More

    ಕಗ್ಗಂಟಾದ ಮರಳು ಸಮಸ್ಯೆ, ಮನೆ ನಿರ್ಮಿಸಿಕೊಳ್ಳಲು ಸಂಕಟ

    ಅಶೋಕ ಬೆನ್ನೂರು ಸಿಂಧನೂರು
    ಗೃಹ ನಿರ್ಮಾಣ, ಕಟ್ಟಡ ಕಾಮಗಾರಿಗಳಿಗೆ ಹಾಗೂ ಸಾರ್ವಜನಿಕ ಯೋಜನೆಗಳಿಗೆ ಅಗತ್ಯವಾದ ಮರಳು ಈಗ ಚಿನ್ನದಂತೆ ಸಾರ್ವಜನಿಕರಿಗೆ ಗೋಚರಿಸಲಾರಂಭಿಸಿದೆ. ಕೆಲ ವರ್ಷಗಳ ಹಿಂದೆ ಕೇವಲ ಸಾವಿರಾರು ರೂ.ಗಳಿಗೆ ಲಭ್ಯವಾಗುತ್ತಿದ್ದ ಮರಳಿನ ದರವೀಗ ಲಕ್ಷ ರೂ.ಗೇರಿರುವುದು ಮರಳು ಮಾಫಿಯಾ ಎಂಬ ಗುಮ್ಮಕ್ಕೆ ಪುಷ್ಟಿ ನೀಡಿದೆ.

    ಮರಳು ಗಣಿಗಾರಿಕೆಯಿಂದಾಗಿ ನದಿ, ಹಳ್ಳ ಪಾತ್ರದ ಮರಳಿನದ ಪದರುಗಳು ಸಂಪೂರ್ಣ ನಾಶವಾಗುತ್ತಿವೆ. ನದಿ ಪಾತ್ರದಲ್ಲಿರುವ ಜೀವ ವೈವಿಧ್ಯತೆಗೆ ಧಕ್ಕೆಯಾಗುತ್ತಿದೆ. ಎಗ್ಗಿಲ್ಲದೆ ನದಿಪಾತ್ರದಿಂದ ಮರಳನ್ನು ಎತ್ತುವುದರಿಂದ ಹಳ್ಳ-ನದಿ ಪಾತ್ರಗಳಲ್ಲಿ ಭೂಕೊರತೆ ಉಂಟಾಗಿ ನದಿಗಳು ತಮ್ಮ ದಿಕ್ಕನ್ನೇ ಬದಲಾಯಿಸುವಂಥ ಆಪತ್ತಿನ ಸ್ಥಿತಿ ಬಂದೊದಗಿದೆ. ಈಗಾಗಲೇ ನದಿ ಮೂಲಗಳು ಬತ್ತಿ ಹೋಗುವ ಅಪಾಯ ಎದುರಾಗಿದೆ.

    ಇದನ್ನೂ ಓದಿ: ಸಿಂಧನೂರು ಆಸ್ಪತ್ರೆಗೆ ಬೇಕಿದೆ ಸೂಕ್ತ ಚಿಕಿತ್ಸೆ

    ಸರ್ಕಾರದ ವಸತಿ ಯೋಜನೆಯಡಿ ಮನೆ ಕಟ್ಟಿಕೊಳ್ಳಲಿಚ್ಛಿಸುವ ಬಡ ಫಲಾನುಭವಿಗಳು ಮರಳನ್ನು ಖರೀದಿಸಲು ಸಾಧ್ಯವಾಗದೆ ಸರ್ಕಾರದ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.

    ಕೆಲವರು ಮರಳು ಖರೀದಿಸಲು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಮುಂಬಾಗಿಲಿನಲ್ಲಿ ಕಾದು ಸುಣ್ಣವಾಗಿದ್ದಾರೆ. ಕೆಲವೊಬ್ಬರು ತಮ್ಮ ಸ್ವಂತದ ನಿರ್ಮಾಣ ಕೆಲಸಕ್ಕಾಗಿ ಎತ್ತಿನ ಬಂಡಿ ಅಥವಾ ಟ್ರ್ಯಾಕ್ಟರ್‌ನಲ್ಲಿ ಹಳ್ಳ, ನದಿ ಪಾತ್ರದಿಂದ ಅಲ್ಪ ಪ್ರಮಾಣದ ಮರಳನ್ನು ಸ್ವಂತಕ್ಕೆ ಸಾಗಿಸಿಕೊಳ್ಳುವಾಗ ಹಾಜರಾಗುವ ಪೊಲೀಸರು ಸಾಗಣೆ ಮಾಡುತ್ತಿದ್ದ ವಾಹನವನ್ನು ಜಪ್ತಿ ಮಾಡಿ ತೊಂದರೆ ನೀಡುವ ಉದಾಹರಣೆಗಳು ನಿತ್ಯಲು ನಡೆಯುತ್ತಿವೆ.

    ಮರಳಿನ ಪ್ರಮಾಣವಾಗಲಿ, ಆಮದು ಮಾಡಿಕೊಳ್ಳುವ ಮರಳಾಗಲಿ, ಗುರುತಿಸಲ್ಪಟ್ಟ ನಿಗದಿತ ಬ್ಲಾಕ್‌ಗಳಿಂದ ನಿಯಮಾನುಸಾರ ತೆಗೆಯಲಾದ ಮರಳಾಗಲಿ, ಜನಸಾಮಾನ್ಯರಿಗೆ ಹಾಗೂ ಅಭಿವೃದ್ಧಿ ಕೆಲಸಗಳಿಗೆ ಮರಳಿನ ಕೊರತೆಯಾಗದಂತೆ ಕನಿಷ್ಠ ಎಂಟರಿಂದ ಹತ್ತರಷ್ಟು ಮರಳು ಮಾರಾಟ ಮಾಡುವ ಪ್ರದೇಶಗಳನ್ನು ಸರ್ಕಾರವೇ ಗುರುತಿಸಿ ಆ ಭಾಗದಲ್ಲಿ ಬೇಡಿಕೆಗೆ ಅನುಗುಣವಾಗಿ ಸಂಗ್ರಹಿಸಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಬೇಕಿದೆ.

    ಇಂಥ ಪ್ರಯತ್ನಕ್ಕೆ ಈ ಹಿಂದೆ ಇಲಾಖೆಗಳು ಪ್ರಯತ್ನಿಸಿದ್ದರೂ ನಿಗದಿತ ಯಶಸ್ಸನ್ನು ಪಡೆಯಲು ಸಾಧ್ಯವಾಗಿಲ್ಲ. ಅಕ್ರಮ ಮರಳು ಗಣಿಗಾರಿಕೆ ಮಾಡುವವರ ವಿರುದ್ಧ ಹಾಗೂ ಪ್ರೋತ್ಸಾಹಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಬೇಕಿದೆ.

    ಸರ್ಕಾರಿಂದ ನಿಗದಿಪಡಿಸಲಾದ ಪ್ರದೇಶಗಳ ಹೊರತಾಗಿ ಬೇರೆ ಎಲ್ಲಿಯೂ ಮರಳು ಗಣಿಗಾರಿಕೆ ಅಥವಾ ಸಾಗಣೆ ಘೋರ ಅಪರಾಧವೆಂದು ಪರಿಗಣಿಸುವ ಅವಶ್ಯಕತೆಯಿದೆ. ನೀಡಲಾದ ಕೃತಕ ಮರಳು ಉತ್ಪಾದನಾ ಘಟಕಗಳಿಂದ

    ಹಾಗೂ ನಿಗದಿತ ಬ್ಲಾಕ್‌ಗಳಿಂದ ಸಂಗ್ರಹಿಸಲಾದ ಮರಳಿನ ಪ್ರಮಾಣವು ನೇರವಾಗಿ ಸರ್ಕಾರದಿಂದ ಮಾರಾಟ ಮಾಡುವ ಪ್ರದೇಶಗಳಿಗೆ ಮಾತ್ರ ರವಾನೆಯಾಗುವಂತೆ ನಿಯಮಗಳನ್ನು ರೂಪಿಸಿ ಜನಸಾಮಾನ್ಯರಿಗೆ ಸರ್ಕಾರದ ನಿಗದಿತ ಪ್ರದೇಶದಿಂದಲೇ ಮರಳು ಲಭ್ಯವಾಗುವಂತೆ ಮಾಡಲು ಸರ್ಕಾರ ಯಾವ ರೀತಿಯ ಕ್ರಮ ಕೈಗೊಳ್ಳುವುದೋ ಕಾದು ನೋಡಬೇಕಿದೆ.

    ತಾಲೂಕಿನಲ್ಲಿ ಅಕ್ರಮ ಮರಳು ತಡೆಗೆ ನಮ್ಮ ಇಲಾಖೆ ಸೇರಿ 11 ಇಲಾಖೆಗಳು ಕೆಲಸ ಮಾಡಬೇಕಿದೆ. ಕೇವಲ ಪೊಲೀಸ್ ಇಲಾಖೆಯೇ ಹೊಣೆಯಾಗಬೇಕಿದೆ. ನಾವು ಕಟ್ಟುನಿಟ್ಟಿನ ಕ್ರಮಕೈಗೊಂಡು ಹಲವು ಪ್ರಕರಣ ದಾಖಲಿಸಿದ್ದೇವೆ. 65 ಕೇಸ್‌ಗಳನ್ನು ಆರ್‌ಟಿಒಗೆ ಹಸ್ತಾಂತರಿಸಿದ್ದು ಅವರು ಕ್ರಮಕೈಗೊಳ್ಳಬೇಕು. ಎಲ್ಲ ಇಲಾಖೆಗಳು ಒಗ್ಗೂಡಿ ಕೆಲಸ ಮಾಡಿದರೆ ಅಕ್ರಮ ಮರಳು ಸಾಗಣೆಗೆ ಬ್ರೇಕ್ ಬೀಳಲಿದೆ.
    ವೆಂಕಟಪ್ಪ ನಾಯಕ, ಡಿವೈಎಸ್‌ಪಿ, ಸಿಂಧನೂರು ಉಪವಿಭಾಗ.

    ಸಿಂಧನೂರಿನಲ್ಲಿ ಸಣ್ಣಪುಟ್ಟ ಮನೆ ಕಟ್ಟಿಕೊಳ್ಳುವವರಿಗೆ ಮರಳು ಗಗನ ಕುಸುಮವಾಗಿದ್ದು ರಾಯಲ್ಟಿ ಕಟ್ಟಿ ಮರಳು ತರಲು ಸಾಧ್ಯವಾಗುತ್ತಿಲ್ಲ. ಅಕ್ರಮ ಮರಳು ದಂಧೆದಾರರದ್ದೆ ಕಾರುಬಾರು ಆಗಿದೆ. ಆಯಾ ಕಾಮಗಾರಿ ನಿರ್ವಹಿಸುವ ಗುತ್ತಿಗೆದಾರರು ಹೆಚ್ಚಿನ ಪ್ರಮಾಣದಲ್ಲಿ ಮರಳು ಸಂಗ್ರಹಿಸಿಕೊಳ್ಳುತ್ತಿದ್ದಾರೆ. ಸರ್ಕಾರದ ಬೊಕ್ಕಸಕ್ಕೂ ನಷ್ಟವಾಗುತ್ತಿದೆ.
    ನಾಗರಾಜ ಪೂಜಾರ, ಜಿಲ್ಲಾಧ್ಯಕ್ಷ ಎಐಸಿಸಿಟಿಯು, ಸಿಂಧನೂರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts