More

    ಗುಜರಾತ್ ಚುನಾವಣೆಗೆ 50 ಸಾವಿರ ಕೋಟಿ ರೂ. ಬೆಟ್ಟಿಂಗ್? ಬಿಜೆಪಿ ಬಹುಮತ ಪಡೆಯಲಿದೆ ಎನ್ನುತ್ತಿರುವ ಬುಕ್ಕಿಗಳು

    ನವದೆಹಲಿ: ಗುಜರಾತ್ ವಿಧಾನಸಭಾ ಚುನಾವಣೆ ಘೋಷಣೆ ಆಗುತ್ತಿದ್ದಂತೆ ಬೆಟ್ಟಿಂಗ್ ದಂಧೆ ಚುರುಕುಗೊಂಡಿದ್ದು, 40 ಸಾವಿರದಿಂದ 50 ಸಾವಿರ ಕೋಟಿ ರೂ. ವಹಿವಾಟು ನಡೆಯುವ ಅಂದಾಜು ಇದೆ. ಗುಜರಾತ್​ನಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ (ಆಪ್)ಗಳಿಸುವ ಸೀಟಿನ ಅಂದಾಜಿನ ಮೇಲೆ ಬೆಟ್ಟಿಂಗ್ ನಡೆಯುತ್ತಿದೆ. ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಗೆಲ್ಲುವ ಕ್ಷೇತ್ರಗಳ ಮೇಲೆ ಬಾಜಿ ಕಟ್ಟಲಾಗುತ್ತಿದೆ.

    ಬಿಜೆಪಿ 120ರಿಂದ 135 ಸ್ಥಾನಗಳನ್ನು ಗುಜರಾತ್​ನಲ್ಲಿ ಗೆಲ್ಲುವ ಸಾಧ್ಯತೆ ಇದ್ದು, 0.28ರಿಂದ 1.75ರ ಅನುಪಾತದಲ್ಲಿ ಬೆಟ್ ಪ್ರಸ್ತುತ ಚಾಲ್ತಿಯಲ್ಲಿದೆ ಎಂದು ಬುಕ್ಕಿಯೊಬ್ಬರು ಹೇಳಿದ್ದಾರೆ. ಕಳೆದ ಸಾರಿ ಪಟೇಲ್ ಸಮುದಾಯಕ್ಕೆ ಮೀಸಲಾತಿ ವಿಚಾರದಲ್ಲಿ ಬಿಜೆಪಿಗೆ ಹಿನ್ನೆಡೆಯಾಗಿ 99 ಸ್ಥಾನಗಳನ್ನು ಗಳಿಸಿತು. ಈ ಸಾರಿ ಮೀಸಲಾತಿ ಪರ ಹೋರಾಟ ಮಾಡಿದ್ದ ಹಾರ್ದಿಕ್ ಪಟೇಲ್ ಬಿಜೆಪಿ ಸೇರಿರುವುದು ಪಕ್ಷಕ್ಕೆ ಹೆಚ್ಚು ಅನುಕೂಲವಾಗಲಿದೆ ಎಂದಿದ್ದಾರೆ.

    ಗಾಂಧಿ ಕುಟುಂಬದ ಆಪ್ತರಾದ ಅಹ್ಮದ್ ಪಟೇಲ್ ಇಲ್ಲದಿರುವುದು ಕಾಂಗ್ರೆಸ್ ದೊಡ್ಡ ಪೆಟ್ಟು ನೀಡುವ ಸಾಧ್ಯತೆ ಇದೆ. ಹೀಗಾಗಿ ಕಾಂಗ್ರೆಸ್ 15ರಿಂದ 30 ಕ್ಷೇತ್ರ ಗೆಲ್ಲುವ ಸಾಧ್ಯತೆ ಇದೆ. ಕಾಂಗ್ರೆಸ್ ಮೇಲೆ 0.42ರಿಂದ 2.25 ಅನುಪಾತದಲ್ಲಿ ಬೆಟ್ಟಿಂಗ್ ನಡೆಯುತ್ತಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ 77 ಸ್ಥಾನಗಳಿಸಿತ್ತು. ಚುನಾವಣಾ ಕಣದಲ್ಲಿ ಗಮನ ಸೆಳೆಯುತ್ತಿರುವ ಆಮ್ ಆದ್ಮಿ ಪಕ್ಷ 10ರಿಂದ 20 ಕ್ಷೇತ್ರದಲ್ಲಿ ಜಯಿಸುವ ಸಾಧ್ಯತೆ ಇದ್ದು, 0.42ರಿಂದ 2 ಅನುಪಾತದಲ್ಲಿ ಬೆಟ್ಟಿಂಗ್ ನಡೆಯುತ್ತಿದೆ. ಹಿಮಾಚಲ ಪ್ರದೇಶದಲ್ಲಿ ಬಿಜೆಪಿ 25ರಿಂದ 40 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದ್ದು, 0.22ರಿಂದ 1.80ರ ಅನುಪಾತದಲ್ಲಿ ಬೆಟ್ಟಿಂಗ್ ಇದೆ. ಕಾಂಗ್ರೆಸ್ 20ರಿಂದ 30 ಸ್ಥಾನದಲ್ಲಿ ಜಯಿಸುವ ಸಂಭವ ಇದ್ದು, 0.42ರಿಂದ 1.35 ಅನುಪಾತದವರೆಗೂ ಬೆಟ್ಟಿಂಗ್ ಚಾಲ್ತಿಯಲ್ಲಿ ಇದೆ.

    ಇಸುದನ್ ಆಪ್ ಸಿಎಂ ಅಭ್ಯರ್ಥಿ
    ಗುಜರಾತ್ ಚುನಾವಣೆಯಲ್ಲಿ ಭಾರಿ ಗೆಲುವಿನ ನಿರೀಕ್ಷೆ ಇರಿಸಿಕೊಂಡಿರುವ ಆಮ್ ಆದ್ಮಿ ಪಕ್ಷ (ಆಪ್), ಮುಖ್ಯಮಂತ್ರಿ ಹುದ್ದೆಯ ಅಭ್ಯರ್ಥಿಯನ್ನಾಗಿ ಮಾಜಿ ಟಿವಿ ಆಂಕರ್ ಇಸುದನ್ ಗಧಿ್ವ (40) ಹೆಸರನ್ನು ಘೋಷಿಸಿದೆ. ಸಿಎಂ ಅಭ್ಯರ್ಥಿ ಆಯ್ಕೆ ಅಭಿಯಾನದಲ್ಲಿ ಮಾಜಿ ಪತ್ರಕರ್ತ ಗಧಿ್ವೆ ಶೇ. 73ರಷ್ಟು ಬೆಂಬ ವ್ಯಕ್ತವಾಯಿತು ಎಂದು ಆಪ್ ಮುಖ್ಯಸ್ಥ ಮತ್ತು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಹೇಳಿದರು. ‘ಸಿಎಂನನ್ನು ನೀವೇ ಆಯ್ಕೆ’ ಮಾಡಿ ಆನ್​ಲೈನ್ ಅಭಿಯಾನ ಕಳೆದವಾರದಿಂದ ನಡೆದಿತ್ತು. ಪಂಜಾಬ್​ನಲ್ಲೂ ಜನರ ಆಯ್ಕೆ ಮಾಡಿದವರನ್ನೇ (ಭಗವಂತ್ ಮಾನ್) ಅಭ್ಯರ್ಥಿಯನ್ನಾಗಿ ಘೋಷಿಸಲಾಯಿತು. ಅಭೂತ ಪೂರ್ವ ಜಯಗಳಿಸಿದ ನಂತರ ಅವರೇ ಸಿಎಂ ಆಗಿದ್ದಾರೆ. ಈಗ ಅದೇ ಮಾದರಿಯಲ್ಲಿ ಗುಜರಾತ್​ನಲ್ಲೂ ಸರ್ಕಾರ ರಚಿಸಲಾಗುವುದು ಎಂದು ಕೇಜ್ರಿವಾಲ್ ವಿಶ್ವಾಸ ವ್ಯಕ್ತಪಡಿಸಿದರು.

    ಅಭ್ಯರ್ಥಿ ಆಯ್ಕೆಗೆ ಷಾ ಸಭೆ
    ಸಮರ್ಥ ಅಭ್ಯರ್ಥಿಗಳ ಆಯ್ಕೆಗಾಗಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅಧ್ಯಕ್ಷತೆಯಲ್ಲಿ ಬಿಜೆಪಿ ಸಭೆ ನಡೆದಿದ್ದು, ಸಿಎಂ ಭೂಪೇಂದ್ರ ಪಟೇಲ್ ಭಾಗಿಯಾಗಿದ್ದರು. 33 ಜಿಲ್ಲೆಗಳಲ್ಲಿ ಸಂಚರಿಸಿದ ವೀಕ್ಷಕರ 38 ತಂಡ ಸಲ್ಲಿಸಿದ ವರದಿಯ ಸಭೆಯಲ್ಲಿ ಮಂಡಿಸಲಾಯಿತು. ಗುರುವಾರ 13 ಜಿಲ್ಲೆಗಳ 47 ಕ್ಷೇತ್ರ, ಶುಕ್ರವಾರ 15 ಜಿಲ್ಲೆಗಳ 58 ಕ್ಷೇತ್ರದ ಬಗ್ಗೆ ಚರ್ಚೆ ನಡೆದಿದ್ದು, ಭಾನುವಾರದ ವರೆಗೂ ನಡೆಯುವ ಸಭೆಯಲ್ಲಿ ಉಳಿದ ಕ್ಷೇತ್ರಗಳ ಬಗ್ಗೆ ಚರ್ಚೆ ನಡೆಯಲಿದೆ. ನಂತರ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ಧಗೊಳ್ಳಲಿದೆ. ಈ ಸಾರಿ ನಾಲ್ಕು ಸಾವಿರಕ್ಕೂ ಅಧಿಕ ಮಂದಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಈ ಮಧ್ಯೆ, ಹಾಲಿ ಶಾಸಕರು ಮತ್ತು ಸಂಸದರ ಕುಟುಂಬದವರಿಗೆ ಟಿಕೆಟ್ ನೀಡದಿರಲು ಗುಜರಾತ್ ಬಿಜೆಪಿ ಘಟಕ ನಿರ್ಧರಿಸಿದೆ.

    ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿ ಸಂಪೂರ್ಣ ಬಹುಮತ ಪಡೆಯಲಿದೆ. ಎಲ್ಲ ಕ್ಷೇತ್ರಗಳಲ್ಲೂ ನಮ್ಮ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸವಿದೆ. ಮತ್ತೊಮ್ಮೆ ಅಲ್ಲಿ ಬಿಜೆಪಿ ಆಡಳಿತಕ್ಕೆ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ.

    | ಬಿ.ಎಸ್. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

    ದೆಹಲಿ ಪಾಲಿಕೆ ಚುನಾವಣೆ ಘೋಷಣೆ
    ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಚುನಾವಣೆ ಘೋಷಣೆ ಆಗಿದ್ದು, ಡಿ. 4ಕ್ಕೆ ಮತದಾನ ನಡೆಯಲಿದೆ. 7ಕ್ಕೆ ಫಲಿತಾಂಶ ಪ್ರಕಟ ಆಗಲಿದೆ. ಚುನಾವಣೆ ಘೋಷಣೆಯ ಬೆನ್ನಿಗೆ ದೆಹಲಿ ನಗರದಲ್ಲಿ ಮಾದರಿ ಚುನಾವಣಾ ನೀತಿ ಸಂಹಿತೆ ಕೂಡ ಜಾರಿಯಾಗಿದೆ. ಬಿಜೆಪಿ, ಆಮ್ ಆದ್ಮಿ ಪಕ್ಷ (ಆಪ್) ಮತ್ತು ಕಾಂಗ್ರೆಸ್ ಮಧ್ಯೆ ತ್ರಿಕೋನ ಸ್ಪರ್ಧೆ ಮೇಲ್ನೋಟಕ್ಕೆ ಕಾಣುತ್ತಿದೆ. ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಆಪ್ ಮಧ್ಯೆಯೇ ಹಣಾಹಣಿ ಇದೆ. 2012ರಲ್ಲಿ ದೆಹಲಿ ಪಾಲಿಕೆಯನ್ನು ಮೂರಾಗಿ ವಿಭಜಿಸಲಾಗಿತ್ತು. ಆದರೆ, ಕಳೆದ ಮೇ ತಿಂಗಳಲ್ಲಿ ಮೂರನ್ನೂ ವಿಲೀನಗೊಳಿಸಲಾಗಿದೆ. ಹೀಗಾಗಿ ವಿಲೀನದ ನಂತರದ ಮೊದಲ ಚುನಾವಣೆ ಇದಾಗಿದೆ. 250 ವಾರ್ಡ್​ಗಳಿವೆ.

    ವಿಜಯವಾಣಿ ಅಚ್ಚಗನ್ನಡ ಅಭಿಯಾನ: ಬನ್ನಿ ಭಾಗವಹಿಸಿ ಬಹುಮಾನ ಗೆಲ್ಲಿ

    ಟ್ವಿಟರ್ ಉದ್ಯೋಗಿಗಳ ವಜಾ ಪ್ರಕ್ರಿಯೆ ಶುರು: ಭಾರತದಲ್ಲೂ ಶೇ. 50 ನೌಕರರಿಗೆ ಗೇಟ್​ಪಾಸ್

    ಕಟಕಟೆ ಏರುತ್ತಿರುವ ಲಿವಿಂಗ್ ಟುಗೆದರ್ ಕ್ವಾಟ್ಲೆ!; ಮಹಿಳಾ ಆಯೋಗ, ಠಾಣೆ ಮೆಟ್ಟಿಲೇರುವ ಕೇಸ್ ಏರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts