More

    ಧರ್ಮದ ಪರಿಪಾಲನೆಯಿಂದ ಮೋಕ್ಷ: ಶ್ರೀ ಸತ್ಯಾತ್ಮ ತೀರ್ಥರು

    ಶಿವಮೊಗ್ಗ: ನಿಷ್ಕಾಮ ಭಕ್ತಿಯಿಂದ ಭಗವಂತನ ಪ್ರೀತಿಗೋಸ್ಕರ ಮಾಡುವ ಧರ್ಮವೇ ಸತ್ಯವಾದ ಧರ್ಮ. ಧರ್ಮದ ಪರಿಪಾಲನೆಯಿಂದ ನಮಗೆ ಮೋಕ್ಷದಂತಹ ಮಹಾಲವೂ ಸಾಧ್ಯವಿದೆ. ಹೀಗಾಗಿ ನಾವು ಸತ್ಯವಾದ ಧರ್ಮದ ಪಾಲನೆ ಮಾಡಬೇಕು ಎಂದು ಉತ್ತರಾದಿ ಮಠಾಧೀಶ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳು ತಿಳಿಸಿದರು.

    ಹೊಳೆಹೊನ್ನೂರಿನಲ್ಲಿ ಚಾತುರ್ಮಾಸ್ಯ ಕೈಗೊಂಡಿರುವ ಶ್ರೀ ಸತ್ಯಾತ್ಮರು ಮಂಗಳವಾರ ಪುರಪ್ರವೇಶ ಮಾಡಿದ ಬಳಿಕ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಹೊಳೆಹೊನ್ನೂರು ಕ್ಷೇತ್ರದಲ್ಲಿ ಸನ್ನಿಹಿತರಾಗಿರುವ ಮಹಾಮಹಿಮರಾದ ಶ್ರೀ ಸತ್ಯಧರ್ಮ ತೀರ್ಥ ಶ್ರೀಪಾದರು ನಮ್ಮೆಲ್ಲರಿಗೂ ಸತ್ಯವಾದ ಧರ್ಮವನ್ನು ಪರಿಪಾಲನೆ ಮಾಡುವ ಆಸಕ್ತಿ ಮತ್ತು ಶಕ್ತಿ ನೀಡಲಿದ್ದಾರೆ ಎಂದರು.
    2014ರಲ್ಲೇ ಹೊಳೆಹೊನ್ನೂರಿನಲ್ಲಿ ಚಾತುರ್ಮಾಸ್ಯ ಕೈಗೊಳ್ಳಬೇಕೆಂಬ ಸಂಕಲ್ಪ ಮಾಡಲಾಗಿತ್ತು. ಆಗ ಅನಿವಾರ್ಯವಾಗಿ ಉಡುಪಿಯಲ್ಲಿ ಚಾತುರ್ಮಾಸ್ಯ ಕೈಗೊಂಡಿದ್ದೆವು. ಈ ನಡುವಿನ ಅಂತರದಲ್ಲಿ ಶ್ರೀ ಸತ್ಯಧರ್ಮ ತೀರ್ಥರ ಗುರುಗಳಾದ ಶ್ರೀ ಸತ್ಯವರರ ಸನ್ನಿಧಾನದಲ್ಲಿ ಚಾತುರ್ಮಾಸ್ಯ ಮುಗಿಸಿದ್ದೇವೆ. ತಮ್ಮ ಗುರುಗಳ ಬಳಿ ಚಾತುರ್ಮಾಸ್ಯ ಹಾಗೂ ಅವರ ಆರಾಧನೆ ಮುಗಿಸಿ ಇಲ್ಲಿಗೆ ಬರಬೇಕೆಂಬ ಅಪೇಕ್ಷೆ ಸತ್ಯಧರ್ಮ ತೀರ್ಥರದ್ದು ಇರಬಹುದು. ಅದಕ್ಕಾಗಿಯೇ 2014ರ ಚಾತುರ್ಮಾಸ್ಯ 2023ರಲ್ಲಿ ನಡೆದಿದೆ ಎಂದು ಹೇಳಿದರು.
    ಈ ಹಿಂದೆ ನಮ್ಮ ಗುರುಗಳು ಶಿವಮೊಗ್ಗದಲ್ಲಿ ಚಾತುರ್ಮಾಸ್ಯ ಕೈಗೊಂಡಾಗ ಅವರ ಜತೆ ಒಮ್ಮೆ ಹಾಗೂ ಕೂಡಲಿಯಲ್ಲಿ ನಾವು ಚಾತುರ್ಮಾಸ್ಯ ಕೈಗೊಂಡಾಗ ಮತ್ತೊಮ್ಮೆ ಶ್ರೀ ಸತ್ಯಧರ್ಮರ ಆರಾಧನೆಯಲ್ಲಿ ಭಾಗವಹಿಸಲು ಅವಕಾಶ ಒದಗಿಬಂದಿತ್ತು. ಇದೀಗ ಶ್ರೀ ಸತ್ಯಧರ್ಮರ ಸನ್ನಿಧಾನದಲ್ಲೇ ವ್ರತ ಕೈಗೊಂಡು ಅವರ ಆರಾಧನೆ 3ನೇ ಬಾರಿ ನೆರವೇರಿಸುವ ಮಹಾ ಭಾಗ್ಯ ಒದಗಿ ಬಂದಿದೆ ಎಂದರು.
    ಪಂಡಿತ ನವರತ್ನ ಶ್ರೀನಿವಾಸಾಚಾರ್ಯ ಮಾತನಾಡಿ, ಶ್ರೀ ಸತ್ಯಧರ್ಮ ತೀರ್ಥರು ಉತ್ತರಾದಿ ಮಠದ ಪರಂಪರೆಯಲ್ಲಿ 28ನೇ ಯತಿ. ಶ್ರೀಮಠದಲ್ಲಿ 28 ಪ್ರತಿಮೆಗಳಿವೆ. ಇದೀಗ ಶ್ರೀ ಸತ್ಯಾತ್ಮ ತೀರ್ಥರ ಚಾತುರ್ಮಾಸ್ಯವೂ 28ನೇಯದ್ದು ಎಂದು ಹೇಳಿದರು.
    ವಿವಿಧ ಕ್ಷೇತ್ರಗಳಿಂದ ಶ್ರೀಗಳವರಿಗೆ ತಂದಿದ್ದ ಶೇಷವಸ ಹಾಗೂ ಮಂತ್ರಾಕ್ಷತೆಯನ್ನು ಸಮರ್ಪಿಸಲಾಯಿತು. ಪ್ರವಚನ ಮಂದಿರ ನಿರ್ಮಾಣದ ಸಂಪೂರ್ಣ ಸೇವೆ ಮಾಡಿದ ಶ್ರೀನಾಥ ನಗರಗದ್ದೆ, ಅಲಂಕೃತ ವೇದಿಕೆಯ ನಿರ್ಮಾತೃ ಶಿವಮೊಗ್ಗದ ಗುರುರಾಜ್ ಕಟ್ಟಿ ಹಾಗೂ ಪೂಜಾ ಮಂದಿರ ನಿರ್ಮಾಣದ ನಿರ್ವಹಣೆ ಮಾಡಿದ ಬೆಂಗಳೂರಿನ ವರುಣ್ ಅವರನ್ನು ಸನ್ಮಾನಿಸಲಾಯಿತು.
    ಉತ್ತರಾದಿ ಮಠದ ದಿವಾನರಾದ ಶಶಿ ಆಚಾರ್ಯ, ಜಿಲ್ಲಾ ಮಠಾಧಿಕಾರಿ ಬಾಳಗಾರು ಜಯತೀರ್ಥಾಚಾರ್ಯ, ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ಪಂಡಿತರಾದ ನವರತ್ನ ಶ್ರೀನಿವಾಸಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ರಘೂತ್ತಮಾಚಾರ್ಯ ಸಂಡೂರು, ಕಡೂರು ಮಧುಸೂಧನಾಚಾರ್ಯ, ಕಲ್ಲಾಪುರ ಜಯತೀರ್ಥಾಚಾರ್ಯ, ಕುಷ್ಟಗಿ ವಾಸುದೇವಮೂರ್ತಿ ಇತರರಿದ್ದರು.
    ವ್ರತ ಗ್ರಹಣ ಮಾಡಿದ ಶ್ರೀಗಳು: ಶ್ರೀ ಸತ್ಯಾತ್ಮ ತೀರ್ಥರು ಬುಧವಾರ ಶ್ರೀ ಸತ್ಯಧರ್ಮ ತೀರ್ಥರ ಮೂಲ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ, ಮಂಗಳಾರತಿ ಮೊದಲಾದ ಧಾರ್ಮಿಕ ಕಾರ್ಯಕ್ರಮ ನೆರವೇರಿಸಿದರು. ನಂತರ 28ನೇ ಚಾತುರ್ಮಾಸ್ಯದ ವ್ರತ ಸಂಕಲ್ಪವನ್ನು ಮಾಡಿದರು. ವಜ್ರಖಚಿತ ಬಂಗಾರದ ಮಂಟಪದಲ್ಲಿ ವಿರಾಜಮಾನನಾಗಿದ್ದ ಶ್ರೀ ಸೀತಾಸಮೇತ ಮೂಲ ರಾಮಚಂದ್ರ ದೇವರ ಪೂಜೆ ನೆರವೇರಿಸಿದರು. 80 ದಿನಗಳ ಕಾಲ ಶ್ರೀಗಳು ಹೊಳೆಹೊನ್ನೂರಿನಲ್ಲೇ ಇದ್ದು ಪೂಜಾ, ಪಾಠ-ಪ್ರವಚನ ಕೈಗೊಳ್ಳಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts