More

    ತಳಸಮುದಾಯದವರ ಮೇಲಿನ ದಬ್ಬಾಳಿಕೆ ನಿಲ್ಲಲಿ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಎಚ್.ಎನ್.ರವೀಂದ್ರ ಆಗ್ರಹ

    ಮಂಡ್ಯ: ಮೇಲ್ವರ್ಗದವರಿಂದ ತಳಸಮುದಾಯದವರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ನಿಲ್ಲಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಎಚ್.ಎನ್. ರವೀಂದ್ರ ಒತ್ತಾಯಿಸಿದರು.
    ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ರಾಜ್ಯ ನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಪೌರ ಕಾರ್ಮಿಕರ/ಹೊರಗುತ್ತಿಗೆ ನೌಕರರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಪೌರಕಾರ್ಮಿಕರ, ಹೊರಗುತ್ತಿಗೆ ನೌಕರರ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
    ಶತಮಾನಗಳಿಂದಲೂ ಎಲ್ಲ ಕೆಲಸಗಳಿಗೂ ತಳ ಸಮುದಾಯದವರನ್ನು ಬಳಸಿಕೊಂಡು ಮೇಲ್ವರ್ಗದ ಜನರು ಅವರನ್ನು ತುಳಿಯುತ್ತಲೇ ಬಂದಿದ್ದಾರೆ. ಪೌರಕಾರ್ಮಿಕ ಹೊರಗುತ್ತಿಗೆ ನೌಕರರ ಬದುಕು ಕೂಡ ಹೀನ ಸ್ಥಿತಿಯಲ್ಲಿದೆ. ಮಲ ಹೊರುವ ಪದ್ಧತಿ ತೆಗೆದುಹಾಕಿ ಮತ್ತೊಂದು ರೀತಿಯಲ್ಲಿ ಕೆಲಸ ತೆಗೆಸಿಕೊಳ್ಳುತ್ತಿದ್ದಾರೆ. ಯಾವುದೇ ಸರ್ಕಾರವಿರಲಿ ಆ ದಾಸ್ಯಕ್ಕೆ ನನ್ನ ಧಿಕ್ಕಾರ ಇರುತ್ತದೆ. ಕಡಿಮೆ ಕೂಲಿಗೆ ದುಡಿಸಿಕೊಳ್ಳಲು ಯಾವುದೋ ಒಂದು ಏಜೆನ್ಸಿಗಳಿಗೆ ಕೊಟ್ಟು ಕೈತೊಳೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
    ನ್ಯಾಯಾಲಯದಲ್ಲಿ ನಿಮ್ಮ ಹಕ್ಕನ್ನು ಪಡೆಯಲು ನಿರಂತರವಾಗಿ ಕೆಲಸ ಮಾಡಿರಬೇಕು. ಇದರಲ್ಲಿಯೂ ಸಹ ಪೌರಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ. ಹಿಂದೆ ಇದ್ದ ಸರ್ಕಾರ ಕಾನೂನಿನಡಿಯಲ್ಲಿಯೇ ಕೆಲಸ ಮಾಡಿಕೊಂಡು ಹೋಗುತ್ತಾ ಜನರ ಪರವಾಗಿತ್ತು. ಆದರೆ, ಪ್ರಸ್ತುತದಲ್ಲಿನ ಸರ್ಕಾರ ಮಟ್ಕಾ, ಜೂಜು, ಕ್ಯಾಸಿನೊ ನಡೆಸುವವರ ಕೈಯಲ್ಲಿಟ್ಟು ಆಡಳಿತ ನಡೆಸುತ್ತಿದೆ ಎಂದು ಟೀಕಿಸಿದರು.
    ತಲೆಯಲ್ಲಿ ಸಗಣಿ ತುಂಬಿಕೊಂಡಿರುವವರನ್ನು ವಿಧಾನಸೌಧಕ್ಕೆ ಆಯ್ಕೆ ಮಾಡಿ ಕಳುಹಿಸಿದ್ದೇವೆ. ದೇಶದಲ್ಲಿ 1250 ಕೋಟಿ ಮನೆಗಳನ್ನು ಕಟ್ಟಿಕೊಟ್ಟಿದ್ದೇವೆ ಎಂದು ಪ್ರಧಾನಮಂತ್ರಿ ಜಾಹೀರಾತು ನೀಡುತ್ತಾರೆ. ಆದರೆ ನಮ್ಮ ಜನಸಂಖ್ಯೆನೇ ಅಷ್ಟು ಇಲ್ಲ? ಮೇಲ್ವರ್ಗದವರ ಸರ್ಕಾರ ಆಗಿರುವುದರಿಂದ ತಳಸಮುದಾಯದವರ ನೆಮ್ಮದಿ ಹಾಳು ಮಾಡಲು ನೋಡುತ್ತಿದ್ದಾರೆ. ಇಂದು ನಡೆಯುತ್ತಿರುವ ರೀತಿಯನ್ನು ಮಾತ್ರ ನಾನು ಹೇಳುತ್ತಿದ್ದೇನೆ, ಚರಂಡಿ ಸ್ವಚ್ಛಗೊಳಿಸಲು ಮೇಲ್ವರ್ಗದವರು ಯಾವತ್ತಾದರೂ ಬಂದಿದ್ದಾರಾ ಎಂದು ಪ್ರಶ್ನಿಸಿದರು.
    ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ಮಾತನಾಡಿ, ಒಂದನೇ ದರ್ಜೆ ನೌಕರರಿಗೆ ನೀಡುತ್ತಿರುವ ಸಂಬಳವನ್ನು ಪೌರಕಾರ್ಮಿಕರಿಗೂ ಕೊಡಬೇಕು. ಪೌರಕಾರ್ಮಿಕರು ವೃತ್ತಿಗೆ ಬಂದಾಗ ಅವರ ಮಕ್ಕಳ ಲಾಲನೆ ಪಾಲನೆ ಮಾಡಲು ಸರ್ಕಾರ ಪಾಲನಾ ಕೇಂದ್ರಗಳನ್ನು ಸ್ಥಾಪಿಸಬೇಕು. ಜಗತ್ತು ಮುಂದುವರಿದ್ದರೂ ಪೌರಕಾರ್ಮಿಕರಿಗೆ ಆಧುನಿಕ ಸೌಲಭ್ಯ ದೊರೆಯುತ್ತಿಲ್ಲ. ಈ ದಿಸೆಯಲ್ಲಿ ಇರುವಂತಹ ಸನ್ನಿವೇಶವನ್ನು ನಾಗರಿಕ ಸಮಾಜ ಎಂದು ಕರೆಯಲು ಸಾಧ್ಯವೇ ಎಂದು ವಿಷಾದಿಸಿದರು.
    ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಎಲ್.ಸಂದೇಶ್ ಮಾತನಾಡಿ, ವೃತ್ತಿ ಆಧಾರದ ಮೇಲೆ ಗೌರವ ಧನವನ್ನು ನಿಗದಿ ಮಾಡಬಾರದು. ಬಸವಣ್ಣ ಅವರ ಕಾಯಕ ಸಮಾನತಾ ವಾದವನ್ನು ಅನುಷ್ಠಾನಗೊಳಿಸಬೇಕು. ಶ್ರಮ ಮತ್ತು ಜ್ಞಾನದ ನಡುವೆ ಇರುವ ಅಸಮಾನತೆಯನ್ನು ಹೋಗಲಾಡಿಸಬೇಕು. ಯಾರೂ ಮಾಡದ ಕೆಲಸವನ್ನು ಮಾಡುತ್ತಿರುವ ಪೌರಕಾರ್ಮಿಕ ಬಾಳು ಅಸನಾಗಬೇಕು ಎಂದು ಒತ್ತಾಯಿಸಿದರು.
    ಮುಖಂಡರಾದ ರವಿಕುಮಾರ ಗಣಿಗ, ಸೋಮಸುಂದರ್, ಪ್ರಕಾಶ್, ದಿನೇಶ್, ನಾಗರಾಜು, ಅಂದಾನಿ, ಸಂಘದ ರಾಜ್ಯಾಧ್ಯಕ್ಷ ಎಂ.ಬಿ. ನಾಗಣ್ಣಗೌಡ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts