More

    ಶತಮಾನದ ಶಕಪುರುಷ: ಶ್ರೀ ಸತ್ಯಪ್ರಮೋದತೀರ್ಥರ 105ನೇ ವರ್ಧಂತಿ ಇಂದು..

    ಯತಿಜೀವನದ ಸಂವಿಧಾನವನ್ನೇ ರಚಿಸಿದ ಶಿಲ್ಪಿ ಶ್ರೀ ಸತ್ಯಪ್ರಮೋದ ತೀರ್ಥರು. ದೇಹವನ್ನು ಧರ್ಮದಲ್ಲಿ, ಇಂದ್ರಿಯಗಳನ್ನು ಸತ್ಕರ್ಮಗಳಲ್ಲಿ ತೊಡಗಿಸಿಕೊಂಡವರು. ತಮ್ಮ ಬದುಕಿನಿಂದಲೇ ಸಮಾಜಕ್ಕೆ ಬೋಧನೆ ನೀಡಿದವರು. ಅವರ 105ನೇ ವರ್ಧಂತಿ ಸಂದರ್ಭದಲ್ಲಿ ಈ ನುಡಿನಮನ.

    | ಮೇಧಾ ಪ್ರಹ್ಲಾದಾಚಾರ್ಯ ಜೋಶಿ

    ಜೀವನದ ಸಕಲವಿಧ ತಮ ಕಳೆಯುವ ಗುರೂತ್ತಮರು ಶ್ರೀ ಸತ್ಯಪ್ರಮೋದತೀರ್ಥರು. ಎಂಟು ದಶಕದ ಇತಿಹಾಸ ಹೊಂದಿದ ಯತಿರಾಜರು. ಹಂಸನಾಮಕನ ಪೀಠದಲ್ಲಿ ವಿರಾಜಿಸಿದ ರಾಜಹಂಸರು.

    ಮುಖ್ಯಪ್ರಾಣನ ಉಪಾಸಕರಾದ ಗುತ್ತಲ ಶ್ರೀರಂಗಾಚಾರ್ಯರು ಮತ್ತು ಕಮಲಾಬಾಯಿ ದಂಪತಿಯ ಪುತ್ರನಾಗಿ ಹಾವೇರಿ ಜಿಲ್ಲೆ ಕರಜಗಿ ಗ್ರಾಮದಲ್ಲಿ ಕಾಲಯುಕ್ತಿ ಸಂವತ್ಸರದ (ಕ್ರಿ.ಶ.1918) ಭಾದ್ರಪದ ಮಾಸದ ಕೃಷ್ಣ ಪಂಚಮಿಯಂದು ಗುತ್ತಲ ಗುರುರಾಜಾಚಾರ್ಯರ ಉದಯವಾಯಿತು. ನಿರಂತರ ಶಾಸ್ತ್ರಾಧ್ಯಯನದಲ್ಲಿ ನಿರತರಾದ ಅವರು ಅಂದಿನ ಉತ್ತರಾದಿಮಠಾಧೀಶ ಶ್ರೀ ಸತ್ಯಪ್ರಜ್ಞತೀರ್ಥರಲ್ಲಿ ಶ್ರೀಮನ್ನಾ್ಯಯಸುಧಾ ಅಧ್ಯಯನ ಮಾಡಿದರು. ಮೈಸೂರಿನ ಧಾರಾಪುರಂ ಕೃಷ್ಣಮೂರ್ತಿ ಆಚಾರ್ಯರಲ್ಲಿ ಸಮಗ್ರನ್ಯಾಯಶಾಸ್ತ್ರ ಕಲಿತು 1937ರಲ್ಲಿ ಮದ್ರಾಸ್ ಸರಕಾರದಿಂದ ‘ತರ್ಕಶಿರೋಮಣಿ’ ಪದವಿ ಪಡೆದರು.

    ಗುತ್ತಲ ಗುರುರಾಜಾಚಾರ್ಯರ ಪ್ರತಿಭೆ, ಸಿದ್ಧಾಂತನಿಷ್ಠೆ, ವೈರಾಗ್ಯ, ಸದಾಚಾರ, ಗುರುಭಕ್ತಿ ಔದಾರ್ಯ ಇವುಗಳನ್ನೆಲ್ಲ ಮನಗಂಡ ಅಂದಿನ ಉತ್ತರಾದಿಮಠಧೀಶ ಶ್ರೀಸತ್ಯಾಭಿಜ್ಞತೀರ್ಥರು ಗುರುರಾಜಾಚಾರ್ಯರನ್ನು ತಮ್ಮ ಉತ್ತರಾಧಿಕಾರಿಗಳೆಂದು ಘೊಷಿಸಿ ಸನ್ಯಾಸದೀಕ್ಷೆ ನೀಡಿದರು. ಅಂದಿನಿಂದ ಗುರುರಾಜಾಚಾರ್ಯರು ಶ್ರೀ ಸತ್ಯಪ್ರಮೋದತೀರ್ಥರಾದರು. ಅವರ ಅನೇಕ ಸಾಧನೆಗಳಲ್ಲಿ ಅತಿ ದೊಡ್ಡ ಸಾಧನೆ ಎಂದರೆ 50 ವರುಷಗಳವರೆಗೂ ಒಂದು ದಿನವೂ ಬಿಡದೆ ಮೂಲಸೀತಾರಾಮರ, ನಾರಾಯಣದತ್ತವಾದ ವ್ಯಾಸಮುಷ್ಟಿಗಳ ಪೂಜೆ ಮಾಡಿದ್ದು.

    ಶತಮಾನದ ಶಕಪುರುಷ: ಶ್ರೀ ಸತ್ಯಪ್ರಮೋದತೀರ್ಥರ 105ನೇ ವರ್ಧಂತಿ ಇಂದು..ಧರ್ಮದಿಗ್ವಿಜಯ

    ದಕ್ಷಿಣ ಭಾರತದಲ್ಲಿ ರಾಜಗೋಪಾಲಪುರ, ತಿರುಕೋಯಿಲೂರು, ಆರಣಿ, ಶ್ರೀಮುಷ್ಣ, ಶ್ರೀರಂಗ ಹೀಗೆ ಅನೇಕ ಕಡೆಗಳಲ್ಲಿ ಧರ್ಮ ದಿಗ್ವಿಜಯ ಮಾಡಿದರು. ಉತ್ತರ ಭಾರತದಲ್ಲಿ ವಿದ್ವತ್ತಿನ ರಾಜಧಾನಿಯಾದ ಕಾಶಿಗೆ ಬಂದರು. ಅಲ್ಲಿ ಅನೇಕ ಘಟಾನುಘಟಿ ವಿದ್ವಾಂಸರೊಂದಿಗೆ ವಾಕ್ಯಾರ್ಥ ಮಾಡಿದರು. ನಿರಂತರವಾದ ಶ್ರೀಸತ್ಯಪ್ರಮೋದರ ವಾಕ್ಯಾರ್ಥ, ಚತುಶ್ಶಾಸ್ತ್ರ ಪಾಂಡಿತ್ಯ, ಸಿದ್ಧಾಂತದೀಕ್ಷೆಯನ್ನು ಕಂಡ ವಾರಾಣಸಿಯ ವಿದ್ವಾಂಸರು ಮುಕ್ತಕಂಠದಿಂದ ಶ್ರೀಗಳವರನ್ನು ಪ್ರಶಂಸಿಸಿದರು. ಹೀಗೆ ಅನೇಕ ವಿದ್ವದ್ಗೋಷ್ಠಿಗಳು ಅವರ ಪಾಂಡಿತ್ಯದ ಪ್ರಖರತೆಗೆ ಸಾಕ್ಷಿಯಾಗಿವೆ. ಶ್ರೀರಾಮ ಎಂಬ ಎರಡು ಅಕ್ಷರಗಳಲ್ಲಿ ಸಮಗ್ರ ಬ್ರಹ್ಮಸೂತ್ರಗಳು, ಭಗವದ್ಗೀತೆ, ಉಪನಿಷತ್ತುಗಳು, ಸಮಗ್ರಪುರಾಣಗಳ ಅರ್ಥವನ್ನು ತುಂಬಿ ತೋರಿಸಿದರು. ನಿರಂತರ 8 ದಿನಗಳವರೆಗೆ ನಡೆದ ಈ ರಾಮಶಬ್ದಾರ್ಥಕ್ಕೆ ಬೆಂಗಳೂರಿನ ಕೋಟೆ ಹೈಸ್ಕೂಲಿನ ಮೈದಾನದ ಶ್ರೀರಾಮೋತ್ಸವ ಸಾಕ್ಷಿಯಾಯಿತು. ನ್ಯಾಯಸುಧಾಮಂಡನ ಯುಕ್ತಿಮಲ್ಲಿಕಾವಿವೃತಿ ವಿಜಯೀಂದ್ರವಿಜಯವೈಭವ ಭಗವತೋ ನಿದೋಷತ್ವ ಈಶಾನಸ್ತುತಿಖಂಡನ ಮೊದಲಾದ ಮೇರು ಗ್ರಂಥಗಳನ್ನು ಸತ್ಯಪ್ರಮೋದರು ರಚಿಸಿದರು.

    ಜ್ಞಾನದೇಗುಲದ ನಿರ್ಮಾಣ

    ‘‘ಶಾಸ್ತ್ರ ನಿಂತ ನೀರಾಗಬಾರದು. ಗಂಗೆಯಂತೆ ನಿರಂತರ ಹರಿಯಬೇಕು’’ ಎಂದು 1989ರಲ್ಲಿ ಬೆಂಗಳೂರಿನಲ್ಲಿ ಶ್ರೀಜಯತೀರ್ಥ ವಿದ್ಯಾಪೀಠವನ್ನು ಸ್ಥಾಪಿಸಿದರು. ವಿದ್ಯಾಚಕ್ರವರ್ತಿಗಳೆನಿಸಿದ ಗುತ್ತಲ ರಂಗಾಚಾರ್ಯರನ್ನು ಕುಲಪತಿಗಳನ್ನಾಗಿ ನೇಮಿಸಿದರು. ಸನಾತನ ಗುರುಕುಲ ಪದ್ಧತಿಯನ್ನು ಉಳಿಸಲು ಪ್ರಾರಂಭಿಸಿದ ಆ ಜ್ಞಾನದೇಗುಲ ಇಂದು ವಿಶಾಲರೂಪ ತಾಳಿದೆ. ವಿದ್ಯಾರ್ಥಿಗಳಿಗೆ ಉಚಿತ ಅನ್ನ ವಸ್ತ್ರ ವಿದ್ಯೆ ನೀಡಲಾಗುತ್ತಿದೆ. ಸಾವಿರಾರು ವಿದ್ವಾಂಸರನ್ನು ಸಮಾಜಕ್ಕೆ ನೀಡಿದೆ. ದೇಶದ ಅನೇಕ ಕಡೆ ಆ ವಿದ್ವಾಂಸರು ಧರ್ಮಜಾಗೃತಿ ಕಾರ್ಯ ಮಾಡುತ್ತಿದ್ದಾರೆ. ಹೀಗೆ ಸನಾತನ ಧರ್ಮ-ಶಾಸ್ತ್ರಗಳ ಗಂಗೆಯನ್ನು ನಿರಂತರ ಹರಿಸುತ್ತಿರುವ ಭಗೀರಥರು ಶ್ರೀ ಸತ್ಯಪ್ರಮೋದತೀರ್ಥರು. 3 ಸಾವಿರಕ್ಕೂ ಹೆಚ್ಚು ಪ್ರಾಚೀನ ತಾಡವಾಲ ಹಸ್ತಪ್ರತಿಗಳನ್ನು ಸಂಗ್ರಹಿಸಿ ಅವುಗಳ ರಕ್ಷಣೆ ಹಾಗೂ ಪ್ರಕಾಶನ ಇವರ ಅಸಾಧಾರಣ ಕಾರ್ಯಗಳಲ್ಲಿ ಒಂದು.

    ಶತಮಾನದ ಶಕಪುರುಷ: ಶ್ರೀ ಸತ್ಯಪ್ರಮೋದತೀರ್ಥರ 105ನೇ ವರ್ಧಂತಿ ಇಂದು..ಸಮಾಜಮುಖಿ

    ಬಡ ವಿದ್ಯಾರ್ಥಿಗಳ ಲೌಕಿಕ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡಲು ಜಯಸತ್ಯಪ್ರಮೋದನಿಧಿ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಒದಗಿಸುತ್ತಾರೆ. ಇದಕ್ಕಾಗಿ ಸ್ವಯಂ ಸೇವಕರ ತಂಡವೇ ಇದೆ. ಬರ-ಅತಿವೃಷ್ಟಿ ಪ್ರದೇಶಗಳಲ್ಲಿ ಅಗತ್ಯವಸ್ತು, ದಿನಸಿ, ವಸ್ತ್ರ, ಹಾಸಿಗೆಗಳನ್ನು ಒದಗಿಸುತ್ತಾರೆ. ಯುವಕರಲ್ಲಿ ಧರ್ಮಜಾಗೃತಿಗಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ಉಚಿತ ವಧೂ-ವರ ಸಮಾವೇಶ ನಡೆಸುತ್ತಾರೆ. ವರ್ಷದಲ್ಲಿ 2-3 ಬಾರಿ ವೈದ್ಯಕೀಯ ಶಿಬಿರ ಮಾಡಿ ಉಚಿತವಾದ ಚಿಕಿತ್ಸೆ ಒದಗಿಸುತ್ತಾರೆ. ಕರೊನಾದ ಸಂದರ್ಭದಲ್ಲಿ ಪ್ರತಿನಿತ್ಯ 3 ಸಾವಿರಕ್ಕೂ ಹೆಚ್ಚು ಜನರಿಗೆ ಮನೆ ಮನೆಗೆ ಹೋಗಿ ಔಷಧಿ ಮತ್ತು ಭೋಜನದ ವ್ಯವಸ್ಥೆ ಮಾಡಿದರು. ಹೀಗೆ ಅನೇಕ ಸಮಾಜ ಮುಖಿ ಕಾರ್ಯಕ್ರಮಗಳಿಗೆ ಭದ್ರಬುನಾದಿ ಹಾಕಿದವರು ಶ್ರೀ ಸತ್ಯಪ್ರಮೋದ ತೀರ್ಥರು.

    ಶತಮಾನದ ಶಕಪುರುಷ: ಶ್ರೀ ಸತ್ಯಪ್ರಮೋದತೀರ್ಥರ 105ನೇ ವರ್ಧಂತಿ ಇಂದು..ನಿರಂತರ ಅನ್ನದಾನ

    ಶ್ರೀಗಳ ಹೃದಯ ಸದಾ ಬಡವರಿಗಾಗಿ ಮಿಡಿಯಿತು. ಬರಗಾಲವಿರುವ ಊರನ್ನು ಹುಡುಕಿ ಅಲ್ಲಿಯೇ ಚಾತುರ್ವಸ್ಯಕ್ಕೆ ಕುಳಿತುಕೊಳ್ಳುತ್ತಿದ್ದರು! ಧರ್ಮ-ಪಂಥಗಳ ಭೇದವಿಲ್ಲದೆ ನಿರಂತರ ಅನ್ನದಾನ ನಡೆಯಬೇಕೆಂಬುದು ಅವರ ಇಂಗಿತ. ಶ್ರೀರಂಗಂ, ತಿರುಪತಿ, ತಿರುಕೋಯಿಲೂರು, ಕಂಚಿ, ಮುಂತಾದೆಡೆ ಮಠದಿಂದ ಸತ್ಯಪ್ರಮೋದರು ಪ್ರಾರಂಭಿಸಿದ ಅನ್ನದಾನ ಇಂದಿಗೂ ನಡೆಯುತ್ತಿದೆ. 50 ವರ್ಷ ರಾಮಸೇವೆ ಮಾಡಿದ ಸತ್ಯಪ್ರಮೋದರು ತಮ್ಮ ಉತ್ತರಾಧಿಕಾರಿಯಾಗಿ 1996ರಲ್ಲಿ ಶ್ರೀ ಸತ್ಯಾತ್ಮತೀರ್ಥರನ್ನು ನೇಮಿಸಿದರು. ಶ್ರೀ ಸತ್ಯಪ್ರಮೋದರ ಮಹಿಮೆ ಮತ್ತು ಸಮಾಜಸೇವೆಯನ್ನು ಎಂದಿಗೂ ಶಬ್ದಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ.

    ದಸರಾಗೆ ಪ್ರಧಾನಿ ಮೋದಿ ಆಗಮಿಸುತ್ತಾರಾ?; ಇಲ್ಲಿದೆ ಸಿಎಂ ನೀಡಿರುವ ಮಾಹಿತಿ..

    ದೇವಸ್ಥಾನಗಳ ಬಳಿ ಇರುವ ಎಲ್ಲ ಮಸೀದಿಗಳನ್ನು ತೆರವುಗೊಳಿಸಿ: ಸಚಿವರ ಹೇಳಿಕೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts