More

    ಇನ್ನು ಮರಳುಗಾರಿಕೆ ಆಗಸ್ಟ್ ಬಳಿಕ!

    ಹರೀಶ್ ಮೋಟುಕಾನ ಮಂಗಳೂರು/ಉಡುಪಿ
    ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಕರಾವಳಿ ನಿಯಂತ್ರಣ ವಲಯದಲ್ಲಿ (ಸಿಆರ್‌ಝಡ್)ಮರಳುಗಾರಿಕೆಗೆ ಇನ್ನು ಮೂರು ತಿಂಗಳು ಕಾಯುವುದು ಅನಿವಾರ್ಯ.
    ಬೇಥಮೆಟ್ರಿ ಸಮೀಕ್ಷೆ ವರದಿಯನ್ನು ಕರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಇನ್ನೂ ಅನುಮತಿಗೆ ಕಳುಹಿಸದೆ ಇರುವುದು, ಲಾಕ್‌ಡೌನ್ ಮುಂದುವರಿಕೆ ಮತ್ತು ಮಳೆಗಾಲದಲ್ಲಿ ಎರಡು ತಿಂಗಳು ಮರಳುಗಾರಿಕೆಗೆ ನಿಷೇಧ ಇದಕ್ಕೆ ಪ್ರಮುಖ ಕಾರಣ. ಇದರಿಂದ ಕಟ್ಟಡ ಕಾಮಗಾರಿಗಳಿಗೆ ಮರಳು ಅಭಾವ ಉಂಟಾಗುವ ಸಾಧ್ಯತೆ ನಿಚ್ಚಳವಾಗಿದೆ.
    ಜಿಲ್ಲೆಯ ಸಿಆರ್‌ಝಡ್‌ನಲ್ಲಿ ಮರಳುಗಾರಿಕೆ ಕುರಿತಂತೆ ಜಿಲ್ಲಾಮಟ್ಟದ ಸಮಿತಿ ಸಭೆಯಲ್ಲಿ ಪ್ರಸ್ತಾಪಿತ ಮರಳು ದಿಣ್ಣೆಗಳನ್ನು ಪರಿಶೀಲಿಸುವಂತೆ ಜಿಲ್ಲಾಧಿಕಾರಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈಗಾಗಲೇ ಎನ್‌ಐಟಿಕೆ ಸಮೀಕ್ಷೆ ನಡೆಸಿ ವರದಿ ನೀಡಿದೆ. ವರದಿ ಆಧಾರದಲ್ಲಿ ಮತ್ತೆ ಇಲಾಖೆ ಪರಿಶೀಲನೆ ನಡೆಸಿ ಬೆಂಗಳೂರಿನಲ್ಲಿ ಅಂತಿಮವಾಗಿ ರಾಜ್ಯ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರ(ಕೆಎಸ್‌ಸಿಝಡ್‌ಎಂಎ) ಅನುಮತಿ ಪಡೆದುಕೊಳ್ಳಬೇಕಾಗುತ್ತದೆ.

    ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಬೇಥಮೆಟ್ರಿ ಸಮೀಕ್ಷೆ ವರದಿ ದಾಖಲೆ ಸಮೇತ ಸಿದ್ಧಪಡಿಸುವ ಪ್ರಕ್ರಿಯೆ ನಡೆಯುತ್ತಿದ್ದಾಗ ಕರೊನಾ ಲಾಕ್‌ಡೌನ್ ಆಗಿ ಆಡಳಿತ ವ್ಯವಸ್ಥೆ ಸ್ಥಗಿತಗೊಂಡಿದೆ. ಲಾಕ್‌ಡೌನ್ ನಿರ್ಬಂಧ ಮುಗಿದ ಬಳಿಕ ಮೇ ತಿಂಗಳಿನಲ್ಲಿ ವರದಿ ಕಳುಹಿಸಿದರೂ ಬೆಂಗಳೂರಿನಲ್ಲಿ ಜೂನ್ ಬಳಿಕವಷ್ಟೇ ಅನುಮತಿ ಲಭಿಸಬಹುದು. ಅಷ್ಟರಲ್ಲಿ ಮಳೆಗಾಲ ಆರಂಭಗೊಳ್ಳುವುದರಿಂದ ಮರಳುಗಾರಿಕೆ ಕಷ್ಟ.

    ಬೇಥಮೆಟ್ರಿಕ್ ಸಮೀಕ್ಷೆ ವರದಿ ಕ್ರೋಡೀಕರಣ ಶೇ.50ರಷ್ಟು ಪೂರ್ಣಗೊಂಡಿದೆ. ಲಾಕ್‌ಡೌನ್ ತೆರವುಗೊಂಡ ಕೂಡಲೇ ಪ್ರಾಧಿಕಾರಕ್ಕೆ ಕಳುಹಿಸಿ ಕೊಡುತ್ತೇವೆ. ಮೊದಲು ಕರೊನಾ ಸಂಪೂರ್ಣವಾಗಿ ಹೊಡೆದೋಡಿಸುವ ಕಡೆಗೆ ನಾವು ಗಮನ ನೀಡಬೇಕಾಗಿದೆ.
    – ನಿರಂಜನ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ, ಮಂಗಳೂರು

    ಪರವಾನಗಿ ಅವಧಿ ಮುಗಿಯುವ ಮೊದಲೇ ಮರಳುದಿಬ್ಬ ಗುರುತಿಸಿ ಪರವಾನಗಿ ನವೀಕರಣ ಮಾಡುತ್ತಿದ್ದರೆ, ಮರಳಿನ ಅಭಾವ ಉಂಟಾಗುತ್ತಿರಲಿಲ್ಲ. ಅವಧಿ ಮುಗಿದ ಬಳಿಕ ಸರ್ವೇ ನಡೆಸಿದ ಕಾರಣ ವಿಳಂಬವಾಗಿದೆ. ಇದರಿಂದ ಮರಳುಗಾರಿಕೆ ಮಾಡುವವರಿಗೆ, ಗುತ್ತಿಗೆದಾರರಿಗೆ ಹಾಗೂ ಕಟ್ಟಡ ನಿರ್ಮಾಣ ಮಾಡುವವರಿಗೆ ತೊಂದರೆಯಾಗಿದೆ. ಮುಂದಿನ ವರ್ಷ ಇಂತಹ ಎಡವಟ್ಟು ಆಗದಂತೆ ಇಲಾಖೆ ಎಚ್ಚರ ವಹಿಸಬೇಕು.
    – ಮಯೂರ್ ಉಳ್ಳಾಲ್, ನಿಕಟಪೂರ್ವಾಧ್ಯಕ್ಷ, ಮರಳು ಜಂಟಿ ಕ್ರಿಯಾ ಸಮಿತಿ

    ತೆರವು ಸಿದ್ಧತೆಯಲ್ಲಿರುವಾಗಲೇ ತಡೆ
    ಉಡುಪಿ: ಲಾಕ್‌ಡೌನ್ ಪರಿಣಾಮ ಜಿಲ್ಲೆಯಲ್ಲಿ ಮರಳುಗಾರಿಕೆಗೆ ಇನ್ನು ಮೂರು ತಿಂಗಳು ಬಾಗಿಲು ಮುಚ್ಚಿದಂತೆ.
    ಜಿಲ್ಲೆಯ ಸಿಆರ್‌ಝಡ್ ವ್ಯಾಪ್ತಿಯಲ್ಲಿ 10 ಮರಳು ದಿಬ್ಬ ತೆರವಿಗೆ ರಾಜ್ಯ ಕರಾವಳಿ ನಿಯಂತ್ರಣ ವಲಯ ಸಮಿತಿ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನೇತೃತ್ವದ 7 ಸದಸ್ಯರ ಸಮಿತಿ ಮರಳುಗಾರಿಕೆ ಆರಂಭಿಸಲು ಗ್ರೀನ್ ಸಿಗ್ನಲ್ ನೀಡಿತ್ತು.
    ಮಾರ್ಚ್ ಎರಡನೇ ವಾರದಲ್ಲಿ ಗಣಿ ಇಲಾಖೆ 171 ಮಂದಿಗೆ ಅನುಮತಿ ನೀಡುವ ಪ್ರಕ್ರಿಯೆಗೆ ಅರ್ಜಿ ಆಹ್ವಾನಿಸಿ, ಪ್ರಕ್ರಿಯೆ ಆರಂಭಿಸಿತ್ತು. ಧಕ್ಕೆ ಗುರುತು, ಜಿಪಿಎಸ್ ಅಳವಡಿಕೆಗೆ ತಯಾರಿ ಮಾಡಿಕೊಳ್ಳಲಾಗಿತ್ತು. ಜಿಲ್ಲೆಯ ಪಾಪನಾಶಿನಿ ನದಿ ಪಾತ್ರದಲ್ಲಿ 1, ಸ್ವರ್ಣ ನದಿಯಲ್ಲಿ 6, ಸೀತಾ ನದಿಯಲ್ಲಿ 3 ಮರಳು ದಿಬ್ಬಗಳಲ್ಲಿ ಒಟ್ಟು 7.13 ಲಕ್ಷ ಮೆಟ್ರಿಕ್ ಮರಳು ತೆರವಿಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಅಷ್ಟರಲ್ಲಾಗಲೇ ಕರೊನಾದಿಂದಾಗಿ ಎಲ್ಲ ಪ್ರಕ್ರಿಯೆಗಳಿಗೆ ತಡೆ ಬಿದ್ದಿದೆ. ನಾನ್-ಸಿಆರ್‌ಝಡ್ ವ್ಯಾಪ್ತಿಯಲ್ಲಿ ಮರಳು ದಿಬ್ಬ ತೆರವಿಗೆ 24 ಟೆಂಡರ್ ಕರೆಯಲಾಗಿತ್ತು. ಅದರಲ್ಲಿ ಇಬ್ಬರಿಗೆ ಮಾತ್ರ ಟೆಂಡರ್ ಸಿಕ್ಕಿದ್ದು, ಇನ್ನಷ್ಟೇ ಮರಳುಗಾರಿಕೆ ಆರಂಭವಾಗಬೇಕಿದೆ. ಅದಕ್ಕೂ ತಡೆಯಾಗಿದೆ.

    ಕರೊನಾ ಇಲ್ಲದಿದ್ದಲ್ಲಿ ಏಪ್ರಿಲ್, ಮೇ ಎರಡು ತಿಂಗಳು ಮರಳುಗಾರಿಕೆ ವ್ಯವಸ್ಥಿತವಾಗಿ ನಡೆಯುತ್ತಿತ್ತು. ಲಾಕ್‌ಡೌನ್ ಮುಗಿದರೂ ಇನ್ನು ಮೇ ತಿಂಗಳ ಕೆಲವೇ ದಿನಗಳಲ್ಲಿ ಕಾರ್ಮಿಕರ ಕೊರತೆ, ಧಕ್ಕೆಗಳಲ್ಲಿ ತಯಾರಿ ಕೆಲಸ ಇತರೆ ಕಾರಣಗಳಿಂದ ಮರಳುಗಾರಿಕೆ ನಡೆಸಲು ಸಾಧ್ಯವಿಲ್ಲ. ಜೂನ್-ಜುಲೈ ಮಳೆಗಾಲದಲ್ಲಿ ಮರಳುಗಾರಿಕೆ ನಿಷೇಧ. ಕರೊನಾ ದೂರವಾದಲ್ಲಿ ಆಗಸ್ಟ್‌ನಿಂದ ಮರಳುಗಾರಿಕೆ ನಡೆಸಬಹುದು.
    – ಸುಧಾಕರ ಡಿ.ಅಮೀನ್
    ಅಧ್ಯಕ್ಷ, ಕರ್ನಾಟಕ ಕರಾವಳಿ ಜಿಲ್ಲೆಗಳ ಸಾಂಪ್ರದಾಯಿಕ ಮರಳು ಎತ್ತುವಿಕೆದಾರರ ಸಂಘ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts