More

    ಶಿರವಾಡದಿಂದ ವಿದೇಶಕ್ಕೆ ಸ್ಯಾಟಲೈಟ್ ಕರೆ

    ಕಾರವಾರ: ತಾಲೂಕಿನ ಶಿರವಾಡ ಸಮೀಪದಿಂದ ವಿದೇಶಕ್ಕೆ ಸ್ಯಾಟಲೈಟ್ ಕರೆ ಹೋದ ಬಗ್ಗೆ ಮಾಹಿತಿ ಬಂದಿದ್ದು, ಆಂತರಿಕ ಭದ್ರತಾ ವಿಭಾಗ(ಐಎಸ್​ಡಿ)ದ ಪೊಲೀಸರು ಸೋಮವಾರ ತನಿಖೆ ನಡೆಸಿದ್ದಾರೆ.

    ಬೆಂಗಳೂನಿಂದ ಆಗಮಿಸಿದ ಆಂತರಿಕ ಭದ್ರತಾ ವಿಭಾಗದ ಇಬ್ಬರು ಸಿಬ್ಬಂದಿ, ಅರಣ್ಯಾಧಿಕಾರಿಗಳು, ಸ್ಥಳೀಯ ಪೊಲೀಸರು ಸೇರಿ ಒಟ್ಟು ಐದು ಜನರ ತಂಡ ಸೋಮವಾರ ಜಾಂಬಾ ಕಾಡನ್ನು ಜಾಲಾಡಿದೆ. ಆದರೆ, ಯಾವುದೇ ಕುರುಹು ಲಭ್ಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಮೇ 24 ರಂದು ಜಾಂಬಾ ಗ್ರಾಮದಿಂದ ಸುಮಾರು 5 ಕಿಮೀಗೂ ದೂರದಲ್ಲಿ ದಟ್ಟ ಕಾಡಿನಿಂದ ವಿದೇಶಕ್ಕೆ ಕರೆ ಹೋದ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸಿದ್ದಾರೆ. ಯಾರು ಕರೆ ಮಾಡಿದ್ದಾರೆ, ಎಲ್ಲಿಗೆ ಕರೆ ಹೋಗಿದೆ ಎಂಬ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ.

    ಇದು ಮೊದಲಲ್ಲ: ಉತ್ತರ ಕನ್ನಡದಿಂದ ಸೆಟಲೈಟ್ ಕರೆ ಹೋದ ಮಾಹಿತಿ ಬರುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಹಲವು ಬಾರಿ ಕರೆಯ ಬಗ್ಗೆ ಪೊಲೀಸ್ ಇಲಾಖೆ ತನಿಖೆ ನಡೆದಿದೆ. 2019 ರ ಸೆಪ್ಟೆಂಬರ್​ನಲ್ಲಿ ಕೈಗಾ ಸಮೀಪದ ಕಾಡಿನಿಂದ ಸ್ಯಾಟಲೈಟ್ ಕರೆ ಹೋದ ಬಗ್ಗೆ ಮಾಹಿತಿ ಇದ್ದ ಕಾರಣ ಅದನ್ನು ಹುಡುಕಲು ಹೋದ ಕಾರವಾರ ಡಿವೈಎಸ್​ಪಿ ಶಂಕರ ಮಾರಿಹಾಳ ನಾಪತ್ತೆಯಾಗಿ ಆತಂಕ ಸೃಷ್ಟಿಯಾಗಿದೆ. ಕಾಡು ಪ್ರಾಣಿ ನೋಡಿ ಭಯಗೊಂಡ ಅವರು ಒಂದು ರಾತ್ರಿ ಕಾಡಿನಲ್ಲೇ ಕಳೆದು ಮರುದಿನ ಬೆಳಗ್ಗೆ ಮರಳಿದ್ದರು. ತಿಂಗಳ ಹಿಂದೆ ಮಾಜಾಳಿ ಕಡಲ ತೀರದಿಂದ ಸ್ಯಾಟಲೈಟ್ ಕರೆ ಹೋದ ಬಗ್ಗೆ ಮಾಹಿತಿ ಬಂದಿತ್ತು. ಕಳೆದ ವರ್ಷ ಸಿದ್ದಾಪುರ ತಾಲೂಕಿನ ನಿಲ್ಕುಂದ ಸಮೀಪದಿಂದ ಸ್ಯಾಟಲೈಟ್ ಕರೆ ಹೋದ ಮಾಹಿತಿ ಸಿಕ್ಕಿತ್ತು. ಭಟ್ಕಳದ ಐಎಸ್​ಡಿ ಅಧಿಕಾರಿಗಳು ತೆರಳಿ ಸ್ಥಳೀಯರನ್ನು ವಿಚಾರಣೆಗೊಳಪಡಿಸಿದ್ದರು. ಕಾರವಾರ ಬಂದರು ಸಮೀಪ ಎರಡು ಮೂರು ಬಾರಿ ಸ್ಯಾಟಲೈಟ್ ಕರೆಯ ಸುಳಿವು ಸಿಕ್ಕಿ ಪೊಲೀಸರು ಹುಡುಕಾಟ ನಡೆಸಿದ್ದರು. ಆದರೆ, ಇದುವರೆಗೂ ಯಾವುದೇ ಶಂಕಿತರೂ ಪತ್ತೆಯಾಗಿಲ್ಲ.

    ಏನಿದು ಸ್ಯಾಟಲೈಟ್ ಕರೆ..?: ಸ್ಥಳೀಯ ದೂರ ಸಂಪರ್ಕ ಕಂಪನಿಗಳ ಸಂಪರ್ಕ ಜಾಲದ ಸಹಕಾರವಿಲ್ಲದೆ ನೇರವಾಗಿ ಉಪಗ್ರಹ ಸಹಾಯದಿಂದ ಕರೆ ಮಾಡಬಹುದಾದ ಸಾಧನಕ್ಕೆ ಸ್ಯಾಟಲೈಟ್​ಫೋನ್ ಎನ್ನಲಾಗುತ್ತದೆ. ಇದರಿಂದ ಮಾಡುವ ಕರೆ ಹೆಚ್ಚು ವೆಚ್ಚದಾಯಕವಾಗಿದೆ. ಇದರಿಂದ ಸಾಮಾನ್ಯ ಜನರು ಬಳಸುವುದು ಕಡಿಮೆ. ಭಾರತದಲ್ಲಿ ಕೇಂದ್ರೀಯ ದೂರ ಸಂಪರ್ಕ ಇಲಾಖೆಯ ಅನುಮತಿಯೊಂದಿಗೆ ಲಿಮರ್​ಸೆಟ್ ಎಂಬ ಸ್ಯಾಟಲೈಟ್ ಫೋನ್​ನ್ನು ಬಳಕೆ ಮಾಡಲು ಅನುಮತಿ ಇದೆ. ವಿಮಾನ, ರೈಲಿನಲ್ಲಿ , ಪ್ರಯಾಣಿಸುವಾಗ ಫೋನ್ ಕೊಂಡೊಯ್ಯಲು ವಿಶೇಷ ಅನುಮತಿ ಪತ್ರವೂ ಬೇಕು. ತುರಾಯಾ, ಇರೀಡಿಯಂ ಮುಂತಾದ ಕಂಪನಿಗಳ ಸ್ಯಾಟಲೈಟ್ ಫೋನ್ ಬಳಕೆ ಈ ಹಿಂದೆ ದೇಶದಲ್ಲಿತ್ತು. 2011 ರ ಮುಂಬೈ ದಾಳಿಯ ನಂತರ 2012 ರಲ್ಲಿ ಆ ಕಂಪನಿಗಳ ಫೋನ್ ಬಳಕೆಯನ್ನು ನಿಷೇಧಿಸಲಾಗಿದೆ. ಈ ಸಂಬಂಧ ಡಿಜಿ ಶಿಪ್ಪಿಂಗ್ ಕೂಡ ವಿಶೇಷ ಆದೇಶ ಹೊರಡಿಸಿದೆ. ಉಗ್ರಗಾಮಿಗಳು, ಭೂಗತ ಪಾತಕಿಗಳು ಸ್ಥಳೀಯ ಭದ್ರತಾ ವ್ಯವಸ್ಥೆಯ ಕಣ್ಣು ತಪ್ಪಿಸಿ ಇದನ್ನು ಬಳಸುತ್ತವೆ ಎಂಬ ಅನುಮಾನದಿಂದ ಈ ಕರೆಯ ಬಗ್ಗೆ ದೇಶದ ಎಲ್ಲ ಭದ್ರತಾ ವಿಭಾಗಗಳು ವಿಶೇಷ ಗಮನ ನೀಡುತ್ತವೆ.

    ವಿಶೇಷ ಆದ್ಯತೆ

    ಉತ್ತರ ಕನ್ನಡ ಸೀಬರ್ಡ್ ನೌಕಾನೆಲೆ, ಕೈಗಾ ಅಣು ವಿದ್ಯುತ್ ಸ್ಥಾವರ ಹಲವು ಅಣೆಕಟ್ಟುಗಳು, ವಾಣಿಜ್ಯ ಬಂದರನ್ನು ಹೊಂದಿದೆ. ದಟ್ಟ ಕಾಡೂ ಇರುವುದರಿಂದ ವಿಚ್ಛಿದ್ರಕಾರಿ ಶಕ್ತಿಗಳು ಇಲ್ಲಿ ಅಟ್ಟಹಾಸ ಮೆರೆಯುವ ಸಾಧ್ಯತೆ ಇದೆ. ಇದರಿಂದ ಉತ್ತರ ಕನ್ನಡದ ಸ್ಯಾಟಲೈಟ್ ಕರೆಗಳ ಬಗ್ಗೆ ಭದ್ರತಾ ಸಂಸ್ಥೆಗಳು ಹೆಚ್ಚಿನ ಗಮನ ನೀಡುತ್ತವೆ. ಭಟ್ಕಳದಲ್ಲಿ ಇಂಥ ವಿಚಾರಗಳ ಬಗ್ಗೆ ಮಾಹಿತಿ ಕಲೆ ಹಾಕಲು ಐಎಸ್​ಡಿ ಪ್ರತ್ಯೇಕ ವಿಭಾಗವೇ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts