More

    ಸಕಲೇಶ್ವರಸ್ವಾಮಿ ಜಾತ್ರೆಗೆ ಜಾಗದ ಚಿಂತೆ

    ಸಕಲೇಶಪುರ: ಈ ಬಾರಿಯ ಸಕಲೇಶ್ವರಸ್ವಾಮಿ ದನಗಳ ಜಾತ್ರೆ ಹಾಗೂ ವಸ್ತುಪ್ರದರ್ಶನ ಎಲ್ಲಿ ನಡೆಸುವುದೆಂಬ ಚಿಂತೆ ತಾಲೂಕು ಆಡಳಿತವನ್ನು ಕಾಡುತ್ತಿದೆ. ದನಗಳ ಜಾತ್ರೆ ಹಾಗೂ ವಸ್ತುಪ್ರದರ್ಶನ ನಡೆಯುತ್ತಿದ್ದ ಭೂಮಿ ಖಾಸಗಿ ವ್ಯಕ್ತಿಗೆ ಸೇರಿದೆ ಎಂಬ ಹೈಕೋರ್ಟ್ ತೀರ್ಪು ಸದ್ಯ ಪುರಸಭೆ ಆಡಳಿತವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

    ಸಕಲೇಶ್ವರಸ್ವಾಮಿ ಜಾತ್ರೆ, ವಸ್ತುಪ್ರದರ್ಶನ ಹಾಗೂ ದನಗಳ ಜಾತ್ರೆ 1960ರಲ್ಲಿ ಆರಂಭವಾಯಿತು. ಅಂದಿನಿಂದಲೂ ಹಳೇ ಸಂತೆ ಮೈದಾನದಲ್ಲೇ ಖಾಸಗಿ ವ್ಯಕ್ತಿಯ ಅನುಮತಿ ಪಡೆದು ವಸ್ತುಪ್ರದರ್ಶನ ನಡೆಸಿಕೊಂಡು ಬರಲಾಗುತ್ತಿತ್ತು. ಈ ನಡುವೆ, ಪುರಸಭೆ ಆಡಳಿತ ಹಾಗೂ ಖಾಸಗಿ ವ್ಯಕ್ತಿಯ ನಡುವೆ ಜಾಗದ ಕುರಿತು ವಿವಾದ ಉಂಟಾಗಿತ್ತು. ಹೀಗಾಗಿ 1984ರಲ್ಲಿ ಪಟ್ಟಣದ ವರದರಾಜಲು ಎಂಬುವವರು ನಮಗೆ ಸೇರಿದ ಜಮೀನಿನಲ್ಲಿ ನಮ್ಮ ಅನುಮತಿ ಇಲ್ಲದೆ ಸಂತೆ ಹಾಗೂ ದನಗಳ ಜಾತ್ರೆ ನಡೆಸಬಾರದು ಎಂದು ಹೈಕೊರ್ಟ್‌ನಲ್ಲಿ ದೂರು ದಾಖಲಿಸಿದ್ದರು. 1988ರಲ್ಲಿ ಆದೇಶ ನೀಡಿದ್ದ ಹೈಕೊರ್ಟ್ ಜಮೀನು ಮಾಲೀಕರ ಅನುಮತಿ ಪಡೆದು ಕಾರ್ಯಕ್ರಮ ನಡೆಸುವಂತೆ ಸೂಚಿಸಿತ್ತು. ಸದ್ಯ ಈ ಜಾಗ ವರದರಾಜಲು ಸಂಬಂಧಿ ನಂಜುಂಡಶೆಟ್ಟಿ ಹೆಸರಿನಲ್ಲಿದೆ.
    ಕೋರ್ಟ್ ಆದೇಶದ ಬಳಿಕ ಪುರಸಭೆ ಆಡಳಿತ, ಅದೇ ವರ್ಷ ನಂಜುಂಡಶೆಟ್ಟಿ ಹೆಸರಿನಲ್ಲಿದ್ದ ಸರ್ವೇ ನಂಬರನ್ನು ಪುರಸಭೆಯ ಕಡತದಲ್ಲಿ ಸ್ಟೇಡಿಯಂ ಎಂದು ನಮೂದಿಸಿದ್ದು, ಇದರ ಆಧಾರದ ಮೇಲೆ 1992-93ರಲ್ಲಿ ಸ್ಟೇಡಿಯಂ ಹೆಸರಿಗೆ ಖಾತೆಯನ್ನು ಬದಲಿಸಿದೆ ಎಂಬುದು ದಾಖಲೆಗಳಲ್ಲಿ ಬಯಲಾಗಿದೆ.
    ಪುರಸಭೆ ಹಾಗೂ ಖಾಸಗಿ ವ್ಯಕ್ತಿಯ ನಡುವೆ ನಡೆಯುತ್ತಿರುವ ಜಮೀನು ವ್ಯಾಜ್ಯಕ್ಕೆ ತಾರ್ಕಿಕ ಅಂತ್ಯ ಕಾಣಲು ಈ ಜಮೀನಿನ ಮಾಲೀಕರು 1959ರಲ್ಲೇ ಜಿಲ್ಲಾಧಿಕಾರಿಯಿಂದ ಭೂಮಿಯನ್ನು ಅನ್ಯಸಂಕ್ರಮಣಗೊಳಿಸಿದ್ದರು. ಇದು ಪುರಸಭೆಗೆ ಮುಳುವಾದರೆ, ಖಾಸಗಿ ವ್ಯಕ್ತಿಗೆ ವರವಾಗಿದೆ ಎನ್ನಲಾಗಿದೆ.

    ಪುರಸಭೆ ಆಡಳಿತ ಹಾಗೂ ಖಾಸಗಿ ವ್ಯಕ್ತಿಯ ನಡುವೆ 17/11ಬಿ ಸರ್ವೇ ನಂಬರ್‌ನಲ್ಲಿರುವ ಹಳೇ ಸಂತೆ ಮೈದಾನದ 2.08 ಎಕರೆ ಜಮೀನಿಗಾಗಿ ಹೋರಾಟ ಆರಂಭವಾಗಿದ್ದು, ನಿರಂತರ 40 ವರ್ಷಗಳ ಹೋರಾಟದ ನಂತರ ಸಮಸ್ಯೆ ತಾರ್ಕಿಕ ಅಂತ್ಯ ತಲುಪಿದೆ. 1985 ರಿಂದ ಪ್ರತಿವರ್ಷ ಜಾತ್ರೆ ವಸ್ತುಪ್ರದರ್ಶನ ನಡೆಯುವ ಸಂದರ್ಭದಲ್ಲಿ ನಂಜುಂಡಶೆಟ್ಟಿ ಎಂಬುವವರು ವಸ್ತುಪ್ರದರ್ಶನ ನಡೆಯದಂತೆ ತಡೆಯಾಜ್ಞೆ ತರುತ್ತಿದ್ದರು. ಆದರೆ, ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್ ನೆರವಿನಿಂದ ನಿರಂತರವಾಗಿ ವಸ್ತುಪ್ರದರ್ಶನ ನಡೆಸಿಕೊಂಡೇ ಬರಲಾಗುತ್ತಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts