More

    ಸ್ಯಾಂಡ್ ಬಜಾರ್‌ಗೆ ದಕ್ಕೆ, ಲಾರಿಯವರ ಅಸಹಕಾರ?

    -ವೇಣುವಿನೋದ್ ಕೆ.ಎಸ್. ಮಂಗಳೂರು

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳು ಅಗತ್ಯವಿರುವವರ ನೆರವಿಗಾಗಿ ಜಿಲ್ಲಾಡಳಿತ ಪ್ರಾರಂಭಿಸಿರುವ ‘ಸ್ಯಾಂಡ್ ಬಜಾರ್’ಗೆ ಲಾರಿಯವರು, ದಕ್ಕೆಯವರು ಸಹಕಾರ ನೀಡುವಂತೆ ಕಾಣುತ್ತಿಲ್ಲ.
    ಜನಸಾಮಾನ್ಯರು ಆನ್‌ಲೈನ್ ಮೂಲಕ ಸ್ಯಾಂಡ್ ಬಜಾರ್‌ನಲ್ಲಿ ಮರಳು ಬೇಕೆಂದು ಬುಕ್ ಮಾಡಿದರೂ ಅವರಿಗೆ ಮರಳು ಸಿಗುತ್ತಿಲ್ಲ. ಬೇಸತ್ತು ಪದೇಪದೆ ಸ್ಯಾಂಡ್ ಬಜಾರ್ ನಿರ್ವಾಹಕರಿಗೆ ಫೋನ್ ಮಾಡಿ ಕೇಳಿದರೆ, ನಿಮ್ಮ ಬುಕಿಂಗ್ ಹಣ ರಿಫಂಡ್ ಮಾಡುತ್ತೇವೆ ಎಂಬ ಉತ್ತರ ಸಿಗುತ್ತದೆ.

    ಆಗುತ್ತಿರುವುದೇನು?: ಜಿಲ್ಲಾ ಮರಳು ಉಸ್ತುವಾರಿ ಸಮಿತಿಯು 10 ಮೆಟ್ರಿಕ್ ಟನ್ ಒರಟು ಮರಳಿಗೆ 7,550 ರೂ. ಹಾಗೂ ನಯವಾದ ಮರಳಿಗೆ 8330 ರೂ. ನಿಗದಿ ಮಾಡಿದೆ. ಲಭ್ಯ ಮಾಹಿತಿ ಪ್ರಕಾರ ಈ ಮೊತ್ತ ಲಾರಿಯವರಿಗೆ ಸಾಕಾಗುತ್ತಿಲ್ಲ ಎಂಬುದು ಅಸಹಕಾರಕ್ಕೆ ಕಾರಣ.
    ಸ್ಯಾಂಡ್ ಬಜಾರ್‌ನಲ್ಲಿ ಬುಕ್ ಮಾಡಿ, ಆನ್‌ಲೈನ್ ಮೂಲಕ ಹಣ ಪಾವತಿಸಿದ ಬಳಿಕ ವಿಳಾಸಕ್ಕೆ ಸಮೀಪದ ದಕ್ಕೆಯಿಂದ ಮರಳು ಹಂಚಿಕೆಯಾಗುತ್ತದೆ. ಮರಳು ತರಬೇಕಾದ ಲಾರಿಯವರ ಫೋನ್ ನಂಬರ್, ಬುಕಿಂಗ್ ನಂಬರ್ ಹಾಗೂ ಒಟಿಪಿ ಖರೀದಿದಾರರಿಗೆ ಎಸ್‌ಎಂಎಸ್ ರೂಪದಲ್ಲಿ ಬರುತ್ತದೆ. ಲಾರಿಯವರು ಬರುವಾಗ ಈ ನಂಬರ್ ತೋರಿಸಬೇಕು.
    ಆದರೆ ಲಾರಿಯವರು ಮರಳು ತರುವುದೇ ಇಲ್ಲ. ಇಂತಹ ದೂರುಗಳು ದಿನೇದಿನೆ ಹೆಚ್ಚುತ್ತಿದೆ. ನಾಲ್ಕು ದಿನ ಹಿಂದೆಯೇ ಬುಕ್ ಮಾಡಿದರೂ ಮರಳು ಮನೆಗೆ ತಲುಪಿಲ್ಲ ಎಂದು ಕೋಟೆಕಾರ್ ನಿವಾಸಿ ಜಯರಾಮ್ ಎಂಬುವರು ದೂರಿದ್ದಾರೆ. ಚಾಲಕರಿಗೆ ಫೋನ್ ಮಾಡಿದರೆ ನಾಳೆ ತಲುಪಿಸುತ್ತೇನೆ ಎನ್ನುತ್ತಾರೆ. ಮತ್ತೆ ಫೋನ್ ಮಾಡಿದರೆ ಫೋನ್ ತೆಗೆಯುವುದಿಲ್ಲ ಎನ್ನುತ್ತಾರವರು.
    ಈ ಬಗ್ಗೆ ಸ್ಯಾಂಡ್ ಬಜಾರ್ ಸಿಬ್ಬಂದಿಗೆ ಫೋನ್ ಮಾಡಿದರೆ, ‘ಎರಡು ದಿನ ಕಾಯಿರಿ, ಒಂದು ವೇಳೆ ಬರದಿದ್ದರೆ ನೀವು ಪಾವತಿಸಿದ ಮೊತ್ತ ಮರಳಿ ಪಾವತಿಸುತ್ತೇವೆ’ ಎನ್ನುತ್ತಾರೆ. ಹೀಗಾದರೆ ಆನ್‌ಲೈನ್ ವ್ಯವಸ್ಥೆ ಇದ್ದು ಪ್ರಯೋಜನವೇನು ಎನ್ನುತ್ತಾರೆ ಜಯರಾಮ್.

    ಕ್ವಾಲಿಟಿ ಇಲ್ಲ, ದುಬಾರಿಯಾಯ್ತು
    ಸದ್ಯ ಸಿಆರ್‌ಜಡ್ ಮರಳು ಸ್ಯಾಂಡ್ ಬಜಾರ್ ಮೂಲಕ ಪೂರೈಕೆಯಾಗುತ್ತಿದೆ. ಸ್ಯಾಂಡ್ ಬಜಾರ್ ಮೂಲಕ ಬರುತ್ತಿರುವ ಮರಳಿನ ಮೇಲೆ ಖರೀದಿದಾರರಿಗೆ ಯಾವುದೇ ನಿಯಂತ್ರಣ ಇಲ್ಲ. ಅದರ ಗುಣಮಟ್ಟದ ಬಗ್ಗೆ ಖಾತರಿಯಿಲ್ಲ ಎನ್ನುವುದು ಕೆಲವು ಮಂದಿಯ ದೂರು.
    ನನ್ನ ಸೈಟ್‌ಗೆ ಖರೀದಿಸಿದ ಮರಳು ತೀರಾ ಕಳಪೆಯಾಗಿದೆ. ನನಗೆ ಕೂಳೂರು, ಕೆಐಒಸಿಎಲ್ ಸಮೀಪದಿಂದ ಬಂದಿದೆ. ಅದರ ಗುಣಮಟ್ಟ ಚೆನ್ನಾಗಿಲ್ಲ. ಅದನ್ನು ಬಳಸುವುದಕ್ಕೆ ನಮ್ಮ ಗ್ರಾಹಕ ಬಿಡುತ್ತಿಲ್ಲ. ಹಾಗಾಗಿ ಬ್ಲಾೃಕ್‌ನಲ್ಲೇ ಅದರಲ್ಲೂ ಕಡಿಮೆ ದರಕ್ಕೆ ಖರೀದಿಸುತ್ತೇವೆ ಎಂದು ಗುತ್ತಿಗೆದಾರರೊಬ್ಬರು ಹೇಳುತ್ತಾರೆ.

    ಬಜಾರ್‌ಗಿಂತ ಬ್ಲಾಕ್ ಮಾರ್ಕೆಟ್ ಅಗ್ಗ!: ಸದ್ಯ ಮಂಗಳೂರಿನಲ್ಲಿ 10 ಟನ್ ಮರಳಿಗೆ ಸ್ಯಾಂಡ್ ಬಜಾರ್‌ನ ಮೂಲಕವಾದರೆ 7 ಸಾವಿರ ರೂ. ನೀಡಬೇಕು. ಆದರೆ ಕದ್ದುಮುಚ್ಚಿ ಬ್ಲಾೃಕ್‌ನಲ್ಲಿ ಪೂರೈಸುವವರಿಗೆ 6 ಸಾವಿರ ರೂ. ಕೊಟ್ಟರೆ ಒಳ್ಳೆಯ ಮರಳು ಹಾಕುತ್ತಾರೆ. ಬಜಾರ್ ದರ ದುಬಾರಿಯಾಗಿದೆ. ಕಳೆದ ವರ್ಷ 5ರಿಂದ 6 ಸಾವಿರ ರೂ.ಗೆ ಒಳ್ಳೆಯ ಮರಳು, ತುಂಬೆಯಿಂದ ತೆಗೆದಿರುವುದು ಸಿಗುತ್ತಿತ್ತು ಎನ್ನುತ್ತಾರೆ ಗುತ್ತಿಗೆದಾರರು.

    ಬುಕ್ ಮಾಡಿ 48 ಗಂಟೆ ಒಳಗಡೆ ಮರಳು ಡೆಲಿವರಿ ಕೊಡಬೇಕು ಎಂದು ಸೂಚನೆ ನೀಡಲಾಗಿದೆ. ಆದಾಗ್ಯೂ ದೂರುಗಳಿದ್ದರೆ ಅದನ್ನು ಪರಿಹರಿಸುತ್ತೇವೆ. ಬುಕ್ ಮಾಡಿದಂತೆ ಗುಣಮಟ್ಟದ ಮರಳು ಕೊಡದಿದ್ದರೆ, ಅದನ್ನು ಬದಲಾಯಿಸಲು ಅವಕಾಶಗಳಿವೆ.
    -ಡಾ.ರಾಜೇಂದ್ರ, ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ

    ಸಿಆರ್‌ಜಡ್ ಪ್ರದೇಶದಲ್ಲಿ ಮೂರು ವಿಧದ ಮರಳು ಸ್ಯಾಂಡ್ ಬಜಾರ್ ಮೂಲಕ ಕೊಡಲಾಗುತ್ತಿದೆ. ಬುಕ್ ಮಾಡುವವರೇ ಆಯ್ಕೆ ಮಾಡಿಕೊಳ್ಳಬಹುದು. ಬ್ಲಾಕ್‌ನಲ್ಲಿ ಸಿಆರ್‌ಜಡ್ ಮರಳು ಮಾರಾಟ ಮಾಡುವಂತಿಲ್ಲ. ಯಾರಿಗಾದರೂ ಸ್ಯಾಂಡ್ ಬಜಾರ್ ಮೂಲಕ ಮರಳು ಸಿಗುವುದಿಲ್ಲ ಎಂದಾದರೆ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ದೂರು ನೀಡಿ.
    – ನಿರಂಜನ್, ಭೂವಿಜ್ಞಾನಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಮಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts