More

    ಪುತ್ತೂರು ನಗರಸಭೆ ಸ್ವಚ್ಛತೆ ಗುತ್ತಿಗೆ ಅವ್ಯವಹಾರ

    ಶ್ರವಣ್ ಕುಮಾರ್ ನಾಳ ಪುತ್ತೂರು
    ಪುತ್ತೂರು ನಗರಸಭೆಯ 27 ವಾರ್ಡ್‌ಗಳಲ್ಲಿ ಸ್ವಚ್ಛತೆ, ನೈರ್ಮಲ್ಯ, ಸಾರ್ವಜನಿಕ ಶೌಚಗೃಹ ನಿರ್ವಹಣೆ ಮೊದಲಾದ ಕೆಲಸಕ್ಕಾಗಿ ಒಂದು ವರ್ಷದ ಅವಧಿಗೆ ಟೆಂಡರ್ ಕರೆದು, ಅದನ್ನು ಐದು ವರ್ಷಕ್ಕೆ ಗುತ್ತಿಗೆ ನೀಡಿರುವ ಪ್ರಕರಣದಲ್ಲಿ ಅಧಿಕಾರಿಗಳ ವಿರುದ್ಧ್ದ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗಿದೆ.
    2013-14ನೇ ಸಾಲಿನಲ್ಲಿ ಪುತ್ತೂರು ನಗರಸಭೆಯಿಂದ ಸ್ವಚ್ಛತೆ ಹಾಗೂ ನೈರ್ಮಲ್ಯ, ಸಾರ್ವಜನಿಕ ಶೌಚಗೃಹ ವಾರ್ಷಿಕ ನಿರ್ವಹಣೆಗಾಗಿ ಅಂದಾಜು ಪಟ್ಟಿ ತಯಾರಿಸಿ ಟೆಂಡರ್ ಕರೆದು 38 ಲಕ್ಷ ರೂ.ಗೆ ಗುತ್ತಿಗೆ ನೀಡಲಾಗಿತ್ತು. ಈ ಗುತ್ತಿಗೆ ಅವಧಿ 2015ಕ್ಕೆ ಮುಗಿದಿದ್ದರೂ ಮರು ಟೆಂಡರ್ ಕರೆಯದೆ 2019ರವರೆಗೆ ಮುಂದುವರಿಸಲು ಅವಕಾಶ ನೀಡಲಾಗಿದೆ. ಟೆಂಡರ್ ಮೊತ್ತ ರೂ. 38 ಲಕ್ಷದ ಬದಲು ಹೆಚ್ಚುವರಿ 81 ಲಕ್ಷ ರೂ. ಪಾವತಿಸಿ ಹಣದುರುಪಯೋಗ ಮಾಡಲಾಗಿದೆ ಎನ್ನುವುದು ಆರೋಪ.
    ಗುತ್ತಿಗೆದಾರರಿಗೆ ಅನುಕೂಲ: ಗುತ್ತಿಗೆ ವಿಸ್ತರಣೆ ಸಂದರ್ಭ ಕಾಯ್ದೆ ಉಲ್ಲಂಘನೆ ಮಾಡಿ, ಟೆಂಡರ್ ಷರತ್ತು ಪಾಲಿಸದೆ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದು ನಗರಸಭೆ ಪ್ರತಿಪಕ್ಷ ಮಾಜಿ ನಾಯಕ ಎಚ್.ಮಹಮ್ಮದ್ ಅಲಿ ಆರೋಪಿಸಿದ್ದರು. ಈ ಬಗ್ಗೆ ತನಿಖೆ ನಡೆಸಿ ಅವ್ಯವಹಾರದಲ್ಲಿ ಭಾಗಿಯಾಗಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಸರ್ಕಾರಕ್ಕೆ ದೂರು ನೀಡಿದ್ದರು.
    ಪೌರಾಡಳಿತ ನಿರ್ದೇಶಕರಿಗೆ ಶಿಫಾರಸು: ಆರೋಪಕ್ಕೆ ಸಂಬಂಧಿಸಿ ತನಿಖೆ ನಡೆಸಿ ವರದಿ ನೀಡುವಂತೆ ಪೌರಾಡಳಿತ ನಿರ್ದೇಶಕರು ದ.ಕ. ಜಿಲ್ಲಾಧಿಕಾರಿಗೆ ಸೂಚಿಸಿದ್ದರು. ಅದರಂತೆ ವಿಸ್ತೃತ ತನಿಖೆ ನಡೆಸಿರುವ ಡಿಸಿ, ಅಂದಿನ ಪೌರಾಯುಕ್ತರು ಹಾಗೂ ಇತರ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಪೌರಾಡಳಿತ ನಿರ್ದೇಶಕರಿಗೆ ಶಿಫಾರಸು ಮಾಡಿದ್ದಾರೆ.
    ಕೆಲಸ ಮಾಡಿದ್ದು 25 ಮಂದಿ, ಬಿಲ್ ಪಾವತಿ 41 ಜನಕ್ಕೆ: 2015ರವರೆಗೆ ನಗರಸಭೆ ಪುರಸಭೆಗಳಲ್ಲಿ ಸ್ವಚ್ಛತಾ ಕೆಲಸ ಗುತ್ತಿಗೆ ಮೂಲಕ ನಿರ್ವಹಿಸು ತ್ತಿದ್ದು, ನಗರ ಸ್ಥಳೀಯ ಸಂಸ್ಥೆಗಳು ನೀಡಿರುವ ಸ್ವಚ್ಛತಾ ಗುತ್ತಿಗೆ ಸ್ಥಗಿತಗೊಳಿಸಬೇಕು. ಸ್ವಚ್ಛತಾ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ನೇರವಾಗಿ ವೇತನ ಪಾವತಿಸಬೇಕು, ಸ್ವಚ್ಛತೆಯ ಗುತ್ತಿಗೆ ನೀಡುವಂತಿಲ್ಲ ಎಂದು ಸರ್ಕಾರ ಆದೇಶಿಸಿತ್ತು. ಆದರೆ ಪುತ್ತೂರು ನಗರಸಭೆ 2014ರ ಗುತ್ತಿಗೆ ಸ್ಥಗಿತಗೊಳಿಸದೆ 2019ರ ತನಕ ಮುಂದುವರಿಸಿ ಕಾರ್ಮಿಕರಿಗೆ ನೇರವಾಗಿ ವೇತನ ಪಾವತಿಸುವ ಬದಲು ಗುತ್ತಿಗೆದಾರರಿಗೆ ಬಿಲ್ ಪಾವತಿಸಿದೆ. 25 ಕಾರ್ಮಿಕರನ್ನು ಕರ್ತವ್ಯಕ್ಕೆ ನಿಯೋಜಿಸಿ 41 ಕಾರ್ಮಿಕರ ಲೆಕ್ಕ ತೋರಿಸಿ ಬಿಲ್ ಮಾಡಲಾಗಿದೆ. ಹಾಜರಾತಿ, ಕೆಲಸ ಮಾಡಿದ ದಾಖಲೆಗಳು ನಗರಸಭೆ ಕಚೇರಿ ಕಡತದಲ್ಲಿಲ್ಲ.

    ಪುತ್ತೂರು ನಗರಸಭೆಯ ಸ್ವಚ್ಛತಾ ಗುತ್ತಿಗೆ ಟೆಂಡರ್‌ನಲ್ಲಿ ಅವ್ಯವಹಾರ, ಹಣ ದುರುಪಯೋಗ ಬಗ್ಗೆ ದೂರು ನೀಡಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮಕ್ಕೆ ಡಿಸಿ ಶಿಫಾರಸು ಮಾಡಿದ್ದಾರೆ.
    | ಎಚ್.ಮಹಮ್ಮದ್ ಅಲಿ
    ಪುತ್ತೂರು ನಗರಸಭೆ ಮಾಜಿ ಪ್ರತಿಪಕ್ಷ ನಾಯಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts