More

    ಸರ್ಕಾರದ ಮಾರ್ಗಸೂಚಿ ಪಾಲನೆ ಕಡ್ಡಾಯ

    ಧಾರವಾಡ: ಕರೊನಾ ಹಾವಳಿ ಹಿನ್ನೆಲೆಯಲ್ಲಿ ಅಂದಾಜು 6 ತಿಂಗಳಿಂದ ಬಂದ್ ಆಗಿದ್ದ ಶಾಲೆ, ಕಾಲೇಜುಗಳನ್ನು ಜ. 1ರಿಂದ ಪುನರಾರಂಭಿಸಲು ಸರ್ಕಾರ ನಿರ್ಧರಿಸಿದ್ದು, ಜಿಲ್ಲಾದ್ಯಂತ ಶಾಲೆ, ಕಾಲೇಜುಗಳ ಸ್ವಚ್ಛತಾ ಕಾರ್ಯ ಭರದಿಂದ ಸಾಗಿದೆ.

    ಜಿಲ್ಲೆಯಲ್ಲಿನ ಅನುದಾನಿತ, ಅನುದಾನ ರಹಿತ ಹಾಗೂ ಸರ್ಕಾರಿ ಶಾಲೆಗಳ ಆವರಣ, ಕೊಠಡಿಗಳು, ಶೌಚಗೃಹ, ಕಲಿಕಾ ಸಾಮಗ್ರಿಗಳನ್ನು ಸ್ವಚ್ಛಗೊಳಿಸುವ ಕಾರ್ಯ ಎರಡ್ಮೂರು ದಿನಗಳಿಂದ ನಡೆಯುತ್ತಿದೆ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ 10ನೇ ತರಗತಿಯಿಂದ ಪಿಯು ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಹಾಗೂ ಮಧ್ಯಾಹ್ನದಿಂದ 6ನೇ ತರಗತಿಯಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಗಮ ನಡೆಯಲಿದೆ.

    ಕೆಲ ದಿನಗಳ ಹಿಂದೆ ವಿದ್ಯಾಗಮ ಯೋಜನೆ ಪ್ರಾರಂಭವಾದ ಸಂದರ್ಭದಲ್ಲಿ ಶಿಕ್ಷಕರು ಹಾಗೂ ಮಕ್ಕಳಲ್ಲಿ ಕರೊನಾ ಕಾಣಿಸಿಕೊಂಡಿತ್ತು. ಹೀಗಾಗಿ ಈ ಬಾರಿ ಸಾಕಷ್ಟು ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ. ಶಿಕ್ಷಕರು ಹಾಗೂ ಸಿಬ್ಬಂದಿ ಕಡ್ಡಾಯ ಕರೊನಾ ಪರೀಕ್ಷೆಗೆ ಒಳಪಟ್ಟಿರಬೇಕು. ಮಕ್ಕಳನ್ನು ಶಾಲೆಗೆ ಕಳುಹಿಸಲು ಪಾಲಕರು ಒಪ್ಪಿಗೆ ಪತ್ರ ನೀಡುವುದು, ಹೀಗೆ ಹಲವು ನಿಬಂಧನೆಗಳ ಮೂಲಕ ಶಾಲೆ ಪ್ರಾರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

    ಜಿಲ್ಲೆಯ ನೋಡಲ್ ಅಧಿಕಾರಿಯಾಗಿ ನೇಮಕವಾಗಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕ ಪ್ರಸನ್ನಕುಮಾರ ಅವರು ಗುರುವಾರ ನಗರಕ್ಕೆ ಆಗಮಿಸಿ ಸಿದ್ಧತೆ ಕಾರ್ಯ ಪರಿಶೀಲಿಸಿದರು. ನಗರದ ಆರ್.ಎನ್. ಶೆಟ್ಟಿ ಕ್ರೀಡಾಂಗಣ ಬಳಿಯ ಸರ್ಕಾರಿ ಪ್ರೌಢ ಶಾಲೆ ಹಾಗೂ ಮುಮ್ಮಿಗಟ್ಟಿ ಗ್ರಾಮದ ಶಾಲೆಗೆ ಭೇಟಿ ನೀಡಿ, ಶಾಲೆ ಸಿಬ್ಬಂದಿಯಿಂದ ಮಾಹಿತಿ ಪಡೆದರು.

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾದ್ಯಂತ ಜ. 1ರಿಂದ ಶಾಲೆ, ಕಾಲೇಜುಗಳ ಪ್ರಾರಂಭಕ್ಕೆ ತೀರ್ವನಿಸಲಾಗಿದೆ. ಶಾಲೆಗೆ ಆಗಮಿಸುವ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಯಾವುದೇ ಸಮಸ್ಯೆ ಎದುರಾಗದಂತೆ ಎಲ್ಲ ರೀತಿಯ ಸುರಕ್ಷತೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈಗಾಗಲೇ ಡಿಡಿಪಿಐ ಅಧ್ಯಕ್ಷತೆಯಲ್ಲಿ ಎಲ್ಲ ಅಧಿಕಾರಿಗಳ, ಮುಖ್ಯ ಶಿಕ್ಷಕರ ಸಭೆ ನಡೆಸಿ ಪೂರ್ವಭಾವಿ ಸಿದ್ಧತೆ ನಡೆಸಿ, ಅಗತ್ಯ ತರಬೇತಿ ಸಹ ನೀಡಲಾಗಿದೆ ಎಂದರು.

    ಈಗಾಗಲೇ ಬಹುತೇಕ ಶಿಕ್ಷಕರು ಶಾಲೆ ಪ್ರಾರಂಭಕ್ಕೆ ಬೇಡಿಕೆ ಇಡುತ್ತಿದ್ದಾರೆ. ಅವರು ಸಹಕಾರ ನೀಡುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಶಾಲೆ ಪ್ರಾರಂಭಿಸಲಾಗುತ್ತಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕೈಗೊಂಡ ಸುರಕ್ಷಾ ಕ್ರಮಗಳನ್ನೇ ಜಾರಿ ಮಾಡಲಾಗುವುದು. ಈಗಾಗಲೇ ಶಾಲೆಗಳನ್ನು ಸ್ಯಾನಿಟೈಸ್ ಮಾಡಲಾಗಿದೆ. ಶಿಕ್ಷಕರು ಕರೊನಾ ಪರೀಕ್ಷೆ ಮಾಡಿಸಿಕೊಂಡು ವರದಿ ತರುವಂತೆ ಹೇಳಲಾಗಿದೆ. ಮಕ್ಕಳು ಅಗತ್ಯ ಬಿದ್ದರೆ ಮಾತ್ರ ಮಾಡಿಸಿಕೊಳ್ಳಬಹುದು. ಇನ್ನು 50 ವರ್ಷ ಮೇಲ್ಪಟ್ಟ ಶಿಕ್ಷಕರಿಗೆ ಫೇಸ್​ಶೀಲ್ಡ್ ಬಳಸಲು ಸೂಚಿಸಲಾಗಿದೆ ಎಂದರು. ಡಿಡಿಪಿಐ ಮೋಹನಕುಮಾರ ಹಂಚಾಟೆ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮೇಶ ಬೊಮ್ಮಕ್ಕನವರ, ಗಿರೀಶ ಪದಕಿ, ಎ.ಎ. ಖಾಜಿ, ಶಿಕ್ಷಕರು, ಇಲಾಖೆ ಸಿಬ್ಬಂದಿ, ಇತರರಿದ್ದರು.

    ಸಿಇಒ ಭೇಟಿ

    ಜಿ.ಪಂ. ಸಿಇಒ ಡಾ. ಬಿ. ಸುಶೀಲಾ ಅವರು ನಗರ ಹಾಗೂ ಗ್ರಾಮೀಣ ಪ್ರದೇಶದ ವಿವಿಧ ಶಾಲೆ, ಕಾಲೇಜುಗಳಿಗೆ ಗುರುವಾರ ಭೇಟಿ ನೀಡಿ ಕೋವಿಡ್ ಸುರಕ್ಷತೆ ಮಾರ್ಗಸೂಚಿ ಪರಿಶೀಲಿಸಿದರು. ಕರಡಿಗುಡ್ಡ, ಲಕಮಾಪುರ, ಯಾದವಾಡ, ಧಾರವಾಡದ ಆರ್.ಎನ್. ಕ್ರೀಡಾಂಗಣದ ಬಳಿಯ ಸರ್ಕಾರಿ ಪ್ರೌಢ ಶಾಲೆ, ಕೆ.ಇ. ಬೋರ್ಡ್ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, ಇತರ ವಿದ್ಯಾಸಂಸ್ಥೆಗಳಿಗೆ ಭೇಟಿ ನೀಡಿದರು. ಪರಸ್ಪರ ಅಂತರ ಕಾಪಾಡಿಕೊಂಡು ಸರದಿ ಸಾಲಿನಲ್ಲಿ ಬರಲು ಚೌಕಾಕಾರದ ಗುರುತು, ಕೊಠಡಿಗಳ ಸ್ಯಾನಿಟೈಸೇಷನ್, ಐಸೊಲೇಷನ್ ರೂಂ, ಶೌಚಗೃಹ ವ್ಯವಸ್ಥೆಗಳನ್ನು ವೀಕ್ಷಿಸಿದರು. ಡಿಡಿಪಿಐ ಮೋಹನಕುಮಾರ ಹಂಚಾಟೆ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎ. ಖಾಜಿ, ಶಿಕ್ಷಣಾಧಿಕಾರಿಗಳಾದ ಮಂಜುನಾಥ ಅಡವೇರ, ಶಿವಲೀಲಾ ಕಳಸಣ್ಣವರ, ಇತರರಿದ್ದರು.

    ವಿದ್ಯಾರ್ಥಿಗಳು ಪರಸ್ಪರ ಅಂತರ ಕಾಯ್ದುಕೊಂಡು ತರಗತಿಯಲ್ಲಿ ಕುಳಿತುಕೊಳ್ಳಲು ಕೊಠಡಿಗಳ ಅಭಾವ ಆಗದಂತೆ ನೋಡಿಕೊಳ್ಳಲಾಗಿದೆ. ಧಾರವಾಡ ಜಿಲ್ಲೆಯ ಸಿದ್ಧತೆ ಪರಿಶೀಲನೆ ನಡೆಸಿರುವ ಕುರಿತು ಇಲಾಖೆಗೆ ಸಮಗ್ರ ವರದಿ ನೀಡಲಾಗುವುದು.
    | ಪ್ರಸನ್ನಕುಮಾರ ಜಿಲ್ಲಾ ನೋಡಲ್ ಅಧಿಕಾರಿ

    ವಿದ್ಯಾರ್ಥಿಗಳ ವಿವರ: ಜಿಲ್ಲೆಯಲ್ಲಿ 6ರಿಂದ 10ನೇ ತರಗತಿಯ 653 ಸರ್ಕಾರಿ ಶಾಲೆಗಳಲ್ಲಿ 65,864 ಮಕ್ಕಳು, 220 ಅನುದಾನಿತ ಶಾಲೆಗಳಲ್ಲಿ 42,056 ಮಕ್ಕಳು ಹಾಗೂ 296 ಅನುದಾನ ರಹಿತ ಶಾಲೆಗಳಲ್ಲಿ 53,532 ಮಕ್ಕಳು ಹಾಜರಾಗಲಿದ್ದಾರೆ. ಇವರಲ್ಲಿ ಅಂದಾಜು 30,000 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಓದುತ್ತಿದ್ದಾರೆ. ಅದೇರೀತಿ ಜಿಲ್ಲೆಯಲ್ಲಿ 27 ಸರ್ಕಾರಿ, 38 ಅನುದಾನಿತ ಹಾಗೂ 111 ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ ಅಂದಾಜು 20,000ಕ್ಕೂ ಅಧಿಕ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts