More

    ಸಹಕಾರ ಸಾರಿಗೆ ಬಸ್ ಸ್ಥಗಿತ: ಮಲೆನಾಡಿನಲ್ಲಿ ಇಂದಿನಿಂದ ಬಸ್ ಸಂಚಾರವಿಲ್ಲ!

    ಚಿಕ್ಕಮಗಳೂರು: ಮಲೆನಾಡ ಜನರ ಜೀವನದಲ್ಲಿ ಹಾಸುಹೊಕ್ಕಾಗಿದ್ದ ಸಹಕಾರ ಸಾರಿಗೆ ಬಸ್​ಗಳು ಇನ್ನುಮುಂದೆ ರಸ್ತೆಗಿಳಿಯುವುದೇ ಅನುಮಾನ.

    ಆರ್ಥಿಕ ಮುಗ್ಗಟ್ಟಿನಿಂದ ತತ್ತರಿಸಿರುವ ಸಂಸ್ಥೆಯ ಬಸ್​ಗಳು ತಾತ್ಕಾಲಿಕವಾಗಿ ಭಾನುವಾರ(ಫೆ.16)ಸೇವೆಯನ್ನು ಸ್ಥಗಿತಗೊಳಿಸುತ್ತಿರುವುದು ಸಂಸ್ಥೆಯ ನೌಕರರ ಜತೆ ಮಲೆನಾಡಿಗರಿಗೂ ನೋವು ತಂದಿದೆ. ಕಾಫಿ ನಾಡಿನ ಅಸ್ಮಿತೆಯಂತಿದ್ದ ಸಹಕಾರ ಸಾರಿಗೆ ಬಸ್​ಗಳಿಗೆ ಕೊನೇ ಕ್ಷಣದಲ್ಲಿ ಸರ್ಕಾರ ಕೂಡ ಕೈಕೊಟ್ಟಿದೆ.

    ನಿತ್ಯ 12 ಸಾವಿರ ವಿದ್ಯಾರ್ಥಿಗಳನ್ನು ರಿಯಾಯಿತಿ ದರದಲ್ಲಿ ಶಾಲೆ ಕಾಲೇಜಿಗೆ ಕರೆದೊಯ್ಯುತ್ತಿದ್ದ ಸಾರಿಗೆ ಬಸ್ ನಿಲ್ಲುವುದು ಅನೇಕ ವಿದ್ಯಾರ್ಥಿಗಳಿಗೆ ನೋವು ತಂದಿದೆ. ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ ಜಿಲ್ಲೆಯ 1.10 ಲಕ್ಷ ಪ್ರಯಾಣಿಕರು ಪ್ರತಿನಿತ್ಯ ಈ ಬಸ್​ಗಳನ್ನು ಅವಲಂಬಿಸಿದ್ದರು.

    ಕಾರ್ವಿುಕರ ಬೆವರಿನಿಂದಲೇ ಕಟ್ಟಿದ ಸಾರಿಗೆ ಸಂಸ್ಥೆ ಅನೇಕ ಏಳುಬೀಳುಗಳ ಸವಾಲನ್ನು ಮೆಟ್ಟಿನಿಂತು ಮಲೆನಾಡಿನ ಜನರ ಸೇವೆ ಮಾಡುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಸಾರಿಗೆ ಪ್ರಾಧಿಕಾರದ ನಿಯಮಗಳು, ಏರಿಕೆಯಾದ ಇಂಧನ ಬೆಲೆ, ದುಬಾರಿ ಬಿಡಿಭಾಗಗಳ ಖರೀದಿಯಿಂದ ಸಂಸ್ಥೆ ಆರ್ಥಿಕ ದುಸ್ಥಿಗೆ ತುಲುಪಿತ್ತು.

    ಕಳೆದ 2019ರ ಸೆ.7ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿದ್ಯಾರ್ಥಿಗಳ ಬಸ್ ಪಾಸ್​ಗಾಗಿ 6.62 ಕೋಟಿ ರೂ. ಅನುದಾನಕ್ಕೆ ಆದೇಶ ಮಾಡಿದ್ದರು. ಆದರೆ ಆರ್ಥಿಕ ಇಲಾಖೆ ಸಲ್ಲದ ನೆಪವೊಡ್ಡಿ ಸಂಸ್ಥೆಗೆ ಅನುದಾನ ನಿರಾಕರಿಸಿದೆ. ಇದರಿಂದ ಬಸ್​ಗಳ ನಿರ್ವಹಣೆ ಮಾಡಲಾಗದೆ ಸಂಸ್ಥೆ ಮಾಲೀಕರು ಅನಿವಾರ್ಯವಾಗಿ ಬಸ್​ಗಳನ್ನು ಕೊಪ್ಪದ ಸಂಸ್ಥೆ ಆವರಣದಲ್ಲಿ ಶನಿವಾರ ಮಧ್ಯಾಹ್ನದಿಂದ ರಾತ್ರಿವರೆಗೆ ಎಲ್ಲ ಬಸ್​ಗಳನ್ನು ತಂದು ನಿಲ್ಲಿಸಿದ್ದಾರೆ.

    ಸಿಎಂ ಯಡಿಯೂರಪ್ಪ ಅವರ ಆದೇಶವನ್ನೇ ಪಾಲಿಸಲು ಆರ್ಥಿಕ ಇಲಾಖೆ ಅಧಿಕಾರಿಗಳು ಹಿಂದೇಟು ಹಾಕಿದ್ದಾರೆ. ನಷ್ಟದಲ್ಲಿರುವ ಸಂಸ್ಥೆ ಈಗ ಬಸ್ ಸೇವೆ ನೀಡಲಾಗದೆ ತಾತ್ಕಾಲಿಕವಾಗಿ ಸ್ಥಗಿತ ಮಾಡಿದೆ. ಮಲೆನಾಡಿನ ಜನರ ಹಾಗೂ ವಿದ್ಯಾರ್ಥಿಗಳ ಪ್ರಯಾಣಕ್ಕೆ ನೆರವಾಗಿದ್ದ ಸಹಕಾರಿ ಬಸ್​ಗಳನ್ನು ಓಡಿಸಲು ಜನ ಮನವಿ ಮಾಡುತ್ತಿದ್ದಾರೆ. ಆದರೆ, ನಾವು ಈಗ ಅಸಹಾಯಕರಾಗಿದ್ದೇವೆ.

    | ವಿಜಯಕುಮಾರ್

    ಸಹಕಾರ ಸಾರಿಗೆ ಸಂಸ್ಥೆ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts