More

    ಸಾಂತ್ವನ ಹೇಳಲು ಸಖಿ ಕೇಂದ್ರ: ಕೋಲಾರದಲ್ಲಿಂದು ಲೋಕಾರ್ಪಣೆ , ಒಂದೇ ಸೂರಿನಡಿ ಎಲ್ಲ ಸೌಲಭ್ಯ

    ಕೋಲಾರ : ನೊಂದ, ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಸಾಂತ್ವನ ಹೇಳುವ ಜತೆಗೆ ಎಲ್ಲ ರೀತಿಯಲ್ಲೂ ನೆರವಾಗುವ ಉದ್ದೇಶದಿಂದ ತೆರೆದಿರುವ ಸಖಿ ಒನ್ ಸ್ಟಾಫ್ ಸೆಂಟರ್ ಸೆ.25ರಂದು ಲೋಕಾರ್ಪಣೆಗೊಳ್ಳಲಿದೆ.
    ಕೇಂದ್ರ ಸರ್ಕಾರ ಪ್ರತಿ ಜಿಲ್ಲೆಯಲ್ಲೂ ಸಖಿ ಕೇಂದ್ರ ತೆರೆಯುತ್ತಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೇಂದ್ರವನ್ನು ನಿರ್ವಹಿಸುತ್ತದೆ. ನಗರದ ಎಸ್ಸೆನ್ನಾರ್ ಜಿಲ್ಲಾಸ್ಪತ್ರೆ ಆವರಣದಲ್ಲಿ 1400 ಚದರ ಅಡಿಯಲ್ಲಿ 48 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಕೇಂದ್ರ ನಿರ್ಮಾಣಗೊಂಡು ವರ್ಷವಾಗಿತ್ತು. ಕರೊನಾ ಹಿನ್ನೆಲೆಯಲ್ಲಿ ಲೋಕಾರ್ಪಣೆ ಸಾಧ್ಯವಾಗಿರಲಿಲ್ಲ. ಇದೀಗ ಕರೊನಾ ಅಬ್ಬರ ತಗ್ಗಿರುವುದರಿಂದ ಕೇಂದ್ರವನ್ನು ಬಳಸಿಕೊಳ್ಳಲು ಇಲಾಖೆ ಮುಂದಾಗಿದೆ.

    ಸಖಿ ಕೇಂದ್ರದ ಉದ್ದೇಶ: ಕುಟುಂಬದಿಂದ ಇಲ್ಲವೆ ಸಮಾಜದಲ್ಲಿ ದೈಹಿಕ ಹಲ್ಲೆ, ಲೈಂಗಿಕ ಕಿರುಕುಳ, ಅತ್ಯಾಚಾರ ಇನ್ನಿತರ ದೌರ್ಜನ್ಯಕ್ಕೆ ಒಳಗಾಗುವ ಹೆಣ್ಣುಮಕ್ಕಳು, ಮಹಿಳೆಯರು ರಕ್ಷಣೆ, ವಸತಿ, ಚಿಕಿತ್ಸೆ, ಸಮಾಲೋಚನೆ ಹಾಗೂ ಕಾನೂನು ಸಹಾಯಕ್ಕಾಗಿ ಬೇರೆ ಬೇರೆ ಕಡೆ ಅಲೆಯಬೇಕಾಗುತ್ತದೆ. ಇದನ್ನು ತಪ್ಪಿಸಿ ಒಂದೇ ಸೂರಿನಡಿ ಎಲ್ಲ ಸೌಲಭ್ಯ ಕಲ್ಪಿಸುವುದು ಸಖಿ ಒನ್ ಸ್ಟಾಫ್ ಸೆಂಟರ್‌ನ ಉದ್ದೇಶ.
    ದೌರ್ಜನ್ಯಕ್ಕೊಳಗಾದ ಮಹಿಳೆಯರ ರಕ್ಷಣೆಗೆ ಸರ್ಕಾರ 2014ರಲ್ಲಿ ಗೆಳತಿ ವಿಶೇಷ ಚಿಕಿತ್ಸಾ ಘಟಕ ಆರಂಭಿಸಿತ್ತು.

    ಈ ಘಟಕಗಳು ಜಿಲ್ಲಾಸ್ಪತ್ರೆಯಲ್ಲಿ ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುತ್ತಿದ್ದವಾದರೂ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ತಾತ್ಕಾಲಿಕ ವಸತಿ, ಊಟೋಪಚಾರ, ರಕ್ಷಣೆ, ವೈದ್ಯಕೀಯ ಚಿಕಿತ್ಸೆ, ಕಾನೂನು ನೆರವು ಇಂತಹ ಯಾವುದೇ ವ್ಯವಸ್ಥೆ ಇರಲಿಲ್ಲ. ಇದೀಗ ಕೇಂದ್ರ ಸರ್ಕಾರದ ಸಖಿ ಒನ್ ಸ್ಟಾಫ್ ಸೆಂಟರ್‌ನಲ್ಲಿ ನೊಂದ ಮಹಿಳೆಗೆ ತಕ್ಷಣದ ಆಶ್ರಯ, ಇನ್ನಿತರ ವ್ಯವಸ್ಥೆ ಒಂದೇ ಸೂರಿನಡಿ ಸಿಗಲಿದೆ.

    8 ಸಿಬ್ಬಂದಿ: ಸಖಿ ಒನ್ ಸ್ಟಾಫ್ ಸೆಂಟರ್‌ನಲ್ಲಿ ಆಡಳಿತಾಧಿಕಾರಿ, ಇಬ್ಬರು ವಕೀಲರು, ಇಬ್ಬರು ಎಂಎಸ್‌ಡಬ್ಲ್ಯು, ಒಬ್ಬ ಆಪ್ತ ಸಮಾಲೋಚಕ, ಇಬ್ಬರು ಡಿ ಗ್ರೂಪ್ ನೌಕರರು ಸೇರಿ ಒಟ್ಟು 8 ಮಂದಿ ಕಾರ್ಯನಿರ್ವಹಿಸುತ್ತಾರೆ. ವೈದ್ಯಕೀಯ ಚಿಕಿತ್ಸೆ ಜಿಲ್ಲಾಸ್ಪತ್ರೆಯಲ್ಲಿ ಸಿಗಲಿದೆ. ಪೊಲೀಸರನ್ನು ನಿಯೋಜಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಪೊಲೀಸ್ ಇಲಾಖೆಯನ್ನು ಕೋರಿದೆ.ಇಂದು ಕಟ್ಟಡ ಉದ್ಘಾಟನೆ :  ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಸೆ.25ರಂದು ಬೆಳಗ್ಗೆ 10.30ಕ್ಕೆ ಎಸ್.ಎನ್.ಆರ್. ಜಿಲ್ಲಾಸ್ಪತ್ರೆ ಆವರಣದಲ್ಲಿ ಸಖಿ ಒನ್ ಸ್ಟ್ಾ ಸೆಂಟರ್ ಕಟ್ಟಡ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಕಟ್ಟಡ ಲೋಕಾರ್ಪಣೆ ಮಾಡುವರು. ಸಂಸದ ಎಸ್.ಮುನಿಸ್ವಾಮಿ, ಶಾಸಕ ಕೆ.ಶ್ರೀನಿವಾಸಗೌಡ ಹಾಗೂ ಜಿಲ್ಲೆಯ ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು ಭಾಗವಹಿಸುವರು.

    ಕೇಂದ್ರ ಸರ್ಕಾರದ ಕಾರ್ಯಕ್ರಮದಡಿ ಸಖಿ ಒನ್ ಸ್ಟ್ಾ ಸೆಂಟರ್ ಆರಂಭಿಸಲಾಗಿದ್ದು, ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಚಿಕಿತ್ಸೆ, ರಕ್ಷಣೆ, ಕಾನೂನು ನೆರವು ಸೇರಿ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು. ಮಹಿಳೆಯರ ತಾತ್ಕಾಲಿಕ ವಸತಿ ಸೌಲಭ್ಯಕ್ಕೆ 5 ಹಾಸಿಗೆ ವ್ಯವಸ್ಥೆ ಇದೆ. ಕೇಂದ್ರದ ನಿರ್ವಹಣೆಗೆ ಅಗತ್ಯ ಸಿಬ್ಬಂದಿ ನಿಯೋಜಿಸಲಾಗಿದೆ.
    ಎಂ.ಜಿ.ಪಾಲಿ, ಉಪನಿರ್ದೇಶಕಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೋಲಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts