More

    ರಾಜ್ಯ ಡಿಜಿಪಿ ವಿರುದ್ಧ ಜಾಮೀನು ರಹಿತ ವಾರೆಂಟಿಗೆ ಸುಪ್ರೀಂ ತಡೆ : ಎರಡೇ ದಿನದಲ್ಲಿ ನಡೆಯಿತು ಕ್ಷಿಪ್ರ ಬೆಳವಣಿಗೆ!

    ನವದೆಹಲಿ: ಡಿವೈಎಸ್​ಪಿ ಒಬ್ಬರ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಪೊಲೀಸ್ ಮುಖ್ಯಸ್ಥ ಪ್ರವೀಣ್ ಸೂದ್ ವಿರುದ್ಧ ಕರ್ನಾಟಕ ಹೈಕೋರ್ಟ್​ ಜಾರಿಗೊಳಿಸಿದ್ದ ಜಾಮೀನು ರಹಿತ ವಾರೆಂಟ್​(ಎನ್​ಬಿಡಬ್ಲ್ಯು)ಗೆ ಸುಪ್ರೀಂ ಕೋರ್ಟ್ ಗುರುವಾರ ತಡೆ ನೀಡಿದೆ.

    1986ರ ಬ್ಯಾಚಿನ ಐಪಿಎಸ್​ ಅಧಿಕಾರಿಯಾಗಿರುವ ಪ್ರವೀಣ್ ಸೂದ್ ಇತ್ತೀಚೆಗಷ್ಟೇ ರಾಜ್ಯ ಡಿಜಿ ಮತ್ತು ಐಜಿಪಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಡಿವೈಎಸ್​ಪಿ ಎಸ್​.ಎಸ್.ಕಾಶಿ ಸಲ್ಲಿಸಿರುವ ದೂರು ಅರ್ಜಿ ಸಂಬಂಧ ಪ್ರತಿಕ್ರಿಯೆ ಸಲ್ಲಿಸುವಲ್ಲಿ ಸೂದ್ ವಿಫಲರಾಗಿದ್ದರು. ಹೀಗಾಗಿ, ಕರ್ನಾಟಕ ಹೈಕೋರ್ಟ್ ಫೆಬ್ರವರಿ 18ರಂದು ಸೂದ್ ವಿರುದ್ಧ ಅರೆಸ್ಟ್ ವಾರೆಂಟ್ ಹೊರಡಿಸಿತ್ತು.

    ಡಿವೈಎಸ್​ಪಿ ಕಾಶಿ ಅವರ 24 ವರ್ಷದ ವೃತ್ತಿ ಜೀವನದಲ್ಲಿ 30 ಸಲ ವರ್ಗಾವಣೆ ಮಾಡಲಾಗಿದ್ದು, ಇದನ್ನ ಪ್ರಶ್ನಿಸಿ ಅವರು ಕರ್ನಾಟಕ ರಾಜ್ಯ ಆಡಳಿತ ನ್ಯಾಯಾಧಿಕರಣದ ಮೊರೆ ಹೋಗಿದ್ದರು. ಆದರೆ, ಅಲ್ಲಿ ವರ್ಗಾವಣೆ ಪ್ರಕ್ರಿಯೆಯನ್ನು ನ್ಯಾಯಾಧಿಕರಣ ಎತ್ತಿ ಹಿಡಿಯಿತು. ಇದನ್ನು ಪ್ರಶ್ನಿಸಿ ಕಾಶಿ ಹೈಕೋರ್ಟ್ ಮೊರೆ ಹೋಗಿದ್ದರು. ಇದಕ್ಕೆ ಫೆ.18ರಂದು ಪ್ರತಿಕ್ರಿಯಿಸುವಂತೆ ಕೋರ್ಟ್​ ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಿತ್ತು.

    ಆದರೆ, ಡಿಜಿಪಿ ಕಚೇರಿಯಿಂದಲೋ ಅಥವಾ ಡಿಜಪಿಯವರಿಂದಲೋ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಅಸಮಾಧಾನಗೊಂಡ ನ್ಯಾಯಪೀಠ,ಅದೇ ದಿನ ಡಿಜಿಪಿ ಪ್ರವೀಣ್ ಸೂದ್ ವಿರುದ್ಧ ಜಾಮೀನು ರಹಿತ ಬಂಧನದ ವಾರೆಂಟ್​ (ಎನ್​ಬಿಡಬ್ಲ್ಯು) ಹೊರಡಿಸಿತ್ತು. ಗೃಹ ಕಾರ್ಯದರ್ಶಿ ಮೂಲಕ ಇದು ಜಾರಿಯಾಗುವುದರಲ್ಲಿತ್ತು.ಪರಿಸ್ಥಿತಿ ಬಿಗಡಾಯಿಸಿದ್ದು ಅರಿತ ಡಿಜಪಿ ಕೂಡಲೇ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.

    ನಂತರ ನಡೆದ ಕ್ಷಿಪ್ರ ಬೆಳವಣಿಗೆಯಲ್ಲಿ, ಗುರುವಾರ ಸೂದ್ ಅವರ ಅರ್ಜಿ ಸುಪ್ರೀಂ ಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ನೇತೃತ್ವದ ನ್ಯಾಯಪೀಠಕ್ಕೆ ತ್ವರಿತ ವಿಚಾರಣೆಯ ಮನವಿಯೊಂದಿಗೆ ಸಲ್ಲಿಕೆಯಾಗಿತ್ತು. ನ್ಯಾಯಪೀಠದಲ್ಲಿ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ, ಸೂರ್ಯಕಾಂತ್ ಅವರೂ ಇದ್ದರು.

    ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ರಾಜ್ಯ ಪೊಲೀಸ್ ಮುಖ್ಯಸ್ಥರ ವಿರುದ್ಧದ ಈ ಆದೇಶವನ್ನು ಅಸಹಜ ಎಂದು ಬಣ್ಣಿಸಿದ್ದು, ತುರ್ತಾಗಿ ಹೈಕೋರ್ಟ್ ನೀಡಿರುವ ಆದೇಶಕ್ಕೆ ತಡೆ ನೀಡಬೇಕಾಗಿದೆ ಎಂದು ವಿನಂತಿಸಿದರು. ವಿಚಾರಣೆಗೆ ಸಲ್ಲಿಕೆಯಾದ ಅರ್ಜಿಯಲ್ಲಿ, ಹೈಕೋರ್ಟ್​ ಬಗ್ಗೆ ಕಕ್ಷಿದಾರ(ಡಿಜಿಪಿ)ರಿಗೆ ಗರಿಷ್ಠ ಗೌರವ ಇದೆ. ಹೈಕೋರ್ಟ್ ಕೇಳಿದ್ದ ಮಾಹಿತಿಯನ್ನು ಒದಗಿಸುವುದಕ್ಕೆ ಎಲ್ಲ ಕ್ರಮಗಳನ್ನೂ ತೆಗೆದುಕೊಳ್ಳಲಾಗಿದೆ. ಅದಕ್ಕೆ ಕಕ್ಷಿದಾರರು ಬದ್ಧರಾಗಿಯೂ ಇದ್ದಾರೆ. ಆದಾಗ್ಯೂ, ಕಕ್ಷಿದಾರರ ವಿರುದ್ಧ ಎನ್​ಬಿಡಬ್ಲ್ಯು ಆದೇಶ ಹೊರಡಿಸಿರುವುದನ್ನು ಸಮರ್ಥಿಸಿಕೊಳ್ಳಲಾಗುತ್ತಿಲ್ಲ. ಪ್ರಕರಣದ ಪರಿಸ್ಥಿತಿ ಮತ್ತು ವಾಸ್ತವಾಂಶಗಳನ್ನು ಗಮನಿಸಬೇಕಾಗಿತ್ತು.ಡಿವೈಎಸ್​ಪಿ ಅವರು ಹೈಕೋರ್ಟ್​ಗೆ ಮೊದಲ ಬಾರಿ ಅರ್ಜಿಯನ್ನು ಫೆ.11ಕ್ಕೆ ಸಲ್ಲಿಸಿದ್ದು, ನಂತರದ ವಿಚಾರಣಾ ದಿನಾಂಕ ಫೆ.18 ನಿಗದಿಯಾಗಿತ್ತು. ಪ್ರತಿಕ್ರಿಯೆ ಸಲ್ಲಿಸಲು ವಾರದ ಅವಕಾಶ ನೀಡಲಾಗಿತ್ತು. ಫೆ.18ರಂದು ಕೋರ್ಟ್​ನಲ್ಲಿ ವಿಚಾರಣೆ ಮುಂದೂಡುವಂತೆ ಕೋರಿಕೆ ಸಲ್ಲಿಸಿದರೂ, ನ್ಯಾಯಪೀಠ ಡಿಜಿಪಿ ಖುದ್ದಾಗಿ ಸಂಜೆ 4.45ರೊಳಗೆ ಹಾಜರಾಗುವಂತೆ ಸೂಚಿಸಿತು. ಫೆ.11ರ ಆದೇಶ ಪಾಲಿಸುವಂತೆ ಸೂಚಿಸಿತು. ಅಲ್ಲದೆ, ದೂರುದಾರನ 24 ವರ್ಷಗಳ ಸೇವಾವಧಿಯಲ್ಲಿನ ವರ್ಗಾವಣೆಗೆ ಸಂಬಂಧಿಸಿದ ಎಲ್ಲ ವಿವರಗಳನ್ನೂ ಅಫಿಡವಿಟ್ ರೂಪದಲ್ಲಿ ಸಲ್ಲಿಸುವಂತೆ ನ್ಯಾಯಪೀಠ ಆದೇಶಿಸಿತ್ತು. ಕಕ್ಷಿದಾರರು ಫೆಬ್ರವರಿಯಲ್ಲಷ್ಟೇ ಡಿಜಪಿಯಾಗಿ ಅಧಿಕಾರ ಸ್ವೀಕರಿಸಿದ್ದು, ಅವರನ್ನು ಕಳೆದ 24 ವರ್ಷಗಳ ವರ್ಗಾವಣೆಗೆ ಬಾಧ್ಯಸ್ಥರನ್ನಾಗಿಸುವುದು ಸಾಧುವಲ್ಲ ಎಂಬ ಅಂಶವನ್ನೂ ನ್ಯಾಯಪೀಠ ಪರಿಗಣಿಸಲು ಹಿಂದೇಟು ಹಾಕಿತು. ದೂರುದಾರ ಡಿವೈಎಸ್​ಪಿ ಲೋಕಾಯುಕ್ತ ಕೇಸ್​ನಲ್ಲೂ ಸಿಲುಕಿ, ತನಿಖೆ ಎದುರಿಸಿದ್ದರು ಎಂಬುದನ್ನೂ ಗಮನಿಸಬೇಕು ಎಂಬ ಅಂಶಗಳು ಇದ್ದವು.

    ಎಲ್ಲವನ್ನೂ ಆಲಿಸಿದ ಸುಪ್ರೀಂ ಕೋರ್ಟ್ ನ್ಯಾಯಪೀಠ ಡಿಜಪಿ ಪ್ರವೀಣ್ ಸೂದ್ ಅವರ ವಿರುದ್ಧ ಕರ್ನಾಟಕ ಹೈಕೋರ್ಟ್ ಹೊರಡಿಸಿದ್ದ ಎನ್​ಬಿಡಬ್ಲ್ಯು ಆದೇಶಕ್ಕೆ ತಡೆ ನೀಡಿತು. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts