More

  ಸಾಹಿತ್ಯದಲ್ಲಿ ಜೀವಪರ ನಿಲುವುಗಳು ಎಂಬ ವಿಚಾರ ಸಂಕಿರಣ

  ಹಾವೇರಿ: ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಸಂವಿಧಾನದ ಆಶಯಗಳನ್ನೊಳಗೊಂಡು ಎಲ್ಲ ಜೀವಪರ ನಿಲುವುಗಳು ನಿರಂತರವಾಗಿ ಹರಿದು ಬಂದಿವೆ ಎಂದು ಖ್ಯಾತ ವಿಮರ್ಶಕ ಡಾ. ರಾಜೇಂದ್ರ ಚೆನ್ನಿ ಹೇಳಿದರು.
  ನವದೆಹಲಿಯ ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶನಿವಾರ ಆಯೋಜಿಸಿದ್ದ ಸಮಕಾಲೀನ ಸಾಹಿತ್ಯದಲ್ಲಿ ಜೀವಪರ ನಿಲುವುಗಳು ಎಂಬ ಒಂದು ದಿನದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
  ಕವಿರಾಜಮಾರ್ಗದಿಂದ ಪ್ರಾರಂಭವಾದ ಕನ್ನಡ ಸಾಹಿತ್ಯದಲ್ಲಿ ರಾಜನಿಗೂ ನಿರ್ದೇಶನ ಮಾಡುವಂತೆ ಜನಪರ ನಿಲುವು ಹಿಂದಿನಿಂದಲೂ ಇತ್ತು. ಪ್ರಾಚೀನ ಸಾಹಿತ್ಯದಿಂದ ಹಿಡಿದು ಆಧುನಿಕ ಸಾಹಿತ್ಯದವರೆಗೆ ಶೋಷಿತರ ಪರ ಧ್ವನಿ ಎತ್ತುವ ಚಟುವಟಿಕೆಗಳು ನಡೆದು ಬಂದಿವೆ. ಆದರೆ, ಇತ್ತೀಚೆಗೆ ರಾಜಕೀಯ ಸಂದರ್ಭದಲ್ಲಿ ಓದುವ ವಲಯ ಸೇರಿದಂತೆ ನಾಗರಿಕ ಸಮಾಜ ಕಲುಷಿತಗೊಂಡಿದೆ. ಜೀವಪರ ಇರುವ ಸಾಹಿತ್ಯವನ್ನು ಒಪ್ಪಿಕೊಳ್ಳುವ ಮನಃಸ್ಥಿತಿ ಈಗಿಲ್ಲ ಎಂದರು.
  ಅಧ್ಯಕ್ಷತೆ ವಹಿಸಿದ್ದ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿಯ ಸದಸ್ಯ ಡಾ. ಬಸವರಾಜ ಸಾದರ ಮಾತನಾಡಿ, ವರ್ಗ ವರ್ಣಗಳನ್ನು ಮೀರುವ ಬಗ್ಗೆ , ಲಿಂಗಾರಜಕಾರಣವನ್ನೂ ನಿವಾರಿಸುವ ಮಾರ್ಗೋಪಾಯಗಳನ್ನು ಹುಡುಕಬೇಕಾಗಿದೆ. ವಿಮಾನ ನಿಲ್ದಾಣಗಳನ್ನು ನಿರ್ಮಿಸಲು ಸಾವಿರಾರು ಎಕರೆ ಜಮೀನನ್ನು ಕಸಿದುಕೊಳ್ಳುವ ರಾಜಕಾರಣಿಗಳು ಹಳ್ಳಿಗಳಿಗೆ ಸಂಪರ್ಕ ಸಾಧಿಸುವ ರಸ್ತೆಗಳನ್ನು ನಿರ್ಮಿಸಲಿ ಎಂದರು.
  ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ಪ್ರಾಚಾರ್ಯ ನಾಗರಾಜ ದ್ಯಾಮನಕೊಪ್ಪ , ಬಸವೇಶ್ವರ ಬಿ,ಎಡ್ ಕಾಲೇಜಿನ ಪ್ರಾಚಾರ್ಯ ಮಂಜುನಾಥ ವಡ್ಡರ ಮಾತನಾಡಿದರು. ಸಾಹಿತ್ಯ ಅಕಾಡೆಮಿಯ ಸಲಹಾ ಸಮಿತಿಯ ಸದಸ್ಯರಾದ ಚೆನ್ನಪ್ಪ ಅಂಗಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
  ಈರಣ್ಣ ಬೆಳವಡಿ ಸ್ವಾಗತಿಸಿದರು. ವೈ.ಬಿ. ಆಲದಕಟ್ಟಿ ನಿರೂಪಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts