More

    ಅರಣ್ಯ ಪ್ರದೇಶದ ನೀರಿನ ಚಿಲುಮೆ ರಕ್ಷಣೆ

    ವಿಜಯವಾಣಿ ಸುದ್ದಿಜಾಲ ಬದಿಯಡ್ಕ

    ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ನೀರಿನ ಚಿಲುಮೆಗಳನ್ನು ಪತ್ತೆ ಹಚ್ಚಿ ರಕ್ಷಿಸುವಂತೆ ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ವಿಭಾಗೀಯ ಅರಣ್ಯಾಧಿಕಾರಿಗೆ ಸೂಚಿಸಿದರು.

    ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಗುರುವಾರ ನಡೆದ ಜಲಶಕ್ತಿ ಅಭಿಯಾನ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ರಾಣಿಪುರಂ, ಪಾಂಡಿ, ವನ್ನಾರ್ಕಾಯಂ, ಬಾಡೂರು, ಮಂಜತ್ತಡ್ಕ, ಅಲತ್ತಡ್ಕ, ಪರಿಯಾರಂ, ಕೊಟ್ಯಾಡಿ ಮತ್ತು ಕೊಟ್ಟಂಚೇರಿ ಎಂಬಲ್ಲಿ ಒಟ್ಟು 9 ಚಿಲುಮೆಗಳನ್ನು ಗುರುತಿಸಲಾಗಿದೆ ಮತ್ತು ಪೋರ್ಟಲ್‌ಗೆ ಸೇರಿಸಲಾಗಿದೆ. ಹೆಚ್ಚಿನ ಚಿಲುಮೆಗಳನ್ನು ಹುಡುಕಲು ಅರಣ್ಯ ಇಲಾಖೆ ಕಾರ್ಯಪ್ರವೃತ್ತವಾಗಿದೆ ಎಂದು ಎಂದು ಡಿಎಫ್‌ಒ ಕೆ.ಅಶ್ರಫ್ ತಿಳಿಸಿದರು.

    Manjathadka Chilume
    ಮಂಜತ್ತಡ್ಕ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿರುವ ನೀರಿನ ಚಿಲುಮೆ.

    ನೀರಿನ ಚಿಲುಮೆಗಳ ರಕ್ಷಣೆ ಹೊಣೆ ಅರಣ್ಯ ಇಲಾಖೆ ಮೇಲಿದ್ದು, ಚಿಲುಮೆಗಳ ಹೆಸರು, ಸ್ಥಳನಾಮ ಹಾಗೂ ಇತರ ಮಾಹಿತಿ ಒಳಗೊಂಡ ಬೋರ್ಡ್ ಹಾಕಬೇಕು. ಜಿಲ್ಲೆಯಲ್ಲಿ ಜಲಸಂರಕ್ಷಣೆಗೆ ಸಂಬಂಧಿಸಿ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಹಲವು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಫೆ.2ರ ಜೌಗುಭೂಮಿ ದಿನದಂದು ಬಂಬ್ರಾಣ ಗದ್ದೆಯಲ್ಲಿ ಜಲಸಂರಕ್ಷಣೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

    ಸಿಪಿಸಿಆರ್‌ಐ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಟಿ.ಎಸ್.ಮನೋಜ್ ಕುಮಾರ್, ಸಣ್ಣ ನೀರಾವರಿ ಕಾರ್ಯಪಾಲಕ ಇಂಜಿನಿಯರ್ ಪಿ.ಟಿ.ಸಂಜೀವ್, ಕೃಷಿ ಇಲಾಖೆ ಉಪನಿರ್ದೇಶಕ ವಿಷ್ಣು ಎಸ್.ನಾಯರ್, ಎಲ್‌ಎಸ್‌ಜಿಡಿ ಸಹಾಯಕ ನಿರ್ದೇಶಕ ಟಿ.ವಿ.ಸುಭಾಷ್, ಡಿಐಒ(ಎನ್‌ಐಸಿ) ಕೆ.ಲೀನಾ, ಜಿಲ್ಲಾ ಮಾಹಿತಿ ಅಧಿಕಾರಿ ಎಂ.ಮಧುಸೂದನನ್, ಜಿಲ್ಲಾ ಯುವ ಕಾರ್ಯಕ್ರಮ ಅಧಿಕಾರಿ ಪಿ.ಸಿ.ಶಿಲಾಸ್, ಎನ್‌ವೈಕೆ ಜಿಲ್ಲಾ ಯುವ ಅಧಿಕಾರಿ ಪಿ.ಅಖಿಲ್, ಎಂಜಿಎನ್‌ಆರ್‌ಇಜಿಎ ಜಿಲ್ಲಾ ಇಂಜಿನಿಯರ್ ಕೆ.ವಿದ್ಯಾ, ಕೆಎಸ್‌ಬಿಬಿ ಜಿಲ್ಲಾ ಸಂಯೋಜಕಿ ವಿ.ಎಂ.ಅಖಿಲಾ, ಕಿರಿಯ ಜಲ ಭೂವಿಜ್ಞಾನಿ ನಿಮ್ಮಿ, ಅಂತರ್ಜಲ ಹಿರಿಯ ಗುಮಾಸ್ತ ಮನೋಜ್ ಕುಮಾರ್ ಭಾಗವಹಿಸಿದ್ದರು.

    ಫೆಬ್ರವರಿಯಲ್ಲಿ ವಿಚಾರ ಸಂಕಿರಣ

    ಸಿಪಿಸಿಆರ್‌ಐ ನೇತೃತ್ವದಲ್ಲಿ ಮರ ನೆಡುವ ಚಟುವಟಿಕೆಗಳ ದಾಖಲೀಕರಣದ ವಿಚಾರ ಸಂಕಿರಣವನ್ನು ಫೆಬ್ರವರಿಯಲ್ಲಿ ಆಯೋಜಿಸಲಾಗಿದೆ. ಸಣ್ಣ ನೀರಾವರಿ ಇಲಾಖೆ ಮತ್ತು ಗ್ರಾಪಂಗಳು ಹೊಲಗಳಲ್ಲಿ ಸಣ್ಣ ಅಣೆಕಟ್ಟುಗಳನ್ನು ನಿರ್ಮಿಸುತ್ತವೆ. ಪಡನ್ನ ಪಂಚಾಯಿತಿಯಲ್ಲಿರುವ ಕಾಪುಕುಳಂ ಕೆರೆಯನ್ನು ಮಣ್ಣು ಸಂರಕ್ಷಣಾ ಇಲಾಖೆ ನೇತೃತ್ವದಲ್ಲಿ ನವೀಕರಿಸಲಾಗುವುದು. ಜಲಶಕ್ತಿ ಅಭಿಯಾನ ರಾಷ್ಟ್ರೀಯ ಹಸಿರು ಸೇನೆಯು ಜೌಗುಭೂಮಿ ದಿನದ ನಿಮಿತ್ತ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಿದೆ ಎಂದು ಜಿಲ್ಲಾಧಿಕಾರಿ ಕೆ.ಇನ್ಭಾಶೇಖರ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts