More

    ಸಾನಿಯಾ ಮಿರ್ಜಾ ವಿದಾಯ ನಿರ್ಧಾರದ ಹಿಂದಿವೆ ಹಲವು ಕಾರಣಗಳು!

    ಮೆಲ್ಬೋರ್ನ್: ಭಾರತೀಯ ಟೆನಿಸ್ ಕಂಡ ಶ್ರೇಷ್ಠ ಆಟಗಾರ್ತಿ ಎನಿಸಿರುವ ಸಾನಿಯಾ ಮಿರ್ಜಾ 2022ರ ಟೆನಿಸ್ ಋತುವಿನ ಅಂತ್ಯಕ್ಕೆ ನಿವೃತ್ತಿ ಹೊಂದುವುದಾಗಿ ಬುಧವಾರ ಪ್ರಕಟಿಸಿದ್ದಾರೆ. 35 ವರ್ಷದ ಸಾನಿಯಾ ಚುರುಕಿನ ಆಟಕ್ಕೆ ದೇಹ ಸೂಕ್ತವಾಗಿ ಸ್ಪಂದಿಸದಿರುವ ಕಾರಣಕ್ಕೆ ವರ್ಷಾಂತ್ಯದಲ್ಲಿ ಟೆನಿಸ್ ಕೋರ್ಟ್‌ಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ. ಇದರೊಂದಿಗೆ ಇನ್ನೂ ಹಲವು ಕಾರಣಗಳು ಅವರ ನಿರ್ಧಾರದಲ್ಲಿ ಮಹತ್ವದ ಪಾತ್ರ ನಿರ್ವಹಿಸಿವೆ.

    ಮಿಶ್ರ ಡಬಲ್ಸ್‌ನಲ್ಲಿ 3 ಮತ್ತು ಮಹಿಳಾ ಡಬಲ್ಸ್‌ನಲ್ಲಿ 3 ಸೇರಿದಂತೆ ಒಟ್ಟು 6 ಗ್ರಾಂಡ್ ಸ್ಲಾಂ ಪ್ರಶಸ್ತಿಗಳ ಒಡತಿಯಾಗಿರುವ ಸಾನಿಯಾ, ಮಹಿಳಾ ಟೆನಿಸ್‌ನಲ್ಲಿ ಅತ್ಯಧಿಕ ಯಶಸ್ಸು ಕಂಡ ಭಾರತೀಯರೆನಿಸಿದ್ದಾರೆ. ಆಸ್ಟ್ರೇಲಿಯನ್ ಓಪನ್ ಮಹಿಳಾ ಡಬಲ್ಸ್ ವಿಭಾಗದ ಮೊದಲ ಸುತ್ತಿನಲ್ಲೇ ಸೋಲು ಕಂಡ ಬಳಿಕ ಸಾನಿಯಾ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದಾರೆ.

    ‘ನನ್ನ ನಿವೃತ್ತಿಗೆ ಹಲವು ಕಾರಣಗಳಿವೆ. ನನ್ನ ಮಗನಿಗೆ ಈಗ ಕೇವಲ 3 ವರ್ಷ. ಸತತ ಪ್ರಯಾಣದಿಂದ ನಾನು ಅವನನ್ನು ಅಪಾಯಕ್ಕೆ ಸಿಲುಕಿಸುತ್ತಿರುವಂತೆ ಅನಿಸುತ್ತಿದೆ. ಸಾಂಕ್ರಾಮಿಕ ಪಿಡುಗಿನಿಂದಾಗಿ ನಮ್ಮ ಕುಟುಂಬದ ಒಳಿತಿಗಾಗಿ ಕೆಲ ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತಿದೆ. ನನ್ನ ಫಿಟ್ನೆಸ್ ಕೂಡ ಸಮಸ್ಯೆಯಾಗಿದೆ. ನನ್ನ ಮೊಣಕಾಲು ಈಗಲೂ ನೋವು ತರುತ್ತಿದೆ. ವಯಸ್ಸಾಗುತ್ತಿರುವ ಕಾರಣದಿಂದಾಗಿ ನಾನು ಗಾಯಗಳಿಂದ ಚೇತರಿಸಿಕೊಳ್ಳಲು ಹೆಚ್ಚಿನ ಸಮಯ ಬೇಕಾಗುತ್ತಿದೆ. ಪ್ರತಿದಿನ ಪ್ರೇರಣೆಯ ಕೊರತೆ ಕಾಡುತ್ತಿದೆ. ಹಿಂದಿನ ಎನರ್ಜಿಯೂ ಈಗಿಲ್ಲ. ನಾನೀಗ ಹಿಂದಿನಂತೆ ನನ್ನ ಆಟವನ್ನು ಆನಂದಿಸುತ್ತಿಲ್ಲ. ಹೀಗಾಗಿ ಹಾಲಿ ಋತುವಿನ ಅಂತ್ಯಕ್ಕೆ ನನ್ನ ಆಟ ನಿಲ್ಲಿಸುತ್ತಿರುವೆ’ ಎಂದು ಸಾನಿಯಾ ವಿವರಿಸಿದ್ದಾರೆ.

    ಸಿಂಗಲ್ಸ್‌ನಲ್ಲಿ ಜೀವನಶ್ರೇಷ್ಠ 27ನೇ ರ‌್ಯಾಂಕ್ ಪಡೆದಿದ್ದ ಸಾನಿಯಾ, ಡಬಲ್ಸ್‌ನಲ್ಲಿ 2015ರಲ್ಲಿ ವಿಶ್ವ ನಂ. 1 ಎನಿಸಿದ್ದರು. ಸ್ವಿಸ್ ತಾರೆ ಮಾರ್ಟಿನಾ ಹಿಂಗಿಸ್ ಜತೆಗೂಡಿ ಅವರು ಈ ಸಾಧನೆ ಮಾಡಿದ್ದರು. 2012ರಲ್ಲಿ ಅವರು ಕೊನೆಯದಾಗಿ ಸಿಂಗಲ್ಸ್‌ನಲ್ಲಿ ಆಡಿದ್ದರು. ಮೊಣಕೈ ಗಾಯದಿಂದ ಬಳಲಿದ್ದರಿಂದಾಗಿ ಅವರು ಸಿಂಗಲ್ಸ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದರು.

    2018ರ ಅಕ್ಟೋಬರ್‌ನಲ್ಲಿ ಪುತ್ರ ಇಜಾನ್‌ಗೆ ಜನ್ಮನೀಡಿದ್ದ ಸಾನಿಯಾ, 2 ವರ್ಷಗಳ ಬಳಿಕ 2020ರಲ್ಲಿ ಪುನರಾಗಮನ ಕಂಡಿದ್ದರು. ಹೋಬರ್ಟ್ ಟೂರ್ನಿಯ ಪ್ರಶಸ್ತಿ ಗೆಲುವಿನೊಂದಿಗೆ ಯಶಸ್ವಿ ಪುನರಾಗಮನ ಅದಾಗಿತ್ತು. ‘ಪುನರಾಗಮನಕ್ಕೆ ನಾನು ಸಾಕಷ್ಟು ಕಷ್ಟಪಟ್ಟಿದ್ದೆ. ಸಾಕಷ್ಟು ದೇಹತೂಕ ಕಡಿಮೆ ಮಾಡಿಕೊಂಡಿದ್ದೆ. ಕನಸು ಬೆನ್ನಟ್ಟಲು ಬಯಸುವ ತಾಯಂದಿರಿಗೆ ಮಾದರಿಯಾಗಲು ಬಯಸಿದ್ದೆ. ಆದರೆ ಹಾಲಿ ಋತುವಿನ ಬಳಿಕ ನನ್ನ ದೇಹ ಸಮರ್ಥವಾಗಿ ಸ್ಪಂದಿಸುತ್ತದೆ ಎಂದೆನಿಸುತ್ತಿಲ್ಲ’ ಎಂದು ಹಾಲಿ ವಿಶ್ವ ನಂ. 68 ಡಬಲ್ಸ್ ಆಟಗಾರ್ತಿ ಸಾನಿಯಾ ಹೇಳಿದ್ದಾರೆ.

    ಹಾಲಿ ಟೆನಿಸ್ ಋತುವಿನ ಅಂತ್ಯದವರೆಗೂ ಅಂದರೆ ಯುಎಸ್ ಓಪನ್‌ವರೆಗೂ ಆಡಲು ಬಯಸಿರುವೆ. ಅದೇ ನನ್ನ ಗುರಿ. ಆದರೂ ಪ್ರತಿ ವಾರದಿಂದ ವಾರಕ್ಕೆ ನನ್ನ ಫಿಟ್ನೆಸ್ ನಿರ್ಣಾಯಕವಾಗಿರಲಿದೆ. ಆಸ್ಟ್ರೇಲಿಯನ್ ಓಪನ್ ಆಡಲು ಇನ್ನೊಮ್ಮೆ ಮೆಲ್ಬೋರ್ನ್‌ಗೆ ಬರಲಾರೆ.
    | ಸಾನಿಯಾ ಮಿರ್ಜಾ

    ಸಾನಿಯಾ ಸಾಧನೆಗಳು
    *ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆದ್ದ ಭಾರತದ ಮೊದಲ ಮಹಿಳೆ.
    *ಡಬ್ಲ್ಯುಟಿಎ ಸಿಂಗಲ್ಸ್ ಪ್ರಶಸ್ತಿ ಗೆದ್ದ ಭಾರತದ ಮೊದಲ ಆಟಗಾರ್ತಿ.
    *ಡಬಲ್ಸ್‌ನಲ್ಲಿ 43 ಪ್ರಶಸ್ತಿ ಗೆಲುವಿನ ದಾಖಲೆ.
    *ಡಬಲ್ಸ್ ನಂ. 1 ರ‌್ಯಾಂಕಿಂಗ್‌ನಲ್ಲಿ 91 ವಾರ.
    *ಗ್ರಾಂಡ್ ಸ್ಲಾಂ ಸಿಂಗಲ್ಸ್ ಪಂದ್ಯ ಗೆದ್ದ ಭಾರತದ ಮೊದಲ ಆಟಗಾರ್ತಿ.
    *ಏಷ್ಯಾಡ್, ಕಾಮನ್ವೆಲ್ತ್, ಆಫ್ರೋ-ಏಷ್ಯನ್ ಗೇಮ್ಸ್‌ನಲ್ಲಿ ಒಟ್ಟು 14 ಪದಕ.

    ಇದು ನನ್ನ ಕೊನೆಯ ಸೀಸನ್; ವೃತ್ತಿ ಬದುಕಿಗೆ ವಿದಾಯ ಹೇಳಿದ ಟೆನಿಸ್ ತಾರೆ ಸಾನಿಯಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts