More

    ವೀರರ ರಕ್ತ ತರ್ಪಣೆಯಿಂದ ಸ್ವಾತಂತ್ರ್ಯ ಸಿಕ್ಕಿದೆ; ಸಾವರ್ಕರ ಮೊಮ್ಮಗ ಸಾತ್ಯಕಿ ಹೇಳಿಕೆ

    ಹುಬ್ಬಳ್ಳಿ: ಸ್ವಾತಂತ್ರ್ಯ ಕೇವಲ ಚಳವಳಿಗಳಿಂದ ಬಂದದ್ದಲ್ಲ. ಹಲವು ವೀರರ ತ್ಯಾಗ, ಬಲಿದಾನ, ರಕ್ತ ತರ್ಪಣೆಯಿಂದ ದೊರೆತದ್ದು. ಇದನ್ನು ಮರೆಮಾಚಲು ಕೆಲ ಶಕ್ತಿಗಳು ದೇಶದ ಮಹಾವೀರರಿಗೆ ಅವಮಾನಿಸುವ ಪ್ರಯತ್ನ ಮಾಡಿದರು ಎಂದು ಸ್ವಾತಂತ್ರ್ಯ ವೀರ ವಿನಾಯಕ ಸಾವರ್ಕರ ಅವರ ಮೊಮ್ಮಗ ಪುಣೆಯ ಸಾತ್ಯಕಿ ಸಾವರ್ಕರ ಬೇಸರ ವ್ಯಕ್ತಪಡಿಸಿದರು.
    ನಿರಾಮಯ ಫೌಂಡೇಶನ್​ ವತಿಯಿಂದ ಇಲ್ಲಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ “ಕಾರ್ಗಿಲ್ ವಿಜಯ ದಿವಸ’ ಮತ್ತು “ಅಮೃತ ಸ್ವಾತಂತ್ರ್ಯೋತ್ಸವ’ದ ಅಂಗವಾಗಿ ರಕ್ತದಾನ ಶಿಬಿರ ಹಾಗೂ ಸೈನಿಕರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
    ಮಕ್ಕಳಿಗೆ ನಮ್ಮ ದೇಶದ ನೈಜ ಇತಿಹಾಸ ತಿಳಿಸುವುದು ಅಗತ್ಯವಾಗಿದೆ. ಸಾಮ್ರಾಟ್​ ಚಂದ್ರಗುಪ್ತ, ಸಾಮ್ರಾಟ್​ ವಿಕ್ರಮಾದಿತ್ಯ, ಮಹಾರಾಣಾ ಪ್ರತಾಪ, ವೀರ ಸಾವರ್ಕರ ಅವರಂಥ ಮಹಾನ್​ ದೇಶಭಕ್ತರನ್ನು ಕೆಲವರು ಅವಮಾನಿಸಿದರು. ಇಂತಹ ಕಾರ್ಯಕ್ರಮಗಳ ಮೂಲಕ ನಿರಾಮಯ ಫೌಂಡೇಶನ್ ಇತಿಹಾಸವನ್ನು ಸಮಾಜದ ಮುಂದೆ ತೆರೆದು ಇಡುತ್ತಿರುವುದು ಹೆಮ್ಮೆಯ ಕೆಲಸವಾಗಿದೆ ಎಂದರು.
    1942ರಲ್ಲಿ ಚಲೇಜಾವ್​ ಚಳವಳಿ ಆರಂಭವಾಗಿತ್ತು. ಅದಕ್ಕೂ ಮುಂಚೆಯೇ ಸಾವರ್ಕರ ಅವರನ್ನು 1937ರಲ್ಲಿ ಬಂಧಮುಕ್ತಗೊಳಿಸಲಾಯಿತು. ಆಗ ಅವರು ರಾಜನೀತಿಯನ್ನು ಹಿಂದೂಕರಣ ಮಾಡುವ ಕೆಲಸ ಮಾಡಿದರು. ಕೊನೆ ಉಸಿರು ಇರುವವರೆಗೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. “ನಿಮ್ಮ ಕೈಯಲ್ಲಿರುವ ಪೆನ್ನು ಪಕ್ಕಕ್ಕೆ ಇಟ್ಟು, ನಿಮ್ಮ ಕೈಯಲ್ಲಿ ಬಂದೂಕು ಹಿಡಿಯಿರಿ’ ಎಂದು ಅಂದಿನ ಮರಾಠಿ ಸಾಹಿತ್ಯ ಸಮ್ಮೇಳನದ ಅಧ್ಯಯ ಭಾಷಣದಲ್ಲಿ ಸಾವರ್ಕರ ಕರೆ ಕೊಟ್ಟಿದ್ದರು. ಸಶಸ್ತ್ರ ಕ್ರಾಂತಿಯಾಗಬೇಕಾದರೆ, ಹಿಂದುಗಳು, ಬೌದ್ಧರು ಹೆಚ್ಚು ಸಂಖ್ಯೆಯಲ್ಲಿ ಸೇನೆ ಸೇರಬೇಕು. ಶಸ್ತ್ರಾಸ್ತ್ರ ಬಳಕೆ ಕಲಿಯಬೇಕು. ನಂತರ ಅದನ್ನು ಯಾರ ಮೇಲೆ ಬಳಸಬೇಕು ಎಂಬುದನ್ನು ನೀವೇ ನಿರ್ಧರಿಸಿ ಎಂದು ಹೇಳಿದ್ದರು. ಈ ಮೂಲಕ ಎಲ್ಲೆಡೆ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಿದ್ದರು ಎಂದು ಹೇಳಿದರು.
    ಆರ್​ಎಸ್​ಎಸ್​ ಪ್ರಜ್ಞಾ ಪ್ರವಾಹದ ಸಂಚಾಲಕ ರಘುನಂದನ ಮಾತನಾಡಿ, ಪ್ರತಿ ಯುದ್ಧದಲ್ಲಿ ಭಾರತಕ್ಕೆ ನಾಯಕತ್ವದ ಕೊರತೆ ಇತ್ತು. ಅಂದಿನ ಪ್ರಧಾನಿ ಅಟಲ್​ ಬೀಹಾರಿ ವಾಜಪೇಯಿ ಮತ್ತು ರಕ್ಷಣಾ ಸಚಿವ ಚಾರ್ಜ್​ ಫರ್ನಾಂಡೀಸ್​ ಅವರ ಉತ್ತಮ ನಾಯಕತ್ವದ ಫಲವಾಗಿ ಕಾರ್ಗಿಲ್​ ಯುದ್ಧ ಗೆಲ್ಲಲು ಸಾಧ್ಯವಾಯಿತು ಎಂದರು.
    ಸಮಾರಂಭದಲ್ಲಿ 75 ಹಾಲಿ, ಮಾಜಿ ಸೈನಿಕರನ್ನು ಹಾಗೂ ಅವರ ಕುಟುಂಬದವರನ್ನು ಸನ್ಮಾನಿಸಲಾಯಿತು. ರಾಷ್ಟ್ರೊತ್ಥಾನ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ಹಲವರು ರಕ್ತದಾನ ಮಾಡಿದರು.
    ಫೌಂಡೇಶನ್ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಬಾಳಿಕಾಯಿ, ಸಂಚಾಲಕ ಗುರು ಬನ್ನಿಕೊಪ್ಪ, ಕಲ್ಲಪ್ಪ ಮೊರಬದ, ದೇವರಾಜ ದಾಡಿಬಾವಿ, ಮಂಜುನಾಥ ಹೆಬಸೂರ, ಪವನ ಪಾಟೀಲ, ರಾಮಚಂದ್ರ ದೇಶಪಾಂಡೆ ಮತ್ತಿತರರು ಇದ್ದರು.

    ಭಾರತಕ್ಕೆ ಇಂದು ಅಗ್ನೀವಿರರ ಅವಶ್ಯಕತೆ ಇದೆ. ಭಾರತ ಸರ್ಕಾರ ಜಾರಿಗೊಳಿಸಿರುವ ಅಗ್ನಿಪಥ ಉತ್ತಮ ಯೋಜನೆಯಾಗಿದೆ. ಹಾಗಾಗಿ, ನಮ್ಮ ಯುವಕರನ್ನು ಹೆಚ್ಚು ಹೆಚ್ಚು ಸೇನೆಗೆ ಸೇರಿಸಲು ಎಲ್ಲರೂ ಪ್ರಯತ್ನಿಸಬೇಕಿದೆ.

    – ಸಾತ್ಯಕಿ ಸಾವರ್ಕರ, ಸಾವರ್ಕರ ಮೊಮ್ಮಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts