More

    ಶರಣರ ಸತ್ಸಂಗದಿಂದ ಒತ್ತಡದ ಬದುಕಿಗೆ ನೆಮ್ಮದಿ ಪ್ರಾಪ್ತಿ

    ಸೊರಬ: ಜೀವನದಲ್ಲಿ ಪ್ರತಿನಿತ್ಯ ಒತ್ತಡದ ಬದುಕಿನೊಂದಿಗೆ ಸಾಗುತ್ತಿರುವ ನಾವು ಶರಣರ, ಗುರುಗಳ ಸತ್ಸಂಗ ಮತ್ತು ಧರ್ಮಗ್ರಂಥಗಳ ಅಧ್ಯಯನದಿಂದ ಕೊಂಚ ನೆಮ್ಮದಿ ಪಡೆಯಬಹುದು ಎಂದು ಆನಂದಪುರ ಮುರುಘಾ ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ತಿಳಿಸಿದರು.

    ತಾಲೂಕಿನ ಜಡೆ ಸಂಸ್ಥಾನ ಮಠದಲ್ಲಿ ಸಿದ್ಧವೃಷಭೇಂದ್ರ ಶಿವಯೋಗಿಗಳ ಶಿಲಾಮಠ ಲೋಕಾರ್ಪಣೆ, ಶ್ರೀ ಮಹಾಂತ ಸ್ವಾಮೀಜಿ ಪೀಠಾರೋಹಣ ರಜತೋತ್ಸವ, ತುಲಾಭಾರ, ಮಂಟಪ ಪೂಜೆ, ರುದ್ರದೇವರ ನಿರಂಜನ ಚರಪಟ್ಟಾಧಿಕಾರ, ಮಹಾಪೂಜೆ ಮುತ್ತೈದಿಯರಿಗೆ ಉಡಿ ತುಂಬುವುದು, ತುಲಾಭಾರ, ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಹದಿನೈದು ದಿನಗಳ ಕಾಲ ನೆಡೆಯುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೊದಲ ದಿನವಾದ ಶನಿವಾರ ಸಂಜೆ ಶ್ರೀ ಸಿದ್ಧವೃಷಭೇಂದ್ರ ಶಿವಯೋಗಿಗಗಳ ಜೀವನ ದರ್ಶನ ಪ್ರವಚನ ಪ್ರಾರಂಭೋತ್ಸವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
    ಪ್ರವಚನಗಳನ್ನು ಓದುವ, ಕೇಳುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಸ್ವಾಭಾವಿಕತೆಯ ಜತೆಗೆ, ಸೃಜನಶೀಲತೆಯನ್ನು ಹೊಂದಿ ಧೃತಿಗೆಡದೆ ಜೀವನದಲ್ಲಿ ಮುನ್ನುಗಲು ಪ್ರಯತ್ನಿಸಬೇಕು. ಪ್ರವಚನಗಳು ಜೀವನದಲ್ಲಿ ಒಳ್ಳೆಯ ದಾರಿಯನ್ನು ತೋರಲಿವೆ. ಮಠದ ಕಾರ್ಯಕ್ರಮಗಳಲ್ಲಿ ಹಿರಿಯರು ಪಾಲ್ಗೊಂಡು ಒಳ್ಳೆಯ ವಿಚಾರಧಾರೆಗಳನ್ನು ಅರಿಯುವ ಜತೆಗೆ ಮಕ್ಕಳು ಒಳ್ಳೆಯ ವಿಚಾರಗಳನ್ನು ಪಡೆಯಲು ಪ್ರೇರಣೆ ನೀಡಬೇಕು ಎಂದರು.
    ಜಡೆ ಮಠದ ಮಹಾಂತ ಸ್ವಾಮೀಜಿ ಅವರು ಕೆಂಪಿನ ಸಿದ್ಧವೃಷಭೇಂದ್ರ ಗುರುಗಳ ಕರ್ತೃ ಗದ್ದಿಗೆಯನ್ನು ನಿರ್ಮಿಸುವುದರ ಮೂಲಕ ಭಕ್ತರ ಬಹುದಿನದ ಕನಸನ್ನು ನನಸು ಮಾಡಿದ್ದಾರೆ. ಮಠವು ಅಪಾರ ಭಕ್ತ ವೃಂದವನ್ನು ಹೊಂದಿದೆ. ಜಡೆ ಸಂಸ್ಥಾನ ಮಠದ ಕುಮಾರ ಪ್ರಭು ಸ್ವಾಮೀಜಿ ಅಪಾರ ಭಕ್ತರನ್ನು ಗಳಿಸಿದ್ದರು. ಅದನ್ನು ಮಹಾಂತ ಸ್ವಾಮೀಜಿ ಮುಂದುವರೆಸಿಕೊಂಡು ಬಂದಿದ್ದಲ್ಲದೆ, ಮಠವನ್ನು ಅಭಿವೃದ್ಧಿ ಪಡಿಸಿದ್ದಾರೆ ಎಂದು ಹೇಳಿದರು.
    ಸ್ಥಾವರಗಳು ಅಳಿಯಬಹುದು ಆದರೆ ಜಂಗಮಕ್ಕೆ ಅಳಿವಿಲ್ಲ ಎಂಬ ಶರಣರ ನುಡಿಯಂತೆ ಮಠಾಧೀಶರು ಸಮಾಜದ ಒಳಿತಿಗಾಗಿ ಸದಾ ಮಿಡಿಯಬೇಕು. ಭಕ್ತರಲ್ಲಿ ಧಾರ್ಮಿಕ ವಿಚಾರಗಳನ್ನು ಬಿತ್ತುವ ಮೂಲಕ ಸಮಾಜದಲ್ಲಿ ಭರವಸೆ ಮೂಡಿಸಬೇಕು. ಮಠಾಧೀಶರು ಈ ರೀತಿ ನಡೆದುಕೊಂಡಾಗ ಮಾತ್ರ ಸಮಾನತೆಯನ್ನು ಸಾರಲು ಸಾಧ್ಯವಿದೆ ಎಂದು ತಿಳಿಸಿದರು.
    ಶೆಗುಣಸಿ ವಿರಕ್ತ ಮಠದ ಡಾ. ಶ್ರೀ ಪ್ರಭುಮಹಾಂತ ಸ್ವಾಮೀಜಿ ಪ್ರವಚನ ನೀಡಿ, ವಸ್ತುಗಳ ಕೊರತೆಯಾದರೆ ವಿದೇಶಗಳಿಂದ ಆಮದು ಮಾಡಿಕೊಳ್ಳಬಹುದು. ಸಂಸ್ಕಾರ ಕೊರತೆಯಾದರೆ ಎಲ್ಲಿಂದ ತರಿಸಿಕೊಳ್ಳಲು ಸಾಧ್ಯ. ಆದ್ದರಿಂದ ಪ್ರತಿಯೊಬ್ಬರು ಸಂಸ್ಕಾರ ಹೊಂದಬೇಕು. ಜಡೆ ಸಂಸ್ಥಾನ ಮಠದ ಮಹಾಂತ ಸ್ವಾಮೀಜಿಗಳು ಮಠವನ್ನು ಉತ್ತುಂಗದ ಸ್ಥಿತಿಗೆ ಬೆಳೆಸಿದ್ದಾರೆ. ಮಠದಲ್ಲಿ ಹಮ್ಮಿಕೊಂಡ ಕಾರ್ಯಕ್ರಮಗಳ ನಿಮಿತ್ತ 20 ಸಾವಿರ ಜನರಿಗೆ ರುದ್ರಾಕ್ಷಿ ಧಾರಣೆ ಮಾಡಲಿದ್ದೇವೆ. ಪ್ರತಿದಿನ ಸಂಜೆ ಶ್ರೀ ಸಿದ್ಧವೃಷಭೇಂದ್ರ ಶಿವಯೋಗಿಗಗಳ ಜೀವನ ದರ್ಶನ ಪ್ರವಚನ ನಡೆಯಲಿದೆ. ಪ್ರತಿಯೊಬ್ಬರು ಮಠದ ಈ ಎಲ್ಲ ಸ್ಮರಣೀಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಶ್ವಿಗೊಳಿಕೊಡಬೇಕು ಎಂದರು.
    ಕಚವಿಯ ರಾಜಶೇಖರ ಗೌಡ, ಹೊಳೆಯಪ್ಪಗೌಡ ಹಾಗೂ ಶ್ಯಾನುವಳ್ಳಿಯ ವೀರೇಂದ್ರ ಪಾಟೀಲ್ ಅವರು ಡಾ. ಶ್ರೀ ಮಹಾಂತ ಸ್ವಾಮೀಜಿ ಅವರ ತುಲಾಭಾರ ನೆರವೇರಿಸಿದರು. ಅಮರೇಶ, ಬಸವರಾಜ್, ಷಣ್ಮುಖಪ್ಪ ಹಿರೇಮಠ ಗೀತಗಾಯನ ನಡೆಸಿಕೊಟ್ಟರು.
    ಜಡೆ ಸಂಸ್ಥಾನ ಮಠದ ಡಾ. ಶ್ರೀ ಮಹಾಂತ ಸ್ವಾಮೀಜಿ, ಉತ್ತರಾಧಿಕಾರಿ ಶ್ರೀ ರುದ್ರದೇವರು, ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ಅಕ್ಕಿ ಆಲೂರಿನ ವಿರಕ್ತ ಮಠದ ಶ್ರೀ ಶಿವಬಸವ ಸ್ವಾಮೀಜಿ, ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಶ್ರೀ ಚನ್ನಬಸವ ಸ್ವಾಮೀಜಿ, ಶಾಂತಪುರ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಜಡೆ ಮೌನತಪಸ್ವಿ ಶ್ರೀ ಶಾಂತಲಿಂಗ ಸ್ವಾಮೀಜಿ, ಗೊಗ್ಗೆಹಳ್ಳಿ ಮಠದ ಶ್ರೀ ಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಹಾರನಳ್ಳಿ ಮಠದ ಶ್ರೀ ನೀಲಕಂಠ ಸ್ವಾಮೀಜಿ, ಲಿಂಗನಾಯಕನಹಳ್ಳಿಯ ಶ್ರೀ ನಿರಂಜನ ದೇವರು, ಪ್ರಮುಖರಾದ ಆರ್.ಸಿ.ಪಾಟೀಲ್, ಕೆ.ಬಂಗಾರಪ್ಪಗೌಡ ಕಾಲಿಗೇರಿ, ಸದಾಶಿವ ಪಾಟೀಲ್, ಬಾಬುಗೌಡ ಲಿಂಗರಾಜ ಗೌಡ ಹೊಸಕೊಪ್ಪ, ನಾಗರಾಜ್ ಗೌಡರು ಸೇರಿದಂತೆ ಇತರರಿದ್ದರು.

    ಇರುವಷ್ಟು ಕಾಲ ಒಳಿತನ್ನೇ ಬಯಸಿ
    ಕಣ್ವಕುಪ್ಪಿ ತಪೋಕ್ಷೇತ್ರದ ಡಾ. ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಆಚಾರ, ವಿಚಾರ, ಪರಂಪರೆಯಿಂದ ಭಾರತರ ವಿಶ್ವಗುರುವಾಗಿದೆ. ಪರರಿಗೆ ಉಪಕಾರ ಮಾಡುವುದೇ ಪುಣ್ಯವಾಗಿದ್ದು, ಅಪಕಾರ ಮಾಡುವುದೇ ಪಾಪ. ಪ್ರತಿಯೊಬ್ಬರೂ ಪ್ರತಿಲ ಇಲ್ಲದೆ ಸೇವೆ ಮಾಡಿದಾಗ ಮಾತ್ರ ಆತ್ಮತೃಪ್ತಿ ಲಭಿಸುತ್ತದೆ. ಪಾಪ ಕರ್ಮದ ಲವೇ ದುಃಖವಾಗಿದ್ದು, ಮೃತ್ಯು ಯಾವಾಗ ಬರುತ್ತದೆ ಎಂದು ತಿಳಿಯದ ನಾವುಗಳು ಇರುವಷ್ಟು ಕಾಲ ಒಳಿತನ್ನು ಬಯಸಿ ಬದುಕಬೇಕು. ನಾವು ಮಾಡಿದ ದಾನ, ಧರ್ಮ ಜೀವನಪೂರ್ತಿ ನಮ್ಮನ್ನು ವಜ್ರಕಾಯದಂತೆ ಕಾಯುತ್ತವೆ ಎಂದರು.
    ಪ್ರಕೃತಿಯ ಮಧ್ಯೆ ಬದುಕುವ ನಾವುಗಳೆಲ್ಲರೂ ಅದರಿಂದ ಎಲ್ಲವನ್ನು ಪಡೆದಿರುತ್ತೇವೆ. ಪ್ರಕೃತಿ ನಮ್ಮಿಂದ ಏನನ್ನು ಬಯಸುವುದಿಲ್ಲ. ಇದುವೇ ಸಾರ್ಥಕ ಬದುಕು ಎನ್ನುವುದನ್ನು ಮರೆಯಬಾರದು. ವಿನಾಕಾರಣ ಇನ್ನೊಬ್ಬರನ್ನು ನಿಂದಿಸಿ ಧರ್ಮ ಕಾರ್ಯಗಳಿಗೆ ತೊಂದರೆ ನೀಡಿದರೆ ನಾವೇ ಸರ್ವನಾಶಗೊಳ್ಳುತ್ತೇವೆ. ಜೀವಸಂಕುಲ ಸಂಕಷ್ಟದಲ್ಲಿ ಸಿಲುಕಿದಾಗ ರಕ್ಷಿಸುವ ಗುಣವೇ ಪುಣ್ಯ ಕಾರ್ಯ. ಜೀವನದಲ್ಲಿ ಪ್ರತಿಯೊಬ್ಬರು ಪುಣ್ಯ ಕಾರ್ಯ ಮಾಡಿ ಬದುಕನ್ನು ಸಾರ್ಥಕತೆ ಕಡೆ ಕೊಂಡೊಯ್ಯಬೇಕು. ಈ ನಿಟ್ಟಿನಲ್ಲಿ ಮಹಾಂತ ಸ್ವಾಮೀಜಿ ಸೇವೆ ಮಹತ್ವದ್ದು ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts