More

    ಶಾಲೆ ಸೇರ್ಪಡೆ ದ.ಕ. ದಾಖಲೆ: ಈ ಬಾರಿ 3,20,998 ಮಕ್ಕಳಿಂದ ವಿದ್ಯಾರ್ಜನೆ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2021-22ನೇ ಸಾಲಿನ ಶಾಲಾ ದಾಖಲಾತಿ ಪ್ರಕ್ರಿಯೆ ಮುಂದುವರಿದಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಜಿಲ್ಲೆಗೆ ನೀಡಲಾದ ಗುರಿಯನ್ನು ಮೀರಿ ಮಕ್ಕಳು ಶಾಲೆಗೆ ದಾಖಲಾಗಿದ್ದಾರೆ.

    ಸರ್ಕಾರಿ, ಅನುದಾನಿತ, ಖಾಸಗಿ ಹಾಗೂ ಇತರ ಶಾಲೆಗಳ ಸಹಿತ ಜಿಲ್ಲೆಗೆ ಈ ಬಾರಿ 1ರಿಂದ 10ನೇ ತರಗತಿವರೆಗೆ 3,20,947 ಮಕ್ಕಳನ್ನು ಶಾಲೆಗೆ ದಾಖಲಿಸಿಕೊಳ್ಳುವ ಗುರಿ ನಿಗದಿಪಡಿಸಲಾಗಿತ್ತು. ಸದ್ಯದ ಅಂಕಿ ಅಂಶದ ಪ್ರಕಾರ 3,20,998 ಮಕ್ಕಳು ದಾಖಲಾಗುವ ಮೂಲಕ ಶೇ.101.01ರಷ್ಟು ಸಾಧನೆ ಮಾಡಲಾಗಿದೆ.

    ಶೇಕಡಾವಾರು ದಾಖಲಾತಿಯಲ್ಲಿ ಬಂಟ್ವಾಳ ವಲಯ ಮೊದಲ ಸ್ಥಾನದಲ್ಲಿದ್ದು, ಬೆಳ್ತಂಗಡಿ ಎರಡನೇ ಸ್ಥಾನದಲ್ಲಿದೆ. ಮೂಡುಬಿದಿರೆ ಶೇ.98.58 ದಾಖಲಾತಿಯೊಂದಿಗೆ ಕೊನೇ ಸ್ಥಾನದಲ್ಲಿದೆ. ಕರೊನಾ ಭೀತಿ ಸ್ವಲ್ಪ ಮಟ್ಟಿಗೆ ದೂರವಾಗಿರುವುದರಿಂದ ಶಾಲೆಗೆ ಮಕ್ಕಳನ್ನು ಕಳುಹಿಸುವಲ್ಲಿ ಹೆತ್ತವರು ಹೆಚ್ಚು ಮುತುವರ್ಜಿ ತೋರಿಸುತ್ತಿದ್ದಾರೆ ಎನ್ನುತ್ತಾರೆ ಅಧಿಕಾರಿಗಳು.

    1ನೇ ತರಗತಿಗೆ 33,100 ಮಕ್ಕಳು: ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಒಂದನೇ ತರಗತಿಗೆ 33,100 ಮಕ್ಕಳು ದಾಖಲಾಗಿದ್ದಾರೆ. ಕಳೆದ ವರ್ಷ ಒಂದನೇ ತರಗತಿಯಲ್ಲಿ 30,891 ವಿದ್ಯಾರ್ಥಿಗಳಿದ್ದರು. ಅಂದರೆ ಈ ಬಾರಿ 2,209 ಮಕ್ಕಳು ಹೆಚ್ಚುವರಿಯಾಗಿ ಸೇರ್ಪಡೆಯಾಗಿದ್ದಾರೆ.

    ಅನುದಾನಿತ, ಸರ್ಕಾರಿ ಶಾಲೆ ಮುಂದೆ: ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಮಕ್ಕಳು ಸರ್ಕಾರಿ ಶಾಲೆಗಳತ್ತ ಒಲವು ತೋರಿಸಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ ಊರಿಗೆ ತೆರಳಿದ್ದ ಉತ್ತರ ಕರ್ನಾಟಕ, ಬಯಲು ಸೀಮೆ ಭಾಗದ ವಲಸೆ, ಕೂಲಿ ಕಾರ್ಮಿಕರು ಕುಟುಂಬ ಸಮೇತ ವಾಪಾಸಾಗಿದ್ದು, ಇದರಿಂದ ಇದರಿಂದ ದಾಖಲಾತಿಯಲ್ಲಿ ಏರಿಕೆಯಾಗಿದೆ. ಒಟ್ಟಾರೆ ದಾಖಲಾತಿಯಲ್ಲಿ ಅನುದಾನಿತ ಶಾಲೆಗಳು ಮುಂದಿವೆ. 46,229 ನಿಗದಿತ ಗುರಿಯಲ್ಲಿ 50,847 ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳುವ ಮೂಲಕ ಮೂಲಕ ಶೇ.109.99 ಸಾಧನೆ ಆಗಿದೆ. ಸರ್ಕಾರಿ ಶಾಲೆಗಳು ಎರಡನೇ ಸ್ಥಾನದಲ್ಲಿದ್ದು, 98,532 ವಿದ್ಯಾರ್ಥಿಗಳ ಗುರಿಯಲ್ಲಿ 1,02,518 ವಿದ್ಯಾರ್ಥಿಗಳ ದಾಖಲಾತಿಯೊಂದಿಗೆ ಶೇ.104.05ರಷ್ಟು ಸಾಧನೆ ಮಾಡಿದೆ. ಖಾಸಗಿ ಶಾಲೆಗಳು ಗುರಿ ತಲುಪುವಲ್ಲಿ ವಿಫಲವಾಗಿದ್ದು, 1,67,614 ಗುರಿಯಲ್ಲಿ 1,61,247 ಮಕ್ಕಳು ಮಾತ್ರ ದಾಖಲಾಗಿದ್ದಾರೆ. ಅಂದರೆ ಶೇ.96.20 ಸಾಧನೆಯಾಗಿದೆ.

    ಬ್ಲಾಕ್                          ಗುರಿ                 ದಾಖಲಾತಿ             ಶೇಕಡವಾರು
    ಬಂಟ್ವಾಳ                   60,383                 61,586           101.99
    ಬೆಳ್ತಂಗಡಿ                  40,442                 40,578           100.34
    ಮಂಗಳೂರು (ಉ)     65,724                 65,903           100.27
    ಮಂಗಳೂರು (ದ)      68,119                 67,333             98.85
    ಮೂಡುಬಿದಿರೆ           18,701                 18,435             98.58
    ಪುತ್ತೂರು                  47,422                 46,863             98.78
    ಸುಳ್ಯ                       20,163                 20,300           100.68
    ಒಟ್ಟು                      3,20,974              3,20,998         100.01

    ಉಡುಪಿ ಸರ್ಕಾರಿ ಶಾಲೆ ಮೇಲುಗೈ: ಉಡುಪಿ ಜಿಲ್ಲೆಯಲ್ಲಿ 2021-22ನೇ ಸಾಲಿನಲ್ಲಿ 1ರಿಂದ 10ನೇ ತರಗತಿ ಪ್ರವೇಶಾತಿಗೆ 1,59,656 ಗುರಿ ನಿಗದಿಪಡಿಸಲಾಗಿದ್ದು, 1,58,812 ಮಕ್ಕಳು ದಾಖಲಾಗಿದ್ದಾರೆ. ಗುರಿ ಸಾಧನೆಗೆ 844 ಮಕ್ಕಳ ಕೊರತೆ ಇದೆ. ಸರ್ಕಾರಿ ಶಾಲೆಗೆ 60318, ಖಾಸಗಿ ಅನುದಾನಿತ ಶಾಲೆಗೆ 22452, ಖಾಸಗಿ ಶಾಲೆಗೆ 73739, ಇತರೆ ಶಾಲೆಗಳಿಗೆ 2303 ಮಕ್ಕಳು ಸೇರ್ಪಡೆಯಾಗಿದ್ದಾರೆ. ಬೈಂದೂರು ತಾಲೂಕಿನಲ್ಲಿ 26422 ಮಕ್ಕಳ ಗುರಿಗೆ ಬದಲಾಗಿ 26675 ಮಕ್ಕಳು ಪ್ರವೇಶಾತಿ ಪಡೆದಿದ್ದು, ನಿಗದಿತ ಗುರಿಗಿಂತ 253 ಹೆಚ್ಚವರಿ ಮಕ್ಕಳು ಶಾಲೆಗೆ ಸೇರಿದ್ದಾರೆ.

    ಜಿಲ್ಲೆಯಲ್ಲಿ ಮಕ್ಕಳ ಶಾಲಾ ದಾಖಲಾತಿ ಪ್ರಕ್ತಿಯೆ ಮುಂದುವರಿದಿದ್ದು, ನಿರೀಕ್ಷೆಗೂ ಮೀರಿ ಮಕ್ಕಳು ಶಾಲೆಗೆ ದಾಖಲಾಗಿದ್ದಾರೆ. ಇನ್ನೂ ದಾಖಲಾತಿ ನಡೆಯುತ್ತಿದ್ದು, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪತ್ತೆ ಮಾಡಿ ಸೇರ್ಪಡೆಗೊಳಿಸುವ ಪ್ರಕ್ರಿಯೆಯೂ ಮುಂದಿನ ದಿನಗಳಲ್ಲಿ ನಡೆಯಲಿದೆ.
     ಮಲ್ಲೇಸ್ವಾಮಿ, ಶಿಕ್ಷಣ ಇಲಾಖೆ ಉಪನಿರ್ದೇಶಕ, ದ.ಕ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts