ನವದೆಹಲಿ: ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಸೇರಿ ಅವರ ಬಣದ 15 ಶಿವಸೇನೆ ಬಂಡಾಯ ಶಾಸಕರ ವಿರುದ್ಧ ಅನರ್ಹತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಜುಲೈ 11ರಂದು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ.ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಶಾಸಕರನ್ನು ವಿಧಾನಸಭೆಯಿಂದ ಅಮಾನತುಗೊಳಿಸುವಂತೆ ಕೋರಿ ಶಿವಸೇನೆ ಮುಖ್ಯಸ್ಥ ಸುನಿಲ್ ಪ್ರಭು ಅವರು ಸಲ್ಲಿಸಿರುವ ಅರ್ಜಿ ಇದಾಗಿದೆ.
ಮುಖ್ಯಮಂತ್ರಿ ಸೇರಿದಂತೆ 16 ಶಾಸಕರ ವಿರುದ್ಧ ಅನರ್ಹತೆ ಪ್ರಕ್ರಿಯೆಗಳು ಬಾಕಿ ಇರುವ ಕಾರಣ ಅರ್ಜಿಯನ್ನು ತುರ್ತು ವಿಚಾರಣೆಯ ಅಗತ್ಯವಿದೆ ಎಂದು ಹಿರಿಯ ವಕೀಲ ಕಪಿಲ್ ಸಿಬಲ್ ಅವರು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೆಬಿ ಪರ್ದಿವಾಲಾ ಅವರನ್ನು ಒಳಗೊಂಡ ರಜಾಕಾಲದ ಪೀಠವನ್ನು ಒತ್ತಾಯಿಸಿದರು. ಜುಲೈ 11 ರಂದು ಹೊಸ ಅರ್ಜಿಯನ್ನು ಆಲಿಸಲು ಪೀಠವು ಒಪ್ಪಿಕೊಂಡಿತು.
ಜೂನ್ 29 ರಂದು ವಿಧಾನಸಭೆಯಲ್ಲಿ ವಿಶ್ವಾಸಮತ ಪರೀಕ್ಷೆ ನಡೆಸುವಂತೆ ಮಹಾ ವಿಖಾಸ್ ಅಘಾಡಿ(ಎಂವಿಎ) ಸರ್ಕಾರಕ್ಕೆ ಮಹಾರಾಷ್ಟ್ರ ರಾಜ್ಯಪಾಲರು ನಿರ್ದೇಶನ ನೀಡಿದ್ದರು. ಅದಕ್ಕೆ ತಡೆನೀಡಬೇಕೆಂದು ಶಿವಸೇನೆ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು. ಸುಪ್ರೀಂ ಕೋರ್ಟ್ ರಾಜ್ಯಪಾಲರ ನಿರ್ದೇಶನಕ್ಕೆ ತಡೆನೀಡಲು ನಿರಾಕರಿಸಿತ್ತು.ಈ ಬಳಿಕ ಉದ್ಧವ್ ಠಾಕ್ರೆ ವಿಶ್ವಾಸ ಮತ ಸಾಬೀತುಪಡಿಸುವ ಮುನ್ನವೇ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. (ಏಜೆನ್ಸೀಸ್)