More

    ಪತ್ರಿಕಾ ರಂಗದ ಪಾವಿತ್ರ್ಯ ಉಳಿಸಿ : ಶಾಸಕ ಎಚ್​.ನಾಗೇಶ್​ ಕರೆ

    ಮುಳಬಾಗಿಲು: ಎಲ್ಲ ಪತ್ರಕರ್ತರು ಪತ್ರಿಕಾ ಧರ್ಮ ಪಾಲಿಸುವ ಮೂಲಕ ಸಮಾಜದಲ್ಲಿ ಗೌರವ ಸ್ಥಾನ ಪಡೆಯಬೇಕು. ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗದ ನಂತರ 4ನೇ ಅಂಗವಾಗಿ ಪತ್ರಿಕಾ ರಂಗ ತನ್ನದೇ ಆದ ವೈಶಿಷ್ಟ್ಯ ಹೊಂದಿದ್ದು, ಇದರ ಪಾವಿತ್ರ್ಯ ಉಳಿಸಬೇಕು ಎಂದು ಶಾಸಕ ಎಚ್​.ನಾಗೇಶ್​ ಕರೆ ನೀಡಿದರು.


    ನಗರದ ಶಾಸಕರ ಕಚೇರಿ ಪಕ್ಕದಲ್ಲಿ ಸೋಮವಾರ ಆಯೋಜಿಸಿದ್ದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ತಾತ್ಕಾಲಿಕ ಭವನ, ಪತ್ರಿಕಾ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪತ್ರಕರ್ತರು ಸಾಮಾಜಿಕ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿದರೆ ಭ್ರಷ್ಟಾಚಾರ ತಡೆಗಟ್ಟಲು ಸಾಧ್ಯ. ನಾವಾದರೂ ಒಂದು ಮುಲಾಜಿನಲ್ಲಿ ಪ್ರಶ್ನೆ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಪತ್ರಕರ್ತರಿಗೆ ಅಂತಹ ನಿರ್ಬಂಧಗಳಿರುವುದಿಲ್ಲ. ಜನರ ಸಮಸ್ಯೆಗಳಿಗೆ ಪರಿಹಾರ ಸಿಗುವ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯುವ ಲೇಖನ, ವರದಿಗಳನ್ನು ಹೆಚ್ಚು ಬರೆಯಬೇಕು ಎಂದರು.


    ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಪತ್ರಕರ್ತರ ಭವನ ನಿಮಾರ್ಣಕ್ಕೆ ನಿವೇಶನ ಮಂಜೂರು ಮಾಡಿಸುವ ಜತೆಗೆ ಅರ್ಹ ಪತ್ರಕರ್ತರಿಗೆ ಶೀಘ್ರ ಉಚಿತ ನಿವೇಶನಗಳನ್ನು ನೀಡುತ್ತೇನೆ ಎಂದರು.


    ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಿ.ವಿ.ಗೋಪಿನಾಥ್​ ಮಾತನಾಡಿ, ಡಿ.ವಿ. ಗುಂಡಪ್ಪ ಅವರ ತವರೂರಲ್ಲಿ ಇದುವರೆಗೂ ಪತ್ರಕರ್ತರ ಭವನ ಇರಲಿಲ್ಲ. ಇದೇ ಮೊದಲ ಬಾರಿಗೆ ತಾಲೂಕು ಸಂಘದಿಂದ ಭವನ ಅಸ್ತಿತ್ವಕ್ಕೆ ಬಂದಿದ್ದು, ಮುಂದಿನ ದಿನಗಳಲ್ಲಿ ಸ್ವಂತ ಸ್ಥಳದಲ್ಲಿ ಭವನ ನಿಮಾರ್ಣವಾಗಲಿ ಎಂದರು.


    ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಉತ್ತನೂರು ವೆಂಕಟೇಶ್​ ಮಾತನಾಡಿ, ಮುಳಬಾಗಿಲಿನವರೇ ಆದ ಡಾ.ಡಿ.ವಿ.ಗುಂಡಪ್ಪ 1932ರಲ್ಲಿ ಮೈಸೂರು ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಸ್ಥಾಪನೆ ಮಾಡಿ, ನಂತರ ರಾಜ್ಯ ಕಾರ್ಯನಿರತ ಪತ್ರಕರ್ತರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಅವರ ಹುಟ್ಟೂರಿನಲ್ಲಿ ರಾಜ್ಯ ಸರ್ಕಾರದಿಂದ ಉತ್ತಮ ಪತ್ರಕರ್ತರ ಭವನ ಮತ್ತು ಡಿವಿಜಿ ಅಧ್ಯಯನ ಕೇಂದ್ರ ಸ್ಥಾಪನೆ ಮಾಡಬೇಕು. ಶಾಸಕರು ಈ ಬಗ್ಗೆ ಸರ್ಕಾರದ ಗಮನ ಸೆಳೆಯಬೇಕು ಎಂದು ಆಗ್ರಹಿಸಿದರು.


    ತಾಲೂಕು ಅಧ್ಯಕ್ಷ ಜಮ್ಮನಹಳ್ಳಿ ಕೃಷ್ಣ ಅವರ ನೇತೃತ್ವದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಶಾಸಕರಿಗೆ ಮನವಿ ನೀಡಲಾಯಿತು. ಕಲಾವಿದ ಈ ನೆಲ ಈ ಜಲ ವೆಂಕಟಾಚಲಪತಿ ಅವರ ನೇತೃತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.


    ಮಾಜಿ ಶಾಸಕ ಕೊತ್ತೂರು ಜಿ.ಮಂಜುನಾಥ್​ ಅವರ ಪ್ರಾಯೋಜಕತ್ವದಲ್ಲಿ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಶೈಕ್ಷಣಿಕ ಅಭಿವೃದ್ಧಿಗೆ ಆರ್ಥಿಕ ನೆರವು ನೀಡಲಾಯಿತು.


    ನಗರಸಭೆ ಅಧ್ಯಕ್ಷ ರಿಯಾಜ್​ ಅಹಮದ್​, ಪೌರಾಯುಕ್ತ ವಿ. ಶ್ರೀಧರ್​, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಕೆ.ಎಸ್​.ಗಣೇಶ್​, ಪತ್ರಕರ್ತರ ಜಿಲ್ಲಾ ಉಪಾಧ್ಯಕ್ಷ ಎ.ಅಪ್ಪಾಜಿಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್​.ಕೆ. ಚಂದ್ರಶೇಖರ್​, ದರಕಾಸ್ತು ಸಮಿತಿ ಸದಸ್ಯರಾದ ಪೆದ್ದಪ್ಪಯ್ಯ, ರಮೇಶ್​, ನಗರಸಭೆ ಸದಸ್ಯ ಎಂ.ಪ್ರಸಾದ್​, ಎಸ್​.ವೈ.ರಾಜಶೇಖರ್​, ಜಿ.ನಾಗರಾಜ್​, ಡಿ.ಸೋಮಣ್ಣ, ಜಬೀವುಲ್ಲ ಮತ್ತಿತರರಿದ್ದರು.

    ಜಿಎಸ್​ಟಿ ವಿರೋಧಿಸುತ್ತೇನೆ: ನಾನು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಅಂಬೇಡ್ಕರ್​ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕರಾಗಿದ್ದರೂ ಸರ್ಕಾರ ವಿಧಿಸಿರುವ ಜಿಎಸ್​ಟಿ ವಿರೋಧಿಸುತ್ತೇನೆ. ಜಿಎಸ್​ಟಿಯಿಂದ ಜನಸಾಮಾನ್ಯರಿಗೆ ಸಮಸ್ಯೆಯಾಗುತ್ತಿದೆ. ಕೇಂದ್ರ ಸರ್ಕಾರದ ಜನವಿರೋಧಿ ನೀತಿಯನ್ನು ನಾನು ಯಾವುದೇ ಅಂಜಿಕೆಯಿಲ್ಲದೆ ಪ್ರಶ್ನೆ ಮಾಡುತ್ತೇನೆ ಎಂದು ನಾಗೇಶ್​ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts