More

    ಜೋಕುಮಾರ ಬಂದಾನ, ಮಳೆ ಬೆಳೆಯ ತಂದಾನ..

    ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಜೋಕುಮಾರನ ಹಬ್ಬವನ್ನು ಇಂದಿಗೂ ಸಾಂಪ್ರದಾಯಿಕವಾಗಿ ಆಚರಿಸುತ್ತ ಬಂದಿದ್ದಾರೆ. ಗಣೇಶನ ನಿರ್ಗಮನದ ನಂತರ ಜೋಕುಮಾರನ ಆಗಮನವಾಗುತ್ತದೆ. ಮಳೆ ಇಲ್ಲದ ಸಮಯದಲ್ಲಿ ಈತ ವರುಣದೇವನನ್ನು ಭೂಮಿಗೆ ಕರೆತರುತ್ತಾನೆ ಎಂಬ ಪ್ರತೀತಿ ವ್ಯಾಪಕವಾಗಿದೆ.

    | ಶಿವಪ್ರಭು ಈಸರಗೊಂಡ

    ಭಾದ್ರಪದ ಮಾಸದ ಅಷ್ಟಮಿಯಂದು ಜನಿಸುವ ಜೋಕುಮಾರನ ಆಯುಷ್ಯ ಕೇವಲ ಏಳು ದಿನ. ಆ 7 ದಿನಗಳಲ್ಲಿ ಇವನ ಬಾಲ್ಯ, ಯೌವನ, ಸಾವು ಎಲ್ಲವೂ ಸಂಭವಿಸುತ್ತದೆ. ಮಣ್ಣಿನಿಂದ ಜೋಕುಮಾರನ ಪ್ರತಿಮೆ ಮಾಡಲಾಗುತ್ತದೆ. ಅರ್ಜುನನಂತೆ ಸುಂದರ ರೂಪ, ಹುರಿ ಮೀಸೆ, ಹಣೆಯಲ್ಲಿ ವಿಭೂತಿ ಹಾಗೂ ಕುಂಕುಮದಿಂದ ಕಂಗೊಳಿಸುತ್ತಾನೆ ಜೋಕುಮಾರ. ಆತನ ಆಕರ್ಷಕ ಮೂರ್ತಿಯನ್ನು ಬೇವಿನ ಎಲೆ ಹಾಕಿದ ಬಿದಿರಿನ ಬುಟ್ಟಿಯಲ್ಲಿ ಇಟ್ಟಿರುತ್ತಾರೆ. ಪತ್ರೆ, ಹೂವುಗಳನ್ನು ಹಾಕಿ ಬಾಯಿಗೆ ಬೆಣ್ಣೆಯನ್ನು ಮೆತ್ತಿರುತ್ತಾರೆ. ಜೋಳದ ನುಚ್ಚು, ಅಂಬಲಿ ಮತ್ತು ಬೆಣ್ಣೆ ಈತನಿಗೆ ಬಲು ಇಷ್ಟವಾದ ನೈವೇದ್ಯ. ಜೋಕುಮಾರನ ಬುಟ್ಟಿ ಹೊತ್ತ ಅಂಬಿಗೇರ ಮಹಿಳೆಯರು ಪದಗಳನ್ನು ಹಾಡುತ್ತ ಏಳು ದಿನಗಳ ಕಾಲ ಸಂಚರಿಸುತ್ತಾರೆ. ತಾವು ಹಂಚಿಕೊಂಡ ಪ್ರದೇಶಗಳಲ್ಲಿ ಮೂರ್ನಾಲ್ಕು ಜನ ಮಹಿಳೆಯರು ಮನೆಮನೆಗೂ ತೆರಳುತ್ತಾರೆ. ಮನೆಯವರನ್ನು ಕರೆದು, ‘‘ಜೋಕುಮಾರ ಬಂದಾನ ಬರ್ರೆವ್ವ… ಬಾಗಿನ ತಂದು ಜೋಕುಮಾರನಿಗೆ ಅರ್ಪಿಸಿ…’’ ಎಂದು ಹೇಳುತ್ತಾರೆ.

    ಮನೆಯ ಮುಂದೆ ಕುಳಿತು ‘‘ಜೋಕುಮಾರ ಬಂದಾನ ಜೋಕುಮಾರ, ಏಳು ದಿನಕ ಆವನ ಮರಣ. ಸಂಪೂರ್ಣ ಮಳೆ ತಂದು ರೈತರನ್ನು ಖುಷಿಗೊಳಿಸಿದ ಜೋಕುಮಾರ…’’ ಎಂಬ ಪದಗಳನ್ನು ಹಾಡುತ್ತ ಗುಣಗಾನ ಮಾಡುತ್ತಾರೆ, ಹಾಡುಗಳನ್ನು ಹಾಡುತ್ತಾರೆ. ಮನೆಯವರು ಜೋಕುಮಾರನಿಗೆ ಕುಂಕುಮ, ಹೂವು, ಪತ್ರೆ, ಏರಿಸಿ ಆರತಿ ಬೆಳಗಿ ಭಕ್ತಿಯಿಂದ ನಮಿಸಿ ಮರದಲ್ಲಿ ಉಲುಪಿ (ಅಕ್ಕಿ, ಜೋಳ, ಉಪ್ಪು, ದವಸ ಧಾನ್ಯ, ಒಣ ಮೆಣಸಿನ ಕಾಯಿ) ತಂದು ನೀಡುತ್ತಾರೆ. ಅವರು ನೀಡುವ ಪ್ರಸಾದವನ್ನು ಭಕ್ತಿಯಿಂದ ಪಡೆದು ‘‘ನಿಮ್ಮ ಮನೆತನವು ಉನ್ನತ ಮಟ್ಟಕ್ಕೇರಲಿ’’ ಎಂದು ಜೋಕುಮಾರನಿಗೆ ನೈವೇದ್ಯ ಮಾಡಿದ ಅಂಬಲಿಯನ್ನು ಆ ಮನೆಯವರಿಗೆ ಕೊಡುತ್ತಾರೆ. ಅದನ್ನು ಹೊಲಗಳಿಗೆ ಚರಗದ ರೂಪದಲ್ಲಿ ಚೆಲ್ಲುವಂತೆ ಹೇಳಿ ‘‘ಉತ್ತಮ ಮಳೆಯಾಗಿ ಸಮೃದ್ಧವಾದ ಬೆಳೆಗಳು ಬರಲಿ’’ ಎಂದು ಹಾರೈಸುತ್ತ ಮುಂದಿನ ಮನೆಗೆ ತೆರಳುತ್ತಾರೆ.

    ಜೋಕುಮಾರ ಬಂದಾನ, ಮಳೆ ಬೆಳೆಯ ತಂದಾನ..
    ಬಿದಿರಿನ ಬುಟ್ಟಿಯಲ್ಲಿ ಬೇವಿನ ತಪ್ಪಲಿನಲ್ಲಿ ಶೃಂಗರಿಸಿರುವ ಜೋಕುಮಾರ.

    ಮಳೆ ಬಾರದೆ ಬರ ಬಿದ್ದು ಬೆಳೆ ನಾಶವಾಗುವ ಹೊತ್ತಿನಲ್ಲಿ ಮಳೆರಾಯನನ್ನು ಕರೆತರಲು ಗ್ರಾಮೀಣ ಭಾಗದಲ್ಲಿ ಜೋಕುಮಾರನನ್ನು ಬಿದಿರಿನ ಬುಟ್ಟಿಯಲ್ಲಿ ಪ್ರತಿಷ್ಠಾಪಿಸಿ ಮನೆಗೆ ಬರುವ ಮಹಿಳೆಯರು ಜೋಕುಮಾರನ ಕುರಿತು ನಾನಾ ಬಗೆಯ ಹಾಡುಗಳನ್ನು ಹಾಡುತ್ತಿದ್ದರೆ ಕೇಳಲು ಸಂತಸವೆನಿಸುತ್ತದೆ. ಈ ಪದ್ಧತಿಯು ಹಳ್ಳಿಗಳಲ್ಲಿ ಇನ್ನೂ ಪ್ರಚಲಿತದಲ್ಲಿದೆ.

    | ಕಮಲಾಬಾಯಿ ಓರಣಕರ, ಉಪ್ಪಿನಬೆಟಗೇರಿ

    ಗಣೇಶನ ಮುಖಕ್ಕೆ ಬಟ್ಟೆ: ಗಣೇಶನ ಮುಂದೆ ಜೋಕುಮಾರ ಬರಬಾರದು ಎಂಬುದು ಈ ಆಚರಣೆಯ ವಿಶೇಷ! ಜೋಕುಮಾರನ ಮುಖವನ್ನು ಗಣೇಶ ನೋಡಬಾರದು ಎಂಬ ನಂಬಿಕೆಯಿಂದಾಗಿ ಗಣೇಶನ ಮುಖಕ್ಕೆ ಬಟ್ಟೆ ಹಾಕುತ್ತಾರೆ. ಅದು ಇಂದಿಗೂ ಚಾಲ್ತಿಯಲ್ಲಿದೆ.

    ಜೋಕುಮಾರ ಬಂದಾನ, ಮಳೆ ಬೆಳೆಯ ತಂದಾನ..
    ಧಾರವಾಡ ತಾಲೂಕಿನ ಉಪ್ಪಿನಬೆಟಗೇರಿ ಗ್ರಾಮದಲ್ಲಿ ಜೋಕುಮಾರನನ್ನು ಬಿದಿರಿನ ಬುಟ್ಟಿಯಲ್ಲಿಟ್ಟುಕೊಂಡು ಮನೆ ಮನೆಗೆ ತೆರಳುತ್ತಿರುವ ಮಹಿಳೆಯರು.

    ಹೀಗೆ ಏಳು ದಿನಗಳ ಕಾಲ ಬುಟ್ಟಿಯಲ್ಲಿ ಹೊತ್ತು ತಿರುಗುವ ಮಹಿಳೆಯರು, ಏಳನೇ ದಿನ ಜೋಕುಮಾರನ ಮೂರ್ತಿಯನ್ನು ಗ್ರಾಮದ ಕೇರಿಯಲ್ಲಿಟ್ಟು ಬರುತ್ತಾರೆ. ಆಮೇಲೆ ಅವರು ಜೋಕುಮಾರನ ಪೂಜೆ ಮಾಡಿ ಆತನ ರುಂಡವನ್ನು ಕತ್ತರಿಸುತ್ತಾರೆ. ಆ ರುಂಡವು ಮೇಲ್ಮುಖವಾಗಿ ಬಿದ್ದರೆ ಉತ್ತಮ ಮಳೆ, ಹುಲುಸಾದ ಬೆಳೆ ಖಚಿತ ಎಂಬ ನಂಬಿಕೆ. ಒಂದು ವೇಳೆ ಕೆಳ ಮುಖವಾಗಿ ಬಿದ್ದರೆ ಅಶುಭದ ಸಂಕೇತ ಎಂಬ ನಂಬಿಕೆ ಇದೆ. ನಂತರ ಹೊಳೆಯಲ್ಲಿ ಆತನ ಮೂರ್ತಿಯನ್ನು ವಿಸರ್ಜಿಸುತ್ತಾರೆ. ಮೂರು ದಿನ ಜೋಕುಮಾರ ಹೊಳೆಯ ದಂಡೆಯಲ್ಲಿ ನರಳುತ್ತಾನೆ ಎಂಬ ನಂಬಿಕೆಯಿಂದ ಅಗಸರು ಆ ಮೂರು ದಿನ ಹೊಳೆಗೆ ಬಟ್ಟೆ ಒಗೆಯಲು ಹೋಗುವುದಿಲ್ಲ.

    ದಸರಾಗೆ ಪ್ರಧಾನಿ ಮೋದಿ ಆಗಮಿಸುತ್ತಾರಾ?; ಇಲ್ಲಿದೆ ಸಿಎಂ ನೀಡಿರುವ ಮಾಹಿತಿ..

    ದೇವಸ್ಥಾನಗಳ ಬಳಿ ಇರುವ ಎಲ್ಲ ಮಸೀದಿಗಳನ್ನು ತೆರವುಗೊಳಿಸಿ: ಸಚಿವರ ಹೇಳಿಕೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts