More

    ಕಿರುಚಿತ್ರಕ್ಕೆ ಸಂಯುಕ್ತಾ ಆಕ್ಷನ್-ಕಟ್

    ಬೆಂಗಳೂರು: ‘ಕಿರಿಕ್ ಪಾರ್ಟಿ’ ಸಿನಿಮಾ ಮೂಲಕ ಚಂದನವನದಲ್ಲಿ ಕಿರಿಕ್ ಹುಡುಗಿ ಅಂತಲೇ ಫೇಮಸ್ ಆದ ಸಂಯುಕ್ತಾ ಹೆಗ್ಡೆ, ಸೋಷಿಯಲ್ ಮೀಡಿಯಾದಲ್ಲಿ ಸಖತ್ ಚುರುಕು. ಸದಾ ಒಂದಿಲ್ಲೊಂದು ವಿಡಿಯೋಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಲೇ ಇರುವ ಸಂಯುಕ್ತಾ, ತಮ್ಮ ಡ್ಯಾನ್ಸ್ ಮತ್ತು ಜಿಮ್ನಾಸ್ಟಿಕ್ ಭಂಗಿಗಳಿಂದಲೇ ಇತರರಿಗೂ ಸ್ಪೂರ್ತಿಯಾಗಿದ್ದಾರೆ. ಇದೀಗ ಇದೇ ಸಂಯುಕ್ತಾ ನಿರ್ದೇಶಕಿಯ ಕ್ಯಾಪ್ ಧರಿಸಲು ಸಿದ್ಧತೆ ನಡೆಸಿದ್ದಾರೆ. ಶೀಘ್ರದಲ್ಲಿ ಸಿನಿಮಾವೊಂದಕ್ಕೆ ಆಕ್ಷನ್- ಕಟ್ ಹೇಳಲಿದ್ದಾರೆ!

    ಹೌದು, ಮೊದಲಿಂದಲೂ ನಿರ್ದೇಶನದ ಮೇಲೆ ವಿಪರೀತ ಕನಸು ಕಟ್ಟಿಕೊಂಡಿರುವ ಸಂಯುಕ್ತಾ, ಪೂರ್ಣ ಪ್ರಮಾಣದ ಸಿನಿಮಾ ನಿರ್ದೇಶನಕ್ಕೂ ಮೊದಲು, ಕಿರು ಚಿತ್ರವೊಂದನ್ನು ಆಯ್ದುಕೊಂಡಿದ್ದಾರೆ. ಈಗಾಗಲೇ ಆ ಕಥೆಗೆ ಈ ಲಾಕ್​ಡೌನ್ ಅವಧಿಯಲ್ಲಿ ಸ್ಕ್ರೀನ್​ಪ್ಲೇಗೆ ಹೊಳಪು ನೀಡಿ, ಚಿತ್ರೀಕರಣ ಮಾಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಆ ಕನಸಿನ ಬಗ್ಗೆ ವಿಜಯವಾಣಿ ಜತೆ ಮಾತನಾಡಿದ್ದಾರೆ ಸಂಯುಕ್ತಾ. ‘ಶಾಲಾ ದಿನಗಳಿಂದಲೂ ನಾನು ಕಥೆ ಬರೆಯುವ ರೂಢಿ ಇದೆ. ‘ಕಿರಿಕ್ ಪಾರ್ಟಿ’ ಸಿನಿಮಾ ಬಂದಾಗ ಶೂಟಿಂಗ್ ಸೆಟ್​ನಲ್ಲಿಯೇ ರಕ್ಷಿತ್​ಗೆ ಒಂದಷ್ಟು ಕಥೆ ಹೇಳುತ್ತಿದ್ದೆ’ ಎಂದು ಅಂದಿನ ದಿನಗಳನ್ನು ನೆನಪು ಮಾಡಿಕೊಳ್ಳುವ ಅವರು, ‘ಲಾಕ್​ಡೌನ್ ಮುಂಚೆಯೇ ಕಥೆಯೊಂದನ್ನು ಬರೆದಿದ್ದೆ. ಈ 3 ತಿಂಗಳ ಅವಧಿಯಲ್ಲಿ ಅದರ ಸ್ಕ್ರೀನ್ ಪ್ಲೇ ಬರೆದಿದ್ದೇನೆ. ಇನ್ನೇನಿದ್ದರೂ, ಆದಷ್ಟು ಬೇಗ ರಕ್ಷಿತ್ ಬಳಿ ಹೋಗಿ, ಇಡೀ ಕಥೆಯನ್ನು ಓದಿ ಒಂದಷ್ಟು ತಿದ್ದುಪಡಿ ಮಾಡಿಕೊಂಡು ಬರ ಬೇಕೆಂದುಕೊಂಡಿದ್ದೇನೆ. ನಂತರ ಶೂಟಿಂಗ್’ ಎನ್ನುತ್ತಾರೆ ಸಂಯುಕ್ತಾ.

    ಇದನ್ನೂ ಓದಿ: ಪತಂಜಲಿಯಿಂದ “ಕರೊನಿಲ್​” ಔಷಧ ಬಿಡುಗಡೆ: ನೂರಕ್ಕೆ ನೂರು ಗುಣಪಡಿಸುವ ಭರವಸೆ!

    ಪೂರ್ಣ ಪ್ರಮಾಣದ ಸಿನಿಮಾ ಮಾಡುವುದು ಸಣ್ಣ ಕೆಲಸ ಅಲ್ಲ. ಹಾಗಾಗಿ ಅದಕ್ಕೆ ಈಗಿನಿಂದಲೇ ನಾನು ಕೆಲಸ ಶುರು ಮಾಡಿದ್ದೇನೆ. ಕಥೆ ಬರೆಯುವುದು ಒಂದೆಡೆಯಾದರೆ, ಅದಕ್ಕೆ ಲೊಕೇಷನ್ ಆಧರಿಸಿ ಚಿತ್ರಕಥೆ ಬರೆಯುವುದು ಮತ್ತೊಂದು ಸವಾಲು.
    | ಸಂಯುಕ್ತಾ ಹೆಗ್ಡೆ ನಟಿ

    ಹಾಗಾದರೆ ಏನಿದು ಕಥೆ? ಆ ಬಗ್ಗೆ ಗುಟ್ಟು ಬಿಟ್ಟುಕೊಡದ ಅವರು, ‘ಇದು ನೈಜ ಘಟನೆ ಆಧರಿತ ಕಥೆಯೂ ಅಲ್ಲ, ಕಾಲ್ಪನಿಕ ಕಥೆಯೂ ಅಲ್ಲ. ಸಮಾಜದಲ್ಲಿ ನಮ್ಮೆಲ್ಲರ ಕಣ್ಣಿಗೆ ಕಂಡರೂ, ಅದನ್ನು ಯಾರೂ ಗುರುತಿಸುತ್ತಿಲ್ಲ. ಅದನ್ನೇ ನಾನು ಕಿರುಚಿತ್ರ ಮಾಡಲು ಹೊರಟಿದ್ದೇನೆ. ನನಗೆ ಥ್ರಿಲ್ಲರ್ ಶೈಲಿಯ ಸಿನಿಮಾ ಅಂದರೆ ಇಷ್ಟ. ಹಾಗಾಗಿ ಆ ಶೈಲಿಯಲ್ಲಿಯೇ ಕಿರುಚಿತ್ರ ಮೂಡಿಬರಲಿದೆ’ ಎಂಬುದು ಸಂಯುಕ್ತಾ ಮಾತು. ಕೇವಲ ಕಿರುಚಿತ್ರಕ್ಕಷ್ಟೇ ಅವರ ಮಾತು ಮುಗಿಯುವುದಿಲ್ಲ. ಪೂರ್ಣ ಪ್ರಮಾಣದ ಸಿನಿಮಾ ಮಾಡುವುದಕ್ಕೆಂದೇ ಮೊದಲು ಕಿರುಚಿತ್ರದ ಮೊರೆ ಹೋಗಿದ್ದಾರೆ. ಇನ್ನು ಲಾಕ್​ಡೌನ್ ಅವಧಿಯಲ್ಲಿ ಕಲಿಯುವಿಕೆಯಲ್ಲಿಯೇ ಹೆಚ್ಚೆಚ್ಚು ಸಮಯ ಕಳೆದಿರುವ ಸಂಯುಕ್ತಾ, ಆನ್​ಲೈನ್​ನಲ್ಲೇ ನಟನೆ, ನೃತ್ಯ, ಯೋಗವನ್ನು ಅಭ್ಯಾಸ ಮಾಡುತ್ತಿದ್ದಾರೆ. ‘ಜೀವನ ಪೂರ್ತಿ ಕಲಿಯುವುದೊಂದೆ ನನ್ನ ಕೆಲಸ’ ಎಂದೂ ಹೇಳುತ್ತಾರವರು.

    VIDEO: ಮಿಸ್ಟರ್ ಬೀನ್ ನೆರವು ಕೋರಿತು ಡಬ್ಲ್ಯುಎಚ್​ಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts