಪಾಲಕರೊಂದಿಗೆ ಮಕ್ಕಳು ಹೋಗುತ್ತಾರೆ. ಶಾಲೆಗೆ ಮೂಲಸೌಲಭ್ಯ ಬೇಕಿದ್ದು ಅಧಿಕಾರಿಗಳ ಗಮನಕ್ಕೆ ತರಲಾಗಿದೆ. 1ನೇ ತರಗತಿಗೆ ಮಕ್ಕಳ ಪ್ರವೇಶಕ್ಕಾಗಿ ಪ್ರಯತ್ನ ನಡೆದಿದೆ.
      | ಟಿ.ನಾಗರತ್ನಾ, ಮುಖ್ಯಶಿಕ್ಷಕಿ, 3ನೇ ವಾರ್ಡ್ ಸಕಿಪ್ರಾ ಶಾಲೆ, ಕಂಪ್ಲಿ
    • ನನ್ನ ಮಗಳನ್ನೇ ಈ ಶಾಲೆಗೆ ಸೇರಿಸಿ ಉಳಿದ ಹಕ್ಕಿಪಿಕ್ಕಿ ಸಮುದಾಯದ ಮಕ್ಕಳನ್ನು ಶಾಲೆಗೆ ಕರೆತರಲು ಪ್ರಯತ್ನಿಸುತ್ತೇನೆ. ಮಕ್ಕಳ ಮನಸೆಳೆದು ಪಾಠ ಮಾಡುವ ಮಾತೃ ಹೃದಯಿ ಶಿಕ್ಷಕರು ಬೇಕಿದ್ದಾರೆ. ಹಕ್ಕಿಪಿಕ್ಕಿ ಸಮುದಾಯದವರನ್ನೇ ಅತಿಥಿ ಶಿಕ್ಷಕರನ್ನಾಗಿ ತೆಗೆದುಕೊಳ್ಳಬೇಕು. ಶಾಲೆಗೆ ಅಗತ್ಯ ಸೌಕರ್ಯ ಒದಗಿಸಬೇಕು. ಆಗಾಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು.
      | ಎಚ್.ಪಿ.ಶಿಕಾರಿ ರಾಮು, ರಾಜ್ಯ ಉಪಾಧ್ಯಕ್ಷ, ಅಲೆಮಾರಿ ಅರೆಅಲೆಮಾರಿ ವಿಮುಕ್ತ ಬುಡಕಟ್ಟು ಒಕ್ಕೂಟ, ಕಂಪ್ಲಿ
    • ಮಕ್ಕಳ ಪ್ರವೇಶಕ್ಕಾಗಿ ಹಕ್ಕಿಪಿಕ್ಕಿ ಕಾಲನಿಯಲ್ಲಿ ಸಮುದಾಯದ ಜಾಗೃತಿ ಸಭೆ ನಡೆಸಲಾಗುವುದು. ಮಕ್ಕಳನ್ನು ಶಾಲೆಗೆ ಕರೆತರಲು ಯುವ ಶಿಕ್ಷಕರನ್ನು ನೇಮಿಸಲಾಗುವುದು. ಶಾಲೆಗೆ ಅಗತ್ಯ ಸೌಕರ್ಯ ಒದಗಿಸಲಾಗುವುದು. ಶಾಲೆ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುವುದು.
      | ಚನ್ನಬಸಪ್ಪ ಮಗ್ಗದ, ಬಿಇಒ, ಹೊಸಪೇಟೆ
    • ಶಾಲೆಗೆ ಅಗತ್ಯ ಸೌಲಭ್ಯ ಒದಗಿಸಬೇಕು. ಶಾಲೆ ಉಳಿವಿಗಾಗಿ ಹಕ್ಕಿಪಿಕ್ಕಿ ಸಮುದಾಯದ ಮಕ್ಕಳನ್ನು ಸೇರಿಸಲಾಗುವುದು. ಶಾಲೆಗೆ ನಿತ್ಯ ಮಕ್ಕಳನ್ನು ಕರೆತರುವ ಪ್ರಯತ್ನ ಮಾಡಲಾಗುವುದು.
      | ರಾಮ ಲಕ್ಷ್ಮಣ, ಎಸ್ಡಿಎಂಸಿ ಅಧ್ಯಕ್ಷ, 3ನೇ ವಾರ್ಡ್ ಸಕಿಪ್ರಾ ಶಾಲೆ, ಕಂಪ್ಲಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts