More

    ಏ.26ಕ್ಕೆ ಸಪ್ತಪದಿ ಸಾಮೂಹಿಕ ವಿವಾಹ : ಮುಜರಾಯಿ ಸಚಿವ ಕೋಟ ಶ್ರೀನಿವಾಸ

    ತುಮಕೂರು: ಧಾರ್ಮಿಕ ದತ್ತಿ ಇಲಾಖೆಯ 100 ‘ಎ’ ವರ್ಗದ ಆಯ್ದ ದೇವಸ್ಥಾನಗಳಲ್ಲಿ ಏಕಕಾಲಕ್ಕೆ ಏ.26 ‘ಅಕ್ಷಯ ತೃತೀಯ’ದಂದು ಸಾಮೂಹಿಕ ವಿವಾಹ ಆಯೋಜಿಸಲಾಗಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

    ಜನ ಸಾಮಾನ್ಯರ ಅನುಕೂಲಕ್ಕಾಗಿ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ವಧುವಿಗೆ ಧಾರೆ ಸೀರೆ ಹಾಗೂ ರವಿಕೆ ಕಣಕ್ಕಾಗಿ 10000 ರೂಪಾಯಿ ಹಾಗೂ ಪಂಚೆ, ಶರ್ಟ್ ಮತ್ತು ಶಲ್ಯಕ್ಕಾಗಿ ವರನಿಗೆ 5000 ರೂಪಾಯಿ ನೀಡಲಾಗುವುದು. ಜತೆಗೆ ವಧುವಿಗೆ 8 ಗ್ರಾಂ ಚಿನ್ನದ ತಾಳಿ, 2 ಚಿನ್ನದ ಗುಂಡು ಅಂದಾಜು 40 ಸಾವಿರ ರೂಪಾಯಿ ಸೇರಿ ಒಟ್ಟು ಪ್ರತೀ ನವಜೋಡಿಗೆ 55 ಸಾವಿರ ರೂಪಾಯಿಯನ್ನು ಸರ್ಕಾರದಿಂದ ವ್ಯಯಿಸಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ದಾಂಪತ್ಯ ಜೀವನಕ್ಕೆ ಕಾಲಿಡುವ ಜೋಡಿಗಳಿಗೆ ಕಂದಾಯ ಇಲಾಖೆ ವತಿಯಿಂದ ‘ಆದರ್ಶವಿವಾಹ’ ಯೋಜನೆಯಡಿ 10 ಸಾವಿರ ರೂಪಾಯಿ ಬಾಂಡ್ ನೀಡಲಾಗುವುದು. ಜತೆಗೆ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ 50 ಸಾವಿರ ರೂ., ಪ್ರೋತ್ಸಾಹಧನ ನೀಡಲಾಗುವುದು ಎಂದು ಸಚಿವ ಶ್ರೀನಿವಾಸ ಪೂಜಾರಿ ಹೇಳಿದರು.

    12 ಸಪ್ತಪದಿ ರಥ: ರಾಜ್ಯದ ಆಯ್ದ 12 ದೇವಾಲಯಗಳಿಂದ ಫೆ.13ರಂದು ಸಪ್ತಪದಿ ರಥ ಹೊರಡಲಿದೆ. ಈ ರಥದಲ್ಲಿ ಸಪ್ತಪದಿ ಯೋಜನೆಯ ಸಂಪೂರ್ಣ ಮಾಹಿತಿ, ಕರಪತ್ರಗಳು ಇರುತ್ತವೆ. ಈ ರಥ ಸುತ್ತಮುತ್ತಲಿನ ಹಳ್ಳಿಗಳಿಗೆ ತೆರಳಿ ಈ ಯೋಜನೆ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುವುದು ಎಂದು ಸಚಿವರು ತಿಳಿಸಿದರು. ಮೇ 24ರಂದು 2ನೇ ಹಂತದಲ್ಲಿ ಸಾಮೂಹಿಕ ವಿವಾಹ ನಡೆಸಲಾಗುವುದು. ಒಂದು ವೇಳೆ ಎ ದರ್ಜೆಯ ದೇವಾಲಯಗಳು ಇಲ್ಲದಿದ್ದರೆ ಐತಿಹಾಸಿಕ ಹಿನ್ನೆಲೆಯುಳ್ಳ ಬಿ ದರ್ಜೆ ಅಥವಾ ಸಿ ದರ್ಜೆಯ ದೇವಾಲಯಗಳನ್ನು ಆಯ್ಕೆ ಮಾಡಿಕೊಂಡು ಕಾರ್ಯಕ್ರಮ ನಡೆಸಲಾಗುವುದು. ದಾಂಪತ್ಯ ಜೀವನಕ್ಕೆ ಕಾಲಿಡಲು ಬಯಸುವವರು ಹೆಸರು ನೋಂದಾಯಿಸಿಕೊಳ್ಳಲು ಮಾ.27 ಕಡೆಯ ದಿನವಾಗಿದೆ ಎಂದರು. ಶಾಸಕರಾದ ಬಿ.ಸಿ.ನಾಗೇಶ್, ಜಿ.ಬಿ.ಜ್ಯೋತಿಗಣೇಶ್ ಇದ್ದರು.

    ಮುಜರಾಯಿ ಇಲಾಖೆ ಆಸ್ತಿ ಸರ್ವೇ : ರಾಜ್ಯದಲ್ಲಿ 36 ಸಾವಿರ ದೇವಾಲಯಗಳು ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡಲಿದ್ದು, ಇವುಗಳ ಸರ್ವೇ ನಡೆಯುತ್ತಿದೆ. ಆಸ್ತಿಗಳ ಸಂಪೂರ್ಣ ಸರ್ವೇ ನಂತರ ಗಣಕೀಕರಣಗೊಳಿಸುವುದಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ರಾಜ್ಯದಲ್ಲಿ 25 ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿರುವ 190 ದೇವಾಲಯಗಳಿವೆ. 250 ದೇವಸ್ಥಾನಗಳು 5ಲಕ್ಷ ಆದಾಯ ಹೊಂದಿವೆ. ಹಾಗೆಯೇ 5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ 33 ಸಾವಿರ ದೇವಾಲಯಗಳಿವೆ. ಸಣ್ಣ ದೇವಾಲಯಗಳ ಅರ್ಚಕರಿಗೆ ಇಂತಿಷ್ಟು ಎಂದು ತಸ್ತಿಕ್ ನಿಗದಿಪಡಿಸಲಾಗಿದೆ ಎಂದರು.

    ನಟ ಯಶ್ ರಾಯಭಾರಿ: ಶ್ರೀಧರ್ಮಸ್ಥಳ ಕ್ಷೇತ್ರದ ಅಧ್ಯಕ್ಷರಾದ ವಿರೇಂದ್ರ ಹೆಗಡೆ, ಇನ್ಫೋಸಿಸ್ ಪ್ರತಿಷ್ಠಾನದ ಸುಧಾಮೂರ್ತಿ ಹಾಗೂ ನಟ ಯಶ್ ರಾಯಭಾರಿಯಾಗಿ ಈ ಯೋಜನೆಗೆ ಯಶಸ್ವಿಗೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಯೋಜನೆಗೆ ಸಹಕಾರ ನೀಡುವಂತೆ ಶಾಸಕರು, ಜಿಲ್ಲಾ ಸಚಿವರು, ಸಾಧು, ಸಂತರು, ಮಠಾಧೀಶರಿಗೆ ಮನವಿ ಮಾಡಿರುವುದಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

    ದೇವರಾಯನದುರ್ಗ, ಹುಲಿಯೂರು, ಎಡೆಯೂರು ದೇವಾಲಯಗಳಲ್ಲಿ ಸಪ್ತಪದಿ ಸಾಮಾಹಿಕ ವಿವಾಹ ಏರ್ಪಡಿಸಲಾಗಿದೆ. ವಧು-ವರರು ಮತ್ತು ಅವರ ಬಂಧುಗಳಿಗೆ ಹಾಗೂ ಸಾರ್ವಜನಿಕರಿಗೆ ಊಟೋಪಚಾರ ಹಾಗೂ ಇತರ ಅವಶ್ಯಕ ವ್ಯವಸ್ಥೆ ಮಾಡಲು ತಗುಲುವ ವೆಚ್ಚಗಳನ್ನು ಸಂಬಂಧಿಸಿದ ದೇವಾಲಯ ನಿಧಿಯಿಂದ ಭರಿಸಲಾಗುವುದು.
    ಕೋಟ ಶ್ರೀನಿವಾಸ ಪೂಜಾರಿ ಮುಜರಾಯಿ ಇಲಾಖೆ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts