More

    ಮುಚ್ಚುವ ಹಂತದಲ್ಲಿದ್ದ ಶಾಲೆ ದತ್ತು

    ಪುತ್ತೂರು: ಮಕ್ಕಳ ಕೊರತೆಯಿಂದ ಇನ್ನೇನು ಮುಚ್ಚುವ ಹಂತದ್ದಲ್ಲಿದ್ದ, ಜತೆಗೆ ಸುವರ್ಣ ಮಹೋತ್ಸವದ ಆಸುಪಾಸಿನಲ್ಲಿರುವ ಸಾಮೆತ್ತಡ್ಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದತ್ತು ಸ್ವೀಕಾರದ ಬಳಿಕ ಮೂಲಸೌಕರ್ಯಗಳೊಂದಿಗೆ ಮತ್ತೆ ಚಿಗುರಿ ನಿಂತಿದೆ. ಪುತ್ತೂರಿನ ಸಾಮೆತ್ತಡ್ಕ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಲ್ಲದೆ ಸೊರಗುತ್ತಿದ್ದ ಸಂದರ್ಭ ಶಾಲಾ ಸ್ಥಾಪಕ ಸಾಮೆತ್ತಡ್ಕ ಗೋಪಾಲಕೃಷ್ಣ ಭಟ್ ಶಾಲೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ದತ್ತು ಪಡೆದುಕೊಂಡ ಬಳಿಕ ಈಗ ವಿದ್ಯಾಭಿಮಾನಿಗಳು ದಾನ ನೀಡಲು ಮುಂದಾಗಿರುವುದು ಶಾಲಾ ಪರಿಸರದಲ್ಲಿ ಸಂಚಲನ ಉಂಟು ಮಾಡಿದೆ.

    ಈ ಶಾಲೆ 1973ರಲ್ಲಿ ಸ್ಥಾಪನೆಯಾಗಿದ್ದು, ಹಲವಾರು ವರ್ಷಗಳ ಕಾಲ ಇಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿತ್ತು. ಅಂದರೆ ಒಂದರಿಂದ ಏಳನೇ ತರಗತಿವರೆಗೆ ಪ್ರತಿ ತರಗತಿಯಲ್ಲಿ 25ರಿಂದ 30 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದರು. ಈ ಮೂಲಕ ಸಾಕಷ್ಟು ಮಂದಿಗೆ ವಿದ್ಯಾದಾನ ಮಾಡಿದ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಬರುಬರುತ್ತಾ ಆಂಗ್ಲ ಮಾಧ್ಯಮ ಖಾಸಗಿ ಶಾಲೆಗಳ ವ್ಯಾಮೋಹದಿಂದ ಈ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಇಳಿಮುಖವಾಗುತ್ತ ಮುಚ್ಚುವ ಹಂತದ ತನಕ ತಲುಪಿತ್ತು. ದತ್ತು ಪಡೆದುಕೊಂಡ ಗೋಪಾಲಕೃಷ್ಣ ಭಟ್‌ರ ಮುತುವರ್ಜಿಯಿಂದ ಸಾಮೆತ್ತಡ್ಕ ಪರಿಸರದಲ್ಲಿ ಈ ಶಾಲೆ ಮತ್ತೆ ಪುನಶ್ಚೇತನಗೊಂಡಿದೆ. ಶಾಲಾಭಿವೃದ್ಧಿ ಸಮಿತಿಯನ್ನು ರಚಿಸಲಾಗಿದೆ.

    ಮೂಲಸೌಕರ್ಯ
    ಸಾಮೆತ್ತಡ್ಕ ಶಾಲೆಗೆ 1.58 ಎಕರೆ ಜಾಗ ಹೊಂದಿದ್ದು, ವಿಶಾಲ ಆಟದ ಮೈದಾನ, ಶೌಚಗೃಹ, ನೀರಿನ ಸೌಕರ್ಯ ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕರು, ವಿದ್ಯಾಭಿಮಾನಿಗಳ ಸಹಕಾರದೊಂದಿಗೆ ಶಾಲಾ ಕಟ್ಟಡ ದುರಸ್ತಿ, ಪೀಠೋಪಕರಣ, ಕಂಪ್ಯೂಟರ್, ನೀರಿನ ವ್ಯವಸ್ಥೆ ಜತೆಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ಬೇಕಾದ ಮೂಲಸೌಲಭ್ಯ ಒದಗಿಸಲು ಪ್ರಯತ್ನಿಸುವ ಭರವಸೆ ನೀಡಿದಂತೆ ಒಂದೊಂದೇ ಮೂಲಸೌಕರ್ಯಗಳು ಕೈಗೂಡುತ್ತಿವೆ.

    ಆಂಗ್ಲ ಮಾಧ್ಯಮ ಆರಂಭ
    ಪ್ರಸ್ತುತ ಬೆಳವಣಿಗೆಯಲ್ಲಿ ಶಾಲೆಯಲ್ಲಿ ಕನ್ನಡ ಮಾಧ್ಯಮದ ಜತೆ ಆಂಗ್ಲ ಮಾಧ್ಯಮ ಎಲ್‌ಕೆಜಿ, ಯುಕೆಜಿ ವಿಭಾಗವನ್ನು ತೆರೆಯಲಾಗಿದೆ. ಕನ್ನಡ ಮಾಧ್ಯಮಕ್ಕೆ ನಮ್ಮ ಶಾಲೆ ಸಾಮೆತ್ತಡ್ಕ ಎಂದು ಆಂಗ್ಲ ಮಾಧ್ಯಮಕ್ಕೆ ಮೈ ಸ್ಕೂಲ್ ಸಾಮೆತ್ತಡ್ಕ ಎಂದು ಹೆಸರು ಇಡಲಾಗಿದೆ. ಮೊದಲು ಆಂಗ್ಲ ಮಾಧ್ಯಮಕ್ಕಾಗಿ ಇದ್ದ ಕೊಠಡಿಯನ್ನೇ ಬಳಸಲಾಗುವುದು. ಈಗಾಗಲೇ ಆಂಗ್ಲ ಮಾಧ್ಯಮಕ್ಕೆ ಬೇಕಾದ ಇಬ್ಬರು ಶಿಕ್ಷಕರನ್ನು ನೇಮಿಸಲಾಗಿದೆ. ದಾಖಲಾತಿಗಳೂ ಆರಂಭಗೊಂಡಿದೆ.

    ಈಗಾಗಲೇ ದತ್ತು ಸ್ವೀಕರಿಸಿರುವುದಕ್ಕೆ ಸಾರ್ವಜನಿಕರಿಂದ ಉತ್ತಮ ಬೆಂಬಲ ದೊರೆತಿದ್ದು, ಕನ್ನಡ ಮಾಧ್ಯಮ ಉಳಿಸಿಕೊಂಡು ಎಲ್‌ಕೆಜಿ, ಯುಕೆಜಿ ಆಂಗ್ಲ ಮಾಧ್ಯವನ್ನು ಆರಂಭಿಸುವುದು ನಮ್ಮ ಮುಖ್ಯ ಉದ್ದೇಶ. ಮುಂದಿನ ದಿನಗಳಲ್ಲಿ 8ನೇ ತರಗತಿ ತೆರೆಯಲು ಪರವಾನಗಿ ಕೇಳಿದ್ದೇವೆ. ಅಂತೂ ಕಳೆದ 46 ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಸಂತೋಷ ತಂದಿದೆ.
    ಸಾಮೆತ್ತಡ್ಕ ಗೋಪಾಲಕೃಷ್ಣ ಭಟ್, ದತ್ತು ಪಡೆದುಕೊಂಡ ಶಾಲಾ ಸ್ಥಾಪಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts